Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಕೊರಿಂಥ


1 : ದೇವಜನರಿಗೆ ಸಲ್ಲಿಸಬೇಕಾದ ಈ ಸೇವಾಕಾರ್ಯವನ್ನು ಕುರಿತು ನಾನು ನಿಮಗೆ ಬರೆಯುವ ಅವಶ್ಯಕತೆಯಿಲ್ಲ.
2 : ನೆರವು ನೀಡಲು ಸಿದ್ಧರಿದ್ದೀರೆಂದು ನನಗೆ ಚೆನ್ನಾಗಿ ಗೊತ್ತಿದೆ. “ಅಖಾಯದ ಸಹೋದರರು ಕಳೆದ ವರ್ಷದಿಂದಲೂ ನೆರವು ನೀಡಲು ಏರ್ಪಾಡುಮಾಡುತ್ತಿರುವರು,” ಎಂದು ಮಕೆದೋನಿಯರ ಮುಂದೆ ನಾನು ನಿಮ್ಮನ್ನು ಹೊಗಳಿದ್ದೇನೆ. ನಿಮ್ಮ ಉತ್ಸಾಹ ಅವರಲ್ಲಿ ಅನೇಕರನ್ನು ಹುರಿದುಂಬಿಸಿದೆ.
3 : ಆದರೂ ನಮ್ಮ ಹೊಗಳಿಕೆ ಸುಳ್ಳಾಗಬಾರದೆಂದು ನಾನು ಈ ಸಹೋದರರನ್ನು ಮುಂಚಿತವಾಗಿ ಕಳುಹಿಸುತ್ತಿದ್ದೇನೆ.
4 : ನಾನು ನಿಮಗೆ ಹೇಳಿರುವಂತೆ ನಿಮ್ಮ ಏರ್ಪಾಡೆಲ್ಲಾ ಮುಗಿದಿರಬೇಕು. ಇಲ್ಲದಿದ್ದರೆ ನಾನು ಬರುವಾಗ, ನನ್ನ ಜೊತೆಯಲ್ಲಿಯೇ ಮಕೆದೋನಿಯದ ಸಹೋದರರೂ ಬಂದು, ನೀವು ಸಿದ್ಧರಿಲ್ಲದೆ ಇರುವುದನ್ನು ಕಂಡರೆ ನೀವು ತಲೆತ್ಗಗಿಸಬೇಕಾಗುತ್ತದೆ. ನಿಮ್ಮಲ್ಲಿ ನಂಬಿಕೆ ಇಟ್ಟದ್ದಕ್ಕಾಗಿ ನಾನೂ ತಲೆತಗ್ಗಿಸಬೇಕಾಗುತ್ತದೆ.
5 : ಆದ್ದರಿಂದಲೇ, ನೀವು ವಾಗ್ದಾನ ಮಾಡಿದ ಕೊಡುಗೆಯನ್ನು ಸಂಗ್ರಹಿಸುವ ಏರ್ಪಾಡನ್ನು ಮಾಡುವಂತೆ ಈ ಸಹೋದರರನ್ನು ನಮಗೆ ಮುಂಚಿತವಾಗಿಯೇ ನಿಮ್ಮ ಬಳಿಗೆ ಕಳುಹಿಸುವುದು ಉಚಿತವೆಂದು ನನಗೆ ತೋಚಿತು. ಹೀಗೆ ಈ ಕೊಡುಗೆ ಬಲಾತ್ಕಾರವಾದ ವಸೂಲಿ ಆಗಿರದೆ ಮನಃಪೂರ್ವಕವಾಗಿ ಕೊಟ್ಟ ನಿಧಿ ಆಗಿರುತ್ತದೆ.
6 : ವಿರಳವಾಗಿ ಬಿತ್ತುವವನು ವಿರಳವಾಗಿ ಕೊಯ್ಯತ್ತಾನೆ. ಹೇರಳವಾಗಿ ಬಿತ್ತುವವನು ಹೇರಳವಾಗಿ ಕೊಯ್ಯುತ್ತಾನೆ. ಇದು ನಿಮಗೆ ತಿಳಿದಿರಲಿ.
7 : ಪ್ರತಿಯೊಬ್ಬನೂ ತನ್ನ ಮನಸ್ಸಿನಲ್ಲಿ ನಿಶ್ಚಯಿಸಿಕೊಂಡಷ್ಟು ನೀಡಲಿ. ಒಲ್ಲದ ಮನಸ್ಸಿನಿಂದಾಗಲಿ ಬಲಾತ್ಕಾರದಿಂದಾಗಲಿ ಕೊಡುವುದು ಬೇಡ. ನಗುನಗುತ್ತಾ ನೀಡುವಾತನನ್ನು ದೇವರು ಪ್ರೀತಿಸುತ್ತಾರೆ.
8 : ಸಕಲ ವಿಧವಾದ ವರದಾನಗಳನ್ನು ನಿಮಗೆ ಯಥೇಚ್ಛವಾಗಿ ನೀಡಬಲ್ಲ ಶಕ್ತಿ ದೇವರಿಗಿದೆ. ನೀವು ಸದಾ ಸಮೃದ್ಧಿಯಿಂದಿರುವಿರಿ. ಹೀಗೆ ಸಕಲ ಸತ್ಕಾರ್ಯಗಳಿಗೆ ಹೃತ್ಪೂರ್ವಕವಾಗಿ ನೆರವಾಗುವಿರಿ.
9 : “ದೀನದಲಿತರಿಗೆ ಧಾರಾಳವಾಗಿ ನೀಡುವನು; ಅನವರತ ಇರುವುದು ಅವನ ದಾನಧರ್ಮದ ಫಲವು,” ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ.
10 : ಬಿತ್ತುವವನಿಗೆ ಬೀಜವನ್ನೂ ಉಣ್ಣುವವನಿಗೆ ಊಟವನ್ನೂ ಒದಗಿಸುವ ದೇವರು, ಬಿತ್ತನೆಗೆ ಬೇಕಾದ ಬೀಜವನ್ನು ನಿಮಗೂ ಕೊಟ್ಟು ಅದನ್ನು ಬೆಳೆಸುವರು. ನಿಮ್ಮ ದಾನಧರ್ಮದ ಫಲಗಳು ಸಮೃದ್ಧಿಗೊಳ್ಳುವಂತೆ ಮಾಡುವರು.
11 : ನೀವು ಸದಾ ಉದಾರಿಗಳಾಗಿರುವಂತೆ ನಿಮ್ಮನ್ನು ಎಲ್ಲಾ ವಿಧದಲ್ಲೂ ಸಿರಿವಂತರನ್ನಾಗಿ ಮಾಡುವರು. ನಿಮ್ಮ ಕೊಡುಗೆ ನಮ್ಮ ಸೇವೆಯ ಮೂಲಕ ಬೇರೆಯವರಿಗೆ ತಲುಪಿ, ಅವರು ದೇವರನ್ನು ಕೃತಜ್ಞತೆಯಿಂದ ಸ್ಮರಿಸುವಂತೆ ಮಾಡುವುದು.
12 : ಹೀಗೆ ನಿಮ್ಮ ಕೊಡುಗೆ ದೇವಜನರ ಕೊರತೆಗಳನ್ನು ನೀಗಿಸುವುದಲ್ಲದೆ ಅನೇಕರು ದೇವರಿಗೆ ಸ್ತೋತ್ರ ಸಲ್ಲಿಸುವಂತೆ ಮಾಡುವುದು.
13 : ಕ್ರಿಸ್ತಯೇಸುವಿನ ಶುಭಸಂದೇಶದ ಅಂಗೀಕಾರದಿಂದ ನೀವು ಎಷ್ಟು ನಿಷ್ಠಾವಂತ ಸೇವಾಸಕ್ತರಾಗಿದ್ದೀರಿ, ತಮಗೂ ಇತರರಿಗೂ ಎಷ್ಟು ಉದಾರಿಗಳಾಗಿದ್ದೀರಿ ಎಂದು ತಿಳಿದು ಅನೇಕರು ದೇವರನ್ನು ಕೊಂಡಾಡುವರು.
14 : ದೇವರು ನಿಮಗೆ ಅನುಗ್ರಹಿಸಿರುವ ಅತಿಶಯವಾದ ವರಕ್ಕಾಗಿ ಅವರು ಪ್ರೀತಿವಾತ್ಸಲ್ಯದಿಂದ ನಿಮಗೋಸ್ಕರ ಪ್ರಾರ್ಥಿಸುವರು.
15 : ವರ್ಣಿಸಲು ಅಸಾಧ್ಯವಾದ ದೇವರ ಕೃಪಾವರಕ್ಕಾಗಿ ಅವರಿಗೆ ಸ್ತುತಿ ಸ್ತೋತ್ರ ಸಲ್ಲಲಿ!

· © 2017 kannadacatholicbible.org Privacy Policy