1 :
ದೇವರೊಡನೆ ದುಡಿಯುತ್ತಿರುವ ನಾವು ನಿಮ್ಮಲ್ಲಿ ವಿಜ್ಞಾಪಿಸುವುದೇನೆಂದರೆ: ದೇವರಿಂದ ನೀವು ಪಡೆದ ವರಪ್ರಸಾದಗಳನ್ನು ವ್ಯರ್ಥಮಾಡಬೇಡಿ
2 : “ಸುಪ್ರಸನ್ನತೆಯ ಕಾಲದಲ್ಲಿ ನಿನ್ನನ್ನಾಲಿಸಿದೆನು; ಉದ್ಧಾರ ದಿನದಂದು ನಿನಗೆ ನೆರವಾದೆನು,” ಎಂದಿದ್ದಾರೆ ದೇವರು. ಇದೇ ಆ ಸುಪ್ರಸನ್ನತೆಯ ಕಾಲ. ಇದೇ ಆ ಉದ್ಧಾರದ ಸುದಿನ.
3 : ನಮ್ಮ ಸೇವಾಕಾರ್ಯವು ಅವಹೇಳನಕ್ಕೆ ಗುರಿಯಾಗದಂತೆ, ನಾವು ಯಾರಿಗೂ ಯಾವ ತೆರನಾದ ಅಡ್ಡಿಯನ್ನೂ ಒಡ್ಡಲಿಲ್ಲ.
4 : ಬದಲಿಗೆ, ಎಲ್ಲ ವಿಷಯಗಳಲ್ಲೂ ದೇವರ ದಾಸರೆಂದು ತೋರಿಸಿಕೊಳ್ಳುತ್ತೇವೆ. ಕಷ್ಟಸಂಕಟಗಳಲ್ಲೂ ದುಃಖದುರಿತಗಳಲ್ಲೂ ತಾಳ್ಮೆಯಿಂದ ವರ್ತಿಸಿದ್ದೇವೆ.
5 : ಏಟುಪೆಟ್ಟುಗಳನ್ನು ತಿಂದಿದ್ದೇವೆ, ಸೆರೆಮನೆವಾಸ ಅನುಭವಿಸಿದ್ದೇವೆ, ಕೋಪಕ್ರಾಂತಿಗಳಿಗೆ ಗುರಿಯಾಗಿದ್ದೇವೆ, ಮೈಮುರಿಯೆ ದುಡಿದಿದ್ದೇವೆ, ನಿದ್ದೆಗೆಟ್ಟು ಬಳಲಿದ್ದೇವೆ, ಊಟವಿಲ್ಲದೆ ಸೊರಗಿದ್ದೇವೆ.
6 : ನಿರ್ಮಲ ಮನಸ್ಸು, ಸನ್ಮತಿ, ಸಹನೆ, ಸದಯತೆಯಿಂದಲೂ, ಪವಿತ್ರಾತ್ಮ, ನಿಷ್ಕಪಟ ಪ್ರೇಮ,
7 : ಸತ್ಯೋಕ್ತಿ, ದೈವಶಕ್ತಿ ಇವುಗಳಿಂದಲೂ ನಾವು ದೇವರ ದಾಸರೆಂದು ತೋರ್ಪಡಿಸುತ್ತೇವೆ. ರಕ್ಷಿಸಲೂ ಎದುರಿಸಲೂ ಧರ್ಮವೆಂಬ ಆಯುಧವನ್ನು ಕೈಯಲ್ಲಿ ಹಿಡಿದಿದ್ದೇವೆ.
8 : ಮಾನ-ಅವಮಾನ, ಕೀರ್ತಿ-ಅಪಕೀರ್ತಿ ಎರಡನ್ನೂ ಅನುಭವಿಸುತ್ತಿದ್ದೇವೆ. ಸತ್ಯವಾದಿಗಳು ನಾವಾದರೂ ಮಿಥ್ಯವಾದಿಗಳು ಎಂದೆನಿಸಿಕೊಂಡಿದ್ದೇವೆ.
9 : ಪ್ರಖ್ಯಾತರಾಗಿದ್ದರೂ ಖ್ಯಾತಿರಹಿತರಾಗಿದ್ದೇವೆ. ಬದುಕಿದ್ದರೂ ಸತ್ತವರೆನಿಸಿಕೊಂಡಿದ್ದೇವೆ. ಶಿಕ್ಷೆಗೆ ಗುರಿಯಾಗಿದ್ದರೂ ಇನ್ನೂ ಕೊಲೆಗೆ ಈಡಾಗದೆ ಇದ್ದೇವೆ.
10 : ದುಃಖಪಡುತ್ತಿದ್ದರೂ ಸದಾ ಸಂತೋಷದಿಂದ ಇದ್ದೇವೆ. ದರಿದ್ರರಾಗಿದ್ದರೂ ಅನೇಕರನ್ನು ಧನವಂತರನ್ನಾಗಿಸುತ್ತಿದ್ದೇವೆ; ನಾವು ಏನೂ ಇಲ್ಲದವರಾಗಿದ್ದರೂ ಎಲ್ಲವನ್ನೂ ಪಡೆದವರಂತೆ ಇದ್ದೇವೆ.
11 : ಕೊರಿಂಥದ ನಿವಾಸಿಗಳೇ, ಬಿಚ್ಚು ಮನದಿಂದಲೂ ತೆರೆದ ಹೃದಯದಿಂದಲೂ ನಾವು ನಿಮ್ಮೊಡನೆ ಮಾತನಾಡಿದ್ದೇವೆ.
12 : ನಮ್ಮಲ್ಲಿ ಸಂಕುಚಿತ ಭಾವನೆಯೇನೂ ಇಲ್ಲ. ಇದು ಇರುವುದಾದರೆ ನಿಮ್ಮಲ್ಲೇ.
13 : ಆದ್ದರಿಂದ ಮಕ್ಕಳಿಗೆ ಹೇಳುವಂತೆ ಹೇಳುತ್ತಿದ್ದೇವೆ; ನಾವು ನಿಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿದಂತೆ, ನೀವೂ ನಮ್ಮನ್ನು ಪೂರ್ಣ ಹೃದಯದಿಂದ ಪ್ರೀತಿಸಿರಿ.
14 :
ಅವಿಶ್ವಾಸಿಗಳೊಡನೆ ಒಂದಾಗಬೇಡಿ. ಧರ್ಮಕ್ಕೂ ಅಧರ್ಮಕ್ಕೂ ಸಾಟಿಯೆಲ್ಲಿ? ಬೆಳಕಿಗೂ ಕತ್ತಲೆಗೂ ಎಲ್ಲಿಯ ಸಂಬಂಧ?
15 : ಕ್ರಿಸ್ತಯೇಸುವಿಗೂ ಸೈತಾನನಿಗೂ ಎಲ್ಲಿಯ ನಂಟು? ವಿಶ್ವಾಸಿಗೂ ಅವಿಶ್ವಾಸಿಗೂ ಎಲ್ಲಿಯ ಸಹವಾಸ?
16 : ದೇವರ ಆಲಯಕ್ಕೂ ಕಲ್ಲಿನ ವಿಗ್ರಹಕ್ಕೂ ಎಲ್ಲಿಯ ಸಾಮ್ಯ? ನಾವಾದರೋ ಜೀವಂತ ದೇವರ ಮಂದಿರವಾಗಿದ್ದೇವೆ. ಇದನ್ನು ದೇವರೇ ಹೇಳಿದ್ದಾರೆ:
“ನನ್ನ ಜನರೆಲ್ಲೇ ನಾ ಮನೆಮಾಡುವೆನು
ಅವರ ನಡುವೆಯೇ ನಾ ತಿರುಗಾಡುವೆನು
ಅವರಿಗೆ ನಾನೇ ದೇವರಾಗಿರುವೆನು
ಅವರೆನಗೆ ಪ್ರಜೆಯಾಗಿರುವರು.”
17 : ಇದಲ್ಲದೆ:
“ಅನ್ಯ ಜನರನ್ನು ಬಿಟ್ಟು ಹೊರಬನ್ನಿರಿ
ಅವರಿಂದ ಬೇರ್ಪಟ್ಟು ಬಾಳಿರಿ
ಮಲಿನವಾದುದನ್ನು ಮುಟ್ಟದಿರಿ.
18 : ಅಕ್ಕರೆಯಿಂದ ನಾನಾಗ ನಿಮ್ಮನ್ನು
ಸ್ವಾಗತಿಸುವೆನು
ತಂದೆಯಾಗಿರುವೆನು ನಾನು ನಿಮಗೆ
ಪುತ್ರ ಪುತ್ರಿಯರಾಗಿರುವಿರಿ ನೀವು ನನಗೆ.”
ಎಂದು ನುಡಿದಿಹರು ಸರ್ವಶಕ್ತ ಪ್ರಭು.