1 :
ನಾನು ನಿಮ್ಮ ಬಳಿಗೆ ಕಳುಹಿಸುತ್ತಿರುವ ಸಹೋದರಿ ಫೊಯಿಬೆಯನ್ನು ಪ್ರೀತಿಯಿಂದ ಸ್ವಾಗತಿಸಿರಿ. ಈಕೆ ಕೆಂಕ್ರೆಯ ಪಟ್ಟಣದ ಸಭಾಸೇವಕಳು.
2 : ದೇವಜನರ ಯೋಗ್ಯತೆಗೆ ತಕ್ಕಂತೆ ಈಕೆಯನ್ನು ಪ್ರಭುವಿನ ಹೆಸರಿನಲ್ಲಿ ಬರಮಾಡಿಕೊಳ್ಳಿ. ನನಗೂ ಅನೇಕರಿಗೂ ನೆರವು ನೀಡಿರುವ ಈಕೆಗೆ ನಿಮ್ಮಿಂದಾದ ಎಲ್ಲಾ ಸಹಾಯವನ್ನು ಮಾಡಿ.
3 : ಕ್ರಿಸ್ತಯೇಸುವಿನ ಸೇವೆಯಲ್ಲಿ ನನ್ನ ಸಹೋದ್ಯೋಗಿಗಳಾದ ಪ್ರಿಸಿಲ್ಲಳಿಗೂ ಅಕ್ವಿಲನಿಗೂ ನನ್ನ ವಂದನೆಗಳನ್ನು ತಿಳಿಸಿರಿ.
4 : ಅವರು ನನ್ನ ಪ್ರಾಣರಕ್ಷಣೆಗಾಗಿ ತಮ್ಮ ಪ್ರಾಣಗಳನ್ನೇ ಅಪಾಯಕ್ಕೆ ಈಡಾಗಿಸಿದವರು. ಅದಕ್ಕಾಗಿ ನಾನು ಅವರಿಗೆ ಚಿರಋಣಿ. ನಾನು ಮಾತ್ರವಲ್ಲ, ಯೆಹೂದ್ಯೇತರ ಸಭೆಗಳ ಎಲ್ಲರೂ ಅವರು ಮಾಡಿದ ಉಪಕಾರಕ್ಕೆ ಚಿರಋಣಿಗಳಾಗಿದ್ದಾರೆ.
5 : ಅವರ ಮನೆಯಲ್ಲಿ ಸೇರುವ ಸಭೆಗೂ ನನ್ನ ಶುಭಾಶಯಗಳು. ನನ್ನ ಆಪ್ತ ಗೆಳೆಯ ಎಪೈನೆತನಿಗೆ ನನ್ನ ಪ್ರಣಾಮಗಳು; ಏಷ್ಯ ಸೀಮೆಯಲ್ಲಿ ಮೊತ್ತಮೊದಲಿಗೆ ಕ್ರಿಸ್ತಯೇಸುವನ್ನು ವಿಶ್ವಾಸಿಸಿದವನು ಆತನೇ.
6 : ನಿಮಗಾಗಿ ಬಹಳ ಶ್ರಮೆವಹಿಸಿದ ಮರಿಯಳಿಗೂ ನನ್ನ ನಮಸ್ಕಾರಗಳು.
7 : ನನ್ನ ಸ್ವದೇಶೀಯರೂ ನನ್ನೊಡನೆ ಸೆರೆಯಲ್ಲಿ ಇದ್ದವರೂ ಆದ ಅಂದ್ರೋನಿಕನಿಗೂ ಯೂನ್ಯನಿಗೂ ನನ್ನ ನಮನಗಳು. ಅವರು ಪ್ರೇಷಿತರಂತೆ ಸನ್ಮಾನಿತರು; ಕ್ರಿಸ್ತಯೇಸುವನ್ನು ವಿಶ್ವಾಸಿಸುವುದರಲ್ಲಿ ನನಗಿಂತಲೂ ಮೊದಲಿಗರು.
8 : ಪ್ರಭುವಿನಲ್ಲಿ ನನ್ನ ಆಪ್ತಗೆಳೆಯನಾದ ಅಂಪ್ಲಿಯಾತನಿಗೆ ನನ್ನ ವಂದನೆಗಳು.
9 : ಯೇಸುಕ್ರಿಸ್ತರ ಸೇವೆಯಲ್ಲಿ ನನ್ನ ಸಹೋದ್ಯೋಗಿಯಾದ ಉರ್ಬಾನನಿಗೂ ನನ್ನ ಮಿತ್ರ ಸ್ತಾಕುನಿಗೂ ವಂದನೆಗಳು.
10 : ಕ್ರಿಸ್ತಯೇಸುವಿನ ಸೇವೆಯಲ್ಲಿ ಪರಿಷ್ಕøತನಾದ ಅಪೆಲ್ಲನಿಗೆ ಮತ್ತು ಅರಿಸ್ತೊಬೂಲನ ಕುಟುಂಬದವರಿಗೆ ನನ್ನ ನೆನಪುಗಳು.
11 : ನನ್ನ ಸ್ವದೇಶೀಯರಾದ ಹೆರೋಡಿಯೊನನಿಗೂ ನಾರ್ಕಿಸ್ಸನ ಕುಟುಂಬದವರಲ್ಲಿ ಕ್ರೈಸ್ತರಾದವರಿಗೂ ನನ್ನ ವಂದನೆಗಳು.
12 : ಪ್ರಭು ಸೇವೆಯಲ್ಲಿ ನಿರತರಾದ ತ್ರುಫೈನಳಿಗೂ ತ್ರುಫೋಸಳಿಗೂ ಮತ್ತು ಪ್ರಭುವಿಗಾಗಿ ಶ್ರದ್ಧೆಯಿಂದ ಸೇವೆಸಲ್ಲಿಸಿದ ಪ್ರಿಯ ಪೆರ್ಸಿಸಳಿಗೂ ನನ್ನ ನೆನಕೆಗಳು.
13 : ಪ್ರಭುವಿನ ಭಕ್ತರಲ್ಲಿ ಹೆಸರುವಾಸಿಯಾದ ರೂಫನಿಗೂ ನನ್ನನ್ನು ಸ್ವಂತ ಮಗನಂತೆ ನೋಡಿಕೊಂಡ ಅವನ ತಾಯಿಗೂ ನನ್ನ ವಂದನೆಗಳು.
14 : ಅಸುಂಕ್ರಿತನಿಗೂ ಫ್ಲೆಗೋನನಿಗೂ ಹೆರ್ಮೇಯನಿಗೂ ಪತ್ರೊಬನಿಗೂ ಹೆರ್ಮಾನನಿಗೂ ಮತ್ತು ಅವರೊಡನಿರುವ ಸಹೋದರರೆಲ್ಲರಿಗೂ ನನ್ನ ವಂದನೆಗಳು.
15 : ಫಿಲೊಲೋಗನಿಗೂ ಯೂಲ್ಯಳಿಗೂ ನೇರ್ಯನಿಗೂ ಅವನ ತಂಗಿಗೂ ಒಲುಂಪನಿಗೂ ಮತ್ತು ಇವರೊಂದಿಗೆ ಇರುವ ದೇವಜನರೆಲ್ಲರಿಗೂ ನನ್ನ ವಂದನೆಗಳು.
16 : ಪವಿತ್ರವಾದ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಎಲ್ಲಾ ಕ್ರೈಸ್ತ ಸಭೆಗಳವರು ನಿಮಗೆ ತಮ್ಮ ವಂದನೆಗಳನ್ನು ಕಳುಹಿಸಿದ್ದಾರೆ.
17 :
ಸಹೋದರರೇ, ನೀವು ಪಡೆದ ಉಪದೇಶಕ್ಕೆ ವಿರುದ್ಧವಾಗಿ ಬೇಧಗಳನ್ನೂ ವಿಘ್ನಗಳನ್ನೂ ನಿಮ್ಮಲ್ಲಿ ಉಂಟುಮಾಡುವವರ ಬಗ್ಗೆ ಎಚ್ಚರಿಕೆಯಿಂದಿರಿ. ಅಂಥವರ ಸಹವಾಸವನ್ನೇ ಮಾಡಬೇಡಿರೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
18 : ಅಂಥವರು ಮಾಡುವುದು ತಮ್ಮ ಉದರ ಸೇವೆಯನ್ನೇ ಹೊರತು ಪ್ರಭುವಿನ ಸೇವೆಯನ್ನಲ್ಲ. ತಮ್ಮ ನಯನಾಜೂಕಿನ ನುಡಿಗಳಿಂದಲೂ ಮುಖಸ್ತುತಿಯ ಮಾತುಗಳಿಂದಲೂ ನಿಷ್ಕಪಟ ಮನಸ್ಕರನ್ನು ಮರುಳುಗೊಳಿಸುತ್ತಾರೆ.
19 : ನೀವು ಶುಭಸಂದೇಶಕ್ಕೆ ವಿಧೇಯರಾಗಿ ನಡೆಯುವವರೆಂಬ ಸಮಾಚಾರ ಎಲ್ಲೆಲ್ಲೂ ಹರಡಿದೆ. ಇದರಿಂದಾಗಿ ನಾನು ನಿಮ್ಮ ವಿಷಯದಲ್ಲಿ ಸಂತೋಷಪಡುತ್ತೇನೆ. ನೀವು ಒಳ್ಳೆಯ ವಿಷಯದಲ್ಲಿ ಜಾಣರೂ ಕೆಟ್ಟ ವಿಷಯದಲ್ಲಿ ಕಳಂಕರಹಿತರೂ ಆಗಿರಬೇಕು.
20 : ಆಗ ಶಾಂತಿದಾತ ದೇವರು ಶೀಘ್ರವಾಗಿ ಸೈತಾನನನ್ನು ನಿಮ್ಮ ಪಾದದಡಿಯಲ್ಲಿ ನಸುಕಿಬಿಡುವರು.
ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೊಡನೆ ಇರಲಿ !
21 : ನನ್ನ ಸಹೋದ್ಯೋಗಿಯಾದ ತಿಮೊಥೇಯನು ಮತ್ತು ನನ್ನ ಸ್ವದೇಶೀಯರಾದ ಲೂಕ್ಯ, ಯಾಸೋನನು, ಸೋಸಿಪತ್ರನು ಇವರುಗಳು ನಿಮಗೆ ವಂದನೆಗಳನ್ನು ತಿಳಿಸಿದ್ದಾರೆ.
22 : ಈ ಪತ್ರವನ್ನು ಬರೆದುಕೊಟ್ಟ ತೆತ್ರ್ಯನೆಂಬ ನಾನೂ ನಿಮ್ಮನ್ನು ಪ್ರಭುವಿನಲ್ಲಿ ವಂದಿಸುತ್ತೇನೆ.
23 : ನನಗೂ ಸಮಸ್ತ ಸಭೆಗೂ ಅತಿಥಿ ಸತ್ಕಾರ ನೀಡುತ್ತಿರುವ ಗಾಯನು ನಿಮ್ಮನ್ನು ವಂದಿಸುತ್ತಾನೆ. ಈ ಪಟ್ಟಣದ ಖಜಾಂಚಿ ಎರಸ್ತನೂ ಸಹೋದರ ಕ್ವರ್ತನೂ ನಿಮಗೆ ವಂದನೆಗಳನ್ನು ಹೇಳಿದ್ದಾರೆ.
24 : ನಮ್ಮ ಪ್ರಭು ಯೇಸುಕ್ರಿಸ್ತರ ಅನುಗ್ರಹವು ನಿಮ್ಮೆಲ್ಲರೊಡನೆ ಇರಲಿ! ಆಮೆನ್.
25 : ಅನಾದಿಯಿಂದಲೂ ಗುಪ್ತವಾಗಿದ್ದ ರಹಸ್ಯವು ಈಗ ಪ್ರಕಟವಾಗಿದೆ. ಶಾಶ್ವತ ದೇವರ ಆಜ್ಞೆಯ ಮೇರೆಗೆ ಅನ್ಯಧರ್ಮಿಯರೂ ವಿಧೇಯರಾಗಿ ವಿಶ್ವಾಸಿಸುವಂತೆ ಪ್ರವಾದನಾ ಗ್ರಂಥಗಳ ಮೂಲಕ ಆ ರಹಸ್ಯವನ್ನು ಈಗ ಅವರಿಗೆ ತಿಳಿಸಲಾಗುತ್ತಿದೆ.
26 : ಇದನ್ನು ಬೆಳಕಿಗೆ ತರುವ ನನ್ನ ಸಂದೇಶದ ಮೂಲಕ ಮತ್ತು ಯೇಸುಕ್ರಿಸ್ತರನ್ನು ಕುರಿತ ಬೋಧನೆಯ ಮೂಲಕ ದೇವರು ನಿಮ್ಮನ್ನು ವಿಶ್ವಾಸದಲ್ಲಿ ದೃಢಪಡಿಸಲು ಶಕ್ತರು.
27 : ಜ್ಞಾನಾಂಬುದಿಯಾದ ಆ ಏಕೈಕ ದೇವರಿಗೆ ಯೇಸುಕ್ರಿಸ್ತರ ಮುಖಾಂತರ ಯುಗಯುಗಾಂತರಕ್ಕೂ ಮಹಿಮೆ ಸಲ್ಲಲಿ ! ಆಮೆನ್.