Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಕೊರಿಂಥ


1 : ಪ್ರಿಯ ಸಹೋದರರೇ, ಇಂಥ ವಾಗ್ದಾನಗಳನ್ನು ಪಡೆದಿರುವ ನಾವು ಎಲ್ಲಾ ವಿಧವಾದ ಮಲಿನತೆಯಿಂದ ದೂರವಿದ್ದು ದೇಹಾತ್ಮಗಳಲ್ಲಿ ಶುದ್ಧರಾಗಿರೋಣ. ದೇವರಲ್ಲಿ ಭಯಭಕ್ತಿಯುಳ್ಳವರಾಗಿ ಪರಿಶುದ್ಧತೆಯಲ್ಲಿ ಪರಿಣತಿಯನ್ನು ಪಡೆಯೋಣ.
2 : ನಿಮ್ಮ ಹೃದಯಗಳಲ್ಲಿ ನಮಗೆ ಸ್ಥಳವಿರಲಿ. ನಾವು ಯಾರಿಗೂ ಅನ್ಯಾಯಮಾಡಿಲ್ಲ, ಯಾರಿಗೂ ಕೇಡನ್ನು ಬಗೆದಿಲ್ಲ, ಯಾರನ್ನೂ ವಂಚಿಸಲಿಲ್ಲ,
3 : ನಿಮ್ಮನ್ನು ನಿಂದಿಸುವುದಕ್ಕಾಗಿ ಇದನ್ನು ನಾನು ಹೇಳುತ್ತಿಲ್ಲ; ಈ ಮೊದಲೇ ನಿಮಗೆ ತಿಳಿಸಿರುವಂತೆ, ‘ಸತ್ತರೂ ಒಂದಾಗಿ ಸಾಯುತ್ತೇವೆ, ಬದುಕಿದರೂ ಒಂದಾಗಿ ಬದುಕುತ್ತೇವೆ,’ ಎನ್ನುವಷ್ಟರ ಮಟ್ಟಿಗೆ ನೀವು ನನ್ನ ಹೃದಯದಲ್ಲಿದ್ದೀರಿ.
4 : ನಿಮ್ಮಲ್ಲಿ ನನಗೆ ದೃಢವಾದ ಭರವಸೆಯುಂಟು. ಗಾಢವಾದ ಅಭಿಮಾನವುಂಟು. ನಮ್ಮೆಲ್ಲಾ ಸಂಕಟಗಳಲ್ಲೂ ನಾನು ಎದೆಗುಂದದೆ ಆನಂದಭರಿತನಾಗಿದ್ದೇನೆ.
5 : ನಾವು ಮಕೆದೋನಿಯವನ್ನು ತಲುಪಿದ ಮೇಲೂ ದೇಹಕ್ಕೆ ಕಿಂಚಿತ್ತಾದರೂ ವಿಶ್ರಾಂತಿ ಸಿಗಲಿಲ್ಲ. ಎಲ್ಲಾ ಕಡೆಗಳಿಂದಲೂ ನಮಗೆ ತೊಂದರೆ ತಾಪತ್ರಯಗಳು ಬಂದುವು. ಹೊರಗೆ ಕಲಹ, ಒಳಗೆ ತಳಮಳ;
6 : ಆದರೂ ಎದೆಗುಂದಿದವರನ್ನು ಸಂತೈಸುವ ದೇವರು ತೀತನನ್ನು ಕಳುಹಿಸಿ ನಮ್ಮನ್ನು ಸಂತೈಸಿದರು.
7 : ತೀತನ ಆಗಮನದಿಂದ ಮಾತ್ರವಲ್ಲ, ನೀವು ಆತನಿಗೆ ತೋರಿದ ಪ್ರೀತ್ಯಾದರದ ವರದಿಯಿಂದಲೂ ನಾವು ಪುನಃ ಚೇತನಗೊಂಡೆವು. ನನ್ನನ್ನು ನೋಡಲು ನಿಮಗಿರುವ ಹಂಬಲ, ನನ್ನ ಮೇಲೆ ನಿಮಗಿರುವ ಅನುಕಂಪ, ನನ್ನ ಬಗ್ಗೆ ನಿಮಗಿರುವ ಹಿತಚಿಂತನೆ, ಇವುಗಳನ್ನು ಕೇಳಿ ನಮಗೆ ಮತ್ತಷ್ಟು ಆನಂದವಾಯಿತು.
8 : ನಾನು ಬರೆದ ಪತ್ರದಿಂದ ನಿಮ್ಮ ಮನಸ್ಸಿಗೆ ನೋವಾಗಿರಬಹುದು. ಆದರೂ ಚಿಂತೆಯಿಲ್ಲ. ಆ ಪತ್ರವು ನಿಮ್ಮನ್ನು ಸ್ವಲ್ಪಕಾಲ ದುಃಖಕ್ಕೀಡು ಮಾಡಿತೆಂದು ನಾನು ಮೊದಮೊದಲು ನೊಂದುಕೊಂಡೆನಾದರೂ ಈಗ ಸಂತೋಷಪಡುತ್ತೇನೆ.
9 : ನಿಮಗೆ ದುಃಖ ಉಂಟಾಯಿತೆಂಬ ಕಾರಣದಿಂದ ಅಲ್ಲ, ಆ ದುಃಖದಿಂದ ನಿಮಗೆ ಮನಪರಿವರ್ತನೆ ಆಯಿತೆಂಬ ಕಾರಣದಿಂದ ಸಂತೋಷಪಡುತ್ತೇನೆ. ನಿಮಗೆ ದುಃಖ ಉಂಟಾದುದು ದೇವರ ಚಿತ್ತವೇ ಸರಿ. ಆದರೆ ನನ್ನಿಂದ ನಿಮಗೆ ಅನ್ಯಾಯವೇನೂ ಆಗಲಿಲ್ಲ.
10 : ದೇವರ ಚಿತ್ತಾನುಸಾರ ಬಂದೊದಗುವ ದುಃಖವು ಹೃದಯ ಪರಿವರ್ತನೆಗೆ ಕಾರಣವಾಗುತ್ತದೆ; ಜೀವೋದ್ಧಾರಕ್ಕೆ ಎಡೆಮಾಡುತ್ತದೆ. ಕೇವಲ ಪ್ರಾಪಂಚಿಕವಾದ ದುಃಖವು ಸಾವಿಗೆ ಒಯ್ಯುತ್ತದೆ;
11 : ದೇವರ ಚಿತ್ತಾನುಸಾರವಾದ ನಿಮ್ಮ ದುಃಖದಿಂದ ಎಂಥಾ ಶ್ರದ್ಧೆ ಉಂಟಾಗಿದೆ ಎಂಬುದನ್ನು ಗಮನಿಸಿ ನೋಡಿರಿ: ನಿಮ್ಮಲ್ಲಿ ಎಂಥ ಉತ್ಸಾಹ, ದೋಷವಿಮುಕ್ತರಾಗಲು ಎಂಥ ಪ್ರಯಾಸ, ಎಷ್ಟು ರೋಷ, ಎಷ್ಟು ಆವೇಶ, ಎಷ್ಟು ಎಚ್ಚರಿಕೆ, ಎಷ್ಟು ಹಂಬಲ, ತಪ್ಪಿತಸ್ಥರನ್ನು ಶಿಕ್ಷಿಸಲು ಎಷ್ಟು ಕಟ್ಟುನಿಟ್ಟು! ನೀವು ನಿರ್ದೋಷಿಗಳೆಂಬುದಕ್ಕೆ ಇವೆಲ್ಲವೂ ಸಾದೃಶ್ಯಗಳಾಗಿವೆ.
12 : ನಾನು ನಿಮಗೆ ಆ ಪತ್ರವನ್ನು ಬರೆದದ್ದು ತಪ್ಪುಮಾಡಿದವನಿಗೆ ದಂಡನೆಯಾಗಲಿ ಎಂದಲ್ಲ, ಆ ತಪ್ಪಿನಿಂದ ನೊಂದವನಿಗೆ ನ್ಯಾಯ ದೊರಕಲೆಂದೂ ಅಲ್ಲ; ನಮ್ಮ ಬಗ್ಗೆ ನಿಮಗಿರುವ ಅಕ್ಕರೆ-ಆಸಕ್ತಿಗಳು ದೇವರ ಸನ್ನಿಧಿಯಲ್ಲಿ ನಿಮಗೆ ವ್ಯಕ್ತವಾಗಲೆಂದೇ ಬರೆದೆನು. ಆದ್ದರಿಂದಲೇ ನಮ್ಮ ಮನಸ್ಸಿಗೆ ನೆಮ್ಮದಿ ಉಂಟಾಗಿದೆ.
13 : ಅಷ್ಟೇ ಅಲ್ಲ, ನೀವೆಲ್ಲರೂ ತೀತನ ಮನಸ್ಸನ್ನು ತಣಿಸಿದ್ದರಿಂದ ಆತನ ಸಂತೋಷವನ್ನು ಕಂಡು ನಾವು ಮತ್ತಷ್ಟು ತೃಪ್ತರಾಗಿದ್ದೇವೆ.
14 : ತೀತನ ಮುಂದೆ ನಾನು ನಿಮ್ಮನ್ನು ಹೊಗಳಿದ್ದು ನಿಜ; ಹಾಗೆ ಹೊಗಳಿದ್ದಕ್ಕಾಗಿ ನಾನು ನಾಚಿಕೆ ಪಡಬೇಕಾಗಿಲ್ಲ. ನಾವು ನಿಮಗೆ ಹೇಳಿದ್ದೆಲ್ಲವೂ ಹೇಗೆ ಸತ್ಯವಾಗಿತ್ತೋ, ಹಾಗೆಯೇ ತೀತನ ಮುಂದೆ ನಾವು ಆಡಿದ ಹೊಗಳಿಕೆಯ ಮಾತುಗಳೆಲ್ಲವೂ ಸತ್ಯವಾಗಿವೆ.
15 : ನಿಮ್ಮೆಲ್ಲರ ವಿನಯ-ವಿಧೇಯತೆಯನ್ನು, ಭಯಭಕ್ತಿಯಿಂದ ನೀವು ನೀಡಿದ ಸ್ವಾಗತವನ್ನು ಸ್ಮರಿಸಿಕೊಳ್ಳುವಾಗಲೆಲ್ಲ ನಿಮ್ಮ ಮೇಲೆ ಆತನಿಗಿರುವ ಪ್ರೀತಿ ಉಕ್ಕಿ ಹರಿಯುತ್ತದೆ.
16 : ನಿಮ್ಮ ಮೇಲೆ ನನಗೆ ಪೂರ್ಣ ಭರವಸೆ ಇದೆ. ಇದೇ ನನ್ನ ಸಂತೋಷ.

· © 2017 kannadacatholicbible.org Privacy Policy