1 :
ಎಲೈ ಮತಿಗೆಟ್ಟ ಗಲಾತಿಯರೇ, ನಿಮ್ಮನ್ನು ಮರುಳುಗೊಳಿಸಿದವರು ಯಾರು? ಯೇಸುಕ್ರಿಸ್ತರು ಶಿಲುಬೆಯ ಮೇಲೆ ಪ್ರಾಣಾರ್ಪಣೆ ಮಾಡಿದ್ದನ್ನು ನಿಮ್ಮ ಕಣ್ಣೆದುರಿಗೇ ಚಿತ್ರಿತಗೊಳಿಸಲಿಲ್ಲವೆ?
2 : ನಿಮ್ಮ ಬಳಿ ಒಂದು ವಿಷಯವನ್ನು ಕೇಳಲಿಚ್ಛಿಸುತ್ತೇನೆ: ನೀವು ಪವಿತ್ರಾತ್ಮರನ್ನು ಪಡೆದುದು ಹೇಗೆ? ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲೋ? ಇಲ್ಲವೆ ಶುಭಸಂದೇಶವನ್ನು ಕೇಳಿ ವಿಶ್ವಾಸಿಸಿದ್ದರಿಂದಲೋ?
3 : ನೀವು ಪವಿತ್ರಾತ್ಮ ಸಂಬಂಧವಾದ ಆಧ್ಯಾತ್ಮಿಕ ಜೀವನವನ್ನು ಪ್ರಾರಂಭಿಸಿಯೂ ಈಗ ಅದನ್ನು ಕೇವಲ ದೇಹ ಸಂಬಂಧವಾದ ವಿಧಿಯಿಂದ ಪೂರೈಸಬೇಕೆಂದಿದ್ದೀರೋ? ನೀವು ಅಷ್ಟು ಮತಿಗೆಟ್ಟವರೋ?
4 : ನಿಮ್ಮ ಅನುಭವಗಳೆಲ್ಲವೂ ವ್ಯರ್ಥವಾದುವು ಎಂದು ಹೇಳೋಣವೇ?
5 : ದೇವರು ನಿಮಗೆ ಪವಿತ್ರಾತ್ಮರನ್ನು ಪ್ರಧಾನಮಾಡಿ ಮಹತ್ಕಾರ್ಯಗಳನ್ನು ಎಸಗುತ್ತಾ ಬಂದಿದ್ದಾರೆ. ಹಾಗೆ ಮಾಡುತ್ತಿರುವುದು, ನೀವು ಧರ್ಮಶಾಸ್ತ್ರದ ವಿಧಿನಿಯಮಗಳನ್ನು ಅನುಸರಿಸಿದ್ದರಿಂದಲ್ಲ. ಶುಭಸಂದೇಶವನ್ನು ಕೇಳಿ, ವಿಶ್ವಾಸ ಇಟ್ಟಿರುವುದರಿಂದ.
6 : ಪವಿತ್ರಗ್ರಂಥದಲ್ಲಿ ಬರೆದಿರುವಂತೆ: “ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು; ಈ ಕಾರಣ ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು.”
7 : ಆದ್ದರಿಂದ ಯಾರು ವಿಶ್ವಾಸದಿಂದ ಜೀವಿಸುತ್ತಾರೋ ಅವರೇ ಅಬ್ರಹಾಮನ ಮಕ್ಕಳೆಂದು ತಿಳಿದುಕೊಳ್ಳಿ.
8 : ಈ ವಿಶ್ವಾಸದ ಮೂಲಕವೇ ಅನ್ಯಧರ್ಮೀಯರನ್ನು ಕೂಡ ದೇವರು ತಮ್ಮ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ, ಎಂದು ಪವಿತ್ರಗ್ರಂಥದಲ್ಲಿ ಮೊದಲೇ ಬರೆಯಲಾಗಿತ್ತು. ಈ ಕಾರಣದಿಂದಲೇ ಅಬ್ರಹಾಮನಿಗೆ, “ನಿನ್ನ ಮುಖಾಂತರವೇ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಪಡೆಯುವುವು,” ಎಂಬ ಶುಭವರ್ತಮಾನವನ್ನು ಮುಂಚಿತವಾಗಿ ತಿಳಿಸಲಾಯಿತು.
9 : ಹೀಗಿರಲಾಗಿ, ವಿಶ್ವಾಸದಿಂದ ಬಾಳುವವರು ವಿಶ್ವಾಸಿಯಾದ ಅಬ್ರಹಾಮನು ಪಡೆದ ಸೌಭಾಗ್ಯವನ್ನೇ ಪಡೆಯುವರು.
10 : ಧರ್ಮಶಾಸ್ತ್ರದ ವಿಧಿನಿಯಮಗಳನ್ನೇ ಆಧಾರವಾಗಿಟ್ಟುಕೊಂಡು ಬಾಳುವವರು ಶಾಪಗ್ರಸ್ತರು. ಏಕೆಂದರೆ, “ಧರ್ಮಗ್ರಂಥದಲ್ಲಿ ಬರೆದಿರುವುದನ್ನೆಲ್ಲಾ ಅನುದಿನವೂ ಕೈಗೊಂಡು ನಡೆಯದ ಪ್ರತಿಯೊಬ್ಬನೂ ಶಾಪಗ್ರಸ್ತನು,” ಎಂದು ಲಿಖಿತವಾಗಿದೆ.
11 : ಇದಲ್ಲದೆ ಧರ್ಮಶಾಸ್ತ್ರ ವಿಧಿಸುವುದನ್ನು ಪೂರೈಸುವುದರಿಂದ ಯಾರೂ ದೇವರೊಡನೆ ಸತ್ಸಂಬಂಧ ಪಡೆಯಲಾರರು ಎಂಬುದು ಸಹ ಸ್ಪಷ್ಟವಾಗಿದೆ. ಯಾಕೆಂದರೆ, “ಯಾರು ದೇವರೊಡನೆ ಸತ್ಸಂಬಂಧವನ್ನು ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ” ಎಂದು ಪವಿತ್ರ ಗ್ರಂಥದಲ್ಲೇ ಲಿಖಿತವಾಗಿದೆ.
12 : ಧರ್ಮಶಾಸ್ತ್ರ ವಿಶ್ವಾಸವನ್ನು ಆಧರಿಸಿಲ್ಲ. ಬದಲಿಗೆ, “ಅದರ ವಿಧಿನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕವಾಗಿ ಜೀವಿಸುತ್ತಾನೆ,” ಎಂದು ಬರೆಯಲಾಗಿದೆ.
13 : “ಮರಕ್ಕೆ ತೂಗುಹಾಕಲಾದ ಪ್ರತಿ ಒಬ್ಬನೂ ಶಾಪಗ್ರಸ್ತನು,” ಎಂದು ಬರೆದಿರುವಂತೆ, ನಮಗೋಸ್ಕರ ಕ್ರಿಸ್ತಯೇಸು ಶಾಪ ಸ್ವರೂಪಿಯಾಗಿ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಶಾಪದಿಂದ ನಮ್ಮನ್ನು ಪಾರುಮಾಡಿದರು.
14 : ಇದರಿಂದಾಗಿ ಅಬ್ರಹಾಮನಿಗೆ ದೊರಕಿದ ಸೌಭಾಗ್ಯ, ಕ್ರಿಸ್ತಯೇಸುವಿನ ಮುಖಾಂತರ ಅನ್ಯಧರ್ಮೀಯರಿಗೂ ದೊರಕುವಂತಾಯಿತು; ವಿಶ್ವಾಸದ ಮೂಲಕವಾಗಿ, ದೇವರು ವಾಗ್ದಾನ ಮಾಡಿದ ಪವಿತ್ರಾತ್ಮ ನಮಗೂ ದೊರಕುವಂತಾಯಿತು.
15 :
ಪ್ರಿಯ ಸಹೋದರರೇ, ದೈನಂದಿನ ಜೀವನದಿಂದ ಒಂದು ಉದಾಹಣೆಯನ್ನೇ ತೆಗೆದುಕೊಳ್ಳೋಣ: ಒಬ್ಬನು ಮತ್ತೊಬ್ಬನೊಡನೆ ಒಂದು ಒಪ್ಪಂದ ಮಾಡಿಕೊಳ್ಳುತ್ತಾನೆ. ಕ್ರಮಬದ್ಧವಾಗಿ ಅದನ್ನು ಮಾಡಿ ಮುಗಿಸಿದ ಮೇಲೆ ಯಾರೂ ಅದನ್ನು ರದ್ದುಮಾಡುವಂತಿಲ್ಲ, ಬದಲಾಯಿಸುವಂತಿಲ್ಲ.
16 : ಹಾಗೆಯೇ, ದೇವರು ಅಬ್ರಹಾಮನಿಗೂ ಆತನ ಸಂತತಿಗೂ ವಾಗ್ದಾನಗಳನ್ನು ಮಾಡಿದರು. “ನಿನ್ನ ಸಂತತಿಗಳಿಗೆ” ಎಂದು ಹೇಳಿ ಅನೇಕರನ್ನು ಸೂಚಿಸಿದೆ, “ನಿನ್ನ ಸಂತತಿಗೆ” ಎಂದು ಹೇಳಿ ಒಬ್ಬ ವ್ಯಕ್ತಿಯನ್ನೇ ಆ ವಾಗ್ದಾನದಲ್ಲಿ ಸೂಚಿಸಿದರು. ಆ ವ್ಯಕ್ತಿಯೇ ಕ್ರಿಸ್ತಯೇಸು.
17 : ದೇವರು ಅಬ್ರಹಾಮನೊಂದಿಗೆ ಮಾಡಿಮುಗಿಸಿದ ಒಪ್ಪಂದವನ್ನು ನಾನೂರ ಮೂವತ್ತು ವರ್ಷಗಳಾದ ಮೇಲೆ ಬಂದ ಧರ್ಮಶಾಸ್ತ್ರದಿಂದ ರದ್ದುಪಡಿಸಲಾಗದು; ಆ ವಾಗ್ದಾನವನ್ನು ವ್ಯರ್ಥಪಡಿಸಲಾಗದು.
18 : ದೇವರು ನಮಗೆ ಹಕ್ಕುಬಾಧ್ಯತೆಯಾಗಿ ಕೊಡುವುದು ಧರ್ಮಶಾಸ್ತ್ರದಿಂದ ಲಭಿಸುವುದಾದರೆ ಅದು ಇನ್ನು ದೇವ ವಾಗ್ದಾನದಿಂದ ಲಭಿಸದು ಎಂದಂತಾಯಿತು. ಆದರೆ ದೇವರು ಅದನ್ನು ಅಬ್ರಹಾಮನಿಗೆ ದಯಪಾಲಿಸಿದ್ದು ವಾಗ್ದಾನದ ಮೂಲಕವೇ.
19 : ಹಾಗಾದರೆ ಧರ್ಮಶಾಸ್ತ್ರದ ಉದ್ದೇಶವಾದರೂ ಏನು? ಅಪರಾಧದ ಅರಿವನ್ನು ಮೂಡಿಸುವುದಕ್ಕಾಗಿ ಅದನ್ನು ಕಾಲಕ್ರಮೇಣ ಸೇರಿಸಲಾಯಿತು. ದೇವವಾಗ್ದಾನವನ್ನು ಪಡೆದ ಆ ಸಂತತಿ ಬರುವ ತನಕ ಮಾತ್ರ ಅದು ಇರಲೆಂದು ಕೊಡಲಾಯಿತು. ಅಲ್ಲದೆ, ಕೇವಲ ದೇವದೂತರ ಮುಖಾಂತರ, ಒಬ್ಬ ಮಾನವ ಮಧ್ಯಸ್ಥನ ಮೂಲಕ ಮಾತ್ರ ಅದನ್ನು ನೀಡಲಾಯಿತು.
20 : ಒಂದೇ ಪಕ್ಷ ಇರುವಾಗ ಮಧ್ಯಸ್ಥನು ಬೇಕಿಲ್ಲ, ದೇವರಾದರೋ ಒಬ್ಬರೇ.
21 : ಹಾಗಾದರೆ, ಧರ್ಮಶಾಸ್ತ್ರ ದೇವರ ವಾಗ್ದಾನಕ್ಕೆ ವಿರುದ್ಧವಾಗಿದೆಯೆಂದು ಹೇಳೋಣವೇ? ಎಂದಿಗೂ ಇಲ್ಲ. ಸಜ್ಜೀವಗೊಳಿಸುವ ಶಕ್ತಿಯನ್ನು ಧರ್ಮಶಾಸ್ತ್ರ ಹೊಂದಿದ್ದರೆ ಅದನ್ನು ಅನುಸರಿಸುವುದರಿಂದ ನಿಸ್ಸಂದೇಹವಾಗಿ ದೇವರೊಡನೆ ಸತ್ಸಂಬಂಧ ದೊರಕುತ್ತಿತ್ತು.
22 : ಅದಕ್ಕೆ ಬದಲಾಗಿ ಸಮಸ್ತ ಲೋಕವೂ ಪಾಪಕ್ಕೆ ಒಳಗಾಯಿತು ಎಂದು ಪವಿತ್ರಗ್ರಂಥ ಸ್ಪಷ್ಟೀಕರಿಸುತ್ತದೆ. ಹೀಗೆ, ವಾಗ್ದಾನ ಮಾಡಿದ ಸೌಭಾಗ್ಯವನ್ನು ಯೇಸುಕ್ರಿಸ್ತರಲ್ಲಿ ವಿಶ್ವಾಸವಿಟ್ಟವರಿಗೆ ಅವರ ನಂಬಿಕೆಯ ಆಧಾರದ ಮೇಲೆ ಕೊಡಲಾಗುತ್ತದೆ.
23 : ಕ್ರೈಸ್ತವಿಶ್ವಾಸದ ಕಾಲವು ಬರುವುದಕ್ಕೆ ಮೊದಲು ನಾವು ಧರ್ಮಶಾಸ್ತ್ರದ ನಿರ್ಬಂಧಕ್ಕೆ ಒಳಗಾಗಿ ಕೈದಿಗಳಂತೆ ಇದ್ದೆವು. ಈ ವಿಶ್ವಾಸವು ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಇತ್ತು.
24 : ಅಂತೆಯೇ, ವಿಶ್ವಾಸದ ಮೂಲಕ ನಾವು ದೇವರೊಡನೆ ಸತ್ಸಂಬಂಧ ಹೊಂದುವಂತೆ ಕ್ರಿಸ್ತಯೇಸು ಬರುವತನಕ ಅದು ನಮಗೆ ಕಾವಲಾಗಿತ್ತು.
25 : ಈಗ ಕ್ರೈಸ್ತವಿಶ್ವಾಸವು ಆಗಮಿಸಿರುವುದರಿಂದ ಇನ್ನು ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಇಲ್ಲ.
26 : ಈಗ ಕ್ರೈಸ್ತವಿಶ್ವಾಸವು ಆಗಮಿಸಿರುವುದರಿಂದ ಇನ್ನು ನಾವು ಧರ್ಮಶಾಸ್ತ್ರದ ಅಧೀನದಲ್ಲಿ ಇಲ್ಲ.
26 : ಕ್ರಿಸ್ತಯೇಸುವಿನಲ್ಲಿ ಇಟ್ಟಿರುವ ವಿಶ್ವಾಸದ ಮೂಲಕ ನೀವೆಲ್ಲರೂ ದೇವರ ಮಕ್ಕಳಾಗಿದ್ದೀರಿ.
27 : ಹೇಗೆಂದರೆ, ಕ್ರಿಸ್ತಯೇಸುವಿನಲ್ಲಿ ಒಂದಾಗುವುದಕ್ಕೆ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತಂಬರರಾಗಿದ್ದೀರಿ.
28 : ನೀವೆಲ್ಲರೂ ಕ್ರಿಸ್ತಯೇಸುವಿನಲ್ಲಿ ಒಂದಾಗಿದ್ದೀರಿ. ಎಂದೇ, ಇನ್ನು ಮೇಲೆ ಯೆಹೂದ್ಯ-ಯೆಹೂದ್ಯನಲ್ಲದವ, ದಾಸ-ದಣಿ, ಗಂಡು-ಹೆಣ್ಣು ಎಂಬ ಭೇದವಿಲ್ಲ.
29 : ನೀವು ಕ್ರಿಸ್ತ ಯೇಸುವಿಗೆ ಸೇರಿದವರಾಗಿದ್ದರೆ ಅಬ್ರಹಾಮನ ಸಂತತಿಯೂ ಆಗಿದ್ದೀರಿ; ದೈವ ವಾಗ್ದಾನದ ಪ್ರಕಾರ ವಾರಸುದಾರರೂ ಆಗಿದ್ದೀರಿ.