1 :
ಸಹೋದರರೇ, ಒಬ್ಬ ಮನುಷ್ಯನು ಜೀವದಿಂದಿರುವವರೆಗೆ ಮಾತ್ರ ಧರ್ಮಶಾಸ್ತ್ರದ ನೇಮನಿಯಮಗಳಿಗೆ ಒಳಪಟ್ಟಿರುತ್ತಾನೆ. ಧರ್ಮಶಾಸ್ತ್ರವನ್ನು ಅರಿತಿರುವ ನೀವು ಇದನ್ನು ಗ್ರಹಿಸಿಕೊಳ್ಳಬಲ್ಲಿರಿ.
2 : ಉದಾಹರಣೆಗೆ, ಪತಿಯು ಬದುಕಿರುವವರೆಗೆ ಸತಿ ಅವನಿಗೆ ಶಾಸನಾನುಸಾರವಾಗಿ ಬದ್ಧಳು. ಒಂದು ವೇಳೆ, ಆಕೆಯ ಪತಿ ಸತ್ತು ಹೋದರೆ, ಆಕೆ ವಿವಾಹಬಂಧನದಿಂದ ಬಿಡುಗಡೆ ಹೊಂದುತ್ತಾಳೆ.
3 : ಪತಿ ಬದುಕಿರುವಾಗಲೇ ಸತಿಯು ಇನ್ನೊಬ್ಬನೊಡನೆ ಸಂಬಂಧ ಬೆಳೆಸಿದರೆ ಆಕೆ ವ್ಯಭಿಚಾರಿಣಿ ಎನಿಸಿಕೊಳ್ಳುತ್ತಾಳೆ. ಪತಿಯು ಸತ್ತು ಹೋದರೆ ಆಕೆ ವಿವಾಹಬಂಧನದಿಂದ ಮುಕ್ತಳು. ಅಂಥವಳು ಇನ್ನೊಬ್ಬನನ್ನು ಮದುವೆ ಆದರೂ ವ್ಯಭಿಚಾರಿಣಿ ಎನಿಸಿಕೊಳ್ಳುವುದಿಲ್ಲ.
4 : ಅಂತೆಯೇ, ಪ್ರಿಯ ಸಹೋದರರೇ, ನೀವು ಕ್ರಿಸ್ತ ಯೇಸುವಿನ ದೇಹದೊಂದಿಗೆ ಒಂದಾಗಿರುವುದರಿಂದ ಧರ್ಮಶಾಸ್ತ್ರದ ಪಾಲಿಗೆ ಸತ್ತವರಾದಿರಿ. ಇದರ ಪರಿಣಾಮವಾಗಿ, ಮರಣದಿಂದ ಪುನರುತ್ಥಾನ ಹೊಂದಿದ ಕ್ರಿಸ್ತಯೇಸುವಿನೊಂದಿಗೆ ಬಂಧಿತರಾಗಿದ್ದೀರಿ. ಹೀಗೆ, ದೇವರಿಗೆ ನಾವು ಸತ್ಫಲವನ್ನು ಈಯುವವರಾಗಿದ್ದೇವೆ.
5 : ನಾವು ಶರೀರ ಸ್ವಭಾವಕ್ಕನುಸಾರವಾಗಿ ಬಾಳುತ್ತಿದ್ದಾಗ ಪಾಪಕರವಾದ ದುರಿಚ್ಛೆಗಳು ಧರ್ಮಶಾಸ್ತ್ರದಿಂದಲೇ ಪ್ರಚೋದಿತವಾಗಿ ನಮ್ಮ ಇಂದ್ರಿಯಗಳಲ್ಲಿ ಕಾರ್ಯನಿರತವಾಗಿದ್ದವು. ಪರಿಣಾಮವಾಗಿ, ನಾವು ಮೃತ್ಯುವಿಗೆ ಫಲವನ್ನು ಈಯುತ್ತಿದ್ದೆವು.
6 : ಈಗಲಾದರೋ ನಮ್ಮನ್ನು ಬಂಧನದಲ್ಲಿಟ್ಟಿದ್ದ ಆ ಧರ್ಮಶಾಸ್ತ್ರದ ಪಾಲಿಗೆ ನಾವು ಸತ್ತು, ಬಿಡುಗಡೆ ಹೊಂದಿದ್ದೇವೆ. ಆದ್ದರಿಂದ ಲಿಖಿತವಾದ ಹಳೆಯ ಶಾಸ್ತ್ರಕ್ಕೆ ಬದ್ಧರಾಗದೆ ಪವಿತ್ರಾತ್ಮ ಪ್ರೇರಿತವಾದ ನವೀನ ಮಾರ್ಗದಲ್ಲಿ ನಡೆಯುತ್ತಾ ಇದ್ದೇವೆ.
7 : ಧರ್ಮಶಾಸ್ತ್ರದಿಂದ ಪಾಪದ ಪ್ರಜ್ಞೆ
ಹಾಗಾದರೆ ಧರ್ಮಶಾಸ್ತ್ರವೇ ಪಾಪ ಎಂದು ಹೇಳೋಣವೇ? ಖಂಡಿತವಾಗಿ ಇಲ್ಲ. ಧರ್ಮಶಾಸ್ತ್ರ ಇಲ್ಲದಿದ್ದರೆ ಪಾಪದ ಅರಿವು ನನಗಾಗುತ್ತಿರಲಿಲ್ಲ. ‘ದುರಾಶೆ ಪಡಬೇಡ’ ಎಂದು ಧರ್ಮಶಾಸ್ತ್ರ ವಿಧಿಸದೆ ಹೋಗಿದ್ದರೆ ದುರಾಶೆ ಎಂದರೆ ಏನೆಂಬುದೇ ನನಗೆ ತಿಳಿಯುತ್ತಿರಲಿಲ್ಲ.
8 : ಆದರೆ ಈ ಆಜ್ಞೆಯ ಮೂಲಕ ಪಾಪವು ಸಮಯ ಸಾಧಿಸಿ ನನ್ನಲ್ಲಿ ಎಲ್ಲಾ ವಿಧದ ದುರಾಶೆಗಳನ್ನು ಕೆರಳಿಸಿತು. ಧರ್ಮಶಾಸ್ತ್ರವಿಲ್ಲದೆ ಇದ್ದರೆ ಪಾಪವು ಸತ್ತಂತೆಯೇ ಸರಿ.
9 : ಧರ್ಮಶಾಸ್ತ್ರದ ಅರಿವಿಲ್ಲದೆ ಒಮ್ಮೆ ನಾನು ಜೀವಿಸುತ್ತಿದ್ದೆನು; ಆಜ್ಞೆ ಎಂಬುದು ತಲೆದೋರಿದ ಕೂಡಲೇ ಪಾಪಕ್ಕೆ ಜೀವ ಬಂದಿತು.
10 : ನಾನಾದರೋ ಸತ್ತೆನು. ಜೀವದಾಯಕವಾಗಬೇಕಿದ್ದ ಆಜ್ಞೆಯೇ ನನಗೆ ಮೃತ್ಯುಕಾರಕವಾಯಿತು.
11 : ಆಜ್ಞೆಯ ಮೂಲಕವೇ ಪಾಪವು ಸಮಯ ಸಾಧಿಸಿ ನನ್ನನ್ನು ವಂಚಿಸಿತು; ಅದರಿಂದಲೇ ನನ್ನನ್ನು ಕೊಂದುಹಾಕಿತು.
12 : ಧರ್ಮಶಾಸ್ತ್ರ ಪವಿತ್ರವಾದುದು. ಅಂತೆಯೇ, ಆಜ್ಞೆಯೂ ಪವಿತ್ರವಾದುದು, ನ್ಯಾಯವಾದುದು ಮತ್ತು ಹಿತಕರವಾದುದು.
13 : ಹಾಗಾದರೆ ಹಿತಕರವಾದದ್ದೇ ನನಗೆ ಮೃತ್ಯುಕಾರಕವಾಯಿತೇ? ಇಲ್ಲವೇ ಇಲ್ಲ ! ಹಾಗೆ ಮೃತ್ಯುಕಾರಕವಾದುದು ಪಾಪವೇ. ತನ್ನ ನಿಜ ಸ್ವರೂಪವನ್ನು ತೋರಿಸುವುದಕ್ಕಾಗಿ ಪಾಪವು ನನಗೆ ಹಿತಕರವಾದುದನ್ನು ಉಪಯೋಗಿಸಿಕೊಂಡು ನನಗೆ ಮರಣವನ್ನು ತಂದಿತು. ಹೀಗೆ ಪಾಪವು ಅದೆಷ್ಟು ಭೀಕರವಾದುದೆಂದು ಆಜ್ಞೆಯ ಮೂಲಕ ವ್ಯಕ್ತವಾಗುತ್ತದೆ.
14 :
ಧರ್ಮಶಾಸ್ತ್ರ ಪಾರಮಾರ್ಥಿಕವಾದುದೆಂದು ನಾವು ಬಲ್ಲೆವು. ನಾನಾದರೋ ನರಮಾನವನು; ಪಾಪಕ್ಕೆ ನನ್ನನ್ನೇ ಗುಲಾಮನನ್ನಾಗಿ ಮಾರಿಕೊಂಡವನು.
15 : ನಾನು ಮಾಡುವುದು ನನಗೇ ಅರ್ಥವಾಗುತ್ತಿಲ್ಲ. ಏನನ್ನು ಮಾಡಲು ಅಪೇಕ್ಷಿಸುತ್ತೇನೋ ಅದನ್ನು ಮಾಡುತ್ತಿಲ್ಲ, ಏನನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುತ್ತೇನೆ.
16 : ನಾನು ಮಾಡುವುದನ್ನು ಮನಸ್ಸು ಒಪ್ಪದಿದ್ದರೆ, ಧರ್ಮಶಾಸ್ತ್ರ ಸರಿಯಾದುದೆಂದು ನಾನು ಒಪ್ಪಿಕೊಂಡ ಹಾಗಾಯಿತು.
17 : ಹೀಗಿರಲಾಗಿ ನಾನು ಬಯಸದೆ ಇರುವುದನ್ನು ಮಾಡುವವನು ಇನ್ನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತದೆ.
18 : ನನ್ನಲ್ಲಿ, ಅಂದರೆ ನನ್ನ ಶಾರೀರಕ ಸ್ವಭಾವದಲ್ಲಿ ಒಳ್ಳೆಯತನವೆಂಬುದೇನೂ ನೆಲೆಗೊಂಡಿಲ್ಲ. ಇದು ನನಗೆ ಗೊತ್ತು. ಏಕೆಂದರೆ, ಒಳಿತನ್ನು ಮಾಡಬೇಕೆಂಬ ಮನಸ್ಸು ನನಗಿದ್ದರೂ ಅದನ್ನು ಮಾಡಲು ನನ್ನಿಂದ ಆಗುತ್ತಿಲ್ಲ.
19 : ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಬಯಸದ ಕೆಟ್ಟದ್ದನ್ನೇ ಮಾಡುವವನಾಗಿದ್ದೇನೆ.
20 : ನಾನು ಬಯಸದೆ ಇರುವುದನ್ನೇ ಮಾಡಿದರೆ ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು.
21 : ನಾನು ಒಳಿತನ್ನು ಮಾಡಬಯಸಿದರೂ ಕೇಡು ನನ್ನ ಕೈಬಿಡುತ್ತಿಲ್ಲ. ಇದೇ ಒಂದು ನಿಯಮವಾಗಿ ನನ್ನಲ್ಲಿ ಕಂಡುಬರುತ್ತದೆ.
22 : ನನ್ನ ಅಂತರಂಗದಲ್ಲಿ ದೈವನಿಯಮವನ್ನು ಕುರಿತು ಆನಂದಿಸುತ್ತೇನೆ.
23 : ನನ್ನ ಇಂದ್ರಿಯಗಳಲ್ಲಿಯಾದರೋ ಬೇರೊಂದು ನಿಯಮವನ್ನು ಕಾಣುತ್ತೇನೆ. ಇದು ನನ್ನ ಅಂತರಂಗ ನಿಯಮಕ್ಕೆ ತದ್ವಿರುದ್ಧವಾಗಿ ಕಾದಾಡುತ್ತದೆ; ನನ್ನ ಇಂದ್ರಿಯಗಳಲ್ಲಿ ನೆಲೆಗೊಂಡಿರುವ ಪಾಪನಿಯಮಕ್ಕೆ ನನ್ನನ್ನು ಕೈದಿಯನ್ನಾಗಿಸುತ್ತದೆ.
24 : ಅಯ್ಯೋ, ನಾನೆಂಥ ನಿರ್ಭಾಗ್ಯನು! ಸಾವಿನ ದವಡೆಗೆ ಸಿಕ್ಕಿರುವ ಈ ಶರೀರದಿಂದ ನನ್ನನ್ನು ಬಿಡಿಸುವವರು ಯಾರು?
25 : ದೇವರೇ; ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಕೃತಜ್ಞತೆ ಸಲ್ಲಲಿ !
ನನ್ನಷ್ಟಕ್ಕೆ ನಾನೇ ದೇವರ ನಿಯಮವನ್ನು ಮನಃಪೂರ್ವಕವಾಗಿ ಪಾಲಿಸಲು ಬಯಸುತ್ತೇನೆ. ನನ್ನ ಈ ದೇಹದಲ್ಲಾದರೋ ಪಾಪದ ನಿಯಮಕ್ಕೆ ಬದ್ಧನಾಗಿದ್ದೇನೆ.