1 : ಕ್ರಿಸ್ತಯೇಸುವಿನಲ್ಲಿ ನಿಮಗೆ ಉತ್ಸಾಹ, ಉತ್ತೇಜನ, ಪ್ರೀತಿ, ಪ್ರೇರಣೆ, ಪವಿತ್ರಾತ್ಮ ಅವರ ಅನ್ಯೋನ್ಯತೆ, ದೀನದಯಾಳತೆ ಇರುವುದಾದರೆ ಐಕಮತ್ಯದಿಂದ ಬಾಳಿರಿ.
2 : ನಿಮ್ಮೆಲ್ಲರಲ್ಲಿ ಒಂದೇ ಮನಸ್ಸು, ಒಂದೇ ಪ್ರೀತಿ ಇರಲಿ. ನಿಮ್ಮ ಗುರಿಧ್ಯೇಯಗಳು ಒಂದೇ ಆಗಿರಲಿ. ಆಗ ನನ್ನ ಸಂತೋಷವು ಸಂಪೂರ್ಣಗೊಳ್ಳುವುದು.
3 : ಸ್ವಾರ್ಥ ಸಾಧನೆಗಾಗಲಿ, ಡಂಭಾಚಾರಕ್ಕಾಗಲಿ ಏನನ್ನೂ ಮಾಡಬೇಡಿ. ಪರಸ್ಪರ ನಮ್ರತೆಯಿಂದ ನಡೆದುಕೊಳ್ಳಿ; ಇತರರು ನಿಮಗಿಂತಲೂ ಶ್ರೇಷ್ಠರೆಂದು ಪರಿಗಣಿಸಿರಿ.
4 : ಸ್ವಹಿತವನ್ನೇ ಗಮನಿಸದೆ ಪರರ ಹಿತವನ್ನೂ ಬಯಸಿರಿ.
5 : ಕ್ರಿಸ್ತಯೇಸುವಿನಲ್ಲಿರುವ ಮನೋಭಾವ ನಿಮ್ಮಲ್ಲೂ ನೆಲಸಿರಲಿ:
6 : ದೇವಸ್ವರೂಪಿ ತಾನಾಗಿದ್ದರೂ ನಿರುತ
ದೇವರಿಗೆ ಸಮನಾದ ಆ ಸಿರಿ ಪದವಿಯನಾತ
ಹಿಡಿದಿಟ್ಟುಕೊಳ್ಳಲಿಲ್ಲ ಬಿಡಲೊಲ್ಲೆನೆನುತ.
7 : ತನ್ನನೇ ಬರಿದು ಮಾಡಿಕೊಂಡು
ದಾಸನ ರೂಪವನು ಧರಿಸಿಕೊಂಡು
ಮನುಜನಾಕಾರದಲಿ ಕಾಣಿಸಿಕೊಂಡು
ನರಮಾನವರಿಗೆ ಸರಿಸಮನಾದ.
8 : ತನ್ನನೇ ಆತ ತಗ್ಗಿಸಿಕೊಂಡು
ವಿಧೇಯನಾಗಿ ನಡೆದುಕೊಂಡು
ಮರಣಪರಿಯಂತ, ಹೌದೌದು,
ಶಿಲುಬೆಯ ಮರಣಪರಿಯಂತ ವಿಧೇಯನಾದ.
9 : ಎಂತಲೇ ಪರಮೋನ್ನತ
ಸ್ಥಾನಕ್ಕೇರಿಸಿದನಾತನನು
ಇತ್ತನು ಹೆಸರುಗಳೊಳುತ್ತಮ
ಹೆಸರನು ದೇವಪರಮನು.
10 : ಯೇಸುವಿನ ಹೆಸರಿಗೆಂದೇ ಮೊಣಕಾಲೂರಿ
ಮಣಿವರು
ಸ್ವರ್ಗವಾಸಿಗಳು, ಭೂನಿವಾಸಿಗಳು,
ಪಾತಾಳ ಜೀವರಾಶಿಗಳು.
11 : ‘ಕ್ರಿಸ್ತ ಯೇಸುವೇ ಪ್ರಭು’ ಎಂದೆಲ್ಲರಿಗೆ
ಅರಿಕೆ ಮಾಡುವರು
ಪಿತದೇವನ ಮಹಿಮೆಯನು ಈ ಪರಿ
ಹೊಗಳಿ ಸಾರುವರವರು.
12 : ಪ್ರಿಯ ಸಹೋದರರೇ, ನಾನು ನಿಮ್ಮಲ್ಲಿದ್ದಾಗ ನೀವು ಯಾವಾಗಲೂ ನನ್ನ ಮಾತಿನಂತೆ ನಡೆದುಕೊಂಡಿರಿ. ಈಗ, ನಾನು ದೂರವಿರುವಾಗ ಇನ್ನೂ ಹೆಚ್ಚಿನ ಆಸಕ್ತಿಯಿಂದ ನಡೆದುಕೊಳ್ಳಿ. ನಿಮ್ಮ ಜೀವೋದ್ಧಾರಕ್ಕಾಗಿ ಭಯಭಕ್ತಿಯಿಂದ ಶ್ರಮಿಸಿರಿ.
13 : ಏಕೆಂದರೆ ದೈವಚಿತ್ತವನ್ನು ನೀವು ನೆರವೇರಿಸುವಂತೆ ಅವರೇ ನಿಮ್ಮಲ್ಲಿ ಸತ್ಪ್ರೇರಣೆಯನ್ನೂ ಸತ್ಫಲವನ್ನೂ ನೀಡುತ್ತಾರೆ.
14 : ನೀವು ಮಾಡುವ ಎಲ್ಲಾ ಕಾರ್ಯಗಳನ್ನು ಗೊಣಗುಟ್ಟದೆ, ವಿವಾದವಿಲ್ಲದೆ, ಏಕಮನಸ್ಸಿನಿಂದ ಮಾಡಿ.
15 : ನಿರ್ದೋಷಿಗಳೂ ನಿಷ್ಕಳಂಕರೂ ಆಗಿರಿ. ವಕ್ರಬುದ್ಧಿಯ ದುಷ್ಟಜನರ ನಡುವೆ ದೇವರ ಪರಿಶುದ್ಧ ಮಕ್ಕಳಂತೆ ಬಾಳಿರಿ. ಜೀವದಾಯಕ ಸಂದೇಶವನ್ನು ಎತ್ತಿಹಿಡಿಯಿರಿ; ಆಗ ನಕ್ಷತ್ರಗಳು ಆಕಾಶವನ್ನು ಬೆಳಗಿಸುವಂತೆ ಪ್ರಪಂಚದಲ್ಲಿ ನೀವು ಕಂಗೊಳಿಸುವಿರಿ..
16 : ಹೀಗೆ ನೀವು ನಡೆದುಕೊಂಡರೆ ನನ್ನ ಸೇವೆ ವ್ಯರ್ಥವಾಗದೆ, ಶ್ರಮ ನಿಷ್ಫಲವಾಗದೆ ಫಲಪ್ರದವಾಯಿತೆಂದು ಕ್ರಿಸ್ತರ ದಿನದಂದು ನಾನು ಹೆಮ್ಮೆ ಪಡಬಹುದು.
17 : ನಿಮ್ಮ ವಿಶ್ವಾಸವೆಂಬ ಬಲಿಕಾಣಿಕೆಯ ಮೇಲೆ ನನ್ನ ರಕ್ತವನ್ನು ಧಾರೆಯಾಗಿ ಹರಿಸಬೇಕಾಗಿ ಬಂದರೂ ನನಗೆ ಸಂತೋಷವೇ; ನಿಮ್ಮೆಲ್ಲರೊಡನೆ ಸೇರಿ ಸಂತೋಷಿಸುತ್ತೇನೆ.
18 : ಅದೇ ರೀತಿ ನೀವು ಸಹ ನನ್ನೊಡನೆ ಸಂತೋಷದಿಂದ ಸಂಭ್ರಮಿಸಿರಿ.
ಯೇಸುವಿನ ದಾಸರು
19 : ಪ್ರಭು ಯೇಸುವಿನ ಚಿತ್ತವಾದಲ್ಲಿ ತಿಮೊಥೇಯನನ್ನು ನಿಮ್ಮ ಬಳಿಗೆ ಬೇಗನೆ ಕಳುಹಿಸಬೇಕೆಂದಿದ್ದೇನೆ. ಆತನಿಂದ ನಿಮ್ಮ ಸಮಾಚಾರವನ್ನು ತಿಳಿದು ನಾನು ಹರ್ಷಗೊಳ್ಳುತ್ತೇನೆ.
20 : ಆತನಂತೆ ನಿಷ್ಕಪಟವಾಗಿ ನಿಮ್ಮ ಯೋಗಕ್ಷೇಮವನ್ನು ಬಯಸುವವರು ಬೇರೆ ಯಾರೂ ಇಲ್ಲಿಲ್ಲ.
21 : ಇತರರೆಲ್ಲರೂ ಸ್ವಕಾರ್ಯದಲ್ಲಿ ಮಗ್ನರಾಗಿರುವವರೇ ಹೊರತು ಯೇಸುಸ್ವಾಮಿಯ ಕಾರ್ಯದಲ್ಲಿ ನಿರತರಾಗಿಲ್ಲ.
22 : ತಿಮೊಥೇಯನ ಯೋಗ್ಯತೆಯನ್ನು ನೀವು ಬಲ್ಲಿರಿ. ತಂದೆಯೊಂದಿಗೆ ಮಗನು ದುಡಿಯುವಂತೆ, ಶುಭಸಂದೇಶದ ಸೇವೆಯಲ್ಲಿ ನನ್ನೊಂದಿಗೆ ಆತನು ದುಡಿದಿದ್ದಾನೆ.
23 : ನನ್ನ ಬಗ್ಗೆ ನಡೆಯುತ್ತಿರುವ ವಿಚಾರಣೆಯ ಫಲಿತಾಂಶ ತಿಳಿದ ಕೂಡಲೇ ಆತನನ್ನು ನಿಮ್ಮ ಬಳಿಗೆ ಕಳುಹಿಸುತ್ತೇನೆ.
24 : ಅಲ್ಲದೆ, ದೇವರ ಚಿತ್ತವಿದ್ದರೆ, ನಾನೇ ನಿಮ್ಮಲ್ಲಿಗೆ ಬೇಗನೆ ಬರುವೆನೆಂಬ ದೃಢ ನಂಬಿಕೆಯೂ ನನಗಿದೆ.
25 : ನನಗೆ ನೆರವಾಗಲು ನೀವು ಕಳುಹಿಸಿದ ಸಹೋದರ ಎಪಫ್ರೋದಿತನು ನಿಮ್ಮಲ್ಲಿಗೆ ಹಿಂದಿರುಗುವುದು ಅವಶ್ಯವೆಂದು ಭಾವಿಸುತ್ತೇನೆ. ಅವನು ನನ್ನೊಂದಿಗೆ ದುಡಿಯುತ್ತಾ, ಹೋರಾಡುತ್ತಾ ಬಂದಿದ್ದಾನೆ.
26 : ನಿಮ್ಮನ್ನೆಲ್ಲಾ ನೋಡಲು ಅವನು ಹಂಬಲಿಸುತ್ತಿದ್ದಾನೆ. ತಾನು ಅಸ್ವಸ್ಥನಾದ ಸುದ್ಧಿಯು ನಿಮ್ಮ ಕಿವಿಗೆ ಮುಟ್ಟಿತೆಂದು ತಿಳಿದು ಬಹಳ ವ್ಯಸನಪಡುತ್ತಿದ್ದಾನೆ.
27 : ಅವನು ಅಸ್ವಸ್ಥನಾದದ್ದು ನಿಜ; ಸಾವಿನ ದವಡೆಯಿಂದ ಪಾರಾದದ್ದೂ ನಿಜ. ದೇವರ ಕರುಣೆ ಅವನ ಮೇಲೆ ಮಾತ್ರವಲ್ಲದೆ ನನ್ನ ಮೇಲೂ ಇದ್ದುದರಿಂದ ನನಗೆ ದುಃಖದ ಮೇಲೆ ದುಃಖ ಬರದಂತಾಯಿತು.
28 : ಎಪಫ್ರೋದಿತನನ್ನು ನಿಮ್ಮ ಬಳಿಗೆ ಕಳುಹಿಸಲು ತವಕದಿಂದಿದ್ದೇನೆ. ಅವನನ್ನು ಕಂಡು ನಿಮಗೆ ಆನಂದವಾಗುವುದು, ನನ್ನ ದುಃಖವೂ ಶಮನವಾಗುವುದು.
29 : ಪ್ರಭುವಿನ ಹೆಸರಿನಲ್ಲಿ ನೀವು ಅವನನ್ನು ತುಂಬು ಹೃದಯದಿಂದ ಸ್ವಾಗತಿಸಿರಿ. ಅವನಂಥವರಿಗೆ ಸೂಕ್ತ ಗೌರವ ಸಲ್ಲಿಸಿರಿ.
30 : ಕ್ರಿಸ್ತಯೇಸುವಿನ ಸೇವೆಯಲ್ಲಿ ಅವನು ಸತ್ತು ಬದುಕಿದ್ದಾನೆ. ನೀವು ಕೊಡಲು ಸಾಧ್ಯವಾಗದೆ ಹೋದ ನೆರವನ್ನು ಅವನು ನನಗೆ ಕೊಟ್ಟು ಸೇವೆಯನ್ನು ಪೂರ್ಣಗೊಳಿಸಿದ್ದಾನೆ.