1 : ಕ್ರೈಸ್ತವಿಶ್ವಾಸದಲ್ಲಿ ಸತ್‍ಪುತ್ರನಾದ ತಿಮೊಥೇಯನಿಗೆ - ಪೌಲನು ಬರೆಯುವ ಪತ್ರ.
2 : ನಮ್ಮ ಉದ್ಧಾರಕರಾದ ದೇವರ ಮತ್ತು ನಮ್ಮ ನಿರೀಕ್ಷೆಯಾಗಿರುವ ಕ್ರಿಸ್ತಯೇಸುವಿನ ಆಜ್ಞಾನುಸಾರ, ನಾನು ಕ್ರಿಸ್ತಯೇಸುವಿನ ಪ್ರೇಷಿತನಾಗಿದ್ದೇನೆ. ಪಿತನಾದ ದೇವರೂ ನಮ್ಮ ಪ್ರಭುವಾದ ಕ್ರಿಸ್ತಯೇಸುವೂ ನಿನಗೆ ಕೃಪೆಯನ್ನೂ ಕರುಣೆಯನ್ನೂ ಶಾಂತಿಯನ್ನೂ ಅನುಗ್ರಹಿಸಲಿ !
3 : ನಾನು ಮಕೆದೋನಿಯಕ್ಕೆ ಹೋಗುವಾಗ ನಿನಗೆ ಹೇಳಿದಂತೆ, ನೀನು ಎಫೆಸದಲ್ಲಿಯೇ ಇರಬೇಕು. ಇಲ್ಲಿ ಕೆಲವರು ತಪ್ಪು ಬೋಧನೆಯನ್ನು ಮಾಡುತ್ತಿದ್ದಾರೆ; ಅದನ್ನು ನೀನು ನಿಲ್ಲಿಸಬೇಕು.
4 : ಕಟ್ಟುಕತೆಗಳಲ್ಲೂ ಕೊನೆಮೊದಲಿಲ್ಲದ ವಂಶಾವಳಿಗಳ ನಿರೂಪಣೆಗಳಲ್ಲೂ ಕಾಲಹರಣ ಮಾಡಬಾರದೆಂದು ಅವರಿಗೆ ಆಜ್ಞಾಪಿಸಬೇಕು. ಅಂಥ ಕತೆಗಳು, ವಂಶಾವಳಿಗಳು ಅನಗತ್ಯವಾದ ವಾದವಿವಾದಗಳಿಗೆ ಎಡೆ ಮಾಡುತ್ತವೆಯೇ ಹೊರತು ದೇವರ ಯೋಜನೆ ಕೈಗೂಡಲು ಅವು ಅನುಕೂಲವಾಗಿಲ್ಲ; ವಿಶ್ವಾಸದಿಂದ ಮಾತ್ರ ಅದು ಸಾಧ್ಯ.
5 : ನಿರ್ಮಲ ಹೃದಯ, ಶುದ್ಧ ಮನಸ್ಸಾಕ್ಷಿ ಹಾಗೂ ನಿಷ್ಕಪಟ ವಿಶ್ವಾಸದಿಂದ ಹುಟ್ಟುವ ಪ್ರೀತಿಯು ವೃದ್ಧಿಯಾಗಬೇಕೆಂಬುದೇ ವಾಕ್ಯೋಪದೇಶದ ಉದ್ದೇಶ.
6 : ಕೆಲವರಾದರೋ ಈ ಮಾರ್ಗವನ್ನು ಬಿಟ್ಟು ವ್ಯರ್ಥವಾದ ವಾದವಿವಾದಗಳಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ;
7 : ತಮ್ಮ ಮಾತಿನ ಅರ್ಥವಾಗಲಿ, ತಮ್ಮ ವಾದದ ತಿರುಳಾಗಲಿ ಅವರಿಗೆ ತಿಳಿಯದಿದ್ದರೂ ಅವರು ಧರ್ಮೋಪದೇಶಕರಾಗಲು ಹವಣಿಸುತ್ತಾರೆ.
8 : ನಮಗೆಲ್ಲರಿಗೂ ತಿಳಿದಿರುವಂತೆ ಧರ್ಮಶಾಸ್ತ್ರವೇನೋ ಒಳ್ಳೆಯದು. ಆದರೆ ಅದನ್ನು ನಿಷ್ಠೆಯಿಂದ ಕಾರ್ಯಗತ ಮಾಡಬೇಕು.
9 : ಧರ್ಮಶಾಸ್ತ್ರದ ನಿರ್ಬಂಧನೆಗಳು ಸಜ್ಜನರಿಗಲ್ಲ; ಬದಲಿಗೆ ಅಕ್ರಮಿಗಳಿಗೆ, ಅವಿಧೇಯರಿಗೆ, ಅಧರ್ಮಿಗಳಿಗೆ, ಭಕ್ತಿಹೀನರಿಗೆ, ಪಾಪಿಗಳಿಗೆ, ಅಶುದ್ಧರಿಗೆ, ಪ್ರಾಪಂಚಿಕರಿಗೆ, ಹೆತ್ತವರನ್ನು ಹತ್ಯೆಮಾಡುವವರಿಗೆ ಮತ್ತು ಕೊಲೆಗಾರರಿಗೆ.
10 : ಅಂತೆಯೇ, ಕಾಮುಕರಿಗೆ, ಸಲಿಂಗ ಪ್ರೇಮಿಗಳಿಗೆ, ನರಚೋರರಿಗೆ, ಸುಳ್ಳುಸಾಕ್ಷಿಗಳಿಗೆ, ಸುಳ್ಳಾಣೆ ಇಡುವವರಿಗೆ ಮತ್ತು ಸದ್ಧರ್ಮ ವಿರೋಧಿಗಳಿಗೆ ಮುಂತಾದವರಿಗೆ ಈ ನಿರ್ಬಂಧನೆಗಳು ನೇಮಕವಾಗಿವೆ.
11 : ಸ್ತುತ್ಯಾರ್ಹರೂ ಮಹಿಮಾಭರಿತರೂ ಆದ ದೇವರು ನನಗೆ ವಹಿಸಿರುವ ಶುಭಸಂದೇಶಕ್ಕೆ ಈ ಬೋಧನೆ ಅನುಗುಣವಾಗಿದೆ.
12 : ಶುಭಸಂದೇಶದ ಸೇವೆಯನ್ನು ಕೈಗೊಳ್ಳಲು ಯೋಗ್ಯನೆಂದು ಎಣಿಸಿ ನನಗೆ ಬೇಕಾದ ಶಕ್ತಿಸಾಮಥ್ರ್ಯವನ್ನು ದಯಪಾಲಿಸಿದ ನಮ್ಮ ಪ್ರಭು ಯೇಸುಕ್ರಿಸ್ತರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
13 : ಹಿಂದೆ ನಾನು ಅವರನ್ನು ದೂಷಿಸಿದೆ, ಹಿಂಸಿಸಿದೆ, ಅವಮಾನಪಡಿಸಿದೆ. ಆದರೆ ದೇವರು ದಯಾಮಯಿ; ಆಗ ನಾನು ತಿಳಿಯದೆ ಅವಿಶ್ವಾಸಿಯಾಗಿ ಹಾಗೆ ಮಾಡಿದ್ದರಿಂದ ದೇವರು ನನಗೆ ಕರುಣೆತೋರಿದರು.
14 : ಕ್ರಿಸ್ತ ಯೇಸುವಿನ ಅನ್ಯೋನ್ಯತೆಯಿಂದ ಲಭಿಸುವ ಪ್ರೀತಿ ವಿಶ್ವಾಸದಲ್ಲಿ ಭಾಗಿಯಾಗುವಂತೆ ಅವರು ನನ್ನ ಮೇಲೆ ತಮ್ಮ ಕೃಪಾವರಗಳನ್ನು ಹೇರಳವಾಗಿ ಸುರಿಸಿದರು.
15 : ಕ್ರಿಸ್ತಯೇಸು, ಪಾಪಿಗಳ ಉದ್ದಾರಕ್ಕಾಗಿ ಈ ಲೋಕಕ್ಕೆ ಬಂದರು ಎನ್ನುವ ಮಾತು ಸತ್ಯವಾದುದು, ನಂಬಲರ್ಹವಾದುದು ಹಾಗೂ ಎಲ್ಲರ ಅಂಗೀಕಾರಕ್ಕೆ ಯೋಗ್ಯವಾದುದು. ಅಂಥ ಪಾಪಿಗಳಲ್ಲಿ ನಾನೇ ಪ್ರಮುಖನು.
16 : ಇದರಿಂದಾಗಿ, ಮುಂದೆ ವಿಶ್ವಾಸಿಗಳಾಗಿ ನಿತ್ಯಜೀವ ಪಡೆಯುವವರಿಗೆ ಆದರ್ಶ ದೊರಕುವಂತೆ ಕ್ರಿಸ್ತ ಯೇಸು ನನಗೆ ಪೂರ್ಣ ಸಹನೆ ತೋರಿದರು. ಇದು ದೇವರ ಕರುಣೆಯೇ ಸರಿ.
17 : ಸರ್ವಯುಗಗಳ ಅರಸರೂ ಅಮರರೂ ಅಗೋಚರರೂ ಆಗಿರುವ ಏಕೈಕ ದೇವರಿಗೆ ಯುಗಯುಗಾಂತರಕ್ಕೂ ಗೌರವವೂ ಮಹಿಮೆಯೂ ಸಲ್ಲಲಿ ! ಆಮೆನ್.
18 : ತಿಮೊಥೇಯನೇ, ನನ್ನ ಕುಮಾರನೇ, ಹಿಂದೆ ನಿನ್ನ ಕುರಿತು ಮಾಡಲಾಗಿರುವ ಪ್ರವಾದನೆಗಳಿಗೆ ಅನುಗುಣವಾಗಿ ನಾನು ನಿನಗೆ ಕೊಡುವ ಆಜ್ಞೆ ಇದು: ಪ್ರವಾದನೆಗಳಿಂದ ಪ್ರೇರಣೆ ಪಡೆದು ದಿಟ್ಟ ಹೋರಾಟವನ್ನು ಮಾಡು.
19 : ವಿಶ್ವಾಸವನ್ನೂ ಒಳ್ಳೆಯ ಮನಸ್ಸಾಕ್ಷಿಯನ್ನೂ ಸುರಕ್ಷಿತವಾಗಿ ಇಟ್ಟುಕೋ. ಕೆಲವರು ತಮ್ಮ ಮನಸ್ಸಾಕ್ಷಿಗೆ ವ್ಯತಿರಿಕ್ತವಾಗಿ ನಡೆದು ವಿಶ್ವಾಸವನ್ನೇ ಕಳೆದುಕೊಂಡಿದ್ದಾರೆ.
20 : ಹುಮೆನಾಯನೂ ಅಲೆಗ್ಸಾಂಡರನೂ ಇದಕ್ಕೆ ನಿದರ್ಶನವಾಗಿದ್ದಾರೆ. ದೇವದೂಷಣೆ ಮಾಡಬಾರದೆಂಬುದನ್ನು ಕಲಿತುಕೊಳ್ಳುವಂತೆ ಇವರನ್ನು ನಾನು ಸೈತಾನನ ವಶಕ್ಕೆ ಒಪ್ಪಿಸಿಬಿಟ್ಟಿದ್ದೇನೆ.