1 : ಸಹೋದರರೇ, ನಾವು ನಿಮ್ಮಲ್ಲಿಗೆ ಬಂದುದು ವ್ಯರ್ಥವಾಗಲಿಲ್ಲವೆಂಬುದು ನಿಮಗೆ ಗೊತ್ತು.
2 : ನಿಮಗೆ ತಿಳಿದಿರುವಂತೆ ನಾವು ನಿಮ್ಮಲ್ಲಿಗೆ ಬರುವ ಮೊದಲೇ ಫಿಲಿಪ್ಪಿ ಪಟ್ಟಣದಲ್ಲಿ ಹಿಂಸೆ, ಅವಮಾನಗಳನ್ನು ಸಹಿಸಿದೆವು. ತೀವ್ರವಾದ ವಿರೋಧವಿದ್ದರೂ ದೇವರ ನೆರವಿನಿಂದ ನಿರ್ಭೀತರಾಗಿ ಶುಭಸಂದೇಶವನ್ನು ನಿಮಗೆ ಸಾರಿದೆವು.
3 : ನಮ್ಮ ಬೋಧನೆಯಾದರೋ ದುರುದ್ದೇಶದಿಂದ ಕೂಡಿದುದಲ್ಲ; ಅಶುದ್ಧ ಅಥವಾ ಕಪಟ ಮನಸ್ಸಿನಿಂದ ಮೂಡಿದುದೂ ಅಲ್ಲ.
4 : ಶುಭಸಂದೇಶವನ್ನು ಸಾರಲು ನಾವು ಯೋಗ್ಯರೆಂದು ಎಣಿಸಿ, ದೇವರೇ ಈ ಹೊಣೆಯನ್ನು ನಮಗೆ ವಹಿಸಿಕೊಟ್ಟಿದ್ದಾರೆ. ಎಂತಲೇ, ನಾವು ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ಅಲ್ಲ, ಅಂತರಂಗವನ್ನು ಪರಿಶೋಧಿಸುವ ದೇವರನ್ನು ಮೆಚ್ಚಿಸುವುದಕ್ಕಾಗಿ ಈ ಕಾರ್ಯವನ್ನು ನಿರ್ವಹಿಸುತ್ತೇವೆ.
5 : ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಗಾಗಿ ಮಾತನಾಡುವವರಲ್ಲ, ಧನದಾಶೆಯನ್ನು ಮರೆಮಾಚುವ ವೇಷಧಾರಿಗಳೂ ಅಲ್ಲ. ಇದಕ್ಕೆ ದೇವರೇ ಸಾಕ್ಷಿ.
6 : ಕ್ರಿಸ್ತಯೇಸುವಿನ ಪ್ರೇಷಿತರಾದ ನಾವು ಜನರಿಂದ ಮರ್ಯಾದೆ, ಗೌರವಗಳನ್ನು ಗಳಿಸಬಹುದಾಗಿದ್ದರೂ ನಿಮ್ಮಿಂದಾಗಲಿ, ಇತರರಿಂದಾಗಲಿ ಅವನ್ನು ನಾವು ಬಯಸಲಿಲ್ಲ.
7 : ತಾಯಿ ತನ್ನ ಮಕ್ಕಳನ್ನು ಸಾಕಿ ಸಲಹುವಂತೆಯೇ, ನಾವು ನಿಮ್ಮನ್ನು ವಾತ್ಸಲ್ಯದಿಂದ ಕಂಡೆವು.
8 : ನೀವು ನಮಗೆ ಇಷ್ಟು ಪ್ರಿಯರಾದ ಕಾರಣ ದೇವರ ಶುಭಸಂದೇಶವನ್ನು ಸಾರುವುದಕ್ಕೆ ಮಾತ್ರವಲ್ಲ, ನಿಮಗಾಗಿ ನಮ್ಮ ಪ್ರಾಣವನ್ನು ನೀಡುವುದಕ್ಕೂ ಸಿದ್ಧರಾಗಿದ್ದೆವು.
9 : ಸಹೋದರರೇ, ನಮ್ಮ ಶ್ರಮೆ ಹಾಗೂ ದುಡಿಮೆಗಳನ್ನು ನೀವು ಮರೆಯುವಂತಿಲ್ಲ. ನಿಮ್ಮಲ್ಲಿ ಯಾರಿಗೂ ನಾವು ಹೊರೆಯಾಗಬಾರದೆಂದು, ಬದುಕಿಗಾಗಿ ಹಗಲಿರುಳೂ ದುಡಿಯುತ್ತಾ ದೇವರ ಶುಭಸಂದೇಶವನ್ನು ಸಾರಿದೆವು.
10 : ವಿಶ್ವಾಸಿಗಳಾದ ನಿಮ್ಮ ನಡುವೆ ನಾವು ಎಷ್ಟು ಶುದ್ಧರಾಗಿ, ನೀತಿವಂತರಾಗಿ, ನಿರ್ದೋಷಿಗಳಾಗಿ ನಡೆದುಕೊಂಡೆವು ಎಂಬುದಕ್ಕೆ ನೀವೇ ಸಾಕ್ಷಿಗಳು. ಮಾತ್ರವಲ್ಲದೆ ದೇವರೂ ಸಾಕ್ಷಿಯೇ.
11 : ತಂದೆ ಮಕ್ಕಳನ್ನು ಕಾಣುವಂತೆ ನಾವು ಪ್ರತಿಯೊಬ್ಬನನ್ನೂ ಆದರದಿಂದ ಕಂಡೆವು; ಬುದ್ಧಿ ಹೇಳಿದೆವು. ಪ್ರೊತ್ಸಾಹಿಸಿದೆವು.
12 : ತಮ್ಮ ರಾಜ್ಯ ಹಾಗೂ ವೈಭವದಲ್ಲಿ ಭಾಗವಹಿಸಲು ಕರೆಯಿತ್ತ ದೇವರು ಮೆಚ್ಚುವಂತೆ ಬಾಳಬೇಕೆಂದು ನಿಮಗೆ ವಿಧಿಸಿದೆವು; ಇದೆಲ್ಲಾ ನಿಮಗೆ ತಿಳಿದಿದೆ.
13 : ಇನ್ನೊಂದು ಕಾರಣಕ್ಕಾಗಿಯೂ ನಾವು ಸತತವೂ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ನೀವು ದೇವರ ಸಂದೇಶವನ್ನು ನಮ್ಮಿಂದ ಕೇಳಿದಾಗ, ಅದನ್ನು ಮನುಷ್ಯರ ಮಾತುಗಳೆಂದು ಪರಿಗಣಿಸದೆ, ದೇವರ ವಾಕ್ಯವೆಂದೇ ಅರಿತು ಅಂಗೀಕರಿಸಿದಿರಿ. ವಿಶ್ವಾಸಿಗಳಾದ ನಿಮ್ಮಲ್ಲಿ ಚೈತನ್ಯಪೂರ್ಣವಾಗಿರುವ ಈ ವಾಕ್ಯವು, ನಿಜವಾಗಿಯೂ ದೇವರ ಸಂದೇಶವೇ ಸರಿ.
14 : ಸಹೋದರರೇ, ನೀವು ಜುದೇಯದಲ್ಲಿರುವ ದೇವರ ಸಭೆಗಳನ್ನು ಅನುಸರಿಸಿದಿರಿ. ಕ್ರಿಸ್ತಯೇಸುವಿನಲ್ಲಿ ವಿಶ್ವಾಸವಿಟ್ಟಿರುವ ಅವರು ಯೆಹೂದ್ಯರಿಂದ ಅನುಭವಿಸಿದಂಥ ಹಿಂಸೆಯನ್ನು, ನೀವೂ ಸ್ವಜನರಿಂದ ಅನುಭವಿಸಿದಿರಿ.
15 : ಆ ಯೆಹೂದ್ಯರೇ ಪ್ರಭು ಯೇಸುವನ್ನೂ ಪ್ರವಾದಿಗಳನ್ನೂ ಸಂಹರಿಸಿದವರು; ನಮ್ಮನ್ನೂ ಸಹ ಹೊರದಬ್ಬಿದರು. ಅವರು ದೇವರಿಗೆ ದ್ರೋಹವೆಸಗಿದರು; ಜನರೆಲ್ಲರಿಗೆ ವಿರೋಧಿಗಳಾದರು.
16 : ಯೆಹೂದ್ಯರಲ್ಲದ ಜನರಿಗೆ ಜೀವೋದ್ಧಾರವನ್ನು ತರುವ ಶುಭಸಂದೇಶವನ್ನು ನಾವು ಸಾರದಂತೆ ಅವರು ನಮ್ಮನ್ನು ತಡೆಗಟ್ಟುತ್ತಾರೆ. ಹೀಗೆ, ಅವರು ತಮ್ಮ ಪಾಪಕೃತ್ಯಗಳ ಪಟ್ಟಿಯನ್ನು ಸದಾ ಭರ್ತಿಮಾಡುತ್ತಾರೆ. ಕಡೆಗೆ, ದೇವರ ಕೋಪಾಗ್ನಿಯು ಅವರ ಮೇಲೆ ಬರುತ್ತದೆ.
17 : ಸಹೋದರರೇ, ನಾವು ದೈಹಿಕವಾಗಿ ನಿಮ್ಮಿಂದ ಸ್ವಲ್ಪಕಾಲ ದೂರವಿದ್ದರೂ ಅಂತರಂಗದಲ್ಲಿ ನಿಮ್ಮೊಡನೆಯೇ ಇದ್ದೆವು; ನಿಮ್ಮನ್ನು ಮುಖಾಮುಖಿಯಾಗಿ ಕಾಣಲು ಪ್ರಯತ್ನಿಸಿದೆವು.
18 : ನಿಮ್ಮಲ್ಲಿಗೆ ಹಿಂದಿರುಗಲು ನಮಗೆ ಮನಸ್ಸಿತ್ತು. ಪೌಲನೆಂಬ ನಾನಂತೂ, ನಿಮ್ಮ ಬಳಿಗೆ ಬರಲು ಅನೇಕ ಸಾರಿ ಪ್ರಯಾಸಪಟ್ಟೆ. ಆದರೆ ಸೈತಾನನು ನಮಗೆ ಅಡ್ಡಿ ಆತಂಕವನ್ನೊಡ್ಡಿದನು.
19 : ನಮ್ಮ ಪ್ರಭು ಯೇಸು ಪುನರಾಗಮಿಸುವಾಗ ಅವರ ಸಮ್ಮುಖದಲ್ಲಿ ನಮ್ಮ ಆಶಯ-ಆನಂದಗಳು, ಕೀರ್ತಿ-ಕಿರೀಟಗಳಾದರೂ ಯಾರು? ನೀವೇ ಅಲ್ಲವೇ?
20 : ನಿಶ್ಚಯವಾಗಿ ನಮ್ಮ ಗೌರವವೂ ಆನಂದವೂ ನೀವೇ.