1 :
ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿ ಇರುವ ನಾನು ನಿಮ್ಮಲ್ಲಿ ಬಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ.
2 : ಯಾವಾಗಲೂ ದೀನದಯಾಳತೆ, ವಿನಯಶೀಲತೆ ಹಾಗೂ ಶಾಂತಿಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ.
3 : ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು.
4 : ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆಹೊಂದಿದವರು.
5 : ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. 6ದೇವರು ಒಬ್ಬರೇ, ಸರ್ವರ ತಂದೆಯು ಅವರೇ; ಸರ್ವಶ್ರೇಷ್ಠರೂ ಅವರೇ; ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಸಮಸ್ತರಲ್ಲಿ ವಾಸಿಸುವವರೂ ಅವರೇ.
7 : ಆದರೂ ನಮ್ಮಲ್ಲಿ ಪ್ರತಿಯೊಬ್ಬನೂ ಕ್ರಿಸ್ತಯೇಸು ಅನುಗ್ರಹಿಸುವ ಪ್ರಕಾರವೇ ವರಗಳನ್ನು ಪಡೆದಿದ್ದಾನೆ.
8 : ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ:
“ಆತನು ಉನ್ನತಿಗೇರಿದನು
ಶತ್ರುಗಳನ್ನು ಸೆರೆಯಾಳಾಗಿ ಕೊಂಡೊಯ್ದನು
ನರಮಾನವರಿಗಿತ್ತನು ವರದಾನಗಳನು.”
9 : ‘ಏರಿದನು’ ಎನ್ನುವುದರ ಅರ್ಥವಾದರೂ ಏನು? ಆತನು ಮೊದಲು ಭೂಗರ್ಭಕ್ಕೂ ಇಳಿದಿದ್ದನು ಎಂಬ ಅರ್ಥವನ್ನೂ ಒಳಗೊಂಡಿದೆ.
10 : ಇಳಿದು ಬಂದಿದ್ದಾತನೇ ಲೋಕಗಳಿಗೆಲ್ಲ ಮೇಲೇರಿ ಹೋಗಿದ್ದಾನೆ. ತನ್ನ ಪ್ರಸನ್ನತೆಯಿಂದ ಇಡೀ ಜಗತ್ತನ್ನೇ ಆವರಿಸಿದ್ದಾನೆ.
11 : ಈ ವ್ಯಕ್ತಿ ನರಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು.
12 : ದೇವಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ದಗೊಳಿಸಲೆಂದು ಮತ್ತು ಯೇಸುಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ಧಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು.
13 : ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತಯೇಸುವಿನ ಪರಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.
14 : ಇನ್ನು ಮೇಲೆ ನಾವು ಸಣ್ಣ ಮಕ್ಕಳಂತೆ ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಪಟ್ಟು ಅತ್ತಿತ್ತ ಅಲೆದಾಡುವುದಿಲ್ಲ. ಗಾಳಿ ಬಂದಂತೆ ತೂರಾಡುವುದಿಲ್ಲ.
15 : ಬದಲಾಗಿ, ಪ್ರೀತಿಯಿಂದ ಸತ್ಯವನ್ನೇ ನುಡಿಯುತ್ತೇವೆ. ಶಿರಸ್ಸಾದ ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ಸರ್ವತೋಮುಖವಾಗಿ ಬೆಳೆಯುತ್ತೇವೆ.
16 : ಇಡೀ ದೇಹವು ಕ್ರಿಸ್ತಯೇಸುವನ್ನೇ ಆಧರಿಸಿದೆ. ಅವರಲ್ಲಿಯೇ ಎಲ್ಲ ನರನಾಡಿಗಳು, ಕೀಲು ಗಂಟುಗಳು ಒಂದಾಗಿ ಕೆಲಸಮಾಡುತ್ತವೆ. ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದರಿಂದ ಇಡೀ ದೇಹ ಬೆಳೆಯುತ್ತಾ, ಪ್ರೀತಿಯಲ್ಲಿ ಪ್ರವರ್ಧಿಸುತ್ತಾ ಕ್ಷೇಮಾಭಿವೃದ್ಧಿಯನ್ನು ಪಡೆಯುತ್ತದೆ.
17 : ಪ್ರಭುವಿನ ಹೆಸರಿನಲ್ಲಿ ನಾನು ನಿಮಗೆ ಒತ್ತಿಹೇಳುತ್ತೇನೆ: ಇನ್ನು ಮುಂದೆ ನೀವು ಅನ್ಯಜನರಂತೆ ಜೀವಿಸುವುದನ್ನು ತ್ಯಜಿಸಿರಿ. ಅವರ ಆಲೋಚನೆಗಳು ಹುರುಳಿಲ್ಲದವು.
18 : ಅವರ ಮನಸ್ಸಿಗೆ ಕತ್ತಲು ಕವಿದಿದೆ. ಅವರು ಅಜ್ಞಾನಿಗಳೂ ಕಠಿಣ ಹೃದಯಿಗಳೂ ಆಗಿರುವುದರಿಂದ ದೇವರು ಕೊಡುವ ಜೀವಕ್ಕೆ ಹೊರತಾಗಿದ್ದಾರೆ.
19 : ಲಜ್ಜೆಗೆಟ್ಟವರಾಗಿ ದುರಿಚ್ಛೆಗಳಿಗೆ ಮಾರುಹೋಗಿದ್ದಾರೆ; ಅಶುದ್ಧ ಕಾರ್ಯಗಳಲ್ಲೇ ನಿರತರಾಗಿದ್ದಾರೆ.
20 : ಕ್ರಿಸ್ತಯೇಸುವಿನಿಂದ ನೀವು ಇಂಥದ್ದೇನನ್ನು ಕಲಿಯಲಿಲ್ಲ.
21 : ಅವರ ವಿಷಯವಾಗಿ ನೀವು ಕೇಳಿದ್ದು ಮತ್ತು ಕಲಿತದ್ದು ಅವರಲ್ಲಿರುವ ಸತ್ಯಕ್ಕೆ ಅನುಸಾರವಾಗಿತ್ತಲ್ಲವೇ?
22 : ಆದ್ದರಿಂದ ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಹಳೆಯ ಸ್ವಭಾವವನ್ನು ಕಿತ್ತೊಗೆಯಿರಿ; ಅದು ಕಾಮಾಭಿಲಾಷೆಯಿಂದ ಕಲುಷಿತವಾಗಿದೆ.
22 : ಆದ್ದರಿಂದಲೇ, “ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಲಿಖಿತವಾಗಿದೆ.
23 : ನಿಮ್ಮ ಹೃನ್ಮನಗಳು ನವೀಕೃತವಾಗಲಿ.
24 : ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಇದು ದೇವರ ಅನುರೂಪದಲ್ಲಿ ನಿರ್ಮಿತವಾದ ಸ್ವಭಾವ; ದೇವರೊಂದಿಗೆ ಸತ್ಸಂಬಂಧವುಳ್ಳ ಹಾಗೂ ನೈಜವಾದ ಪಾವನ ಸ್ವಭಾವ.
25 : ಆದುದರಿಂದ, ಸುಳ್ಳಾಡುವುದನ್ನು ಬಿಟ್ಟು ಬಿಡಿ. ಒಬ್ಬರೊಡನೊಬ್ಬರು ಸತ್ಯವನ್ನೇ ನುಡಿಯಿರಿ. ಏಕೆಂದರೆ, ನಾವೆಲ್ಲರೂ ಒಂದೇ ಶರೀರದ ಅಂಗಗಳು.
26 : ಕೋಪಮಾಡಬೇಕಾಗಿ ಬಂದರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವ ಮುನ್ನ ನಿಮ್ಮ ಕೋಪವು ಇಳಿಯಲಿ.
27 : ಸೈತಾನನಿಗೆ ಅವಕಾಶ ಕೊಡಬೇಡಿ.
28 : ಕಳ್ಳತನ ಮಾಡುವವನು ಕಳ್ಳತನವನ್ನು ಬಿಟ್ಟುಬಿಡಲಿ; ಶ್ರಮಪಟ್ಟು ದುಡಿದು ಸಂಪಾದಿಸಲಿ. ಆಗ ತನ್ನ ಪ್ರಾಮಾಣಿಕ ದುಡಿಮೆಯಿಂದ ಕಷ್ಟದಲ್ಲಿರುವವರಿಗೆ ನೆರವು ನೀಡಲು ಸಾಧ್ಯವಾಗುವುದು.
29 : ನಿಮ್ಮ ಬಾಯಿಂದ ಕೆಟ್ಟಮಾತುಗಳು ಬಾರದಿರಲಿ. ಪ್ರತಿಯಾಗಿ ನಿಮ್ಮ ಮಾತುಗಳು ಆದರ್ಶಕರವಾಗಿರಲಿ; ಸಮಯೋಚಿತವಾಗಿರಲಿ, ಕೇಳುವವರ ಕಿವಿಗದು ಹಿತಕರವಾಗಿರಲಿ.
30 : ದೇವರ ಪವಿತ್ರಾತ್ಮರನ್ನು ನೋಯಿಸದಿರಿ; ವಿಮೋಚನೆಯ ದಿನದಂದು ನೀವು ದೇವರಿಗೆ ಸೇರಿದವರು ಎಂಬುದನ್ನು ತೋರಿಸಲು ನಿಮ್ಮ ಮೇಲೆ ಒತ್ತಲಾಗಿರುವ ಮುದ್ರೆಯು ಅವರೇ.
31 : ಎಲ್ಲ ವಿಧವಾದ ದ್ವೇಷ-ದೂಷಣೆ, ಕೋಪ-ಕ್ರೋಧ ಮತ್ತು ಕೆಡುಕುತನವನ್ನು ನಿಮ್ಮಿಂದ ದೂರಮಾಡಿರಿ.
31 : ಎಲ್ಲ ವಿಧವಾದ ದ್ವೇಷ-ದೂಷಣೆ, ಕೋಪ-ಕ್ರೋಧ ಮತ್ತು ಕೆಡುಕುತನವನ್ನು ನಿಮ್ಮಿಂದ ದೂರಮಾಡಿರಿ.
32 : ಪರಸ್ಪರ ಕರುಣೆಯಿಂದಲೂ ಕನಿಕರದಿಂದಲೂ ವರ್ತಿಸಿರಿ. ಯೇಸುಕ್ರಿಸ್ತರಲ್ಲಿ ದೇವರು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಸಹ ಒಬ್ಬರನ್ನೊಬ್ಬರು ಕ್ಷಮಿಸಿರಿ.