1 : ಕೊನೆಯದಾಗಿ ಸಹೋದರರೇ, ಪ್ರಭುವಿನಲ್ಲಿ ಆನಂದಿಸಿರಿ. ನಾನು ನಿಮಗೆ ಮೊದಲೇ ತಿಳಿಸಿದಂತೆ ಇದನ್ನು ಮತ್ತೆ ಮತ್ತೆ ಬರೆಯುವುದರಲ್ಲಿ ನನಗೆ ಬೇಸರವಿಲ್ಲ; ಇದು ನಿಮ್ಮ ಹಿತಕ್ಕಾಗಿಯೇ.
2 : ನಿಮಗೆ ಸುನ್ನತಿಯಾಗಬೇಕೆಂದು ಬೋಧಿಸುವವರ ವಿಷಯದಲ್ಲಿ ಜಾಗರೂಕರಾಗಿರಿ. ಅವರು ದುಷ್ಕರ್ಮಿಗಳು, ಶ್ವಾನಗಳಿಗೆ ಸಮಾನರು.
3 : ನಿಜವಾದ ಸುನ್ನತಿ ಪಡೆದವರು ನಾವು. ಏಕೆಂದರೆ, ನಾವು ಪವಿತ್ರಾತ್ಮ ಅವರ ಪ್ರೇರಣೆಯಿಂದ ದೇವರನ್ನು ಆರಾಧಿಸುತ್ತೇವೆ. ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಹರ್ಷಿಸುತ್ತೇವೆ. ಬಾಹ್ಯಾಚರಣೆಗಳಲ್ಲೇ ನಂಬಿಕೆಯಿಡದೆ ಬಾಳುತ್ತೇವೆ.
4 : ಇಂಥ ಬಾಹ್ಯಾಚರಣೆಗಳಲ್ಲಿ ನಂಬಿಕೆ ಇಡಲು ತಮಗೆ ಹಕ್ಕು ಇದೆಯೆಂದು ಯಾರಾದರೂ ಭಾವಿಸಿದರೆ, ನನ್ನ ಹಕ್ಕು ಅದಕ್ಕೂ ಮಿಗಿಲಾದುದು ಎಂದೇ ಹೇಳುತ್ತೇನೆ.
5 : ಹುಟ್ಟಿದ ಎಂಟನೆಯ ದಿನ ನನಗೆ ಸುನ್ನತಿಯಾಯಿತು; ಹುಟ್ಟಿನಿಂದ ನಾನು ಇಸ್ರಯೇಲನು, ಬೆನ್ಯವಿೂನ ಕುಲದವನು; ಅಪ್ಪಟ ಹಿಬ್ರಿಯನು,
6 : ಧರ್ಮಶಾಸ್ತ್ರದ ದೃಷ್ಟಿಯಲ್ಲಿ ನಿಷ್ಠಾವಂತ ಫರಿಸಾಯನು; ಮತಾಸಕ್ತಿಯ ದೃಷ್ಟಿಯಿಂದ ಧರ್ಮಸಭೆಯ ಹಿಂಸಕನು; ಧರ್ಮಶಾಸ್ತ್ರ ವಿಧಿನಿಯಮಗಳ ಪಾಲನೆಯಲ್ಲಿ ನಿಂದಾರಹಿತನು.
7 : ಇವನ್ನೆಲ್ಲಾ ಲಾಭವೆಂದು ಪರಿಗಣಿಸಿದ್ದ ನಾನು ಈಗ ಕ್ರಿಸ್ತಯೇಸುವಿನ ಸಲುವಾಗಿ ನಷ್ಟವೆಂದೇ ಎಣಿಸುತ್ತೇನೆ.
8 : ನಿಶ್ಚಯವಾಗಿಯೂ ನನ್ನ ಪ್ರಭು ಯೇಸುಕ್ರಿಸ್ತರನ್ನು ಅರಿತುಕೊಳ್ಳುವುದೇ ಉತ್ಕøಷ್ಟವಾದುದೆಂದು ಮನದಟ್ಟಾಗಿರುವುದರಿಂದ ಸಮಸ್ತವನ್ನು ವ್ಯರ್ಥವೆಂದೇ ಎಣಿಸುತ್ತೇನೆ. ಅವರನ್ನು ಲಭ್ಯವಾಗಿಸಿಕೊಳ್ಳುವ ಸಲುವಾಗಿ ಎಲ್ಲವನ್ನೂ ತೊರೆದುಬಿಟ್ಟಿದ್ದೇನೆ, ಎಲ್ಲವನ್ನೂ ಕಸವೆಂದೇ ಪರಿಗಣಿಸುತ್ತೇನೆ.
9 : ಧರ್ಮಶಾಸ್ತ್ರದ ಪಾಲನೆಯಿಂದ ದೊರಕುವ, ನನ್ನದೇ ಎಂದು ಹೇಳಿಕೊಳ್ಳಬಹುದಾದ ಸತ್ಸಂಬಂಧ ಯಾವುದೂ ನನಗಿಲ್ಲ. ಪ್ರತಿಯಾಗಿ, ನಾನು ಕ್ರಿಸ್ತಯೇಸುವಿನಲ್ಲಿಟ್ಟಿರುವ ವಿಶ್ವಾಸದ ಪ್ರಯುಕ್ತ ದೇವರೊಂದಿಗೆ ಸರಿಯಾದ ಸತ್ಸಂಬಂಧವನ್ನು ಹೊಂದಿದ್ದೇನೆ. ಈ ಸಂಬಂಧವು ದೇವರು ನನಗೆ ದಯಪಾಲಿಸಿರುವ ಅನುಗ್ರಹ. ನನ್ನ ವಿಶ್ವಾಸದ ಆಧಾರದ ಮೇಲೆ ಅವರೇ ನೀಡಿರುವ ಕೃಪಾವರ.
10 : ಯೇಸುಸ್ವಾಮಿಯನ್ನು ಅರಿಯಬೇಕು; ಅವರ ಪುನರುತ್ಥಾನದ ಪ್ರಭಾವವನ್ನು ಅನುಭವಿಸಬೇಕು; ಅವರ ಯಾತನೆಗಳಲ್ಲಿ ಪಾಲುಗೊಳ್ಳಬೇಕು; ಅವರ ಮರಣದಲ್ಲಿ ಅವರಂತೆಯೇ ಆಗಬೇಕು - ಇದೇ ನನ್ನ ಹೆಬ್ಬಯಕೆ.
11 : ಹೀಗೆ ನಾನೂ ಸಹ ಮೃತ್ಯುಂಜಯನಾಗುತ್ತೇನೆ ಎಂಬುದೇ ನನ್ನ ನಂಬಿಕೆ - ನಿರೀಕ್ಷೆ.
12 : ಈಗಾಗಲೇ ನಾನಿದೆಲ್ಲವನ್ನೂ ಸಾಧಿಸಿದ್ದೇನೆ, ಪರಿಪೂರ್ಣತೆಯನ್ನು ಗಳಿಸಿದ್ದೇನೆ ಎಂದು ನೀವು ಭಾವಿಸಬಾರದು. ಕ್ರಿಸ್ತಯೇಸು ನನ್ನನ್ನು ಯಾವುದಕ್ಕಾಗಿ ತಮ್ಮವನನ್ನಾಗಿ ಮಾಡಿಕೊಂಡರೋ, ಅದನ್ನು ನನ್ನದಾಗಿಸಿಕೊಳ್ಳಲು ನಾನು ಪ್ರಯತ್ನಿಸುತ್ತಿದ್ದೇನೆ.
13 : ಸಹೋದರರೇ, ಆ ಗುರಿಯನ್ನು ತಲುಪಿದ್ದೇನೆಂದು ನಾನೆಂದೂ ಹೇಳಿಕೊಂಡಿಲ್ಲ. ಆದರೆ ಇದು ನಿಜ. ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು, ಮುಂದಿನವುಗಳ ಮೇಲೆ ಕಣ್ಣಿಟ್ಟು ನಾನು ಓಡುತ್ತಿದ್ದೇನೆ.
14 : ಮೇಲಣ ಬಹುಮಾನವನ್ನು ಪಡೆಯಲೆಂದು ದೇವರು ನನಗೆ ಕ್ರಿಸ್ತಯೇಸುವಿನ ಮುಖಾಂತರ ಕರೆನೀಡಿದ್ದಾರೆ. ಆ ಗುರಿಯನ್ನು ತಲುಪಲೆಂದೇ ನಾನು ಮುಂದೋಡುತ್ತಲಿದ್ದೇನೆ.
15 : ನಮ್ಮಲ್ಲಿ ಪರಿಣತರಾದವರು ಈ ವಿಷಯದಲ್ಲಿ ಇದೇ ಮನೋಭಾವನೆಯಿಂದ ಇರಬೇಕು. ಯಾವುದಾದರೂ ಒಂದು ವಿಷಯದಲ್ಲಿ ನೀವು ಭಿನ್ನಾಭಿಪ್ರಾಯ ಉಳ್ಳವರಾಗಿದ್ದರೆ ದೇವರು ನಿಜಾಂಶವನ್ನು ಸೃಷ್ಟೀಕರಿಸುವರು.
16 : ಅಂತೂ, ಇದುವರೆಗೆ ನಾವು ಎಷ್ಟೇ ಮುಂದುವರೆದಿದ್ದರೂ ಅದೇ ಮಾರ್ಗದಲ್ಲಿ ಸಾಗೋಣ.
17 : ಸಹೋದರರೇ, ನೀವು ನನ್ನನ್ನು ಅನುಸರಿಸಿರಿ. ನಮ್ಮಂತೆ ಆದರ್ಶಜೀವನ ನಡೆಸುವವರನ್ನು ಅನುಸರಿಸಿ ಬಾಳಿರಿ.
18 : ಕ್ರಿಸ್ತಯೇಸುವಿನ ಶಿಲುಬೆಗೆ ವಿರೋಧವಾಗಿ ನಡೆಯುವವರು ಅನೇಕರಿದ್ದಾರೆ. ಇದನ್ನು ನಾನು ಹಲವಾರು ಸಾರಿ ತಿಳಿಸಿರುವಂತೆ ಈಗಲೂ ಅತೀವ ದುಃಖದಿಂದ ಹೇಳುತ್ತಿದ್ದೇನೆ.
19 : ಹೊಟ್ಟೆಯೇ ಅವರ ದೇವರು, ನಾಚಿಕೆಪಡಿಸುವ ಕಾರ್ಯಗಳಲ್ಲಿಯೇ ಅವರಿಗೆ ಹೆಮ್ಮೆ, ನಶ್ವರವಾದ ವಿಷಯಗಳಲ್ಲಿಯೇ ಅವರಿಗೆ ವ್ಯಾಮೋಹ. ಹೀಗಾಗಿ, ವಿನಾಶವೇ ಅವರ ಅಂತ್ಯ.
20 : ನಾವಾದರೋ ಸ್ವರ್ಗಸಾಮ್ರಾಜ್ಯದ ಪ್ರಜೆಗಳು, ಉದ್ಧಾರಕರಾದ ಪ್ರಭು ಯೇಸುಕ್ರಿಸ್ತರು ಪುನರಾಗಮಿಸುವುದು ಅಲ್ಲಿಂದಲೇ ಎಂದು ಎದುರುನೋಡುತ್ತಿದ್ದೇವೆ.
21 : ಅವರು ಸಮಸ್ತವನ್ನು ಸ್ವಾಧೀನಪಡಿಸಿಕೊಳ್ಳುವರು; ನಶ್ವರವಾದ ನಮ್ಮ ದೀನ ದೇಹಗಳನ್ನು ತಮ್ಮ ಶಕ್ತಿಯಿಂದ ರೂಪಾಂತರಗೊಳಿಸಿ ತಮ್ಮ ತೇಜೋಮಯ ಶರೀರದಂತೆ ಮಾಡುವರು.