Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ರೋಮ


1 : ವಿಶ್ವಾಸದಲ್ಲಿ ದೃಢವಾಗಿರುವ ನಾವು ನಮ್ಮ ಹಿತವನ್ನೇ ಬಯಸದೆ ವಿಶ್ವಾಸದಲ್ಲಿ ದೃಢವಲ್ಲದವರ ಲೋಪದೋಷಗಳನ್ನು ಸಹಿಸಿಕೊಳ್ಳಬೇಕು.
2 : ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೇ ಬಯಸಿ, ವಿಶ್ವಾಸದಲ್ಲಿ ಅವನು ಮತ್ತಷ್ಟು ಪ್ರವರ್ಧಿಸುವಂತೆ ನೆರವಾಗಬೇಕು.
3 : ಕ್ರಿಸ್ತಯೇಸು ತಮ್ಮ ಸ್ವಂತ ಹಿತವನ್ನು ಎಂದಿಗೂ ಬಯಸಲಿಲ್ಲ, “ದೇವರೇ, ನಿಮ್ಮನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೆ ಎರಗಿವೆ,” ಎಂದು ಲಿಖಿತವಾಗಿರುವ ವಾಕ್ಯ ಅವರಿಗೆ ಅನ್ವಯಿಸುತ್ತದೆ.
4 : ಪ್ರಾಚೀನ ಗ್ರಂಥಗಳಲ್ಲಿ ಬರೆದಿರುವುದೆಲ್ಲವೂ ನಮ್ಮ ಉಪದೇಶಕ್ಕಾಗಿಯೇ ಬರೆಯಲಾಗಿದೆ. ಪವಿತ್ರಗ್ರಂಥ ಪಠನದಿಂದ ದೊರಕುವ ಸ್ಥೈರಣೆ ಮತ್ತು ಉತ್ತೇಜನದಿಂದಾಗಿ ನಾವು ನಿರೀಕ್ಷೆಯುಳ್ಳವರಾಗಬೇಕೆಂದೇ ಇವೆಲ್ಲಾ ಬರೆಯಲಾಗಿದೆ.
5 : ಆ ಸ್ಥೈರಣೆ ಮತ್ತು ಉತ್ತೇಜನದ ಮೂಲವಾಗಿರುವ ದೇವರು, ನೀವೆಲ್ಲರು ಕ್ರಿಸ್ತಯೇಸುವನ್ನು ಅನುಸರಿಸುತ್ತಾ ಒಮ್ಮನಸ್ಸಿನಿಂದ ಬಾಳುವಂತೆ ಮಾಡಲಿ.
6 : ಹೀಗೆ ಒಮ್ಮನಸ್ಸಿನಿಂದಲೂ ಒಕ್ಕೊರಲಿನಿಂದಲೂ ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರನ್ನು ಕೊಂಡಾಡುವಂತಾಗಲಿ.
7 : ಕ್ರಿಸ್ತಯೇಸು ನಿಮ್ಮನ್ನು ಅಂಗೀಕರಿಸಿದಂತೆ ದೇವರ ಮಹಿಮೆಗಾಗಿ ನೀವು ಸಹ ಒಬ್ಬರನ್ನು ಒಬ್ಬರು ಅಂಗೀಕರಿಸಿರಿ.
8 : ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನಗಳನ್ನು ನೆರವೇರಿಸಿ ತಮ್ಮ ಪ್ರಾಮಾಣಿಕತೆಯನ್ನು ವ್ಯಕ್ತಪಡಿಸುವಂತೆ
9 : ಮತ್ತು ದೇವರು ತೋರಿದ ಕರುಣೆಗಾಗಿ ಅವರನ್ನು ಯೆಹೂದ್ಯರಲ್ಲದವರು ಸಹ ಸ್ತುತಿಸಲು ಸಾಧ್ಯವಾಗುವಂತೆ ಕ್ರಿಸ್ತಯೇಸು ಯೆಹೂದ್ಯರಿಗೆ ಅಧೀನರಾದರು. ಇದಕ್ಕೆ ಸಾದೃಶ್ಯವಾಗಿ ಪವಿತ್ರ ಗ್ರಂಥದಲ್ಲಿ ಹೀಗೆಂದು ಹೇಳಲಾಗಿದೆ: “ಈ ಕಾರಣದಿಂದ ನಾನು ಯೆಹೂದ್ಯರಲ್ಲದವರ ನಡುವೆ ನಿಮ್ಮನ್ನು ಕೊಂಡಾಡುವೆನು ನಿಮ್ಮ ನಾಮವನು ಸಂಕೀರ್ತಿಸುವೆನು.”
10 : ಇನ್ನೊಂದು ಕಡೆ: “ಅನ್ಯಧವರ್ಿೂಯರೇ, ದೇವಜನರೊಡನೆ ಸೇರಿ ಆನಂದಿಸಿರಿ.”
11 : ಮತ್ತೊಂದು ಕಡೆ: “ಅನ್ಯಧವರ್ಿೂಯರೇ, ನೀವೆಲ್ಲರೂ ಪ್ರಭುವನ್ನು ಸ್ತುತಿಸಿರಿ; ಸರ್ವಜನಾಂಗಗಳೇ, ಅವರನ್ನು ಹೊಗಳಿ ಹಾಡಿರಿ.”
12 : ಮಗದೊಂದು ಕಡೆ ಯೆಶಾಯನು ಹೀಗೆನ್ನುತ್ತಾನೆ: “ಜೆಸ್ಸೆಯನ ವಂಶಜನು ಬರುವನು, ಅನ್ಯ ಜನಾಂಗಗಳನ್ನು ಆಳುವವನು ಉದಯಿಸುವನು; ಆ ಜನಾಂಗಗಳು ಆತನಲ್ಲೇ ಭರವಸೆಯನ್ನಿಡುವುವು.”
13 : ಭರವಸೆಯ ಮೂಲವಾಗಿರುವ ದೇವರಲ್ಲಿರುವ ನಮ್ಮ ವಿಶ್ವಾಸದ ಮೂಲಕ ಲಭಿಸುವ ಆನಂದವನ್ನೂ ಶಾಂತಿಸಮಾಧಾನವನ್ನೂ ನಿಮಗೆ ಸಮೃದ್ಧಿಯಾಗಿ ದಯಪಾಲಿಸಲಿ. ನಿಮ್ಮ ಭರವಸೆ ಪವಿತ್ರಾತ್ಮ ಅವರ ಪ್ರಭಾವದಿಂದ ಪ್ರವರ್ಧಿಸುವಂತಾಗಲಿ.
14 : ಸಹೋದರರೇ, ನೀವು ಗುಣಸಂಪನ್ನರೂ ಜ್ಞಾನಸಂಪನ್ನರೂ ಒಬ್ಬರಿಗೊಬ್ಬರು ಬುದ್ಧಿ ಹೇಳಿಕೊಳ್ಳಲು ಸಮರ್ಥರೂ ಆಗಿದ್ದೀರಿ ಎಂದು ನಾನು ಚೆನ್ನಾಗಿ ಬಲ್ಲೆ.
15 : ಆದರೂ ಕೆಲವು ವಿಷಯಗಳತ್ತ ನಿಮ್ಮ ಗಮನ ಸೆಳೆಯುವ ಉದ್ದೇಶದಿಂದ ಅಲ್ಲಲ್ಲಿ ಹೆಚ್ಚಿನ ಧೈರ್ಯವಹಿಸಿ ಬರೆದಿದ್ದೇನೆ. ದೇವರು ನನಗೆ ದಯಪಾಲಿಸಿರುವ ವಿಶೇಷ ವರದಾನದಿಂದಾಗಿ ಈ ಪ್ರಕಾರ ಬರೆದಿದ್ದೇನೆ.
16 : ಈ ವರದಿಂದಲೇ ಯೆಹೂದ್ಯರಲ್ಲದ ಜನರಿಗೆ ನಾನು ಕ್ರಿಸ್ತಯೇಸುವಿನ ದಾಸನಾದೆ. ಯೆಹೂದ್ಯರಲ್ಲದವರು ಪವಿತ್ರಾತ್ಮರ ಮೂಲಕ ಪರಿಶುದ್ಧರಾಗಿ, ದೇವರಿಗೆ ಸಮರ್ಪಕ ಕಾಣಿಕೆಯಾಗುವಂತೆ ದೇವರ ಶುಭಸಂದೇಶವನ್ನು ಸಾರುವುದೇ ನನ್ನ ಪೂಜ್ಯಸೇವೆ, ಅದುವೇ ನನ್ನ ಯಾಜಕ ಸೇವೆ.
17 : ದೇವರಿಗಾಗಿ ಸಲ್ಲಿಸುವ ಈ ಸೇವೆಯನ್ನು ಕುರಿತು ನಾನು ಕ್ರಿಸ್ತಯೇಸುವಿನಲ್ಲಿ ಹೆಮ್ಮೆಪಡಲು ಕಾರಣ ಉಂಟು.
18 : ಕ್ರಿಸ್ತಯೇಸು ನನ್ನ ಮುಖಾಂತರ ಅಂದರೆ, ನನ್ನ ಬೋಧನೆ ಹಾಗು ಸಾಧನೆಗಳ ಮೂಲಕ, ಸೂಚಕ ಹಾಗೂ ಅದ್ಭುತ ಕಾರ್ಯಗಳ ಮೂಲಕ ಮತ್ತು ಪವಿತ್ರಾತ್ಮರ ಶಕ್ತಿಯ ಮೂಲಕ ಯೆಹೂದ್ಯರಲ್ಲದವರನ್ನೂ ತಮ್ಮ ಶರಣರನ್ನಾಗಿಸಿಕೊಂಡಿದ್ದಾರೆ. ಇದೊಂದನ್ನು ಬಿಟ್ಟು ಬೇರೆ ಯಾವುದನ್ನು ಕುರಿತು ಹೊಗಳಿಕೊಳ್ಳಲು ನಾನು ಧೈರ್ಯಗೊಳ್ಳುವುದಿಲ್ಲ.
19 : ಜೆರುಸಲೇಮಿನಿಂದ ಪ್ರಾರಂಭಿಸಿ ಇಲ್ಲುರಿಕ ಪ್ರಾಂತ್ಯದವರೆಗೂ ಸುತ್ತಮುತ್ತಿನಲ್ಲೂ ನಾನು ಸಂಚಾರಮಾಡಿ, ಕ್ರಿಸ್ತಯೇಸುವಿನ ಶುಭಸಂದೇಶವನ್ನು ಪೂರ್ತಿಯಾಗಿ ಪ್ರಚಾರಮಾಡಿದ್ದೇನೆ.
20 : ಮತ್ತೊಬ್ಬನು ಹಾಕಿದ ಅಸ್ತಿವಾರದ ಮೇಲೆ ನಾನು ಕಟ್ಟುವುದು ಸರಿ ಅಲ್ಲವೆಂಬುದು ನನ್ನ ಅಭಿಪ್ರಾಯ. ಆದಕಾರಣ ಕ್ರಿಸ್ತಯೇಸುವಿನ ನಾಮವು ಪ್ರಚಾರವಾಗದಕಡೆ ಹೋಗಿ ಶುಭಸಂದೇಶವನ್ನು ಸಾರಬೇಕೆಂಬುದೇ ನನ್ನ ಆಕಾಂಕ್ಷೆ.
21 : “ಯಾರಿಗೆ ಆತನ ಸುದ್ದಿ ಮುಟ್ಟಿಲ್ಲವೋ ಅವರು ಆತನನು ನೋಡುವರು; ಯಾರು ಆತನ ವರ್ತಮಾನ ಕೇಳಿಲ್ಲವೋ ಅವರು ಆತನನು ಗ್ರಹಿಸಿಕೊಳ್ಳುವರು,” ಎಂಬುದಾಗಿ ಪವಿತ್ರಗ್ರಂಥದಲ್ಲಿ ಬರೆದಿರುವ ಪ್ರಕಾರ ನನ್ನ ಕಾರ್ಯವನ್ನು ನಡೆಸಿದ್ದೇನೆ.
22 : ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಬರಲು ಅನೇಕ ಸಾರಿ ಮಾಡಿದ ಪ್ರಯತ್ನಗಳು ವಿಫಲವಾದವು.
23 : ಆದರೆ ಈಗ ಈ ಪಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದ ನನ್ನ ಹಂಬಲವು ಈಗ ಕೈಗೂಡಲಿದೆ.
24 : ನಾನು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ಮೊದಲು ನಿಮ್ಮನ್ನು ಕಾಣಬೇಕೆಂದಿದ್ದೇನೆ. ಸ್ವಲ್ಪಕಾಲ ನಿಮ್ಮೊಡನೆ ಸಂತೋಷವಾಗಿ ತಂಗಿದ್ದು ಬಳಿಕ ನಿಮ್ಮ ಸಹಾಯದಿಂದ ಆ ದೇಶಕ್ಕೆ ಪ್ರಯಾಣವನ್ನು ಮುಂದುವರಿಸುತ್ತೇನೆ.
25 : ಸದ್ಯಕ್ಕೆ ನಾನು ಜೆರುಸಲೇಮಿನಲ್ಲಿರುವ ದೇವಜನರಿಗೆ ಸಹಾಯಧನವನ್ನು ಕೊಂಡೊಯ್ಯಬೇಕಾಗಿದೆ.
26 : ಅಲ್ಲಿನ ದೇವಜನರಲ್ಲಿ ಬಡವರಾದವರಿಗೆ ಸಹಾಯ ನೀಡಲು ಮಕೆದೋನಿಯ ಮತ್ತು ಅಖಾಯದ ಸಹೋದರರು ಮುಂದೆ ಬಂದಿದ್ದಾರೆ.
27 : ಅವರ ಸ್ವಂತ ಇಷ್ಟದಿಂದಲೇ ಮುಂದೆ ಬಂದಿದ್ದಾರೆ. ಹಾಗೆ ಮಾಡುವುದು ಅವರ ಕರ್ತವ್ಯವೂ ಹೌದು. ಏಕೆಂದರೆ, ಯೆಹೂದ್ಯರ ಆಧ್ಯಾತ್ಮಿಕ ಸಂಪತ್ತಿನಲ್ಲಿ ಪಾಲುಗಾರರಾಗಿರುವ ಅನ್ಯಧವರ್ಿೂಯರು ತಮ್ಮ ಐಹಿಕ ಸಂಪತ್ತಿನಲ್ಲಿ ಅವರಿಗೆ ಪಾಲು ನೀಡಲು ಕರ್ತವ್ಯಬದ್ಧರಾಗಿದ್ದಾರೆ.
28 : ದೇವಜನರಿಗೆ ಸಂಗ್ರಹಿಸಲಾದ ಧನಸಹಾಯವನ್ನು ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನನ್ನ ಈ ಕಾರ್ಯವನ್ನು ಮುಗಿಸಿಕೊಂಡು ಸ್ಪೇಯಿನ್ ದೇಶಕ್ಕೆ ಹೋಗುವ ಮಾರ್ಗದಲ್ಲಿ ನಿಮ್ಮ ಬಳಿಗೆ ಬರುತ್ತೇನೆ.
29 : ಹಾಗೆ ಬರುವಾಗ ನಿಮಗೆ ಕ್ರಿಸ್ತಯೇಸುವಿನ ಅಮೂಲ್ಯ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂಬ ಭರವಸೆ ನನಗಿದೆ.
30 : ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲೂ ಪವಿತ್ರಾತ್ಮ ಪ್ರೇರಿತವಾದ ಪ್ರೀತಿಯಿಂದಲೂ ನಾನು ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ: ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸಿ ನನ್ನ ಹೋರಾಟದಲ್ಲಿ ಸಹಕರಿಸಿರಿ.
31 : ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ; ಜೆರುಸಲೇಮಿನ ದೇವಜನರು ನನ್ನ ಸೇವೆಯನ್ನು ಸಂತೋಷದಿಂದ ಸ್ವೀಕರಿಸುವಂತೆ ಪ್ರಾರ್ಥಿಸಿರಿ.
32 : ಅನಂತರ ದೇವರ ಚಿತ್ತವಾದಲ್ಲಿ ನಾನು ಸಂತೋಷದಿಂದ ನಿಮ್ಮಲ್ಲಿ ಬರುತ್ತೇನೆ. ನಿಮ್ಮ ಸಂಗಡವಿದ್ದು ವಿಶ್ರಾಂತಿ ಪಡೆಯುತ್ತೇನೆ.
33 : ಶಾಂತಿದಾತ ದೇವರು ನಿಮ್ಮೆಲ್ಲರೊಡನೆ ಇರಲಿ! ಆಮೆನ್.

· © 2017 kannadacatholicbible.org Privacy Policy