1 : ಸಹೋದರರೇ, ಇದೆಲ್ಲ ನಡೆಯಲಿರುವ ಸಮಯ ಸಂದರ್ಭಗಳನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
2 : ರಾತ್ರಿಯಲ್ಲಿ ಕಳ್ಳನು ಬರುವ ಹಾಗೆ ಪ್ರಭುವಿನ ದಿನವು ಬರುವುದೆಂದು ನೀವು ಚೆನ್ನಾಗಿ ಬಲ್ಲಿರಿ.
3 : ಎಲ್ಲವೂ ಶಾಂತ, ಸುಭದ್ರವೆಂದು ಜನರು ಎಣಿಸುತ್ತಿರುವಾಗಲೇ, ಗರ್ಭಿಣಿಗೆ ಪ್ರಸವವೇದನೆ ಉಂಟಾಗುವಂತೆ, ವಿನಾಶವು ಫಕ್ಕನೆ ಅವರ ಮೇಲೆ ಬಂದೆರಗುವುದು. ಇದರಿಂದ ಯಾರೂ ತಪ್ಪಿಸಿಕೊಳ್ಳುವಂತಿಲ್ಲ.
4 : ಸಹೋದರರೇ, ಕಳ್ಳನಂತೆ ಆ ದಿನವು ನಿಮ್ಮನ್ನು ದಿಗ್ಭ್ರಮೆಗೊಳಿಸದಿರಲಿ. ಏಕೆಂದರೆ, ನೀವಿನ್ನು ಅಂಧಕಾರಕ್ಕೆ ಸೇರಿದವರಲ್ಲ. ಆ ದಿನವು ದಿಢೀರನೆ ನಿಮ್ಮ ಮೇಲೆ ಬರಬಾರದು.
5 : ನೀವೆಲ್ಲರೂ ಬೆಳಕಿನ ಹಾಗೂ ಹಗಲಿನ ಮಕ್ಕಳು. ನಾವು ಕತ್ತಲೆಗಾಗಲಿ, ರಾತ್ರಿಗಾಗಲಿ ಸೇರಿದವರಲ್ಲ.
6 : ಅಂದ ಮೇಲೆ, ಇತರರಂತೆ ನಾವು ನಿದ್ದೆಮಾಡದೆ ಎಚ್ಚರವಾಗಿದ್ದು ಸ್ವಸ್ಥಚಿತ್ತರಾಗಿ ವರ್ತಿಸೋಣ.
7 : ನಿದ್ರೆಯೂ ಕುಡುಕುತನವೂ ರಾತ್ರಿಗೆ ಸಂಬಂಧಿಸಿದವುಗಳು.
8 : ನಾವು ಹಗಲಿಗೆ ಸೇರಿದವರಾದುದರಿಂದ ಸ್ವಸ್ಥಚಿತ್ತದಿಂದ ಇರೋಣ. ವಿಶ್ವಾಸ ಹಾಗೂ ಪ್ರೀತಿ ನಮಗೆ ವಕ್ಷಕವಚವಾಗಬೇಕು, ಜೀವೋದ್ಧಾರದ ನಿರೀಕ್ಷೆ ನಮಗೆ ಶಿರಸ್ತ್ರಾಣವಾಗಿರಬೇಕು.
9 : ಕೋಪಾಗ್ನಿಗೆ ನಾವು ಗುರಿಯಾಗಬೇಕೆಂದಲ್ಲ, ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಾವು ಜೀವೋದ್ಧಾರ ಹೊಂದಬೇಕೆಂಬುದೇ ದೈವೇಚ್ಛೆ.
10 : ಯೇಸುಕ್ರಿಸ್ತರು ಮರಳಿ ಬರುವಾಗ, ನಾವು ಮೃತರಾಗಿದ್ದರೂ ಜೀವಂತವಾಗಿದ್ದರೂ ಅವರೊಡನೆಯೇ ನಾವು ಜೀವಿಸಬೇಕೆಂದೆ ನಮಗಾಗಿ ಅವರು ಸಾವನ್ನಪ್ಪಿದರು.
11 : ಆದುದರಿಂದ ನೀವು ಈಗ ನಡೆದುಕೊಳ್ಳುತ್ತಿರುವಂತೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿ, ಒಬ್ಬರ ಭಕ್ತಿಯನ್ನೊಬ್ಬರು ವೃದ್ಧಿಗೊಳಿಸಿರಿ.
12 : ಸಹೋದರರೇ, ನಿಮ್ಮೊಡನೆ ದುಡಿಯುತ್ತಾ ಪ್ರಭುವಿನ ಹೆಸರಿನಲ್ಲಿ ನಿಮಗೆ ಅಧಿಕಾರಿಗಳೂ ಮಾರ್ಗದರ್ಶಕರೂ ಆಗಿರುವವರಿಗೆ ತಕ್ಕ ಸನ್ಮಾನವನ್ನು ಸಲ್ಲಿಸಿರಿ.
13 : ಅವರು ನಿರ್ವಹಿಸುವ ಕಾರ್ಯದ ನಿಮಿತ್ತ ಅವರನ್ನು ಅತ್ಯಧಿಕ ಪ್ರೀತಿಯಿಂದ ಗೌರವಿಸಿರಿ. ನಿಮ್ಮನಿಮ್ಮೊಳಗೆ ಸಮಾಧಾನದಿಂದಿರಿ
14 : ಸಹೋದರರೇ, ಮೈಗಳ್ಳರಿಗೆ ಬುದ್ಧಿಹೇಳಿರಿ; ಮನಗುಂದಿದವರಿಗೆ ಧೈರ್ಯ ತುಂಬಿರಿ; ದುರ್ಬಲರಿಗೆ ನೆರವಾಗಿರಿ; ಎಲ್ಲರೊಡನೆ ಸಹನೆಯಿಂದಿರಿ. ಇದು ನಮ್ಮ ಪ್ರಬೋಧನೆ.
15 : ಕೆಡುಕಿಗೆ ಪ್ರತಿಯಾಗಿ ಕೆಡುಕು ಮಾಡದೆ ಎಚ್ಚರದಿಂದಿರಿ. ಯಾವಾಗಲೂ ಒಬ್ಬರಿಗೊಬ್ಬರು ಮಾತ್ರವಲ್ಲದೆ ಎಲ್ಲರಿಗೂ ಹಿತವನ್ನೇ ಮಾಡಿರಿ.
16 : ಸದಾ ಹರ್ಷಚಿತ್ತರಾಗಿರಿ.
17 : ಎಡೆಬಿಡದೆ ಪ್ರಾರ್ಥಿಸಿರಿ.
18 : ಎಲ್ಲಾ ಸಂದರ್ಭಗಳಲ್ಲೂ ಉಪಕಾರಸ್ಮರಣೆ ಮಾಡಿರಿ. ಕ್ರಿಸ್ತಯೇಸುವಿನಲ್ಲಿ ದೇವರು ನಿಮ್ಮಿಂದ ಇಚ್ಛಿಸುವುದು ಇದನ್ನೇ.
19 : ಪವಿತ್ರಾತ್ಮರನ್ನು ನಿಶ್ಚೇತನಗೊಳಿಸಬೇಡಿ.
20 : ಪ್ರವಾದನೆಗಳನ್ನು ಅಲ್ಲಗಳೆಯದಿರಿ
21 : ಅವುಗಳನ್ನೆಲ್ಲಾ ಪರಿಶೋಧಿಸಿ ಒಳ್ಳೆಯದನ್ನು ಅಂಗೀಕರಿಸಿ,
22 : ಕೆಟ್ಟದ್ದನ್ನೆಲ್ಲಾ ಬಿಟ್ಟುಬಿಡಿ.
23 : ಶಾಂತಿದಾಯಕ ದೇವರು ನಿಮ್ಮನ್ನು ಪೂರ್ಣವಾಗಿ ಪಾವನಗೊಳಿಸಲಿ. ನಮ್ಮ ಪ್ರಭುಯೇಸು ಪುನರಾಗಮಿಸುವಾಗ ನಿಮ್ಮ ಆತ್ಮ, ಪ್ರಾಣ, ದೇಹ - ಇವುಗಳು ದೋಷರಹಿತವಾಗಿಯೂ ಸ್ವಸ್ಥವಾಗಿಯೂ ಇರುವಂತೆ ನಿಮ್ಮನ್ನು ಕಾಪಾಡಲಿ.
24 : ನಿಮ್ಮನ್ನು ಕರೆದ ದೇವರು ಇದನ್ನು ಈಡೇರಿಸುವರು; ಏಕೆಂದರೆ, ದೇವರು ನಂಬಿಕಸ್ಥರು.
25 : ಸಹೋದರರೇ, ನಮಗಾಗಿಯೂ ಪ್ರಾರ್ಥಿಸಿರಿ.
26 : ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನು ವಂದಿಸಿರಿ.
27 : ಈ ಪತ್ರವನ್ನು ಎಲ್ಲ ಸಹೋದರರಿಗೂ ಓದಿಹೇಳಬೇಕೆಂದು ಪ್ರಭುವಿನ ಹೆಸರಿನಲ್ಲಿ ವಿಧಿಸುತ್ತಿದ್ದೇನೆ.
28 : ನಮ್ಮ ಪ್ರಭುವಾದ ಯೇಸುಕ್ರಿಸ್ತರ ಅನುಗ್ರಹ ನಿಮ್ಮಲ್ಲಿರಲಿ!