Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಗಲಾತ್ಯ


1 : ಸಹೋದರರೇ, ನಿಮ್ಮಲ್ಲಿ ಯಾರಾದರೂ ತಪ್ಪಿತಸ್ಥರಾಗಿದ್ದರೆ, ಆಧ್ಯಾತ್ಮಿಕ ಜೀವಿಗಳಾದ ನೀವು ಅಂಥವನನ್ನು ನಯವಿನಯದಿಂದ ತಿದ್ದಿ ಸರಿಯಾದ ದಾರಿಗೆ ತರಬೇಕು. ಆದರೆ ನೀನೂ ಅವನಂತೆ ಪಾಪಪ್ರಚೋದನೆಗೆ ಒಳಗಾಗದಂತೆ ಎಚ್ಚರಿಕೆಯಿಂದಿರಬೇಕು.
2 : ಒಬ್ಬರ ಭಾರವನ್ನು ಒಬ್ಬರು ಹೊತ್ತುಕೊಳ್ಳಿ. ಹೀಗೆ ಕ್ರಿಸ್ತಯೇಸುವಿನ ನಿಯಮವನ್ನು ನೆರವೇರಿಸುವಿರಿ.
3 : ಅಲ್ಪನು ತಾನು ಶ್ರೇಷ್ಠನೆಂದು ಭಾವಿಸಿಕೊಂಡರೆ ತನ್ನನ್ನು ತಾನೇ ವಂಚಿಸಿಕೊಳ್ಳುತ್ತಾನೆ, ಅಷ್ಟೆ.
4 : ಪ್ರತಿಯೊಬ್ಬನೂ ತನ್ನ ನಡತೆಯನ್ನು ತನ್ನಷ್ಟಕ್ಕೆ ತಾನೇ ಪರಿಶೋಧಿಸಿಕೊಳ್ಳಲಿ. ತನ್ನ ನಡತೆ ಒಳಿತಾಗಿದ್ದರೆ ಹೆಮ್ಮೆಪಡಲಿ. ಆದರೆ ಇತರರೊಂದಿಗೆ ಹೋಲಿಸಿ ಹೆಮ್ಮೆಪಡಬೇಕಾಗಿಲ್ಲ.
5 : ಪ್ರತಿಯೊಬ್ಬನೂ ತನ್ನ ಹೊರೆಯನ್ನು ತಾನೇ ಹೊತ್ತುಕೊಳ್ಳಬೇಕು
6 : ದೇವರ ವಾಕ್ಯದ ಉಪದೇಶ ಪಡೆಯುವವನು ಉಪದೇಶ ಮಾಡುವವನೊಂದಿಗೆ ತನಗೆ ಇರುವ ಒಳ್ಳೆಯದನ್ನೆಲ್ಲಾ ಹಂಚಿಕೊಳ್ಳಲಿ.
7 : ಮೋಸಹೋಗದಿರಿ, ದೇವರನ್ನು ವಂಚಿಸಬಹುದೆಂದು ಭಾವಿಸದಿರಿ; ಬಿತ್ತುವುದನ್ನೇ ಕೊಯ್ಯುತ್ತೇವೆ ಎಂಬುದನ್ನು ನೆನಪಿನಲ್ಲಿಡಿ.
8 : ದೈಹಿಕ ವ್ಯಾಮೋಹವೆಂಬ ಸ್ವಭಾವದಲ್ಲಿ ಬಿತ್ತುವವನು ನಾಶವೆಂಬ ಫಲವನ್ನು ಕೊಯ್ಯುತ್ತಾನೆ. ಪವಿತ್ರಾತ್ಮ ಸ್ವಭಾವದಲ್ಲಿ ಬಿತ್ತುವವನು ಆತ್ಮದಿಂದ ನಿತ್ಯಜೀವವೆಂಬ ಫಲವನ್ನು ಕೊಯ್ಯುತ್ತಾನೆ
9 : ಸತ್ಕಾರ್ಯಗಳನ್ನು ಮಾಡುವುದರಲ್ಲಿ ಬೇಸರಪಡದಿರೋಣ. ಎದೆಗುಂದದಿರೋಣ; ಆಗ ಸೂಕ್ತಕಾಲದಲ್ಲಿ ಸತ್ಫಲವನ್ನು ಕೊಯ್ಯುವೆವು.
10 : ಎಂದೇ ಸಮಯ ಸಂದರ್ಭಗಳು ಇರುವಾಗಲೇ ಸರ್ವರಿಗೂ ಉಪಕಾರಮಾಡೋಣ. ಅದರಲ್ಲೂ ಮುಖ್ಯವಾಗಿ, ಒಂದೇ ಕುಟುಂಬದವರಂತೆ ಇರುವ ಕ್ರೈಸ್ತವಿಶ್ವಾಸಿಗಳಿಗೆ ಉಪಕಾರ ಮಾಡೋಣ.
11 : ಈ ದೊಡ್ಡದೊಡ್ಡ ಅಕ್ಷರಗಳನ್ನು ನೋಡಿರಿ: ಇವನ್ನು ನನ್ನ ಸ್ವಂತ ಕೈಯಿಂದಲೇ ಬರೆಯುತ್ತಿದ್ದೇನೆ.
12 : ಬಾಹ್ಯಾಚಾರಗಳಿಂದ ತಾವು ಒಳ್ಳೆಯವರು ಎನಿಸಿಕೊಳ್ಳಬೇಕೆನ್ನುವವರು ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಬಲಾತ್ಕಾರ ಮಾಡುತ್ತಿದ್ದಾರೆ. ಕ್ರಿಸ್ತಯೇಸುವಿನ ಶಿಲುಬೆಯ ನಿಮಿತ್ತ ತಮಗೆ ಹಿಂಸೆಬಾಧೆಗಳು ಉಂಟಾಗಬಾರದು ಎಂಬುದೇ ಅವರ ಉದ್ದೇಶವಾಗಿದೆ.
13 : ಸುನ್ನತಿ ಮಾಡಿಸಿಕೊಳ್ಳುವ ತಾವಾದರೂ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವುದಿಲ್ಲ. ಆದರೆ ನಿಮ್ಮ ದೈಹಿಕ ಸುನ್ನತಿಯಿಂದ, ಅವರು ಹೆಚ್ಚಳಿಕೆ ಗಳಿಸುವುದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಬಯಸುತ್ತಾರೆ.
14 : ನನಗಾದರೋ ನಮ್ಮ ಪ್ರಭು ಯೇಸುಕ್ರಿಸ್ತರ ಶಿಲುಬೆಯನ್ನು ಬಿಟ್ಟು ಬೇರಾವುದರಲ್ಲೂ ಹೆಚ್ಚಳಪಡುವುದು ಬೇಡವೇ ಬೇಡ. ಆ ಶಿಲುಬೆಯ ಮೂಲಕ, ನನ್ನ ಪಾಲಿಗೆ ಲೋಕವೇ ಶಿಲುಬೆಗೆ ಜಡಿಸಿಕೊಂಡು ಸತ್ತಿದೆ; ನಾನೂ ಸಹ ಲೋಕದ ಪಾಲಿಗೆ ಶಿಲುಬೆಗೆ ಜಡಿಸಿಕೊಂಡು ಸತ್ತಿದ್ದೇನೆ.
15 : ಸುನ್ನತಿ ಮಾಡಿಸಿಕೊಳ್ಳುವುದೋ, ಮಾಡಿಸಿಕೊಳ್ಳದಿರುವುದೋ ಮಹತ್ತಾದುದಲ್ಲ. ಹೊಸ ಸೃಷ್ಟಿಯಾಗುವುದೇ ಮಹತ್ತರವಾದುದು.
16 : ಈ ನಿಯಮವನ್ನು ಅನುಸರಿಸುವ ಎಲ್ಲರಿಗೂ, ಅಂದರೆ ನಿಜ ಇಸ್ರಯೇಲರಾದ ದೇವಜನರೆಲ್ಲರಿಗೂ ಶಾಂತಿ ಸಮಾಧಾನವೂ ಕೃಪಾಶೀರ್ವಾದವೂ ಲಭಿಸಲಿ!
17 : ಇನ್ನು ಮೇಲೆ ಯಾರೂ ನನಗೆ ತೊಂದರೆ ಕೊಡದಿರಲಿ. ಯೇಸುವಿನ ದಾಸನೆಂದು ಸೂಚಿಸುವ ಕೆಂಗುರುತುಗಳು ನನ್ನ ದೇಹದಲ್ಲಿ ಮುದ್ರಿತವಾಗಿವೆ.
18 : ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹ ನಿಮ್ಮೊಡನೆ ಇರಲಿ! ಆಮೆನ್.

· © 2017 kannadacatholicbible.org Privacy Policy