Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ರೋಮ


1 : ಇತರರು ದೋಷಿಗಳೆಂದು ತೀರ್ಪುನೀಡುವ ಮಾನವನೇ, ನೀನು ಯಾರೇ ಆಗಿರು, ನೀನು ಮಾತ್ರ ನಿರ್ದೋಷಿಯೆಂದು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಇತರರಿಗೆ ತೀರ್ಪು ನೀಡುವ ನೀನು ಅವರು ಮಾಡುವ ತಪ್ಪುಗಳನ್ನು ನೀನೂ ಮಾಡಿದೆಯಾದರೆ, ನಿನ್ನನ್ನು ನೀನೇ ದೋಷಿಯೆಂದು ತೀರ್ಪು ಮಾಡಿಕೊಂಡ ಹಾಗಾಯಿತು
2 : ಇಂಥ ಅಪರಾಧಗಳನ್ನು ಮಾಡುವವರ ಬಗ್ಗೆ ದೇವರು ನೀಡುವ ತೀರ್ಪು ನ್ಯಾಯಬದ್ಧವಾದುದು ಎಂಬುದನ್ನು ನಾವು ಬಲ್ಲೆವು.
3 : ಹೀಗಿರುವಾಗ, ಇತರರಿಗೆ ಯಾವ ಅಪರಾಧಕ್ಕಾಗಿ ತೀರ್ಪುನೀಡಿದೆಯೋ ಅಂಥ ಅಪರಾಧವನ್ನೇ ನೀನೂ ಮಾಡುತ್ತಿರುವೆಯಲ್ಲಾ! ದೇವರು ಕೊಡುವ ನ್ಯಾಯತೀರ್ಪಿನಿಂದ ನೀನು ಮಾತ್ರ ತಪ್ಪಿಸಿಕೊಳ್ಳುವಿಯೆಂದು ನೆನೆಸುತ್ತೀಯೋ?
4 : ಅಥವಾ ದೇವರ ಅಪಾರ ದಯೆಯನ್ನೂ ಶಾಂತಿಸಹನೆಯನ್ನೂ ಉಪೇಕ್ಷಿಸುತ್ತೀಯೋ? ನೀನು ದೇವರಿಗೆ ಅಭಿಮುಖನಾಗಬೇಕೆಂಬ ಉದ್ದೇಶದಿಂದಲೇ ಅವರು ನಿನ್ನ ಮೇಲೆ ಅಷ್ಟು ದಯೆದಾಕ್ಷಿಣ್ಯದಿಂದ ಇದ್ದಾರೆ ಎಂಬುದು ನಿನಗೆ ತಿಳಿಯದೋ?
6 : ಪ್ರತಿಯೊಬ್ಬನಿಗೂ ದೇವರು ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುತ್ತಾರೆ.
7 : ಸತ್ಕಾರ್ಯಗಳಲ್ಲಿ ನಿರತರಾಗಿದ್ದು, ಮಹಿಮೆಯನ್ನು, ಗೌರವವನ್ನು, ಅಮರತ್ವವನ್ನು ಅರಸುತ್ತಾ ಬಾಳುವವರಿಗೆ ದೇವರು ನಿತ್ಯಜೀವವನ್ನು ದಯಪಾಲಿಸುತ್ತಾರೆ.
8 : ಸ್ವಾರ್ಥಸಾಧಕರಾಗಿದ್ದು, ಸತ್ಯಕ್ಕೆ ಮಣಿಯದೆ, ದುರ್ಮಾರ್ಗವನ್ನೇ ಅವಲಂಬಿಸಿ ನಡೆಯುವವರ ಮೇಲೆ ದೇವರ ಕೋಪವೂ ಆಕ್ರೋಶವೂ ಎರಗುತ್ತವೆ.
9 : ಯೆಹೂದ್ಯರನ್ನು ಮೊದಲ್ಗೊಂಡು, ಇತರರಿಗೂ ಪಾಪಕೃತ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಕಷ್ಟಸಂಕಟಗಳು ಕಾದಿರುತ್ತವೆ.
10 : ಅಂತೆಯೇ, ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ಸತ್ಕಾರ್ಯಗಳನ್ನು ಮಾಡುವ ಪ್ರತಿಯೊಬ್ಬರಿಗೂ ಮಹಿಮೆ, ಗೌರವ, ಶಾಂತಿ ಲಭಿಸುತ್ತವೆ.
11 : ದೇವರು ಪಕ್ಷಪಾತಿ ಅಲ್ಲ.
12 : ಮೋಶೆಯ ಧರ್ಮಶಾಸ್ತ್ರದ ಅರಿವಿಲ್ಲದೆ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಒಳಗಾಗದೆಯೇ ನಾಶವಾಗುತ್ತಾರೆ. ಆ ಧರ್ಮಶಾಸ್ತ್ರದ ಅರಿವಿದ್ದೂ ಪಾಪಮಾಡುವವರು ಆ ಶಾಸ್ತ್ರದ ತೀರ್ಪಿಗೆ ಗುರಿಯಾಗುತ್ತಾರೆ.
13 : ಧರ್ಮಶಾಸ್ತ್ರವನ್ನು ಆಲಿಸಿದ ಮಾತ್ರಕ್ಕೆ ಯಾರೂ ದೇವರೊಡನೆ ಸತ್ಸಂಬಂಧವನ್ನು ಪಡೆಯಲು ಸಾಧ್ಯವಿಲ್ಲ. ಅದನ್ನು ಆಲಿಸುವುದರ ಜೊತೆಗೆ ಪಾಲಿಸಲೂ ಬೇಕು.
14 : ಯೆಹೂದ್ಯರಲ್ಲದವರಿಗೆ, ಮೋಶೆಯ ಧರ್ಮಶಾಸ್ತ್ರ ಇರುವುದಿಲ್ಲ. ಅವರು ಅದರ ವಿಧಿನಿಯಮಗಳನ್ನು ಸ್ವಾಭಾವಿಕವಾಗಿ ಅನುಸರಿಸಿದ್ದೇ ಆದರೆ, ಅವರಿಗೆ ಧರ್ಮಶಾಸ್ತ್ರವಿಲ್ಲದಿದ್ದರೂ ಅವರ ಅಂತರಂಗವೇ ಅವರಿಗೆ ಧರ್ಮಶಾಸ್ತ್ರವಾಗುತ್ತದೆ.
15 : ಧರ್ಮಶಾಸ್ತ್ರದ ವಿಧಿನಿಯಮಗಳು ಅವರ ಹೃದಯಗಳಲ್ಲಿ ಲಿಖಿತವಾಗಿವೆಯೆಂದು ಅವರ ನಡತೆಯಿಂದಲೇ ವೇದ್ಯವಾಗುತ್ತದೆ. ಇದು ಸತ್ಯವೆಂಬುದನ್ನು ಅವರ ಮನಸ್ಸಾಕ್ಷಿಯು ಖಚಿತಪಡಿಸುತ್ತದೆ. ಅವರ ಅಂತಃಪ್ರಜ್ಞೆಯೇ ಅವರನ್ನು ದೋಷಿಗಳೆಂದೋ ಇಲ್ಲವೆ ನಿರ್ದೋಷಿಗಳೆಂದೋ ತೀರ್ಮಾನಿಸುತ್ತದೆ.
16 : ನಾನು ಬೋಧಿಸುವ ಶುಭಸಂದೇಶದ ಪ್ರಕಾರ, ದೇವರು ಯೇಸುಕ್ರಿಸ್ತರ ಮುಖಾಂತರ ಮಾನವನ ಗುಟ್ಟುಗಳನ್ನು ರಟ್ಟುಮಾಡಿ, ತೀರ್ಪುಕೊಡುವ ದಿನ ಬಂದೇ ಬರುತ್ತದೆ. ಆ ದಿನ ಇದೆಲ್ಲಾ ಸಂಭವಿಸುತ್ತದೆ.
17 : “ನಾನು ಯೆಹೂದ್ಯನು” ಎಂದು ಹೇಳಿಕೊಳ್ಳುತ್ತಿರುವ ನಿನ್ನ ವಿಷಯವಾದರೂ ಏನು? ಧರ್ಮಶಾಸ್ತ್ರವನ್ನು ಆಧಾರವಾಗಿಟ್ಟುಕೊಂಡು ದೇವರಿಗೆ ಸೇರಿದವನೆಂದು ಕೊಚ್ಚಿಕೊಳ್ಳುತ್ತೀಯೆ;
18 : ದೇವರ ಚಿತ್ತವನ್ನು ಅರಿತಿರುವುದಾಗಿ ನೆನೆಸುತ್ತೀಯೆ; ಉತ್ತಮವಾದುದನ್ನು ಆರಿಸಿಕೊಳ್ಳಲು ಧರ್ಮಶಾಸ್ತ್ರದಿಂದ ಕಲಿತುಕೊಂಡಿರುವುದಾಗಿ ಹೇಳಿಕೊಳ್ಳುತ್ತೀಯೆ;
19 : ನೀನು ಕುರುಡರಿಗೆ ದಾರಿತೋರಿಸುವವನೂ ಕತ್ತಲೆಯಲ್ಲಿರುವವರಿಗೆ ಬೆಳಕೂ ಬುದ್ಧಿಹೀನರಿಗೆ ಬೋಧಕನೂ
20 : ಮಕ್ಕಳಿಗೆ ಶಿಕ್ಷಕನೂ ಆಗಿರುವುದಾಗಿ ದೃಢವಾಗಿ ನಂಬಿಕೊಂಡಿದ್ದೀಯೆ; ಧರ್ಮಶಾಸ್ತ್ರದಲ್ಲಿ ಜ್ಞಾನ ಮತ್ತು ಸತ್ಯ ಮೇಳೈಸಿರುವುದಾಗಿ ಭಾವಿಸುತ್ತೀಯೆ.
21 : ಹೀಗೆ, ಇತರರಿಗೆ ಉಪದೇಶಿಸುವ ನೀನು, ನಿನಗೆ ನೀನೇ ಉಪದೇಶ ಮಾಡಿಕೊಳ್ಳಬಾರದೇನು? “ಕದಿಯಬಾರದು” ಎಂದು ಬೋಧಿಸುವ ನೀನೇ ಕಳ್ಳತನ ಮಾಡುತ್ತೀಯೇನು?
22 : “ವ್ಯಭಿಚಾರ ಮಾಡಬಾರದು” ಎಂದು ಹೇಳುವ ನೀನೇ ವ್ಯಭಿಚಾರ ಮಾಡುತ್ತೀಯೇನು? ವಿಗ್ರಹಗಳನ್ನು ವಿರೋಧಿಸುವ ನೀನು ದೇವಾಲಯವನ್ನೇ ದೋಚುತ್ತೀಯೇನು?
23 : ದೇವರಿಂದಲೇ ನಿಯಮಗಳನ್ನು ಪಡೆದಿರುವುದಾಗಿ ಕೊಚ್ಚಿಕೊಳ್ಳುವ ನೀನು ಆ ನಿಯಮಗಳನ್ನೇ ಉಲ್ಲಂಘಿಸಿ ದೇವರಿಗೆ ದ್ರೋಹ ಬಗೆಯುತ್ತೀಯೇನು?
24 : ಈ ಕಾರಣದಿಂದ, “ನಿಮ್ಮ ದೆಸೆಯಿಂದಲೇ ಯೆಹೂದ್ಯರಲ್ಲದವರು ದೇವರ ಹೆಸರನ್ನು ದೂಷಿಸುತ್ತಾರೆ,” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
25 : ನೀನು ಧರ್ಮಶಾಸ್ತ್ರಕ್ಕೆ ವಿಧೇಯನಾಗಿ ನಡೆದರೆ, ನೀನು ಮಾಡಿಸಿಕೊಂಡಿರುವ ಸುನ್ನತಿಗೆ ಅರ್ಥವಿದೆ. ಆದರೆ ನಿನ್ನ ನಡತೆ ಧರ್ಮಶಾಸ್ತ್ರಕ್ಕೆ ವ್ಯತಿರಿಕ್ತವಾಗಿದ್ದರೆ ನೀನು ಸುನ್ನತಿ ಮಾಡಿಸಿಕೊಂಡಿದ್ದರೂ ಮಾಡಿಸಿಕೊಳ್ಳದಂತೆಯೇ ಸರಿ.
26 : ಸುನ್ನತಿ ಮಾಡಿಸಿಕೊಳ್ಳದ ಮತ್ತೊಬ್ಬನು ಧರ್ಮಶಾಸ್ತ್ರದ ವಿಧಿಗಳನ್ನು ಪಾಲಿಸಿಕೊಂಡು ಬಂದವನಾಗಿದ್ದರೆ, ದೇವರು ಅವನನ್ನು ಸುನ್ನತಿ ಮಾಡಿಸಿಕೊಂಡವನಂತೆ ಪರಿಗಣಿಸುವುದಿಲ್ಲವೆ?
27 : ನೀವು ಸುನ್ನತಿ ಮಾಡಿಸಿಕೊಂಡಿದ್ದೀರಿ; ಲಿಖಿತ ಧರ್ಮಶಾಸ್ತ್ರವನ್ನು ಇಟ್ಟುಕೊಂಡಿದ್ದೀರಿ; ಆದರೂ ಅದನ್ನು ವಿೂರಿನಡೆಯುತ್ತೀರಿ. ಹೀಗಿರಲಾಗಿ, ಶಾರೀರಿಕವಾಗಿ ಸುನ್ನತಿಯನ್ನು ಮಾಡಿಸಿಕೊಳ್ಳದಿದ್ದರೂ ಸ್ವಾಭಾವಿಕವಾಗಿ ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರು ಸುನ್ನತಿ ಮಾಡಿಸಿಕೊಂಡಿರುವ ನಿಮಗೆ ತೀರ್ಪುಕೊಡುತ್ತಾರೆ.
28 : ಬಾಹ್ಯಾಚರಣೆಯಲ್ಲಿ ಮಾತ್ರ ಯೆಹೂದ್ಯನಾಗಿರುವವನು ನಿಜವಾದ ಯೆಹೂದ್ಯನಲ್ಲ. ಅಂತೆಯೇ, ನಿಜವಾದ ಸುನ್ನತಿಯು ಕೇವಲ ಬಾಹ್ಯ ಲಕ್ಷಣವುಳ್ಳ ಶಾರೀರಿಕ ಪದ್ಧತಿಯಲ್ಲ.
29 : ಯಾರು ಅಂತರಂಗದಲ್ಲಿ ಯೆಹೂದ್ಯನಾಗಿರುತ್ತಾನೋ ಅವನೇ ನಿಜವಾದ ಯೆಹೂದ್ಯನು. ಅಂಥವನಿಗೆ ಅಂತರ್ಯದಲ್ಲಿ ಸುನ್ನತಿಯಾಗಿರುತ್ತದೆ. ಇದು ಲಿಖಿತ ಧರ್ಮಶಾಸ್ತ್ರದಿಂದ ಆದದ್ದಲ್ಲ, ದೇವರಾತ್ಮ ಅವರಿಂದ ಆದ ಕಾರ್ಯ; ಇಂಥವನು ಮೆಚ್ಚುಗೆಯನ್ನು ಪಡೆಯುವುದು ಮನುಷ್ಯನಿಂದಲ್ಲ, ದೇವರಿಂದ.

· © 2017 kannadacatholicbible.org Privacy Policy