Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಥೆಸ


1 : ಕಡೆಯದಾಗಿ ಸಹೋದರರೇ, ನೀವು ಹೇಗೆ ಬಾಳಬೇಕು, ದೇವರು ಮೆಚ್ಚುವಂತೆ ಹೇಗೆ ನಡೆದುಕೊಳ್ಳಬೇಕು, ಎಂಬುದನ್ನು ನಮ್ಮಿಂದ ಕಲಿತುಕೊಂಡಿರಿ. ಅಂತೆಯೇ ಜೀವಿಸುತ್ತಿದ್ದೀರಿ. ನಿಮ್ಮ ನಡತೆ ಇನ್ನೂ ಉತ್ತಮಗೊಳ್ಳಬೇಕೆಂದು ಪ್ರಭು ಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ಕೇಳಿಕೊಳ್ಳುತ್ತೇವೆ ಹಾಗೂ ಪ್ರಬೋಧಿಸುತ್ತೇವೆ.
2 : ಪ್ರಭು ಯೇಸುವಿನ ಅಧಿಕಾರದಿಂದ ನಾವು ನಿಮಗೆ ವಿಧಿಸಿದ ನಿಯಮಗಳನ್ನು ನೀವು ಬಲ್ಲಿರಿ.
3 : ನೀವು ಕೆಟ್ಟ ನಡತೆಯನ್ನು ಬಿಟ್ಟು ಪರಿಶುದ್ಧರಾಗಿ ಜೀವಿಸಬೇಕು ಎಂಬುದು ದೇವರ ಚಿತ್ತ.
4 : ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಪತ್ನಿಯನ್ನು ಘನತೆ, ಗೌರವದಿಂದಲೂ ಶುದ್ಧ ಮನಸ್ಸಿನಿಂದಲೂ ನಡೆಸಿಕೊಳ್ಳಬೇಕು.
5 : ದೇವರ ಅರಿವೇ ಇಲ್ಲದ ಅನ್ಯಜನರಂತೆ ಕಾಮಾತಿರೇಕದಿಂದ ವರ್ತಿಸಬಾರದು.
6 : ಈ ವಿಷಯದಲ್ಲಿ ಯಾರೂ ತನ್ನ ಸಹೋದರನನ್ನು ವಂಚಿಸಿ ಅತಿಕ್ರಮಿಸದಿರಲಿ. ಹೀಗೆ ವರ್ತಿಸುವವರು ಪ್ರಭುವಿನ ಪ್ರತೀಕಾರಕ್ಕೆ ಒಳಗಾಗುವರೆಂದು ನಾವು ನಿಮಗೆ ಮುನ್ನೆಚ್ಚರಿಕೆ ಕೊಟ್ಟಿದ್ದೇವೆ.
7 : ದೇವರು ನಮ್ಮನ್ನು ಕರೆದಿರುವುದು ಅಶುದ್ಧ ನಡತೆಗಲ್ಲ, ಪರಿಶುದ್ಧ ನಡತೆಗೆ.
8 : ಅಂದಮೇಲೆ, ಈ ಬೋಧನೆಯನ್ನು ತಿರಸ್ಕರಿಸುವವನು ಮನುಷ್ಯನನ್ನು ಮಾತ್ರವಲ್ಲ, ನಿಮಗೆ ಪವಿತ್ರಾತ್ಮರನ್ನು ಪ್ರದಾನ ಮಾಡಿರುವ ದೇವರನ್ನೇ ತಿರಸ್ಕರಿಸುತ್ತಾನೆ.
9 : ಸೋದರ ಪ್ರೇಮವನ್ನು ಕುರಿತು ನಿಮಗೆ ಬರೆಯುವ ಅವಶ್ಯಕತೆಯಿಲ್ಲ. ನೀವು ಒಬ್ಬರನ್ನೊಬ್ಬರು ಪ್ರೀತಿಸುವುದನ್ನು ದೇವರಿಂದಲೇ ಕಲಿತಿದ್ದೀರಿ.
10 : ಮಕೆದೋನಿಯದಲ್ಲಿ ವಾಸಿಸುವ ಎಲ್ಲ ಸಹೋದರರನ್ನೂ ನೀವು ಪ್ರೀತಿಸುತ್ತಿರುವುದೇನೋ ನಿಜ. ಆದರೂ ಸಹೋದರರೇ, ನಿಮ್ಮ ಈ ಪ್ರೀತಿ ಇನ್ನೂ ಅಧಿಕಾಧಿಕವಾಗಬೇಕೆಂಬುದೇ ನಮ್ಮ ಆಶಯ.
11 : ಮತ್ತೊಬ್ಬರ ವಿಷಯದಲ್ಲಿ ನೀವು ತಲೆಹಾಕದೆ ನಿಮ್ಮ ಸ್ವಂತಕಾರ್ಯಗಳಲ್ಲೇ ಮಗ್ನರಾಗಿರಿ. ನೆಮ್ಮದಿಯ ಜೀವನವೇ ನಿಮ್ಮ ಗುರಿಯಾಗಿರಲಿ. ನಿಮ್ಮ ಸ್ವಂತ ದುಡಿಮೆಯಿಂದ ಬದುಕನ್ನು ಸಾಗಿಸಿರಿ. ಇದೇ ನಿಮಗೆ ನಮ್ಮ ಆದೇಶ.
12 : ಹೀಗೆ ಬಾಳಿದರೆ ಅನ್ಯಜನರು ನಿಮ್ಮನ್ನು ಗೌರವಿಸುವರು; ಇತರರನ್ನು ಅವಲಂಬಿಸುವ ಅವಶ್ಯಕತೆ ನಿಮಗಿರುವುದಿಲ್ಲ.
13 : ಸಹೋದರರೇ, ಮೃತರ ಮುಂದಿನ ಸ್ಥಿತಿಗತಿಯ ವಿಷಯವಾಗಿ ನೀವು ತಿಳಿದಿರಬೇಕು ಎಂಬುದೇ ನಮ್ಮ ಬಯಕೆ. ಏಕೆಂದರೆ, ನಂಬಿಕೆ ನಿರೀಕ್ಷೆಯಿಲ್ಲದ ಇತರರಂತೆ ಮೃತರಿಗಾಗಿ ನೀವು ದುಃಖಿಸಬಾರದು
14 : ಯೇಸು ಸತ್ತು ಪುನರುತ್ಥಾನ ಹೊಂದಿದರೆಂದು ನಾವು ವಿಶ್ವಾಸಿಸುತ್ತೇವೆ ಅಲ್ಲವೇ? ಹಾಗೆಯೇ, ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟು ಮರಣಹೊಂದಿದವರನ್ನು ದೇವರು ಯೇಸುಕ್ರಿಸ್ತರೊಡನೆ ಮರಳಿ ಕರೆದುಕೊಳ್ಳುತ್ತಾರೆ.
15 : ಪ್ರಭುವಿನ ವಾಕ್ಯದ ಆಧಾರದ ಮೇಲೆ ನಾವು ನಿಮಗೆ ಹೇಳುತ್ತೇವೆ: ಪ್ರಭು ಪುನರಾಗಮಿಸುವಾಗ, ಇನ್ನೂ ಬದುಕಿರುವ ನಾವು ಮೃತರಾಗಿರುವ ಇತರರಿಗಿಂತಲೂ ಮುಂದಿನವರಾಗುವುದಿಲ್ಲ.
16 : ಆಜ್ಞಾಘೋಷವಾದಾಗ, ಪ್ರಧಾನ ದೂತನ ಧ್ವನಿಯು ಕೇಳಿಬಂದಾಗ, ದೇವರ ತುತೂರಿ ನಾದಗೈದಾಗ, ಪ್ರಭುವೇ ಸ್ವರ್ಗದಿಂದ ಇಳಿದು ಬರುತ್ತಾರೆ. ಆಗ, ಕ್ರಿಸ್ತಸ್ಥರಾಗಿ ಮೃತರಾದವರು ಮೊದಲು ಎದ್ದು ಬರುತ್ತಾರೆ.
17 : ಆಮೇಲೆ, ಇನ್ನೂ ಬದುಕಿರುವ ನಾವು ಎದ್ದುಬಂದವರೊಡನೆ ಆಕಾಶಮಂಡಲದಲ್ಲಿ ಪ್ರಭುವನ್ನು ಎದುರುಗೊಳ್ಳಲು ಮೇಘಾರೂಢರಾಗಿ ಮೇಲಕ್ಕೆ ಒಯ್ಯಲ್ಪಡುತ್ತೇವೆ. ಹೀಗೆ ಸರ್ವದಾ ನಾವು ಪ್ರಭುವಿನೊಂದಿಗೆ ಇರುತ್ತೇವೆ.
18 : ಆದ್ದರಿಂದ, ಈ ಮಾತುಗಳಿಂದ ಒಬ್ಬರನ್ನೊಬ್ಬರು ಸಂತೈಸಿಕೊಳ್ಳಿ.

· © 2017 kannadacatholicbible.org Privacy Policy