Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಕೊಲೊಸ್ಸೆ


1 : ಯಜಮಾನರೇ, ಸ್ವರ್ಗಲೋಕದಲ್ಲಿ ನಿಮಗೂ ಒಬ್ಬ ಒಡೆಯನಿದ್ದಾನೆಂಬುದನ್ನು ತಿಳಿದುಕೊಂಡು ನಿಮ್ಮ ಮನೆಯಾಳುಗಳನ್ನು ನ್ಯಾಯಬದ್ಧ ರೀತಿಯಲ್ಲಿ ನೋಡಿಕೊಳ್ಳಿ
2 : ಪ್ರಾರ್ಥನಾ ಜೀವನ ನಡೆಸಿರಿ. ಪ್ರಾರ್ಥಿಸುವಾಗಲೆಲ್ಲಾ ಎಚ್ಚರವಾಗಿದ್ದು ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
3 : ಕ್ರಿಸ್ತಯೇಸುವಿನ ರಹಸ್ಯವನ್ನು ಪ್ರಚುರಪಡಿಸಲು ನಮಗೆ ಅವಕಾಶ ದೊರಕುವಂತೆ ಪ್ರಾರ್ಥಿಸಿರಿ. ಈ ಶುಭಸಂದೇಶದ ನಿಮಿತ್ತವೇ ನಾನು ಸೆರೆಯಲ್ಲಿ ಇದ್ದೇನೆಂಬುದು ನಿಮಗೆ ತಿಳಿದಿದೆ.
4 : ನಾನು ಶುಭಸಂದೇಶವನ್ನು ಸ್ಪಷ್ಟವಾಗಿಯೂ ಸರಳವಾಗಿಯೂ ಸಾರುವಂತೆ ಪ್ರಾರ್ಥಿಸಿರಿ.
5 : ನೆರೆಯವರ ವಿಷಯದಲ್ಲಿ ಜಾಣತನದಿಂದ ವರ್ತಿಸಿರಿ. ನಿಮಗಿರುವ ಸಮಯ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಿರಿ.
6 : ನಿಮ್ಮ ಸಂಭಾಷಣೆ ಯಾವಾಗಲೂ ಹಿತಕರವಾಗಿದ್ದು ಇತರರನ್ನು ಆಕರ್ಷಿಸುವಂತಿರಲಿ. ನೀವು ಯಾರು ಯಾರಿಗೆ, ಹೇಗೆ ಉತ್ತರಿಸಬೇಕು ಎಂಬುದನ್ನು ಕಲಿತುಕೊಳ್ಳಿರಿ.
7 : ನಮ್ಮ ಪ್ರಿಯ ಸಹೋದರ ತುಖಿಕನು ನನ್ನ ವಿಷಯದಲ್ಲಿ ನಿಮಗೆ ಎಲ್ಲಾ ವರ್ತಮಾನವನ್ನು ಕೊಡುವನು. ಆತನು ಪ್ರಾಮಾಣಿಕ ಸೇವಕನೂ ಪ್ರಭುವಿನ ಸೇವೆಯಲ್ಲಿ ನನ್ನ ಸಂಗಡಿಗನೂ ಆಗಿದ್ದಾನೆ.
8 : ನನ್ನ ವಿಷಯದಲ್ಲಿ ನಿಮಗೆ ಎಲ್ಲವನ್ನೂ ತಿಳಿಸಿ, ನಿಮ್ಮನ್ನು ಹುರಿದುಂಬಿಸಿ, ಪ್ರೋತ್ಸಾಹಿಸುವುದಕ್ಕಾಗಿ ಆತನನ್ನು ನಿಮ್ಮ ಬಳಿಗೆ ಕಳುಹಿಸಿದ್ದೇನೆ.
9 : ಆತನ ಜೊತೆಯಲ್ಲಿ ನಂಬಿಕಸ್ಥನಾದ ಪ್ರಿಯ ಸಹೋದರ ಒನೇಸಿಮನನ್ನು ಕಳುಹಿಸುತ್ತಿದ್ದೇನೆ. ಇವನು ನಿಮ್ಮ ಊರಿನ ಸಭೆಗೆ ಸೇರಿದವನು. ಇಲ್ಲಿ ನಡೆಯುವುದನ್ನೆಲ್ಲಾ ಇವರು ನಿಮಗೆ ತಿಳಿಸುವರು.
10 : ನನ್ನೊಡನೆ ಸೆರೆಯಾಳಾಗಿರುವ ಅರಿಸ್ತಾರ್ಕನೂ ಬಾರ್ನಬನಿಗೆ ಹತ್ತಿರದ ನೆಂಟನಾದ ಮಾರ್ಕನೂ ನಿಮಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ. ಮಾರ್ಕನು ನಿಮ್ಮ ಬಳಿಗೆ ಬಂದಾಗ ಅವನನ್ನು ಸ್ವಾಗತಿಸಿರಿ. ಅವನ ವಿಷಯದಲ್ಲಿ ನಿಮಗೆ ಸಲಹೆಗಳನ್ನು ಕೊಡಲಾಗಿದೆ.
11 : ಯಸ್ತನೆನಿಸಿಕೊಳ್ಳುವ ಯೇಸು ಕೂಡ ನಿಮಗೆ ವಂದನೆಗಳನ್ನು ತಿಳಿಸಿದ್ದಾನೆ. ಕ್ರೈಸ್ತರಾದ ಯೆಹೂದ್ಯರಲ್ಲಿ ಇವರೇ ನನ್ನೊಡನೆ ದೇವರ ಸಾಮ್ರಾಜ್ಯದ ಏಳಿಗೆಗಾಗಿ ದುಡಿಯುತ್ತಿರುವವರು. ಇವರಿಂದ ನನಗೆ ತುಂಬಾ ಆದರಣೆ ದೊರಕಿದೆ.
12 : ಕ್ರಿಸ್ತಯೇಸುವಿನ ಸೇವಕನೂ ನಿಮ್ಮ ಸಭೆಗೆ ಸೇರಿದವನೂ ಆದ ಎಪಫ್ರನಿಂದಲೂ ನಿಮಗೆ ವಂದನೆಗಳು. ನೀವು ಮಾಡುವ ಎಲ್ಲಾ ಕಾರ್ಯಗಳಲ್ಲೂ ದೇವರ ಚಿತ್ತಕ್ಕೆ ವಿಧೇಯರಾಗಿ ಸ್ಥಿರ ಹಾಗೂ ಸಿದ್ಧ ಕ್ರೈಸ್ತರಾಗಿ ಬಾಳಬೇಕೆಂದು ಅವನು ನಿಮಗಾಗಿ ಸದಾ ಆಸಕ್ತಿಯಿಂದ ಪ್ರಾರ್ಥಿಸುತ್ತಿದ್ದಾನೆ.
13 : ನಿಮಗಾಗಿಯೂ ಲವೊದಿಕೀಯ ಹಾಗೂ ಹಿರೆಯಾಪೊಲಿಯದ ಜನರಿಗಾಗಿಯೂ ಆತನು ಶ್ರಮವಹಿಸಿ ದುಡಿಯುತ್ತಿದ್ದಾನೆಂಬುದಕ್ಕೆ ನಾನೇ ಸಾಕ್ಷಿ.
14 : ನಮ್ಮ ಪ್ರಿಯ ವೈದ್ಯನಾದ ಲೂಕನೂ ದೇಮಾಸನೂ ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.
15 : ಲವೊದಿಕೀಯದಲ್ಲಿರುವ ನಮ್ಮ ಸಹೋದರರು, ನಿಂಫಳು ಮತ್ತು ಆಕೆಯ ಮನೆಯಲ್ಲಿ ಸೇರುವ ಸಭೆಯವರು ಇವರೆಲ್ಲರಿಗೂ ನಮ್ಮ ಅಭಿನಂದನೆಗಳು.
16 : ಈ ಪತ್ರವನ್ನು ನೀವು ಓದಿದ ಬಳಿಕ ಲವೊದಿಕೀಯದ ಸಭೆಯವರಿಗೆ ಓದಿ ಹೇಳುವ ವ್ಯವಸ್ಥೆಮಾಡಿರಿ. ಅಂತೆಯೇ, ಲವೊದಿಕೀಯದಿಂದ ಕಳಿಸಲಾಗುವ ಪತ್ರವನ್ನು ತರಿಸಿಕೊಂಡು ಓದಿರಿ.
17 : ತನಗೆ ಒಪ್ಪಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕೆಂಬುದಾಗಿ ಅರ್ಖಿಪ್ಪನಿಗೆ ತಿಳಿಸಿರಿ.
18 : ಇದನ್ನು ಪೌಲನಾದ ನಾನೇ ಸ್ವತಃ ಬರೆಯುತ್ತಿದ್ದೇನೆ. ನಾನು ಸೆರೆಯಲ್ಲಿದ್ದೇನೆ ಎಂಬುದು ನಿಮಗೆ ನೆನಪಿರಲಿ. ಶುಭಾಶಯಗಳು ! ದೈವಾನುಗ್ರಹ ನಿಮ್ಮಲ್ಲಿರಲಿ !

· © 2017 kannadacatholicbible.org Privacy Policy