Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ರೋಮ


1 : ಆದುದರಿಂದ ಈಗ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ದಂಡನಾತೀರ್ಪು ಇರುವುದಿಲ್ಲ.
2 : ಏಕೆಂದರೆ ಕ್ರಿಸ್ತಯೇಸುವಿನಲ್ಲಿ ಇರುವವರಿಗೆ ಜೀವವನ್ನು ತರುವ ಪವಿತ್ರಾತ್ಮ ನಿಯಮವು ಪಾಪ-ಮರಣಗಳ ನಿಯಮದಿಂದ ನಿನ್ನನ್ನು ಬಿಡುಗಡೆ ಮಾಡಿದೆ.
3 : ಶರೀರ ಸ್ವಭಾವದ ಬಲಹೀನತೆಯ ನಿಮಿತ್ತ ಧರ್ಮಶಾಸ್ತ್ರಕ್ಕೆ ಯಾವುದು ಸಾಧ್ಯವಾಗದೆ ಹೋಯಿತೋ, ಅದು ದೇವರಿಗೆ ಸಾಧ್ಯವಾಯಿತು. ಪಾಪ ಪರಿಹಾರಕ್ಕಾಗಿ ತಮ್ಮ ಸ್ವಂತ ಪುತ್ರನನ್ನು ಪಾಪಾಧೀನವಾದ ನಮ್ಮ ಸ್ವಭಾವದಂಥ ಶರೀರ ಸ್ವಭಾವದಲ್ಲಿ ಕಳುಹಿಸಿಕೊಟ್ಟರು. ಆ ಸ್ವಭಾವದಲ್ಲೇ ಪಾಪಕ್ಕೆ ಮರಣ ದಂಡನೆಯನ್ನು ವಿಧಿಸಿದರು.
4 : ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯದೆ ಪವಿತ್ರಾತ್ಮ ಅವರ ಚಿತ್ತಕ್ಕನುಸಾರವಾಗಿ ನಡೆಯುವ ನಮ್ಮಲ್ಲಿ ಧರ್ಮಶಾಸ್ತ್ರದ ನೀತಿನಿಯಮಗಳು ನೆರವೇರುವಂತೆ ದೇವರು ಹೀಗೆ ಮಾಡಿದರು.
5 : ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ಶರೀರಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ. ಪವಿತ್ರಾತ್ಮ ಅವರಿಗೆ ಅನುಸಾರವಾಗಿ ನಡೆಯುವವರಾದರೋ ಆತ್ಮಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಮಗ್ನರಾಗಿರುತ್ತಾರೆ.
6 : ಶರೀರ ಸ್ವಭಾವದಲ್ಲೆ ಮಗ್ನರಾಗಿರುವುದರ ಪರಿಣಾಮ ಮರಣ; ಪವಿತ್ರಾತ್ಮ ಅವರಲ್ಲೇ ಮಗ್ನರಾಗಿರುವುದರ ಪರಿಣಾಮ ಸಜ್ಜೀವ ಮತ್ತು ಶಾಂತಿಸಮಾಧಾನ.
7 : ಶರೀರ ಸ್ವಭಾವದಲ್ಲೇ ಮಗ್ನವಾಗಿರುವ ಮನಸ್ಸು ದೇವರಿಗೆ ಶತ್ರು. ಅಂಥ ಮನಸ್ಸು ದೇವರ ನಿಯಮಕ್ಕೆ ಮಣಿಯುವುದಿಲ್ಲ. ಮಣಿಯಲು ಸಾಧ್ಯವೂ ಇಲ್ಲ.
8 : ಶರೀರ ಸ್ವಭಾವಕ್ಕೆ ಅನುಸಾರವಾಗಿ ನಡೆಯುವವರು ದೇವರನ್ನು ಮೆಚ್ಚಿಸಲು ಸಾಧ್ಯವೇ ಇಲ್ಲ.
9 : ನಿಮ್ಮಲ್ಲಿ ನಿಜವಾಗಿಯೂ ದೇವರ ಆತ್ಮವು ನೆಲಸಿದ್ದರೆ ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಜೀವಿಸದೆ ಪವಿತ್ರಾತ್ಮ ಅವರ ಚಿತ್ತಕ್ಕೆ ಅನುಸಾರವಾಗಿ ಜೀವಿಸುತ್ತೀರಿ. ಯಾರಲ್ಲಿ ಕ್ರಿಸ್ತಯೇಸುವಿನ ಆತ್ಮ ಇಲ್ಲವೋ ಅಂಥವನು ಕ್ರಿಸ್ತಯೇಸುವಿಗೆ ಸೇರಿದವನಲ್ಲ.
10 : ಆದರೆ ಕ್ರಿಸ್ತಯೇಸು ನಿಮ್ಮಲ್ಲಿ ವಾಸಿಸಿದರೆ, ಪಾಪದ ನಿಮಿತ್ತ ನಿಮ್ಮ ಶರೀರ ಮರಣಕ್ಕೆ ಗುರಿಯಾಗಿದ್ದರೂ ನೀವು ದೇವರೊಡನೆ ಸತ್ಸಂಬಂಧವನ್ನು ಪಡೆದಿರುವುದರಿಂದ ಪವಿತ್ರಾತ್ಮ ನಿಮಗೆ ಜೀವಾಳವಾಗಿರುತ್ತಾರೆ.
11 : ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರ ಆತ್ಮ ನಿಮ್ಮಲ್ಲಿ ನೆಲೆಗೊಂಡಿರಲಿ. ಆಗ ಕ್ರಿಸ್ತಯೇಸುವನ್ನು ಮರಣದಿಂದ ಎಬ್ಬಿಸಿದ ದೇವರು ನಿಮ್ಮಲ್ಲಿ ನೆಲೆಗೊಂಡಿರುವ ಆತ್ಮನ ಮುಖಾಂತರ ನಿಮ್ಮ ನಶ್ವರ ದೇಹಗಳಿಗೂ ಜೀವವನ್ನೀಯುವರು.
12 : ಆದ್ದರಿಂದ ಸಹೋದರರೇ, ನಾವು ಶರೀರ ಸ್ವಭಾವದ ಹಂಗಿನಲ್ಲಿಲ್ಲ. ಅದರ ಆಶಾಪಾಶಗಳಿಗೆ ಅನುಗುಣವಾಗಿ ಬಾಳುವ ಹಂಗಿನಲ್ಲೂ ಇಲ್ಲ.
13 : ನೀವು ಶರೀರ ಸ್ವಭಾವಕ್ಕೆ ಅನುಸಾರವಾಗಿ ಬಾಳಿದರೆ ಖಂಡಿತವಾಗಿ ಸಾಯುವಿರಿ. ಪವಿತ್ರಾತ್ಮ ಅವರ ನೆರವಿನಿಂದ ದೈಹಿಕ ದುರಭ್ಯಾಸಗಳನ್ನು ದಮನಮಾಡಿದರೆ ಜೀವಿಸುವಿರಿ.
14 : ಯಾರು ಯಾರು ದೇವರ ಆತ್ಮನಿಗೆ ಮಣಿದು ನಡೆಯುತ್ತಾರೋ ಅವರು ದೇವರ ಮಕ್ಕಳು.
15 : ದೇವರು ನಿಮಗೆ ದಯಪಾಲಿಸಿರುವ ಆತ್ಮ ನಿಮ್ಮನ್ನು ಮತ್ತೊಮ್ಮೆ ಗುಲಾಮರನ್ನಾಗಿಯೂ ಭಯಭೀತರನ್ನಾಗಿಯೂ ಮಾಡುವುದಿಲ್ಲ. ಬದಲಿಗೆ, ನಿಮ್ಮನ್ನು ದೇವರ ಮಕ್ಕಳನ್ನಾಗಿಸುತ್ತದೆ. ಆ ಆತ್ಮದ ಮೂಲಕವೇ ನಾವು ದೇವರನ್ನು, “ಅಪ್ಪಾ, ತಂದೆಯೇ” ಎಂದು ಕರೆಯುತ್ತೇವೆ.
16 : ನಾವು ದೇವರ ಮಕ್ಕಳೆಂಬುದಕ್ಕೆ ದೇವರ ಆತ್ಮ ನಮ್ಮ ಅಂತರಾತ್ಮದೊಂದಿಗೆ ಸಾಕ್ಷಿ ನುಡಿಯುತ್ತಾರೆ.
17 : ನಾವು ಮಕ್ಕಳಾಗಿದ್ದರೆ, ಹಕ್ಕುಬಾಧ್ಯತೆ ಉಳ್ಳವರು. ಹೌದು, ದೇವರ ಸೌಭಾಗ್ಯಕ್ಕೆ ಬಾಧ್ಯಸ್ಥರು; ಕ್ರಿಸ್ತಯೇಸುವಿನೊಡನೆ ಸಹಬಾಧ್ಯಸ್ಥರು. ಕ್ರಿಸ್ತಯೇಸುವಿನ ಯಾತನೆಯಲ್ಲೂ ನಾವು ಪಾಲುಗಾರರಾಗಬೇಕು. ಆಗ ಅವರ ಮಹಿಮೆಯಲ್ಲೂ ಪಾಲುಗಾರರಾಗುತ್ತೇವೆ.
18 : ಇಂದಿನ ಕಾಲದಲ್ಲಿ ನಾವು ಅನುಭವಿಸುತ್ತಿರುವ ಕಷ್ಟಸಂಕಟಗಳು ಮುಂದೆ ನಮಗೆ ಪ್ರತ್ಯಕ್ಷವಾಗಲಿರುವ ಮಹಿಮೆಯೊಂದಿಗೆ ಹೋಲಿಸುವುದಕ್ಕೂ ಬಾರದವುಗಳೆಂದು ನಾನು ಎಣಿಸುತ್ತೇನೆ.
19 : ದೇವರ ಮಕ್ಕಳ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೋ ಎಂದು ಸೃಷ್ಟಿ ಸಮಸ್ತವು ಬಹು ಉತ್ಸುಕತೆಯಿಂದ ಎದುರು ನೋಡುತ್ತಿದೆ.
20 : ಸರ್ವಸೃಷ್ಟಿಯು ನಿರರ್ಥಕತೆಗೆ ಒಳಗಾಯಿತು. ಇದು ಅದರ ಸ್ವಂತ ಇಚ್ಛೆಯಿಂದಲ್ಲ, ದೇವರ ಇಚ್ಛೆಯಿಂದಲೇ ಆಯಿತು. ಆದರೂ ಸೃಷ್ಟಿಗೆ ನಿರೀಕ್ಷೆಯೊಂದಿದೆ.
21 : ಅದೇನೆಂದರೆ, ಸೃಷ್ಟಿಯು ಸಹ ವಿನಾಶವಿಧಿಯಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮಾಯುತ ಸ್ವಾತಂತ್ರ್ಯದಲ್ಲಿ ಪಾಲುಗೊಳ್ಳುತ್ತದೆ, ಎಂಬುದೇ.
22 : ಸೃಷ್ಟಿಸಮಸ್ತವು ಇಂದಿನವರೆಗೆ ನರಳುತ್ತಾ ಪ್ರಸವವೇದನೆಪಡುತ್ತಾ ಇದೆ ಎಂಬುದು ನಮಗೆ ತಿಳಿದಿದೆ.
23 : ಸೃಷ್ಟಿಮಾತ್ರವಲ್ಲ, ದೇವರ ವರದಾನಗಳಲ್ಲಿ ಪ್ರಥಮಫಲವಾಗಿ ಪವಿತ್ರಾತ್ಮ ಅವರನ್ನೇ ಪಡೆದಿರುವ ನಾವು ಸಹ ನಮ್ಮೊಳಗೇ ನರಳುತ್ತಿದ್ದೇವೆ. ದೇವರ ಮಕ್ಕಳಿಗೆ ದೊರೆಯುವ ಸೌಭಾಗ್ಯವನ್ನೂ ನಮ್ಮ ಸಂಪೂರ್ಣ ವಿಮೋಚನೆಯನ್ನೂ ನಿರೀಕ್ಷಿಸುತ್ತಿದ್ದೇವೆ.
24 : ನಾವು ಜೀವೋದ್ಧಾರ ಹೊಂದಿದ್ದರೂ ಇನ್ನೂ ನಿರೀಕ್ಷಿಸುವವರಾಗಿದ್ದೇವೆ. ನಾವು ನಿರೀಕ್ಷಿಸುವುದು ಪ್ರತ್ಯಕ್ಷವಾಗಿದ್ದರೆ ಅದನ್ನು ನಿರೀಕ್ಷೆ ಎನ್ನುವುದಿಲ್ಲ; ಪ್ರತ್ಯಕ್ಷವಾಗಿರುವುದನ್ನು ಯಾರಾದರೂ ನಿರೀಕ್ಷಿಸುವುದುಂಟೇ?
25 : ಪ್ರತ್ಯಕ್ಷವಾಗದೆ ಇರುವುದನ್ನು ನಾವು ನಿರೀಕ್ಷಿಸುವವರಾಗಿದ್ದರೆ, ಅದಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರುತ್ತೇವೆ.
26 : ಅಂತೆಯೇ ಪವಿತ್ರಾತ್ಮರು ಸಹ ನಮ್ಮ ದೌರ್ಬಲ್ಯದಲ್ಲಿ ನೆರವು ನೀಡುತ್ತಾರೆ. ಹೇಗೆ ಪ್ರಾರ್ಥಿಸಬೇಕು, ಯಾವುದಕ್ಕಾಗಿ ಪ್ರಾರ್ಥಿಸಬೇಕು ಎಂಬುದನ್ನು ನಾವು ತಿಳಿಯದವರು. ಪವಿತ್ರಾತ್ಮರೇ ಮಾತಿಗೆಟುಕದ ರೀತಿಯಲ್ಲಿ ಆತ್ಮಧ್ವನಿಯಿಂದ ನಮ್ಮ ಪರವಾಗಿ ದೇವರಲ್ಲಿ ವಿಜ್ಞಾಪಿಸುತ್ತಾರೆ.
27 : ಅಂತರಂಗಗಳನ್ನು ಈಕ್ಷಿಸುವ ದೇವರು ಪವಿತ್ರಾತ್ಮರ ಇಂಗಿತವೇನೆಂದು ಬಲ್ಲರು. ಏಕೆಂದರೆ, ದೇವರ ಚಿತ್ತದ ಪ್ರಕಾರವೇ ಪವಿತ್ರಾತ್ಮರು ದೇವಜನರಿಗಾಗಿ ಬಿನ್ನವಿಸುತ್ತಾರೆ.
28 : ದೇವರನ್ನು ಪ್ರೀತಿಸುವವರಿಗೂ ದೇವರ ಸಂಕಲ್ಪದ ಮೇರೆಗೆ ಕರೆಹೊಂದಿದವರಿಗೂ ಸಕಲವೂ ಹಿತಕರವಾಗಿ ಪರಿಣಮಿಸುವುದು. ಇದನ್ನು ನಾವು ಚೆನ್ನಾಗಿ ಅರಿತಿದ್ದೇವೆ.
29 : ದೇವರು ಯಾರನ್ನು ತಮ್ಮವರೆಂದು ಮೊದಲೇ ಆರಿಸಿಕೊಂಡರೋ ಅವರನ್ನು ತಮ್ಮ ಪುತ್ರನ ಅನುರೂಪಿಗಳಾಗುವಂತೆ ಆಗಲೇ ನೇಮಿಸಿದರು. ಹೀಗೆ ಅನೇಕ ಸಹೋದರರಲ್ಲಿ ತಮ್ಮ ಪುತ್ರನೇ ಜೇಷ್ಠನಾಗಿರಬೇಕೆಂಬುದು ದೇವರ ನಿರ್ಧಾರವಾಗಿದೆ.
30 : ಹೀಗೆ ಯಾರನ್ನು ಮೊದಲೇ ನೇಮಿಸಿದ್ದರೋ ಅವರನ್ನು ಕರೆದಿದ್ದಾರೆ. ಯಾರನ್ನು ಕರೆದಿದ್ದಾರೋ ಅವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೆ. ಯಾರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡಿದ್ದಾರೋ ಅವರನ್ನು ಮಹಿಮಾಪದವಿಗೆ ಸೇರಿಸಿಕೊಂಡಿದ್ದಾರೆ.
31 : ಹೀಗಿರುವಲ್ಲಿ ನಾವು ಏನು ಹೇಳೋಣ? ದೇವರೇ ನಮ್ಮ ಪರ ಇರುವಾಗ ನಮ್ಮನ್ನು ವಿರೋಧಿಸುವವರು ಯಾರು?
32 : ದೇವರು ತಮ್ಮ ಸ್ವಂತ ಪುತ್ರನನ್ನೇ ನಮ್ಮೆಲ್ಲರಿಗಾಗಿ ಕೊಡಲು ಹಿಂಜರಿಯಲಿಲ್ಲ. ತಮ್ಮ ಪುತ್ರನನ್ನೇ ಬಲಿದಾನವಾಗಿ ಅರ್ಪಿಸಿದ ದೇವರು ಮತ್ತೇನನ್ನು ತಾನೇ ನಮಗೆ ವರದಾನವಾಗಿ ಕೊಡದಿರಲಾರರು?
33 : ದೇವರೇ ಆರಿಸಿಕೊಂಡವರ ಮೇಲೆ ಯಾರು ತಾನೇ ದೋಷಾರೋಪಣೆ ಮಾಡಬಲ್ಲರು? ದೇವರೇ ಅವರನ್ನು ನಿರ್ದೋಷಿಗಳೆಂದು ನಿರ್ಣಯಿಸಿರುವಾಗ ಅವರನ್ನು ದೋಷಿಗಳೆಂದು ನಿರ್ಣಯಿಸುವವರು ಯಾರು?
34 : ಪ್ರಾಣತ್ಯಾಗ ಮಾಡಿದ್ದಲ್ಲದೆ ಪುನರುತ್ಥಾನ ಹೊಂದಿದ ಕ್ರಿಸ್ತಯೇಸುವೇ ದೇವರ ಬಲಪಾಶ್ರ್ವದಲ್ಲಿದ್ದುಕೊಂಡು ನಮ್ಮ ಪರವಾಗಿ ಬಿನ್ನಯಿಸುತ್ತಿದ್ದಾರೆ.
35 : ಕ್ರಿಸ್ತಯೇಸುವಿನ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಯಾರಿಂದ ಸಾಧ್ಯ? ಕಷ್ಟ-ಸಂಕಟ, ಇಕ್ಕಟ್ಟು-ಬಿಕ್ಕಟ್ಟು, ಹಿಂಸೆ ಬಾಧೆ ಇವುಗಳಿಂದ ಸಾಧ್ಯವೆ? ಇಲ್ಲ. ಹಸಿವು ನೀರಡಿಕೆ, ನಗ್ನಸ್ಥಿತಿ, ಆಪತ್ತು-ವಿಪತ್ತು, ಖಡ್ಗ-ಕಠಾರಿಗಳಿಂದ ಸಾಧ್ಯವೆ? ಎಂದಿಗೂ ಇಲ್ಲ.
36 : ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: “ದಿನವಿಡೀ ನಿಮಗೋಸ್ಕರವೇ ಸಾವಿಗೀಡಾಗುತಿಹೆವು ನಾವು, ಮಧ್ಯಸ್ಥಾನಕ್ಕೆ ಒಯ್ದ ಕುರಿಗಳಂತೆ ಪರಿಗಣಿತರಾಗುತಿಹೆವು ನಾವು.”
37 : ನಮ್ಮನ್ನು ಪ್ರೀತಿಸಿದ ಯೇಸುಕ್ರಿಸ್ತರ ಮುಖಾಂತರ ಇವೆಲ್ಲವುಗಳಲ್ಲಿಯೂ ನಾವು ಪೂರ್ಣ ಜಯಶಾಲಿಗಳಾಗುತ್ತೇವೆ.
38 : ಸಾವಾಗಲಿ ಜೀವವಾಗಲಿ, ದೇವದೂತರಾಗಲಿ ದುರಾತ್ಮರಾಗಲಿ, ಈಗಿನ ಸಂತತಿಗಳೇ ಆಗಲಿ, ಭವಿಷ್ಯದ ಆಗುಹೋಗುಗಳೇ ಆಗಲಿ, ಯಾವ ಶಕ್ತಿಗಳೇ ಆಗಲಿ ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ತೋರಿಬಂದ ದೈವಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲಾರವು.
39 : ಅಂತೆಯೇ, ಮೇಲಣ ಲೋಕವಾಗಲಿ, ಕೆಳಗಣ ಲೋಕವಾಗಲಿ, ಸೃಷ್ಟಿಸಮಸ್ತಗಳಲ್ಲಿ ಯಾವುದೇ ಆಗಲಿ, ಆ ಪ್ರೀತಿಯಿಂದ ನಮ್ಮನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಇದು ನಿಶ್ಚಯ.

· © 2017 kannadacatholicbible.org Privacy Policy