1 : ಸಹೋದರರೇ, ನನ್ನ ಸ್ವಜನರಾದ ಇಸ್ರಯೇಲರು ಜೀವೋದ್ಧಾರ ಹೊಂದಬೇಕೆಂದೇ ನನ್ನ ಹಾರ್ದಿಕ ಹಂಬಲ. ನಾನು ದೇವರಲ್ಲಿ ಮಾಡುವ ಪ್ರಾರ್ಥನೆಯೂ ಇದೇ.
2 : ದೇವರ ವಿಷಯದಲ್ಲಿ ಅವರು ಬಹಳ ನಿಷ್ಠಾವಂತರು ಎಂದು ಒತ್ತಿಹೇಳಬಲ್ಲೆ. ಆದರೆ ಆ ನಿಷ್ಠೆ ನೈಜಜ್ಞಾನವನ್ನು ಆಧರಿಸಿಲ್ಲ.
3 : ದೇವರೊಡನೆ ಸತ್ಸಂಬಂಧವನ್ನು ಪಡೆಯುವ ಮಾರ್ಗವನ್ನು ಅರಿಯದೆ ತಮ್ಮದೇ ಆದ ಧರ್ಮವನ್ನು ಸ್ಥಾಪಿಸಲು ಅವರು ಪ್ರಯತ್ನಿಸಿದರು. ಎಂದೇ ಅವರು ದೈವ ಸತ್ಸಂಬಂಧಕ್ಕೆ ಬಾಹಿರರಾದರು.
4 : ದೇವರಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೂ ಆ ಸತ್ಸಂಬಂಧ ದೊರಕುವಂತೆ ಕ್ರಿಸ್ತಯೇಸು ಧರ್ಮಶಾಸ್ತ್ರವನ್ನು ಇತಿಗೊಳಿಸಿದರು.
5 : ಧರ್ಮಶಾಸ್ತ್ರ ಪಾಲನೆಯಿಂದ ಲಭಿಸುವ ಸತ್ಸಂಬಂಧದ ಬಗ್ಗೆ ಮೋಶೆ ಹೀಗೆ ಬರೆದಿದ್ದಾನೆ: “ಧರ್ಮಶಾಸ್ತ್ರದ ನೇಮನಿಯಮಗಳನ್ನು ಪಾಲಿಸುವವನು ಅವುಗಳ ಮೂಲಕ ಜೀವಿಸುವನು.”
6 : ಆದರೆ ವಿಶ್ವಾಸದ ಮೂಲಕ ದೊರಕುವ ಸತ್ಸಂಬಂಧದ ಬಗ್ಗೆ ಹೀಗೆ ಬರೆಯಲಾಗಿದೆ: “ಕ್ರಿಸ್ತಯೇಸುವನ್ನು ಕೆಳಕ್ಕೆ ಕರೆತರಲು ಸ್ವರ್ಗಕ್ಕೆ ಏರಿ ಹೋಗುವವರು ಯಾರು?” ಎಂದಾಗಲೀ
7 : “ಕ್ರಿಸ್ತಯೇಸುವನ್ನು ಸಾವಿನಿಂದ ಮೇಲಕ್ಕೆ ಕರೆತರಲು ಪಾತಾಳಕ್ಕೆ ಇಳಿದು ಹೋಗುವವರು ಯಾರು?” ಎಂದಾಗಲೀ ನಿನ್ನ ಮನದಲ್ಲಿ ನೀನು ಪ್ರಶ್ನಿಸಿಕೊಳ್ಳಬೇಕಾಗಿಲ್ಲ.
8 : ಧರ್ಮಗ್ರಂಥವು ಹೇಳುವುದಿಷ್ಟೆ: ದೇವರ ವಾಕ್ಯ ನಿನ್ನ ಸವಿೂಪದಲ್ಲೇ ಇದೆ. ಅದು ನಿನ್ನ ಬಾಯಲ್ಲೂ ಹೃದಯದಲ್ಲೂ ಇದೆ. ಅದೇ ನಾವು ನಿಮಗೆ ಬೋಧಿಸುವ ವಿಶ್ವಾಸದ ವಾಕ್ಯ.
9 : “ಯೇಸುಸ್ವಾಮಿಯೇ ಪ್ರಭು” ಎಂದು ನೀನು ಬಾಯಿಂದ ನಿವೇದಿಸಿ, ಅವರನ್ನು ದೇವರು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆಂದು ಹೃದಯದಿಂದ ವಿಶ್ವಾಸಿಸಿದರೆ ಜೀವೋದ್ಧಾರವನ್ನು ಹೊಂದುತ್ತೀಯೆ.
10 : ಹೌದು, ಹೃದಯಪೂರ್ವಕವಾಗಿ ವಿಶ್ವಾಸಿಸುವವನು ದೇವರೊಡನೆ ಸತ್ಸಂಬಂಧವನ್ನು ಪಡೆಯುತ್ತಾನೆ; ಬಾಯಿಂದ ನಿವೇದಿಸುವವನು ಜೀವೋದ್ಧಾರ ಹೊಂದುತ್ತಾನೆ.
11 : ಏಕೆಂದರೆ, “ಅವರಲ್ಲಿ ವಿಶ್ವಾಸ ಇಡುವ ಯಾರಿಗೂ ಆಶಾಭಂಗವಾಗುವುದಿಲ್ಲ,” ಎಂದು ಪವಿತ್ರಗ್ರಂಥದಲ್ಲೇ ಹೇಳಲಾಗಿದೆ.
12 : ಈ ವಿಷಯದಲ್ಲಿ ಯೆಹೂದ್ಯರು, ಯೆಹೂದ್ಯರಲ್ಲದವರು ಎಂಬ ಭೇದಭಾವವಿಲ್ಲ, ಸರ್ವರಿಗೂ ಒಬ್ಬರೇ ಪ್ರಭು. ತಮ್ಮನ್ನು ಬೇಡಿಕೊಳ್ಳುವ ಎಲ್ಲರಿಗೂ ಅವರು ಧಾರಾಳವಾಗಿ ವರದಾನವನ್ನು ನೀಡುತ್ತಾರೆ.
13 : “ಪ್ರಭುವಿನ ನಾಮಸ್ಮರಣೆ ಮಾಡುವ ಪ್ರತಿಯೊಬ್ಬನೂ ಜೀವೋದ್ಧಾರವನ್ನು ಹೊಂದುತ್ತಾನೆ,” ಎಂದು ಲಿಖಿತವಾಗಿದೆ.
14 : ಪ್ರಭುವಿನಲ್ಲಿ ವಿಶ್ವಾಸವಿಲ್ಲದಿದ್ದರೆ ಅವರ ನಾಮಸ್ಮರಣೆ ಮಾಡುವುದಾದರೂ ಹೇಗೆ? ಅವರ ವಿಷಯವನ್ನು ಕುರಿತು ಕೇಳದಿದ್ದರೆ ಅವರನ್ನು ವಿಶ್ವಾಸಿಸುವುದಾದರೂ ಹೇಗೆ? ಬೋಧಿಸುವವರು ಇಲ್ಲದಿದ್ದರೆ ಅವರ ವಿಷಯವನ್ನು ಕುರಿತು ಕೇಳುವುದಾದರೂ ಹೇಗೆ?
15 : ಬೋಧಿಸುವವರನ್ನು ಕಳುಹಿಸದೆ ಹೋದರೆ, ಅವರು ಶುಭಸಂದೇಶವನ್ನು ಬೋಧಿಸುವುದಾದರೂ ಹೇಗೆ? “ಶುಭಸಂದೇಶವನ್ನು ತರುವವರ ಬರುವಿಕೆ ಎಷ್ಟೋ ಶುಭದಾಯಕ,” ಎಂದು ಪವಿತ್ರ ಗ್ರಂಥದಲ್ಲೇ ಬರೆಯಲಾಗಿದೆ.
16 : ಆದರೂ ಈ ಶುಭಸಂದೇಶವನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದ್ದರಿಂದಲೇ ಯೆಶಾಯನು, “ಪ್ರಭುವೇ, ನಾವು ಸಾರಿದ ಸಂದೇಶವನ್ನು ನಂಬಿದವರು ಯಾರು?” ಎಂದು ಮೊರೆಯಿಟ್ಟಿದ್ದಾನೆ.
17 : ಇಂತಿರಲು, ಶುಭಸಂದೇಶವನ್ನು ಆಲಿಸುವುದರಿಂದ ವಿಶ್ವಾಸ ಮೂಡುತ್ತದೆ; ಶುಭಸಂದೇಶ ಕ್ರಿಸ್ತಯೇಸುವನ್ನು ಬೋಧಿಸುವುದರ ಮೂಲಕ ಪ್ರಕಟವಾಗುತ್ತದೆ.
18 : ಈಗ ನನ್ನದೊಂದು ಪ್ರಶ್ನೆ: “ಇಸ್ರಯೇಲರಿಗೆ ಶುಭಸಂದೇಶವನ್ನು ಕೇಳುವ ಸಂದರ್ಭ ಇರಲಿಲ್ಲವೆ?” ನಿಶ್ಚಯವಾಗಿ ಇತ್ತು. ಪವಿತ್ರ ಗ್ರಂಥದಲ್ಲಿ ಹೇಳಿರುವಂತೆ:
“ಸಾರುವವರ ಧ್ವನಿ ಜಗದಲ್ಲೆಲ್ಲಾ ಹರಡಿತು
ಅವರ ನುಡಿ ಭೂಮಿಯ ತುತ್ತತುದಿಯನ್ನು
ಮುಟ್ಟಿತು.”
19 : ಹಾಗೆಂದಮೇಲೆ ಇಸ್ರಯೇಲರು ಆ ಶುಭಸಂದೇಶವನ್ನು ಅರ್ಥಮಾಡಿಕೊಳ್ಳಲಿಲ್ಲ ಎನ್ನೋಣವೇ? ಮೊದಲನೆಯದಾಗಿ, ಮೋಶೆಯ ಮಾತಿನಲ್ಲಿ ಉತ್ತರಿಸುವುದಾದರೆ: “ ‘ಜನಾಂಗ’ ಎನಿಸಿ ಕೊಳ್ಳದವರನ್ನು ನೋಡಿ ನೀವು ಅಸೂಯೆಪಡುವಂತೆ ಮಾಡುತ್ತೇನೆ; ಮತಿಹೀನರೆನಿಸಿಕೊಂಡ ಜನಾಂಗವನ್ನು ನೋಡಿ ನೀವು ಕೆರಳುವಂತೆ ಮಾಡುತ್ತೇನೆ.”
20 : ಯೆಶಾಯನು ಮತ್ತಷ್ಟು ದಿಟ್ಟತನದಿಂದ ಈ ರೀತಿ ಹೇಳಿದ್ದಾನೆ:
“ನನ್ನನ್ನು ಅರಸದವರಿಗೂ
ನಾನು ಕಾಣಿಸಿಕೊಂಡೆ
ನನ್ನ ಬಗ್ಗೆ ವಿಚಾರಿಸದವರಿಗೂ
ನಾನು ಪ್ರತ್ಯಕ್ಷನಾದೆ.”
21 : ಆದರೆ ಇಸ್ರಯೇಲರನ್ನು ಕುರಿತು:
“ಅವಿಧೇಯರೂ ಪ್ರತಿಭಟಿಸುವವರೂ ಆದ ಈ ಜನಾಂಗವನ್ನು ದಿನವೆಲ್ಲಾ ನಾನು ಕೈ ಚಾಚಿ ಕರೆದೆ,” ಎಂದು ಪ್ರವಾದಿಸಿದ್ದಾನೆ.