1 :
ಸಹೋದರರೇ, ಮಕೆದೋನಿಯ ಸಭೆಗಳಿಗೆ ದೇವರು ದಯಪಾಲಿಸಿದ ಕೃಪಾತಿಶಯಗಳನ್ನು ನಾನು ನಿಮಗೆ ತಿಳಿಸಬಯಸುತ್ತೇನೆ.
2 : ಈ ಸಭೆಗಳವರು ಕಷ್ಟಸಂಕಟಗಳ ಕುಲುಮೆಯಲ್ಲಿ ಬೆಂದಿದ್ದರೂ ಹರ್ಷಭರಿತರಾಗಿದ್ದಾರೆ. ಕಡುಬಡತನದಲ್ಲಿ ನರಳುತ್ತಿದ್ದರೂ ಅಪಾರ ಔದಾರ್ಯದಿಂದ ನಡೆದುಕೊಳ್ಳುತ್ತಿದ್ದಾರೆ.
3 : ತಮ್ಮ ಶಕ್ತಿಗನುಸಾರವಾಗಿ ಮಾತ್ರವಲ್ಲ, ಕೆಲವೊಮ್ಮೆ ಶಕ್ತಿವಿೂರಿಯೂ ನೀಡಿದ್ದಾರೆಂದು ನಾನು ಖಂಡಿತವಾಗಿ ಹೇಳುತ್ತೇನೆ.
4 : ದೇವಜನರಿಗೆ ನೆರವಾಗುವ ಸೌಭಾಗ್ಯದಲ್ಲಿ ತಾವೂ ಭಾಗಿಗಳಾಗಬೇಕೆಂದು, ಸ್ವಂತ ಇಷ್ಟದಿಂದ ನಮ್ಮನ್ನು ಅವರು ಬಹುವಾಗಿ ಬೇಡಿಕೊಂಡರು.
5 : ಇದನ್ನು, ನಾವು ನಿರೀಕ್ಷಿಸಲೇ ಇಲ್ಲ! ಮೊಟ್ಟಮೊದಲು ಅವರು ತಮ್ಮನ್ನೇ ಪ್ರಭುವಿಗೆ ಸಮರ್ಪಿಸಿದರು. ಅನಂತರ ದೈವಚಿತ್ತಕ್ಕೆ ಅನುಗುಣವಾಗಿ ನಮಗೂ ತಮ್ಮನ್ನು ಒಪ್ಪಿಸಿಕೊಟ್ಟರು.
6 : ಇಂಥ ಪ್ರೀತಿಮಯ ಸೇವಾಕಾರ್ಯವನ್ನು ನಿಮ್ಮಲ್ಲಿ ಪ್ರಾರಂಭಿಸಿದ ತೀತನು ಅದನ್ನು ಮುಂದುವರಿಸಿ, ಪೂರ್ಣಗೊಳಿಸಬೇಕೆಂದು ನಾವು ಆತನನ್ನು ಕೇಳಿಕೊಂಡಿದ್ದೇವೆ.
7 : ವಿಶ್ವಾಸ, ವಾಕ್ಚಾತುರ್ಯ, ಜ್ಞಾನ, ಶ್ರದ್ಧೆ, ನಮ್ಮ ಬಗ್ಗೆ ನಿಮಗಿರುವ ಪ್ರೀತಿ - ಈ ಎಲ್ಲಾ ವಿಷಯಗಳಲ್ಲೂ ನೀವು ಸಮೃದ್ಧರಾಗಿದ್ದೀರಿ. ಹಾಗೆಯೇ ಈ ಸೇವಾಕಾರ್ಯದಲ್ಲೂ ಸಮೃದ್ಧರಾಗಿರಿ.
8 : ಇದನ್ನು ನಾನು ಆಜ್ಞಾರೂಪವಾಗಿ ಹೇಳುತ್ತಿಲ್ಲ. ಬೇರೆಯವರಿಗೆ ಈ ಸೇವಾಕಾರ್ಯದಲ್ಲಿ ಇರುವ ಶ್ರದ್ಧೆಯನ್ನು ಆದರ್ಶವಾಗಿ ಹಿಡಿದು ನಿಮ್ಮ ಪ್ರೀತಿ ಎಷ್ಟು ಯಥಾರ್ಥವಾದುದೆಂದು ಕಂಡುಕೊಳ್ಳುವುದಕ್ಕಾಗಿ ಇದನ್ನು ಹೇಳುತ್ತಿದ್ದೇನೆ.
9 : ಪ್ರಭು ಯೇಸುಕ್ರಿಸ್ತರ ಕೃಪಾಶಕ್ತಿಯನ್ನು ನೀವು ಬಲ್ಲಿರಿ. ಅವರು ತಮ್ಮ ಬಡತನದಿಂದ ನಿಮ್ಮನ್ನು ಶ್ರೀಮಂತವಾಗಿಸಲೆಂದು, ತಾವು ಶ್ರೀಮಂತರಾಗಿದ್ದರೂ ನಿಮಗೋಸ್ಕರ ಬಡವರಾದರು
10 : ಈ ವಿಷಯದಲ್ಲಿ ನನ್ನ ಸಲಹೆ ಏನೆಂದರೆ: ಒಂದು ವರ್ಷಕ್ಕೆ ಹಿಂದೆ ನೀವು ಪ್ರಾರಂಭಿಸಿದ ಈ ಸೇವಾಕಾರ್ಯವನ್ನು ಪೂರೈಸುವುದು ಲೇಸು. ಈ ಕಾರ್ಯವನ್ನು ಮೊದಲು ಆರಂಭಿಸಿದವರು ನೀವೇ. ಆರಂಭಿಸಬೇಕೆಂದು ಸೂಚಿಸಿದವರೂ ನೀವೇ.
11 : ಆದ್ದರಿಂದ ಆರಂಭಿಸುವುದರಲ್ಲಿ ಎಷ್ಟು ಆಸಕ್ತರಾಗಿದ್ದಿರೋ, ಅಷ್ಟೇ ಆಸಕ್ತಿಯಿಂದ ನಿಮ್ಮ ನಿಮ್ಮ ಶಕ್ತಿಗನುಸಾರವಾಗಿ ನೀಡಿ ಈ ಯೋಜನೆಯನ್ನು ಪೂರೈಸಿರಿ.
12 : ಒಬ್ಬನು ಕೊಡುವುದಕ್ಕೆ ಮನಸ್ಸುಳ್ಳವನಾಗಿದ್ದರೆ, ಅವನು ತನ್ನಲ್ಲಿ ಇರುವುದಕ್ಕೆ ತಕ್ಕಂತೆ ಕೊಟ್ಟರೆ ಸಾಕು. ನಿಮ್ಮಲ್ಲಿ ಇಲ್ಲದ್ದನ್ನು ದೇವರು ಬಯಸುವುದಿಲ್ಲ.
13 : ನಿಮ್ಮ ಕೊಡುಗೆಯಿಂದ ಇತರರ ಕಷ್ಟಪರಿಹಾರವಾಗಬೇಕು; ಅದರಿಂದ ನಿಮಗೆ ನಷ್ಟವುಂಟಾಗಬೇಕು ಎಂದು ಸಮಾನತೆ ಇರಬೇಕು.
14 : ಈ ಕಾಲದಲ್ಲಿ ನಿಮಗೆ ಸಮೃದ್ಧಿಯಾಗಿರುವುದರಿಂದ ಅವರ ಕೊರತೆಯನ್ನು ನೀವು ನೀಗಿಸಬೇಕು. ಮುಂದಕ್ಕೆ ಅವರು ಸಮೃದ್ಧಿಯಿಂದಿರುವಾಗ, ನಿಮ್ಮ ಕೊರತೆಯನ್ನು ಅವರು ನೀಗಿಸುವರು. ಹೀಗೆ ನಿಮ್ಮಲ್ಲಿ ಸಮಾನತೆ ಉಂಟಾಗುವುದು.
15 : “ಅತಿಯಾಗಿ ಶೇಖರಿಸಿದವನಿಗೆ
ಅಧಿಕವಾಗಲಿಲ್ಲ
ಮಿತಿಯಾಗಿ ಶೇಖರಿಸಿದವನಿಗೆ
ಕೊರತೆಯಾಗಲಿಲ್ಲ.”
ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ.
16 :
ನಿಮ್ಮ ಮೇಲೆ ನನಗಿರುವ ಅದೇ ಅಕ್ಕರೆಯನ್ನು ತೀತನಲ್ಲೂ ಮೂಡಿಸಿದ ದೇವರಿಗೆ ಕೃತಜ್ಞತೆ ಸಲ್ಲಬೇಕು.
17 : ನಿಮ್ಮ ಬಳಿಗೆ ಹೋಗಬೇಕೆಂದು ಕೇಳಿಕೊಂಡಾಗ ಆತನು ಕೂಡಲೇ ಸಮ್ಮತಿಸಿದನು. ಅಷ್ಟೇ ಅಲ್ಲ, ನಿಮಗೆ ನೆರವಾಗಲು, ನಿಮ್ಮ ಬಳಿಗೆ ಬರಲು ಆತನೇ ಸ್ವಂತ ಇಷ್ಟದಿಂದ ಹೊರಟಿದ್ದಾನೆ.
18 : ಆತನ ಸಂಗಡ ಇನ್ನೊಬ್ಬ ಸಹೋದರನನ್ನು ಕಳುಹಿಸುತ್ತಿದ್ದೇವೆ. ಈತನು ಶುಭಸಂದೇಶವನ್ನು ಸಾರುವುದರಲ್ಲಿ ಎಲ್ಲ ಸಭೆಗಳಿಂದ ಪ್ರಶಂಸೆ ಪಡೆದಿದ್ದಾನೆ.
19 : ಇದಷ್ಟೇ ಅಲ್ಲದೆ, ಪ್ರಭುವಿನ ಮಹಿಮೆ ಬೆಳಗುವಂತೆಯೂ ಇತರರಿಗೆ ನೆರವಾಗಬೇಕೆಂಬ ಸದುದ್ದೇಶದಿಂದಲೂ ನಾವು ಕೈಗೊಂಡಿರುವ ಸೇವಾಕಾರ್ಯದಲ್ಲಿ ನಮ್ಮ ಸಂಗಡ ಪ್ರಯಾಣ ಮಾಡಲೆಂದು ಸಭೆಯವರು ಈತನನ್ನು ನೇಮಕ ಮಾಡಿದ್ದಾರೆ.
20 : ನಮ್ಮ ವಶಕ್ಕೆ ಒಪ್ಪಿಸಲಾಗಿರುವ ಈ ಉದಾರ ಕೊಡುಗೆಯ ವಿತರಣೆಯಲ್ಲಿ ಯಾರೂ ನಮ್ಮ ಮೇಲೆ ತಪ್ಪುಹೊರಿಸಲು ಆಸ್ಪದವಿರಕೂಡದು
21 : ಪ್ರಭುವಿನ ದೃಷ್ಟಿಯಲ್ಲಿ ಮಾತ್ರವಲ್ಲ, ಮಾನವರ ದೃಷ್ಟಿಯಲ್ಲೂ ಯೋಗ್ಯವಾದುದನ್ನು ಮಾಡುವುದೇ ನಮ್ಮ ಉದ್ದೇಶ.
22 : ಇವರಿಬ್ಬರ ಸಂಗಡ ಮತ್ತೊಬ್ಬ ಸಹೋದರನನ್ನೂ ಕಳುಹಿಸುತ್ತಿದ್ದೇವೆ. ಈತನು ಆಸಕ್ತಿ ಉಳ್ಳವನೆಂದು ಅನುಭವದಿಂದ ಕಂಡುಕೊಂಡಿದ್ದೇವೆ. ನಿಮ್ಮಲ್ಲಿ ಪೂರ್ಣ ಭರವಸೆಯಿಟ್ಟು ನಿಮಗೆ ನೆರವಾಗಲು ಆತನು ಹೆಚ್ಚು ಉತ್ಸುಕನಾಗಿದ್ದಾನೆ.
23 : ತೀತನ ವಿಷಯವಾಗಿ ಹೇಳುವುದಾದರೆ, ಆತನು ನನ್ನ ಸಹೋದ್ಯೋಗಿ; ನಿಮ್ಮ ಸೇವೆಯಲ್ಲಿ ನನ್ನ ಸಹಕಾರಿ. ಆತನ ಸಂಗಡ ಬರುತ್ತಿರುವ ಇತರ ಸಹೋದರರು ಸಭೆಗಳ ಪ್ರತಿನಿಧಿಗಳು. ಕ್ರಿಸ್ತಯೇಸುವಿನ ಮಹಿಮೆಯನ್ನು ಬೆಳಗುವಂಥವರು ಅವರು.
24 : ಆದ್ದರಿಂದ ಇವರನ್ನು ಪ್ರೀತಿಯಿಂದ ನೋಡಿಕೊಳ್ಳಿ. ನಾವು ನಿಮ್ಮನ್ನು ಹೊಗಳಿದ್ದಕ್ಕೆ ತಕ್ಕಂತೆ ನಡೆದುಕೊಂಡು ಸಭೆಗಳಿಗೆ ನಿಮ್ಮ ಯೋಗ್ಯತೆಯನ್ನು ಮನದಟ್ಟು ಮಾಡಿಕೊಡಿರಿ.