1 :
ವಿಶ್ವಾಸದಲ್ಲಿ ಸ್ಥಿರವಿಲ್ಲದವರನ್ನೂ ನಿಮ್ಮ ಸಂಗಡ ಸೇರಿಸಿಕೊಳ್ಳಿರಿ. ಆದರೆ ವೈಯಕ್ತಿಕ ಅಭಿಪ್ರಾಯಗಳ ಬಗ್ಗೆ ವಾಗ್ವಾದ ನಡೆಸಬೇಡಿ.
2 : ಒಬ್ಬನು ಎಂಥ ಆಹಾರವನ್ನಾದರೂ ಭುಜಿಸಬಹುದೆಂದು ಭಾವಿಸುತ್ತಾನೆ. ವಿಶ್ವಾಸದಲ್ಲಿ ಸ್ಥಿರವಿಲ್ಲದವನು ಸಸ್ಯಾಹಾರಿ ಆಗಿಯೇ ಇರುತ್ತಾನೆ.
3 : ಮಾಂಸಾಹಾರಿಯು ಸಸ್ಯಾಹಾರಿಯನ್ನು ಹೀನೈಸಬಾರದು; ಸಸ್ಯಾಹಾರಿಯು ಮಾಂಸಾಹಾರಿಯನ್ನು ದೋಷಿಯೆಂದು ತೀರ್ಪುಕೊಡಬಾರದು. ಏಕೆಂದರೆ, ಇಬ್ಬರೂ ದೇವರಿಂದ ಅಂಗೀಕೃತರು.
4 : ಮತ್ತೊಬ್ಬನ ದಾಸನ ಮೇಲೆ ದಂಡನೆಯ ತೀರ್ಪು ಕೊಡಲು ನೀನು ಯಾರು? ಅವನು ಸಮರ್ಥನು ಅಥವಾ ಅಸಮರ್ಥನು ಎಂದು ತೀರ್ಪುಕೊಡುವುದು ಅವನ ಯಜಮಾನನಿಗೆ ಸೇರಿದ್ದು. ಅವನು ಸಮರ್ಥನಾಗುವಂತೆ ಮಾಡಲು ಪ್ರಭು ಶಕ್ತರು.
5 : ಒಂದು ದಿನಕ್ಕಿಂತ ಮತ್ತೊಂದು ದಿನ ಮಂಗಳಕರವಾದುದು ಎಂದು ಒಬ್ಬನು ಭಾವಿಸಬಹುದು. ಮತ್ತೊಬ್ಬನು, ಎಲ್ಲಾ ದಿನಗಳು ಮಂಗಳಕರವಾದುವು ಎಂದು ಹೇಳಬಹುದು. ಈ ವಿಷಯದಲ್ಲಿ ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಂತೆ ನಡೆಯಲಿ.
6 : ಒಂದು ದಿನವನ್ನು ಮಂಗಳಕರವೆಂದು ಭಾವಿಸುವವನು ಪ್ರಭುವಿಗಾಗಿಯೇ ಆ ರೀತಿ ಭಾವಿಸುತ್ತಾನೆ. ಮಾಂಸವನ್ನು ತಿನ್ನುವವನು ಪ್ರಭುವಿಗಾಗಿಯೇ ತಿನ್ನುತ್ತಾನೆ. ಹೇಗೆಂದರೆ, ತಿನ್ನುವ ಆ ಪದಾರ್ಥಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ. ಸಸ್ಯಾಹಾರಿಯೂ ಪ್ರಭುವಿಗಾಗಿಯೇ ಮಾಂಸವನ್ನು ತಿನ್ನದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಾನೆ.
7 : ನಮ್ಮಲ್ಲಿ ಯಾರೂ ತನಗಾಗಿಯೇ ಬದುಕುವುದಿಲ್ಲ; ತನಗಾಗಿಯೇ ಸಾಯುವುದಿಲ್ಲ. ನಾವು ಬದುಕಿದರೂ ಪ್ರಭುವಿಗಾಗಿಯೇ; ಸತ್ತರೂ ಅವರಿಗಾಗಿಯೇ.
8 : ನಾವು ಬದುಕಿದರೂ ಸತ್ತರೂ ಪ್ರಭುವಿಗೆ ಸೇರಿದವರು.
9 : ಏಕೆಂದರೆ, ಸತ್ತವರಿಗೂ ಬದುಕುವವರಿಗೂ ಪ್ರಭುವಾಗಬೇಕೆಂಬ ಉದ್ದೇಶದಿಂದಲೇ ಕ್ರಿಸ್ತಯೇಸು ಸತ್ತು ಜೀವಂತರಾದದ್ದು.
10 : ಹೀಗಿರುವಲ್ಲಿ ಸಸ್ಯಾಹಾರಿಯೇ, ನೀನು ನಿನ್ನ ಸಹೋದರನನ್ನು ದೋಷಿಯೆಂದು ತೀರ್ಪಿಡುವುದೇಕೆ? ಮಾಂಸಾಹಾರಿಯೇ, ನಿನ್ನ ಸಹೋದರನನ್ನು ಹೀನೈಸುವುದೇಕೆ? ನಾವೆಲ್ಲರೂ ದೇವರ ನ್ಯಾಯಸ್ಥಾನದ ಮುಂದೆ ನಿಲ್ಲಬೇಕಲ್ಲವೆ?
11 : ಪವಿತ್ರ ಗ್ರಂಥದಲ್ಲಿ:
“ಎಲ್ಲರೂ ನನಗೆ ಸಾಷ್ಟಾಂಗವೆರಗುವರು
ಎಲ್ಲರೂ ನನ್ನನ್ನು ದೇವರೆಂದು ನಿವೇದಿಸುವರು
ಇದಕ್ಕೆ ಜೀವಸ್ವರೂಪನಾದ ನಾನೇ ಸಾಕ್ಷಿ,”
12 : ಎಂದು ಸರ್ವೇಶ್ವರ ಸ್ವಾಮಿ ಹೇಳಿದ್ದಾರೆ.ನಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ವಿಷಯವಾಗಿ ದೇವರಿಗೆ ಲೆಕ್ಕವನ್ನು ಒಪ್ಪಿಸಬೇಕು.
ಯಾವ ಪದಾರ್ಥವು ಸ್ವತಃ ಅಶುದ್ಧವಲ್ಲ
13 : ಆದಕಾರಣ ಒಬ್ಬರ ವಿಷಯದಲ್ಲಿ ಒಬ್ಬರು ತೀರ್ಪುಮಾಡದೆ ಇರೋಣ. ಬದಲಾಗಿ ಸಹೋದರನಿಗೆ ಯಾವ ರೀತಿಯ ಅಡ್ಡಿಯನ್ನಾಗಲೀ ಅಡಚಣೆಗಳನ್ನಾಗಲೀ ಉಂಟುಮಾಡುವುದಿಲ್ಲವೆಂದು ತೀರ್ಮಾನಿಸಿಕೊಳ್ಳಿ.
14 : ಯಾವ ಪದಾರ್ಥವು ಸ್ವತಃ ಅಶುದ್ದವಲ್ಲವೆಂದು ಪ್ರಭು ಯೇಸುವಿನಲ್ಲಿ ನಾನು ಖಚಿತವಾಗಿ ಹೇಳಬಲ್ಲೆ. ಆದರೆ, ಒಂದು ಪದಾರ್ಥವನ್ನು ಅಶುದ್ಧವೆಂದು ಯಾರಾದರೂ ಭಾವಿಸಿದರೆ ಅದು ಅವನಿಗೆ ಅಶುದ್ಧವೇ ಆಗುತ್ತದೆ.
15 : ನೀನು ಏನನ್ನಾದರೂ ತಿನ್ನುವುದರಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾಗುವುದಾದರೆ ನಿನ್ನ ಆ ವರ್ತನೆ ಪ್ರೀತಿಪ್ರೇರಿತವಾದುದಲ್ಲ. ಯಾರಿಗೋಸ್ಕರ ಕ್ರಿಸ್ತಯೇಸು ಪ್ರಾಣಾರ್ಪಣೆ ಮಾಡಿದರೋ ಅಂಥವನಿಗೆ ನೀನು ತಿನ್ನುವ ಆಹಾರದಿಂದಾಗಿ ನಾಶವನ್ನು ತರಬಾರದು.
16 : ನಿನಗೆ ರುಚಿಕರವಾದದ್ದು ಪರರಿಗೆ ದೂಷಣಾಸ್ಪದವಾಗದಿರಲಿ.
17 : ಏಕೆಂದರೆ, ದೇವರ ಸಾಮ್ರಾಜ್ಯ ತಿನ್ನುವುದರಲ್ಲಿ, ಕುಡಿಯುವುದರಲ್ಲಿ ಅಲ್ಲ, ಪವಿತ್ರಾತ್ಮ ಅವರಿಂದ ಬರುವ ಸತ್ಸಂಬಂಧ, ಶಾಂತಿಸಮಾಧಾನ ಮತ್ತು ಸಂತೋಷ ಇವುಗಳಲ್ಲಿ ಅಡಗಿದೆ.
18 : ಹೀಗೆ ಕ್ರಿಸ್ತಯೇಸುವಿಗೆ ಸೇವೆಮಾಡುವವನು, ದೇವರಿಂದ ಮೆಚ್ಚುಗೆಯನ್ನು ಮತ್ತು ಮನುಷ್ಯರಿಂದ ಮಾನ್ಯತೆಯನ್ನು ಪಡೆಯುತ್ತಾನೆ.
19 : ಆದ್ದರಿಂದ ಶಾಂತಿಸಮಾಧಾನಕ್ಕೂ ಪರಸ್ಪರ ಅಭ್ಯುದಯಕ್ಕೂ ಹಿತಕರವಾದವುಗಳನ್ನೇ ಅರಸೋಣ.
20 : ಕೇವಲ ಆಹಾರಕ್ಕಾಗಿ, ದೇವರು ಕಟ್ಟಿದ್ದನ್ನು ನೀನು ಕೆಡವಬೇಡ. ಆಹಾರ ಪದಾರ್ಥಗಳೆಲ್ಲಾ ಒಳ್ಳೆಯವೇ. ಆದರೆ ಅವುಗಳಲ್ಲಿ ಯಾವುದಾದರೂ ಒಂದನ್ನು ತಿನ್ನುವುದರಿಂದ ಮತ್ತೊಬ್ಬನಿಗೆ ವಿಘ್ನವನ್ನು ಒಡ್ಡುವುದಾದರೆ, ಅದು ತಪ್ಪು.
21 : ಮಾಂಸವನ್ನು ತಿನ್ನುವುದಾಗಲಿ, ದ್ರಾಕ್ಷಾರಸವನ್ನು ಕುಡಿಯುವುದಾಗಲಿ, ಅಥವಾ ಇನ್ನಾವುದೇ ಆಗಲಿ, ನಿನ್ನ ಸಹೋದರನಿಗೆ ಪಾಪಕ್ಕೆ ಕಾರಣವಾಗುವುದಾದರೆ ಅದನ್ನು ಬಿಟ್ಟುಬಿಡುವುದೇ ಲೇಸು.
22 : ಈ ವಿಷಯದಲ್ಲಿ ನಿನಗಿರುವ ವೈಯಕ್ತಿಕ ನಂಬಿಕೆ ದೇವರಿಗೆ ಮತ್ತು ನಿನಗೆ ಮಾತ್ರ ತಿಳಿದಿರಲಿ. ತಾನು ಅನುಮೋದಿಸಿ ಮಾಡಿದುದರ ಬಗ್ಗೆ ಅನುಮಾನಪಡದವನು ಧನ್ಯನು.
23 : ಅನುಮಾನದಿಂದ ಊಟಮಾಡುವವನು ದೇವರ ಮುಂದೆ ಅಪರಾಧಿಯಾಗುತ್ತಾನೆ. ಏಕೆಂದರೆ, ಅವನು ವಿಶ್ವಾಸದ ಆಧಾರದ ಮೇಲೆ ವರ್ತಿಸುತ್ತಿಲ್ಲ. ವಿಶ್ವಾಸದ ಆಧಾರವಿಲ್ಲದೆ ಮಾಡುವುದೆಲ್ಲವೂ ಪಾಪವೇ.