Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ರೋಮ


1 : ಹಾಗಾದರೆ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ?
2 : ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರೆ ಆಗ ಹೊಗಳಿಕೊಳ್ಳುವುದಕ್ಕೆ ಆತನಿಗೆ ಆಸ್ಪದವಿರುತ್ತಿತ್ತು; ಆದರೆ ಅದು ದೇವರ ಸಾನ್ನಿಧ್ಯದಲ್ಲಿ ಅಲ್ಲ.
3 : ಏಕೆಂದರೆ, ಪವಿತ್ರ ಗ್ರಂಥದಲ್ಲಿ ಹೀಗೆ ಹೇಳಿದೆ: “ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು; ಆತನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ದೇವರು ಪರಿಗಣಿಸಿದರು.”
4 : ದುಡಿಯುವವನಿಗೆ ದೊರಕುವ ಕೂಲಿ ಉಚಿತ ದಾನವಲ್ಲ; ಅದು ಅವನ ಕಷ್ಟಾರ್ಜಿತ ಸಂಪಾದನೆ.
5 : ಆದರೆ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರು, ಅಧರ್ಮಿಗಳನ್ನು ಸದ್ಧರ್ಮಿಗಳನ್ನಾಗಿಸುವ ದೇವರಲ್ಲಿ ವಿಸ್ವಾಸವಿಡುತ್ತಾರೋ, ಅಂಥವರ ವಿಶ್ವಾಸವನ್ನು ದೇವರು ಅಂಗೀಕರಿಸಿ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ.
6 : ಅಂತೆಯೇ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರು ದೇವರೊಡನೆ ಸತ್ಸಂಬಂಧದಲ್ಲಿ ಇರುತ್ತಾರೋ ಅಂಥವರು ಭಾಗ್ಯವಂತರು! ಇದನ್ನು ಕುರಿತು ದಾವೀದನು ಹೀಗೆನ್ನುತ್ತಾನೆ:
7 : “ಯಾರ ಅಪರಾಧಗಳು ಪರಿಹರಿಸ ಲಾಗಿವೆಯೋ ಯಾರ ಪಾಪಗಳು ಕ್ಷಮಿಸಲಾಗಿವೆಯೋ ಅವರು ಭಾಗ್ಯವಂತರು!
8 : ಯಾರ ಪಾಪವನ್ನು ಸರ್ವೇಶ್ವರ ಲೆಕ್ಕಿಸುವುದಿಲ್ಲವೋ ಆತನು ಭಾಗ್ಯವಂತನು!”
9 : ಈ ಆಶೀರ್ವಚನವು ಸುನ್ನತಿ ಮಾಡಿಸಿಕೊಂಡವರಿಗೆ ಮಾತ್ರ ಅನ್ವಯಿಸುತ್ತದೆಯೇ? ಇಲ್ಲ, ಸುನ್ನತಿ ಮಾಡಿಸಿಕೊಳ್ಳದವರಿಗೂ ಅನ್ವಯಿಸುತ್ತದೆ. ಪವಿತ್ರಗ್ರಂಥದಲ್ಲಿ ಹೇಳಿರುವಂತೆ: “ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು; ದೇವರು ಆತನನ್ನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು.”
10 : ಹೀಗೆ ಪರಿಗಣಿಸಿದ್ದು ಯಾವಾಗ? ಅಬ್ರಹಾಮನಿಗೆ ಸುನ್ನತಿ ಆಗುವುದಕ್ಕೆ ಮೊದಲೋ ಅಥವಾ ಅನಂತರವೊ? ಆತನು ಸುನ್ನತಿ ಮಾಡಿಸಿಕೊಳ್ಳುವ ಮೊದಲೇ ಹೀಗೆ ಕರುಣಿಸಲಾಯಿತು; ಸುನ್ನತಿ ಮಾಡಿಸಿಕೊಂಡ ನಂತರವಲ್ಲ.
11 : ತಾನು ಸುನ್ನತಿ ಮಾಡಿಸಿಕೊಳ್ಳುವ ಮೊದಲೇ ಅಬ್ರಹಾಮನು ಇಟ್ಟ ವಿಶ್ವಾಸದಿಂದಾಗಿ ದೇವರು ಆತನನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಂಡರು. ಅನಂತರವೇ ಆತನು ಸುನ್ನತಿಯನ್ನು ಗುರುತಾಗಿಯೂ ಮುದ್ರೆಯನ್ನಾಗಿಯೂ ಪಡೆದನು. ಹೀಗೆ, ಸುನ್ನತಿ ಮಾಡಿಸಿಕೊಳ್ಳದಿದ್ದರೂ ವಿಶ್ವಾಸಿಸುವ ಎಲ್ಲರಿಗೆ ದೇವರೊಡನೆ ಸತ್ಸಂಬಂಧ ದೊರಕುವಂತೆ ಅಬ್ರಹಾಮನು ಮೂಲಪಿತನಾದನು.
12 : ಸುನ್ನತಿ ಮಾಡಿಸಿಕೊಂಡವರಿಗೆ ಅಬ್ರಹಾಮನು ಮೂಲಪಿತನಾಗಿರುವುದು ಕೇವಲ ಸುನ್ನತಿ ಪಡೆದುದರ ಕಾರಣದಿಂದಲ್ಲ. ಆದರೆ ಅವರು ಸುನ್ನತಿ ಮಾಡಿಸಿಕೊಳ್ಳುವ ಮೊದಲೇ ಆತನು ಕೈಗೊಂಡ ವಿಶ್ವಾಸಮಾರ್ಗವನ್ನು ಅನುಸರಿಸಿದ್ದರಿಂದ.
13 : ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೇ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ.
14 : ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ಮಾತ್ರ ದೇವರ ವಾಗ್ದಾನಕ್ಕೆ ಬಾಧ್ಯತೆ ದೊರಕುವುದಾದರೆ, ಮಾನವನ ವಿಶ್ವಾಸವೂ ವ್ಯರ್ಥ; ದೇವರ ವಾಗ್ದಾನವೂ ನಿರರ್ಥಕ.
15 : ಧರ್ಮಶಾಸ್ತ್ರವು ದೇವರ ಕೋಪವನ್ನು ಬರಮಾಡುತ್ತದೆ. ಧರ್ಮಶಾಸ್ತ್ರವೇ ಇಲ್ಲದೆ ಹೋಗಿದ್ದರೆ ಅದರ ಉಲ್ಲಂಘನೆಯೂ ಇರುತ್ತಿರಲಿಲ್ಲ.
16 : ದೈವವಾಗ್ದಾನಕ್ಕೆ ವಿಶ್ವಾಸವೇ ಆಧಾರ. ಇವೆಲ್ಲಕ್ಕೂ ದೈವಾನುಗ್ರಹವೇ ಮೂಲ. ಇವು ಅಬ್ರಹಾಮನ ಸಂತತಿಯವರಿಗೆ, ಅಂದರೆ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಿಗೆ ಮಾತ್ರವಲ್ಲ, ಅಬ್ರಹಾಮನಂತೆ ದೇವರಲ್ಲಿ ವಿಶ್ವಾಸ ಇಟ್ಟವರೆಲ್ಲರಿಗೂ ಖಚಿತವಾಗಿ ದೊರೆಯುತ್ತದೆ. ಏಕೆಂದರೆ, ಅಬ್ರಹಾಮನೇ ನಮ್ಮೆಲ್ಲರಿಗೂ ಮೂಲಪಿತ.
17 : “ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತನನ್ನಾಗಿ ನೇಮಿಸಿದ್ದೇನೆ,” ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವಂತಗೊಳಿಸುವವರೂ ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವರೂ ಆದ ದೇವರಲ್ಲಿ ಆತನು ವಿಸ್ವಾಸವಿಟ್ಟನು. ಆದ್ದರಿಂದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿಂದಲೇ ಪಡೆದನು.
18 : ಆತನ ವಿಶ್ವಾಸ ಮತ್ತು ಭರವಸೆ ಎಷ್ಟರಮಟ್ಟಿಗೆ ಇತ್ತೆಂದರೆ, ಈ ದೈವವಾಗ್ದಾನವು ನೆರವೇರುವ ನಿರೀಕ್ಷೆ ಇಲ್ಲದಿದ್ದರೂ ಆತನು ದೇವರನ್ನು ನಂಬಿದನು. ಆದುದರಿಂದಲೇ “ನಿನ್ನ ಸಂತಾನವು ನಕ್ಷತ್ರಗಳಷ್ಟು ಅಸಂಖ್ಯಾತ ಆಗುವುದು,” ಎಂಬ ಹೇಳಿಕೆಯಂತೆ ಆತನು ಅನೇಕ ಜನಾಂಗಗಳಿಗೆ ಮೂಲಪಿತನಾದನು.
19 : ಆಗ ಆತನಿಗೆ ಹೆಚ್ಚುಕಡಿಮೆ ನೂರು ವರ್ಷ ಪ್ರಾಯವಾಗಿತ್ತು. ಆತನ ದೇಹವು ದುರ್ಬಲವಾಗಿತ್ತು. ಸಾರಳಿಗೆ ಗರ್ಭಕಾಲವು ಕಳೆದುಹೋಗಿತ್ತು. ಆದರೂ ಆತನ ವಿಶ್ವಾಸ ಕುಂದಲೇ ಇಲ್ಲ.
20 : ದೇವರ ವಾಗ್ದಾನದಲ್ಲಿ ಆತನು ಸಂಶಯಪಡಲಿಲ್ಲ. ಅಪನಂಬಿಕೆಯಿಂದ ಚಂಚಲಚಿತ್ತನಾಗಲೂ ಇಲ್ಲ. ಬದಲಾಗಿ ಆತನ ವಿಶ್ವಾಸ ವೃದ್ಧಿಯಾಯಿತು. ಆತನು ದೇವರನ್ನು ಹೊಗಳಿ ಕೊಂಡಾಡಿದನು.
21 : ದೇವರು ತಾವು ವಾಗ್ದಾನ ಮಾಡಿದ್ದನ್ನು ಖಂಡಿತವಾಗಿಯೂ ನೆರವೇರಿಸಬಲ್ಲರೆಂದು ದೃಢವಾಗಿ ನಂಬಿದನು.
22 : ಆದ್ದರಿಂದಲೇ, “ದೇವರು ಆತನನ್ನು ತಮ್ಮೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು,” ಎಂದು ಲಿಖಿತವಾಗಿದೆ.
23 : ‘ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿಸಿದರು’ ಎಂಬ ಮಾತು ಆತನಿಗೆ ಮಾತ್ರವಲ್ಲ, ನಮಗೂ ಅನ್ವಯಿಸುತ್ತದೆ.
24 : ನಮ್ಮ ಪ್ರಭುವಾದ ಯೇಸುವನ್ನು ಮರಣದಿಂದ ಎಬ್ಬಿಸಿದ ದೇವರನ್ನು ವಿಶ್ವಾಸಿಸುವ ನಾವು ಸಹ ಅವರೊಂದಿಗೆ ಸತ್ಸಂಬಂಧದಲ್ಲಿ ಇರುವುದಾಗಿ ಪರಿಗಣಿತರಾಗುತ್ತೇವೆ.
25 : ನಮ್ಮ ಪಾಪಗಳ ನಿಮಿತ್ತ ಯೇಸುವನ್ನು ಮರಣಕ್ಕೆ ಗುರಿಪಡಿಸಲಾಯಿತು. ನಮ್ಮನ್ನು ದೇವರೊಡನೆ ಸತ್ಸಂಬಂಧದಲ್ಲಿ ಇರಿಸುವುದಕ್ಕಾಗಿ ಅವರು ಪುನರುತ್ಥಾನ ಹೊಂದಿದರು.

· © 2017 kannadacatholicbible.org Privacy Policy