1 :
ಹಾಗಾದರೆ ನಾವು ಏನು ಹೇಳೋಣ? ದೈವಾನುಗ್ರಹವು ಹೆಚ್ಚುವಂತೆ ನಾವು ಪಾಪದಲ್ಲೇ ನೆಲೆಗೊಂಡು ಇರೋಣವೇ?
2 : ಖಂಡಿತವಾಗಿಯೂ ಕೂಡದು. ಪಾಪದ ಪಾಲಿಗೆ ಸತ್ತಿರುವ ನಾವು ಅದರಲ್ಲೇ ಜೀವಿಸುವುದು ಹೇಗೆ ತಾನೆ ಸಾಧ್ಯ?
3 : ಕ್ರಿಸ್ತಯೇಸುವಿನವರಾಗಲು ದೀಕ್ಷಾಸ್ನಾನ ಹೊಂದಿರುವ ನಾವು, ಅವರ ಮರಣದಲ್ಲಿ ಪಾಲುಗಾರರಾಗಲು ದೀಕ್ಷಾಸ್ನಾನ ಪಡೆದೆವು ಎಂಬುದು ನಿಮಗೆ ತಿಳಿಯದೆ?
4 : ಹೀಗಿರಲಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡಾಗ ಅವರ ಮರಣದಲ್ಲಿ ಪಾಲುಗಾರರಾದ ನಮಗೆ ಅವರೊಡನೆ ಸಮಾಧಿಯೂ ಆಯಿತು. ಆದುದರಿಂದ ತಂದೆಯ ಮಹಿಮಾಶಕ್ತಿಯಿಂದ ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದಂತೆಯೇ ನಾವು ಸಹ ಹೊಸ ಜೀವವನ್ನು ಹೊಂದಿ ಬಾಳುತ್ತೇವೆ.
5 : ಅವರು ಮರಣ ಹೊಂದಿದಂತೆ ನಾವೂ ಅವರೊಂದಿಗೆ ಐಕ್ಯವಾಗಿ ಮರಣವನ್ನು ಹೊಂದುತ್ತೇವೆ. ಅಂತೆಯೇ, ಅವರು ಪುನರುತ್ಥಾನ ಆದಂತೆ ನಾವೂ ಅವರೊಡನೆ ಐಕ್ಯವಾಗಿ ಪುನರುತ್ಥಾನ ಹೊಂದುತ್ತೇವೆ.
6 : ನಮಗೆ ತಿಳಿದಿರುವಂತೆ ಪಾಪಾಧೀನವಾದ ನಮ್ಮ ಸ್ವಭಾವವು ನಾಶವಾಗುವಂತೆಯೂ ಇನ್ನು ಮುಂದೆ ನಾವು ಪಾಪಕ್ಕೆ ದಾಸರಾಗಿರದಂತೆಯೂ ಯೇಸುಕ್ರಿಸ್ತರೊಡನೆ ನಮ್ಮ ಹಳೆಯ ಸ್ವಭಾವವನ್ನು ಶಿಲುಬೆಗೆ ಜಡಿಯಲಾಗಿದೆ.
7 : ಹೀಗೆ ಸತ್ತವನು ಪಾಪಬಂಧದಿಂದ ಬಿಡುಗಡೆ ಹೊಂದಿದವನು.
8 : ಕ್ರಿಸ್ತ ಯೇಸುವಿನೊಂದಿಗೆ ನಾವು ಮರಣ ಹೊಂದಿದ್ದರೆ ಅವರೊಡನೆ ನಾವೂ ಜೀವಿಸುತ್ತೇವೆ; ಇದೇ ನಮ್ಮ ವಿಶ್ವಾಸ.
9 : ಯೇಸುಕ್ರಿಸ್ತರನ್ನು ಮರಣದಿಂದ ಎಬ್ಬಿಸಲಾಯಿತು ಎಂಬುದನ್ನು ನಾವು ಬಲ್ಲೆವು. ಆದ್ದರಿಂದ ಅವರು ಇನ್ನು ಎಂದಿಗೂ ಸಾಯುವುದಿಲ್ಲ; ಸಾವಿಗೆ ಅವರ ಮೇಲೆ ಯಾವ ಅಧಿಕಾರವೂ ಇಲ್ಲ.
10 : ಏಕೆಂದರೆ, ಅವರು ಪಾಪದ ಪಾಲಿಗೆ ಒಂದೇ ಸಾರಿಗೆ ಮಾತ್ರವಲ್ಲ, ಎಂದೆಂದಿಗೂ ಸತ್ತವರು. ಅವರು ಈಗ ಜೀವಿಸುವುದು ದೇವರಿಗಾಗಿಯೇ.
11 : ಅಂತೆಯೇ ನೀವೂ ಸಹ ಪಾಪದ ಪಾಲಿಗೆ ಸತ್ತವರೆಂದೂ ದೇವರಿಗಾಗಿ ಮಾತ್ರ ಯೇಸುಕ್ರಿಸ್ತರಲ್ಲಿ ಜೀವಿಸುವವರೆಂದೂ ಪರಿಗಣಿಸಿರಿ.
12 : ಆದ್ದರಿಂದ ದೈಹಿಕ ದುರಿಚ್ಛೆಗಳಿಗೆ ದಾಸರಾಗಿ ನೀವು ನಡೆಯದಂತೆ, ನಿಮ್ಮ ನಶ್ವರ ಶರೀರಗಳ ಮೇಲೆ ಪಾಪವು ತನ್ನ ದಬ್ಬಾಳಿಕೆಯನ್ನು ಇನ್ನೆಂದಿಗೂ ನಡೆಸದಿರಲಿ.
13 : ನಿಮ್ಮ ದೇಹದ ಯಾವುದೇ ಅಂಗವು ದುಷ್ಕøತ್ಯವನ್ನೆಸಗುವ ಸಾಧನವಾಗುವಂತೆ ಪಾಪದ ಕಾರ್ಯಕ್ಕೆ ಅದನ್ನು ಒಪ್ಪಿಸದಿರಿ. ಬದಲಾಗಿ ಸತ್ತು ಜೀವಕ್ಕೆ ಬಂದವರಂತೆ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳಿರಿ; ನಿಮ್ಮ ಅಂಗಗಳನ್ನು ಸತ್ಕಾರ್ಯ ಸಾಧನೆಗಳನ್ನಾಗಿ ದೇವರಿಗೆ ಒಪ್ಪಿಸಿಕೊಡಿರಿ.
14 : ಏಕೆಂದರೆ ಪಾಪವು ಇನ್ನೆಂದಿಗೂ ನಿಮ್ಮ ಮೇಲೆ ದಬ್ಬಾಳಿಕೆ ನಡೆಸಲಾಗದು; ನೀವಿನ್ನು ಧರ್ಮಶಾಸ್ತ್ರಕ್ಕೆ ಅಧೀನರಲ್ಲ. ದೈವಾನುಗ್ರಹಕ್ಕೆ ಮಾತ್ರ ಅಧೀನರು.
15 :
ಹಾಗಾದರೆ ಏನು ಹೇಳೋಣ? ಧರ್ಮಶಾಸ್ತ್ರಕ್ಕೆ ಅಧೀನರಾಗಿರದೆ ದೈವಾನುಗ್ರಹಕ್ಕೆ ಅಧೀನರಾಗಿರುವ ನಾವು ಪಾಪಮಾಡುತ್ತಲೇ ಜೀವಿಸೋಣವೆ? ಸರ್ವಥಾ ಇಲ್ಲ.
16 : ಯಾರ ಕೈ ಕೆಳಗೆ ಗುಲಾಮರಾಗಿರಲು ನಿಮ್ಮನ್ನೇ ಒಪ್ಪಿಸಿಕೊಳ್ಳುತ್ತೀರೋ ಅವರಿಗೆ ನೀವು ಶರಣಾಗುತ್ತೀರಿ. ನೀವು ಪಾಪಕ್ಕೆ ಗುಲಾಮರಾದರೆ ಮರಣವೇ ನಿಮಗೆ ಗತಿ; ದೇವರಿಗೆ ಶರಣಾದರೆ ಸತ್ಸಂಬಂಧವೇ ಅದರ ಸತ್ಪರಿಣಾಮ.
17 : ದೇವರಿಗೆ ಸ್ತುತಿಸ್ತೋತ್ರ ಸಲ್ಲಲಿ. ಏಕೆಂದರೆ, ಹಿಂದೊಮ್ಮೆ ನೀವು ಪಾಪಕ್ಕೆ ಗುಲಾಮರಾಗಿದ್ದರೂ ನಿಮಗೆ ಕಲಿಸಿದ ಬೋಧನೆಯನ್ನು ನೀವು ಮನಃಪೂರ್ವಕವಾಗಿ ಅಂಗೀಕರಿಸಿ ವಿಧೇಯರಾದಿರಿ;
18 : ಪಾಪಬಂಧನದಿಂದ ಬಿಡುಗಡೆ ಹೊಂದಿ ದೇವ ಸಂಬಂಧಕ್ಕೆ ಒಳಗಾದಿರಿ.
19 : ಇದನ್ನು ಅರ್ಥಮಾಡಿಕೊಳ್ಳಲು ನೀವು ಅಶಕ್ತರಾಗಿರುವುದರಿಂದ ನಾನು ಹೀಗೆ ಸಾಮಾನ್ಯ ರೀತಿಯಲ್ಲಿ ಮಾತನಾಡುತ್ತಿದ್ದೇನೆ. ಹಿಂದೊಮ್ಮೆ ನೀವು ನಿಮ್ಮ ಇಂದ್ರಿಯಗಳನ್ನು ಹೆಚ್ಚುಹೆಚ್ಚಾಗಿ ಅಶ್ಲೀಲತೆಗೂ ಅಕ್ರಮಕ್ಕೂ ಗುಲಾಮರನ್ನಾಗಿಸಿದಿರಿ; ಈಗಲಾದರೋ ಪರಿಶುದ್ಧತೆಗೂ ಸತ್ಸಂಬಂಧಕ್ಕೂ ನಿಮ್ಮ ಇಂದ್ರಿಯಗಳನ್ನು ಅಧೀನರಾಗಿಸಿರಿ.
20 : ನೀವು ಪಾಪಕ್ಕೆ ಗುಲಾಮರಾಗಿದ್ದಾಗ ದೇವಸಂಬಂಧಕ್ಕೆ ಒಳಗಾಗಿರಲಿಲ್ಲ.
21 : ಯಾವ ಕೃತ್ಯಗಳ ವಿಷಯದಲ್ಲಿ ಈಗ ನೀವು ನಾಚಿಕೆಪಡುತ್ತೀರೋ ಅವುಗಳನ್ನು ನೀವು ಹಿಂದೆ ಮಾಡುತ್ತಾ ಬಂದಿರಿ. ಅವುಗಳಿಂದ ನಿಮಗೆ ದೊರೆತ ಪ್ರತಿಫಲವಾದರೂ ಏನು? ಮೃತ್ಯುವೇ ಅವುಗಳ ಅಂತ್ಯ ಫಲ.
22 : ಆದರೆ ನೀವು ಪಾಪದಿಂದ ಬಿಡುಗಡೆ ಹೊಂದಿರುವಿರಿ. ದೇವರಿಗೆ ದಾಸರಾಗಿರುವಿರಿ. ಇದರಿಂದ ನಿಮಗೆ ಸಿಕ್ಕಿರುವ ಪ್ರತಿಫಲ ಪರಿಶುದ್ಧ ಜೀವನ; ಅಂತಿಮವಾಗಿ ಅಮರ ಜೀವನ. 23ಮರಣವೇ ಪಾಪದ ವೇತನ; ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ಇರುವ ನಿತ್ಯಜೀವವೇ ದೇವರ ಉಚಿತ ವರದಾನ.