Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಎಫೆಸ


1 : ಮಕ್ಕಳೇ, ಪ್ರಭುವಿನಲ್ಲಿ ನಿಮ್ಮ ತಂದೆತಾಯಿಗಳ ಮಾತಿಗೆ ಕಿವಿಗೊಡಿ. ಇದು ಧರ್ಮಸಮ್ಮತವಾದುದು.
2 : ‘ನಿನ್ನ ತಂದೆತಾಯನ್ನು ಗೌರವಿಸು’ ಎಂಬುದು ವಾಗ್ದಾನದಿಂದ ಕೂಡಿದ ಮೊದಲನೆಯ ಆಜ್ಞೆ.
3 : ಇದನ್ನು ಪಾಲಿಸಿದರೆ ನಿನಗೆ ಶುಭವಾಗುವುದು; ನೀನು ಬಹುಕಾಲ ಬಾಳುವೆ.
4 : ತಂದೆತಾಯಿಗಳೇ, ನಿಮ್ಮ ಮಕ್ಕಳನ್ನು ಕೆಣಕಿ ಕೆರಳಿಸಬೇಡಿ. ಪ್ರತಿಯಾಗಿ ಪ್ರಭುವಿಗೆ ಮೆಚ್ಚುಗೆಯಾಗುವ ರೀತಿಯಲ್ಲಿ ಅವರಿಗೆ ಶಿಕ್ಷಣವನ್ನು ಕೊಟ್ಟು ಶಿಸ್ತಿನಿಂದ ಸಾಕಿಸಲಹಿರಿ.
5 : ಸೇವಕರೇ, ನೀವು ಮಾಡುತ್ತಿರುವುದು ಕ್ರಿಸ್ತಯೇಸುವಿನ ಸೇವೆಯನ್ನೇ ಎಂದು ಭಾವಿಸಿ, ನಿಮ್ಮ ಲೌಕಿಕ ಧಣಿಗಳಿಗೆ ಭಯಭಕ್ತಿಯಿಂದಲೂ ಏಕಮನಸ್ಸಿನಿಂದಲೂ ವಿಧೇಯರಾಗಿರಿ.
6 : ಧಣಿಗಳನ್ನು ಮೆಚ್ಚಿಸುವ ಸಲುವಾಗಿ ಮುಖದಾಕ್ಷಿಣ್ಯದ ಸೇವೆಯನ್ನು ಮಾಡದಿರಿ. ಕ್ರಿಸ್ತಯೇಸುವಿನ ದಾಸರಂತೆ ದೈವೇಚ್ಛೆಯನ್ನು ಹೃದಯಪೂರ್ವಕವಾಗಿ ಈಡೇರಿಸಿರಿ.
7 : ನೀವು ಮಾಡುವುದು ಜನಸೇವೆಯಲ್ಲ, ಪ್ರಭುಸೇವೆ ಎಂದೇ ಭಾವಿಸಿ ನಗುಮುಖದಿಂದ ಸೇವೆಮಾಡಿ.
8 : ದಾಸ್ಯದಲ್ಲಿರುವವನಾಗಲಿ, ಸ್ವತಂತ್ರವುಳ್ಳವನಾಗಿರಲಿ ಸತ್ಕಾರ್ಯವನ್ನು ಮಾಡುವವನು ಪ್ರಭುವಿನಿಂದ ತಕ್ಕ ಪ್ರತಿಫಲವನ್ನು ಪಡೆದೇ ತೀರುವನೆಂದು ನೀವು ಬಲ್ಲಿರಿ.
9 : ಯಜಮಾನರೇ, ನೀವು ಕೂಡ ನಿಮ್ಮ ಸೇವಕರೊಡನೆ ಯೋಗ್ಯವಾದ ರೀತಿಯಲ್ಲಿ ವರ್ತಿಸಿರಿ. ಅವರನ್ನು ಬೆದರಿಸುವುದನ್ನು ಬಿಟ್ಟುಬಿಡಿ. ಸ್ವರ್ಗಲೋಕದಲ್ಲಿ ನಿಮಗೂ ಅವರಿಗೂ ಒಬ್ಬ ಯಜಮಾನ ಇರುತ್ತಾನೆ. ಆತ ಪಕ್ಷಪಾತಿಯಲ್ಲ ಎಂಬುದನ್ನು ಮರೆಯದಿರಿ.
10 : ಕೊನೆಯದಾಗಿ, ಪ್ರಭುವಿನ ಅನ್ಯೋನ್ಯತೆಯಲ್ಲಿ ಬಲಾಢ್ಯರಾಗಿರಿ. ಅವರ ಪರಾಕ್ರಮ ಶಕ್ತಿಯನ್ನು ಆಶ್ರಯಿಸಿರಿ.
11 : ಸೈತಾನನು ನಿಮಗೆ ಒಡ್ಡುವ ಕುತಂತ್ರಗಳ ವಿರುದ್ಧ ಅಚಲರಾಗಿ ನಿಲ್ಲಲು ನೀವು ಸಮರ್ಥರಾಗುವಂತೆ ದೇವರು ನೀಡುವ ಸಕಲ ಶಸ್ತ್ರಾಸ್ತ್ರಗಳನ್ನು ಧರಿಸಿಕೊಳ್ಳಿರಿ.
12 : ನಮ್ಮ ಹೋರಾಟ ಕೇವಲ ನರಮಾನವರೊಂದಿಗಲ್ಲ, ದಿಗಂತದಲ್ಲಿರುವ ಅಧಿಕಾರಿಗಳ ಹಾಗೂ ಆಧಿಪತ್ಯಗಳ ವಿರುದ್ಧ; ಪ್ರಸ್ತುತ ಅಂಧಕಾರ ಲೋಕಾಧಿಪತಿಗಳ ಹಾಗೂ ಅಶರೀರ ದುಷ್ಟಗಣಗಳ ವಿರುದ್ಧ.
13 : ಎಂದೇ, ದೇವರು ಕೊಡುವ ಸಕಲ ಶಸ್ತ್ರಾಸ್ತ್ರಗಳೊಂದಿಗೆ ಸುಸಜ್ಜಿತರಾಗಿರಿ. ಆ ದುರ್ದಿನದಂದು ವೈರಿಗಳನ್ನು ಎದುರಿಸಲು ಆಗ ನೀವು ಶಕ್ತರಾಗುತ್ತೀರಿ. ಮಾತ್ರವಲ್ಲ, ಕಟ್ಟಕಡೆಯವರೆಗೆ ಹಿಮ್ಮೆಟ್ಟದೆ ನಿಲ್ಲುತ್ತೀರಿ;
14 : ಹಿಮ್ಮೆಟ್ಟದೆ ನಿಲ್ಲಲೇಬೇಕು. ಇದಕ್ಕಾಗಿ ಸತ್ಯವೆಂಬ ನಡುಕಟ್ಟನ್ನು ಕಟ್ಟಿಕೊಳ್ಳಿ, ನೀತಿಯೆಂಬ ರಕ್ಷಕವಚವನ್ನು ತೊಟ್ಟುಕೊಳ್ಳಿರಿ.
15 : ಶಾಂತಿಯ ಶುಭಸಂದೇಶವನ್ನು ಸಾರಲು ಶ್ರದ್ಧೆಯೆಂಬ ಪಾದರಕ್ಷೆಯನ್ನು ಮೆಟ್ಟಿಕೊಳ್ಳಿರಿ.
16 : ಸತತವೂ ವಿಶ್ವಾಸವೆಂಬ ಗುರಾಣಿಯನ್ನು ಹಿಡಿದುಕೊಳ್ಳಿರಿ. ಹೀಗೆ ಸೈತಾನನ ಅಗ್ನಿಬಾಣಗಳನ್ನೆಲ್ಲಾ ನಂದಿಸಲು ಶಕ್ತರಾಗುವಿರಿ.
17 : ರಕ್ಷಣೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳಿ; ಪವಿತ್ರಾತ್ಮರ ಕೊಡುಗೆಯಾದ ದೇವರ ವಾಕ್ಯವು ನಿಮಗೆ ಖಡ್ಗವಾಗಿರಲಿ.
18 : ಪವಿತ್ರಾತ್ಮರಿಂದ ಪ್ರೇರಿತರಾಗಿ ಎಲ್ಲಾ ಸಮಯಗಳಲ್ಲೂ ಪ್ರಾರ್ಥಿಸಿರಿ. ನಿಮ್ಮ ಕೋರಿಕೆ, ಬೇಡಿಕೆಗಳನ್ನು ದೇವರಿಗೆ ಅರ್ಪಿಸಿರಿ. ಎಚ್ಚರವಾಗಿದ್ದು ಎಲ್ಲಾ ದೇವಜನರಿಗಾಗಿ ಎಡೆಬಿಡದೆ ಪ್ರಾರ್ಥಿಸಿರಿ.
19 : ಶುಭಸಂದೇಶದ ಸತ್ಯಾರ್ಥವನ್ನು ನಿರ್ಭೀತನಾಗಿ ಸಾರಲು ಸೂಕ್ತವಾದ ಮಾತುಗಳನ್ನು ದೇವರು ನನಗೆ ದಯಪಾಲಿಸಲೆಂದು ನನಗೋಸ್ಕರ ಪ್ರಾರ್ಥಿಸಿರಿ.
20 : ಶುಭಸಂದೇಶದ ನಿಮಿತ್ತ ನಾನು ಸೆರೆಯಾಳಾಗಿದ್ದರೂ ಪ್ರಭುವಿನ ರಾಯಭಾರಿಯಾಗಿದ್ದೇನೆ. ಎಂತಲೇ, ಈ ಶುಭಸಂದೇಶವನ್ನು ಧೈರ್ಯದಿಂದ ಸೂಕ್ತ ರೀತಿಯಲ್ಲಿ ಸಾರಲಾಗುವಂತೆ ನನಗಾಗಿ ಪ್ರಾರ್ಥಿಸಿರಿ.
21 : ಪ್ರಿಯ ಸಹೋದರ ತುಖಿಕನು ನನ್ನ ವಿಷಯವಾಗಿಯೂ ನನ್ನ ಕೆಲಸಕಾರ್ಯಗಳ ವಿಷಯವಾಗಿಯೂ ನಿಮಗೆ ತಿಳಿಸುವನು. ಆತ ಪ್ರಭುವಿನ ಪ್ರಾಮಾಣಿಕ ಸೇವಕ.
22 : ನಮ್ಮ ಸಮಾಚಾರವನ್ನು ನಿಮಗೆ ತಿಳಿಸಲೆಂದು ಹಾಗೂ ನಿಮ್ಮನ್ನು ಉತ್ತೇಜಿಸಲೆಂದು ಆತನನ್ನು ನಿಮ್ಮಲ್ಲಿಗೆ ಕಳುಹಿಸಿದ್ದೇನೆ.
23 : ಪಿತನಾದ ದೇವರೂ ಪ್ರಭುವಾದ ಯೇಸುಕ್ರಿಸ್ತರೂ ಸಹೋದರರಿಗೆ ಶಾಂತಿ ಸಮಾಧಾನವನ್ನು ಮತ್ತು ಪ್ರೀತಿವಿಶ್ವಾಸವನ್ನು ದಯಪಾಲಿಸಲಿ.
24 : ಪ್ರಭು ಯೇಸುಕ್ರಿಸ್ತರಲ್ಲಿ ಚಿರಪ್ರೀತಿಯನ್ನಿಟ್ಟ ಎಲ್ಲರಿಗೂ ದೇವರ ಅನುಗ್ರಹ ಲಭಿಸಲಿ!

· © 2017 kannadacatholicbible.org Privacy Policy