1 :
ನಾನು ಮತ್ತೆ ಹೇಳುವುದೇನೆಂದರೆ: ವಾರಸುದಾರನು ತಂದೆಯ ಆಸ್ತಿಗೆಲ್ಲಾ ಹಕ್ಕುದಾರನಾಗಿದ್ದರೂ, ಅವನು ಬಾಲಕನಾಗಿರುವ ತನಕ ಅವನಿಗೂ ಆಳಿಗೂ ವ್ಯತ್ಯಾಸವಿರುವುದಿಲ್ಲ.
2 : ತಂದೆ ಗೊತ್ತುಮಾಡಿದ ದಿನದವರೆಗೂ ಅವನು ಪೋಷಕರ ಹಾಗೂ ಕಾರ್ಯನಿರ್ವಾಹಕರ ಕೈಕೆಳಗೆ ಇರುತ್ತಾನೆ.
3 : ನಮ್ಮ ಸ್ಥಿತಿಯೂ ಹಾಗೆಯೇ ಇತ್ತು. ನಾವು ಬಾಲಕರಂತೆ ವಿಶ್ವದ ಮೂಲಭೂತ ಶಕ್ತಿಗಳಿಗೆ ಅಧೀನರಾಗಿದ್ದೆವು.
4 : ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು.
5 : ಕಾಲವು ಪರಿಪಕ್ವವಾದಾಗ ದೇವರು ತಮ್ಮ ಪುತ್ರನನ್ನೇ ಕಳುಹಿಸಿಕೊಟ್ಟರು. ಇವರು ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಬಿಡುಗಡೆ ಮಾಡುವುಕ್ಕಾಗಿಯೂ ದೇವಪುತ್ರರ ಪದವಿಯನ್ನು ನಮಗೆ ಒದಗಿಸಿಕೊಡುವುದಕ್ಕಾಗಿಯೂ ಒಬ್ಬ ಸ್ತ್ರೀಯಲ್ಲಿ ಜನಿಸಿದರು. ಧರ್ಮಶಾಸ್ತ್ರಕ್ಕೆ ಅಧೀನರಾಗಿಯೇ ಹುಟ್ಟಿದರು.
6 : ನೀವು ದೇವರ ಮಕ್ಕಳಾಗಿರುವುದರಿಂದಲೇ, “ಅಪ್ಪಾ, ತಂದೆಯೇ,” ಎಂದು ಕರೆಯುವ ತಮ್ಮ ಪುತ್ರನ ಆತ್ಮವನ್ನು ದೇವರು ನಮ್ಮ ಹೃದಯಗಳಿಗೆ ಕಳುಹಿಸಿದ್ದಾರೆ.
7 : ಆದ್ದರಿಂದ, ದೇವರ ಅನುಗ್ರಹದಿಂದಲೇ ನೀನು ಇನ್ನು ಮನೆಯಾಳಲ್ಲ, ಮಗನಾಗಿದ್ದೀ. ಮಗನೆಂದಮೇಲೆ ನೀನು ವಾರಸುದಾರನೂ ಹೌದು.
8 :
ಹಿಂದೆ ನೀವು ದೇವರನ್ನು ಅರಿಯದೆ ಇದ್ದಿರಿ. ದೇವರಲ್ಲದವುಗಳಿಗೆ ಅಧೀನರಾಗಿದ್ದಿರಿ.
9 : ಈಗಲಾದರೋ ನಿಜದೇವರನ್ನು ಅರಿತುಕೊಂಡಿದ್ದೀರಿ; ಸರಿಯಾಗಿ ಹೇಳಬೇಕಾದರೆ ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ, ದುರ್ಬಲ ಹಾಗೂ ದರಿದ್ರವಾದ ಮೂಲಭೂತ ಶಕ್ತಿಗಳಿಗೆ ನೀವು ಮರಳುವುದೇಕೆ? ಪುನಃ ಅವುಗಳಿಗೆ ಗುಲಾಮರಾಗಲು ಇಚ್ಛಿಸುವುದೇಕೆ?
10 : ನೀವು ಶುಭಾಶುಭ ದಿನಗಳನ್ನು, ಮಾಸಗಳನ್ನು ಮತ್ತು ಸಂವತ್ಸರಗಳನ್ನು ಜಾಗರೂಕತೆಯಿಂದ ನೋಡುತ್ತೀರಿ.
11 : ನಿಮಗಾಗಿ ನಾನು ಪಟ್ಟ ಪ್ರಯಾಸವೆಲ್ಲ ವ್ಯರ್ಥವಾಯಿತೇನೋ ಎಂಬ ಶಂಕೆ ನನ್ನನ್ನು ಕಾಡುತ್ತಿದೆ.
12 : ಪ್ರಿಯ ಸಹೋದರರೇ, ನಾನು ನಿಮ್ಮಂತೆ ಆದಹಾಗೆ, ನೀವೂ ನನ್ನಂತೆ ಆಗಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ. ನೀವು ನನಗೆ ಯಾವ ಅನ್ಯಾಯವನ್ನೂ ಮಾಡಿಲ್ಲ.
13 : ನಾನು ಅಸ್ವಸ್ಥನಾಗಿದ್ದುದರಿಂದ ನಿಮ್ಮಲ್ಲೇ ಇದ್ದು ಮೊತ್ತಮೊದಲ ಬಾರಿಗೆ ಶುಭಸಂದೇಶವನ್ನು ನಿಮಗೆ ಸಾರಲು ಆಸ್ಪದವಾಯಿತು. ಇದನ್ನು ನೀವು ಬಲ್ಲಿರಿ.
14 : ನನ್ನ ದೇಹಸ್ಥಿತಿ ನಿಮಗೆ ಬೇಸರವನ್ನುಂಟು ಮಾಡುವಂಥದ್ದಾಗಿದ್ದರೂ ನೀವು ನನ್ನನ್ನು ತಿರಸ್ಕರಿಸಲಿಲ್ಲ; ಅಸಹ್ಯಪಡಲಿಲ್ಲ. ನನ್ನನ್ನು ದೇವದೂತನಂತೆ ಏಕೆ, ಕ್ರಿಸ್ತಯೇಸುವಿನಂತೆಯೇ ಭಾವಿಸಿ ಉಪಚರಿಸಿದಿರಿ.
15 : ಅದೊಂದು ಭಾಗ್ಯವೆಂದೇ ತಿಳಿದಿರಿ. ಆ ಭಾವನೆ ಈಗೆಲ್ಲಿದೆ? ಆಗ, ಬೇಕಾಗಿದ್ದಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಾನು ಹೇಳಬಲ್ಲೆ!
16 : ಹೀಗಿರಲಾಗಿ ಸತ್ಯವನ್ನು ನುಡಿಯುವುದರಿಂದ ನಾನು ನಿಮಗೆ ಶತ್ರುವಾಗಿ ಬಿಟ್ಟೆನೇ?
17 : ಆ ನನ್ನ ವಿರೋಧಿಗಳು ನಿಮ್ಮನ್ನು ಮೆಚ್ಚಿಸಲು ತುಂಬ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಆದರೆ ಅವರ ಉದ್ದೇಶ ಒಳ್ಳೆಯದಲ್ಲ. ನೀವು ಸಹ ಅವರನ್ನು ಅಷ್ಟೇ ಆಸಕ್ತಿಯಿಂದ ಮೆಚ್ಚಿಸಬೇಕೆಂಬುದೇ ಅವರ ಉದ್ದೇಶ. ಆದ್ದರಿಂದಲೇ ನಿಮ್ಮನ್ನು ನನ್ನಿಂದ ಬೇರ್ಪಡಿಸಲು ಯತ್ನಿಸುತ್ತಿದ್ದಾರೆ.
18 : ನಾನು ನಿಮ್ಮ ಬಳಿ ಇರಲಿ, ಇಲ್ಲದಿರಲಿ, ಬೇರೆಯವರು ನಿಮ್ಮಲ್ಲಿ ಅಷ್ಟು ಆಸಕ್ತರಾಗಿರುವುದು ಒಳ್ಳೆಯದೇ. ಆದರೆ ಅಂಥ ಆಸಕ್ತಿ ಸದುದ್ದೇಶದಿಂದ ಕೂಡಿರಬೇಕು.
19 : ನನ್ನ ಪ್ರಿಯ ಮಕ್ಕಳೇ, ತಾಯಿ ತನ್ನ ಮಗುವಿಗಾಗಿ ಪ್ರಸವ ವೇದನೆಪಡುವ ಪ್ರಕಾರ ಕ್ರಿಸ್ತಯೇಸು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಿಮಗಾಗಿ ನಾನು ಮತ್ತೆ ಅಂಥ ವೇದನೆಯನ್ನು ಪಡುತ್ತಿದ್ದೇನೆ.
20 : ನಿಮ್ಮ ವಿಷಯದಲ್ಲಿ ಏನು ಮಾಡಬೇಕೋ ನನಗೆ ತೋಚುತ್ತಿಲ್ಲ. ಬಹುಶಃ ನೇರವಾಗಿ ನಿಮ್ಮ ಬಳಿಗೆ ಬಂದು, ನಿಮ್ಮ ಮಧ್ಯದಲ್ಲೇ ಇದ್ದು ನನ್ನ ಮಾತಿನ ವೈಖರಿಯನ್ನು ಬದಲಾಯಿಸಿದ್ದರೆ ಚೆನ್ನಾಗಿರುತ್ತಿತ್ತೇನೋ!
21 : ಧರ್ಮಶಾಸ್ತ್ರಕ್ಕೆ ಅಧೀನರಾಗಲು ಆಶಿಸುವವರೇ, ನನಗೆ ಉತ್ತರ ಕೊಡಿ: ಅದೇ ಧರ್ಮಶಾಸ್ತ್ರ ಹೇಳುವುದನ್ನು ನೀವು ಕೇಳಿಲ್ಲವೇ?
22 : ಅಬ್ರಹಾಮನಿಗೆ ಇಬ್ಬರು ಮಕ್ಕಳಿದ್ದರು: ಒಬ್ಬನು ದಾಸಿಯಿಂದ ಹುಟ್ಟಿದವನು; ಇನ್ನೊಬ್ಬನು ಧರ್ಮಪತ್ನಿಯಿಂದ ಹುಟ್ಟಿದವನು.
23 : ದಾಸಿಯ ಮಗ ಪ್ರಕೃತಿ ಸಹಜವಾಗಿ ಹುಟ್ಟಿದವನು; ಧರ್ಮಪತ್ನಿಯ ಮಗನಾದರೋ ವಾಗ್ದಾನದ ಫಲವಾಗಿ ಹುಟ್ಟಿದವನು.
24 : ಇದೊಂದು ಅಲಂಕಾರ ರೂಪ. ಆ ಇಬ್ಬರು ಸ್ತ್ರೀಯರು ಎರಡು ಒಡಂಬಡಿಕೆಗಳಿಗೆ ಸದೃಶ್ಯರಾಗಿದ್ದಾರೆ. ಒಂದು, ಸೀನಾಯ್ ಪರ್ವತದಲ್ಲಿ ಮಾಡಲಾದ ಒಡಂಬಡಿಕೆ; ಅದು ದಾಸತ್ವಕ್ಕೆ ಮಕ್ಕಳನ್ನು ಹೆರುತ್ತದೆ. ಅದನ್ನು ಸೂಚಿಸುವವಳೇ ದಾಸಿ ಹಾಗರಳು.
25 : ಅರೇಬಿಯಾದಲ್ಲಿರುವ ಸೀನಾಯ್ ಪರ್ವತವನ್ನು ಪ್ರತಿನಿಧಿಸುವ ಈ ಹಾಗರಳು ಈಗಿನ ಜೆರುಸಲೇಮ್ ನಗರವನ್ನು ಹೋಲುತ್ತಾಳೆ. ಹೇಗೆಂದರೆ, ಜೆರುಸಲೇಮ್ ತನ್ನ ಮಕ್ಕಳ ಸಮೇತವಾಗಿ ದಾಸತ್ವದಲ್ಲಿ ಇದೆ.
26 : ಆದರೆ ಸ್ವರ್ಗೀಯ ಜೆರುಸಲೇಮ್ ದಾಸಿ ಅಲ್ಲ, ಸ್ವತಂತ್ರಳು, ಈಕೆಯೇ ನಮ್ಮ ತಾಯಿ.
27 : “ಸಂತಾನವಿಲ್ಲದ ಸ್ತ್ರೀಯೇ, ಸಂತೋಷಿಸು
ಪ್ರಸವ ವೇದನೆಯನರಿಯದವಳೇ,
ಹರ್ಷೋದ್ಗಾರಮಾಡು
ಗಂಡನುಳ್ಳವಳಿಗಿಂತ ಕೈ ಬಿಟ್ಟವಳ
ಸಂತಾನ ಹೆಚ್ಚು,”
ಎಂದು ಪವಿತ್ರಗ್ರಂಥದಲ್ಲೇ ಲಿಖಿತವಾಗಿದೆ.
28 : ಆದ್ದರಿಂದ ಪ್ರಿಯ ಸಹೋದರರೇ, ನೀವು ಇಸಾಕನಂತೆ ವಾಗ್ದಾನದ ಫಲವಾಗಿ ಹುಟ್ಟಿದ ಮಕ್ಕಳು.
29 : ಅಂದು ಪ್ರಕೃತಿಸಹಜವಾಗಿ ಹುಟ್ಟಿದವನು ದೇವರಾತ್ಮದಿಂದ ಹುಟ್ಟಿದವನನ್ನು ಹಿಂಸೆಪಡಿಸಿದಂತೆ ಇಂದೂ ನಡೆಯುತ್ತದೆ
30 : ಪವಿತ್ರಗ್ರಂಥ ಹೇಳುವುದಾದರೂ ಏನು?
“ದಾಸಿಯನ್ನೂ ಅವಳ ಮಗನನ್ನೂ
ಹೊರಕ್ಕೆ ದೂಡು;
ದಾಸಿಯ ಮಗನು ಧರ್ಮಪತ್ನಿಯ
ಮಗನೊಂದಿಗೆ
ಪಾಲುಗಾರನಾಗಕೂಡದು,”
ಎಂದಲ್ಲವೇ?
31 : ಹೌದು, ಪ್ರಿಯ ಸಹೋದರರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳು.