1 : ಮೊತ್ತಮೊದಲು ಮಾನವರೆಲ್ಲರಿಗೋಸ್ಕರ ದೇವರಿಗೆ ವಿಜ್ಞಾಪನೆ, ಪ್ರಾರ್ಥನೆ, ಬಿನ್ನಹ ಹಾಗೂ ಕೃತಜ್ಞತಾಸ್ತುತಿಗಳನ್ನು ಸಲ್ಲಿಸಬೇಕೆಂದು ಕೇಳಿಕೊಳ್ಳುತ್ತೇನೆ.
2 : ನಾವು ದೈವಭಕ್ತಿಯುಳ್ಳವರಾಗಿ ಮತ್ತು ಗೌರವಯುತರಾಗಿ ಶಾಂತಿ ಸಮಾಧಾನದಿಂದಲೂ ನೆಮ್ಮದಿಯಿಂದಲೂ ಜೀವಿಸಲು ಅನುಕೂಲವಾಗುವಂತೆ ಅರಸರಿಗಾಗಿಯೂ ಎಲ್ಲಾ ಅಧಿಕಾರಿಗಳಿಗಾಗಿಯೂ ಪ್ರಾರ್ಥಿಸಬೇಕು.
3 : ಹೀಗೆ ಮಾಡುವುದು ಒಳ್ಳೆಯದು, ನಮ್ಮ ಉದ್ದಾರಕರಾದ ದೇವರಿಗೆ ಮೆಚ್ಚುಗೆಯಾದುದು.
4 : ಎಲ್ಲಾ ಮಾನವರೂ ಸತ್ಯವನ್ನರಿತು ಜೀವೋದ್ಧಾರ ಪಡೆಯಬೇಕೆಂಬುದೇ ದೈವೇಚ್ಛೆ.
5 : ದೇವರು ಒಬ್ಬರೇ; ದೇವರನ್ನೂ ಮಾನವರನ್ನೂ ಒಂದುಗೂಡಿಸುವ ಮಧ್ಯಸ್ಥರೂ ಒಬ್ಬರೇ; ಅವರೇ ಮಾನವರಾಗಿರುವ ಕ್ರಿಸ್ತಯೇಸು.
6 : ಇವರು ಎಲ್ಲರ ಉದ್ಧಾರಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಸರ್ವರೂ ಉದ್ಧಾರವಾಗಬೇಕೆಂಬ ದೈವೇಚ್ಛೆಗೆ ಸೂಕ್ತ ಸಮಯದಲ್ಲಿ ಸಾಕ್ಷಿ ನೀಡಿದರು.
7 : ವಿಶ್ವಾಸ ಮತ್ತು ಸತ್ಯದ ಸಂದೇಶವನ್ನು ಸಾರುವುದಕ್ಕಾಗಿಯೇ ದೇವರು ನನ್ನನ್ನು ಪ್ರೇಷಿತನನ್ನಾಗಿಯೂ ಯೆಹೂದ್ಯೇತರರಿಗೆ ಬೋಧಕನನ್ನಾಗಿಯೂ ನೇಮಕಮಾಡಿದರು. ನಾನು ಹೇಳುತ್ತಿರುವುದು ಸುಳ್ಳಲ್ಲ, ಸತ್ಯಸ್ಯ ಸತ್ಯ.
8 : ಪ್ರಾರ್ಥನೆ ಮಾಡುವ ಸ್ಥಳಗಳಲ್ಲೆಲ್ಲಾ ಪುರುಷರು ಕೋಪತಾಪವಿಲ್ಲದೆ, ಕೋಲಾಹಲವಿಲ್ಲದೆ ಕರಗಳನ್ನೆತ್ತಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಬೇಕು ಎಂಬುದೇ ನನ್ನ ಅಪೇಕ್ಷೆ.
9 : ಅಂತೆಯೇ, ಮಹಿಳೆಯರು, ಸಭ್ಯತೆಯನ್ನು ವಿೂರದೆ ಘನತೆ, ಗೌರವಕ್ಕೆ ಒಪ್ಪುವಂತಹ ಉಡುಪನ್ನು ಧರಿಸಿಕೊಳ್ಳಬೇಕು.
10 : ಅವರು ಮಿತಿವಿೂರಿದ ಕೇಶಾಲಂಕಾರ, ಆಭರಣಾಲಂಕಾರ, ವಸ್ತ್ರಾಲಂಕಾರಗಳಿಂದ ತಮ್ಮನ್ನೇ ಶೃಂಗರಿಸಿಕೊಳ್ಳುವುದರ ಬದಲು ದೈವಭಕ್ತೆಯರಾದ ಸ್ತ್ರೀಯರಿಗೆ ಲಕ್ಷಣವಾದ ಸತ್ಕಾರ್ಯಗಳಿಂದ ಅಲಂಕರಿಸಿಕೊಳ್ಳಲಿ.
11 : ಮಹಿಳೆಯರು ಮೌನದಿಂದಲೂ ನಮ್ರತೆಯಿಂದಲೂ ಧರ್ಮೋಪದೇಶವನ್ನು ಕಲಿಯಲಿ.
12 : ಅವರು ಬೋಧನೆ ಮಾಡುವುದಕ್ಕಾಗಲಿ, ಪುರುಷರ ಮೇಲೆ ಅಧಿಕಾರ ಚಲಾಯಿಸುವುದಕ್ಕಾಗಲಿ ನಾನು ಅನುಮತಿಸೆನು. ಅವರು ಮೌನ ತಾಳಬೇಕು.
13 : ಏಕೆಂದರೆ, ದೇವರು ಮೊದಲು ಆದಾಮನನ್ನು, ಅನಂತರ ಹವ್ವಳನ್ನು ಸೃಷ್ಟಿಸಿದರು.
14 : ಅಲ್ಲದೆ, ಮೊದಲು ವಂಚನೆಗೊಳಗಾಗಿ ದೇವರಿಗೆ ವಿರುದ್ಧ ಪಾಪಮಾಡಿದವಳು ಹವ್ವಳೇ ಹೊರತು ಆದಾಮನಲ್ಲ.
15 : ಮಹಿಳೆ ಸಚ್ಚರಿತಳಾಗಿದ್ದು ವಿಶ್ವಾಸ, ಪ್ರೀತಿ ಮತ್ತು ಪವಿತ್ರತೆಯಲ್ಲಿ ಪ್ರವರ್ಧಿಸಿದರೆ, ತನ್ನ ತಾಯ್ತನದ ಮೂಲಕ ಸಂರಕ್ಷಣೆಯನ್ನು ಪಡೆಯುತ್ತಾಳೆ.