1 : ಭೂಮಿಯ ಮೇಲಿನ ನಮ್ಮ ಈ ದೇಹ ಎಂಬ ಗುಡಾರವು ನಾಶವಾಗಿ ಹೋದರೂ ಸ್ವರ್ಗದಲ್ಲಿ ಶಾಶ್ವತವಾದ ಗೃಹವೊಂದು ನಮಗೆ ದೊರಕುವುದು. ಅದು ಮಾನವರಿಂದ ನಿರ್ಮಿತ ಆದುದಲ್ಲ, ದೇವರಿಂದಲೇ ನಿರ್ಮಿತವಾದುದು. ಇದು ನಮಗೆ ತಿಳಿದ ವಿಷಯ.
2 : ಈ ಗುಡಾರದಲ್ಲಿರುವವರೆಗೆ ನಾವು ನರಳುತ್ತೇವೆ; ಸ್ವರ್ಗೀಯ ನಿವಾಸವನ್ನು ನಮ್ಮ ದೇಹದ ಮೇಲೆ ಎಂದಿಗೆ ನಾವು ಧರಿಸಿಕೊಳ್ಳುತ್ತೇವೋ ಎಂದು ಹಾತೊರೆಯುತ್ತೇವೆ.
3 : ಅದನ್ನು ಧರಿಸಿಕೊಂಡಾಗ ನಾವು ಬೆತ್ತಲೆಯಾಗಿ ಇರಲಾರೆವು.
4 : ನಾವು ಈ ದೇಹವೆಂಬ ಗುಡಾರದಲ್ಲಿರುವ ತನಕ ನರಳುತ್ತೇವೆ, ಭಾರದಿಂದ ಬಳಲುತ್ತೇವೆ. ಈ ದೇಹವು ಕಳಚಿ ಹೋಗಬೇಕೆಂಬುದು ನಮ್ಮ ಬಯಕೆ ಅಲ್ಲ. ನಶ್ವರವಾದುದು ನುಂಗಿಹೋಗಿ ಅಮರವಾದುದು ಉಳಿಯಬೇಕೆಂದೇ ಈ ಗುಡಾರದ ಮೇಲೆ ಆ ನಿವಾಸವನ್ನು ಧರಿಸಿಕೊಳ್ಳಲು ಅಪೇಕ್ಷಿಸುತ್ತೇವೆ.
5 : ಈ ಸುಸ್ಥಿತಿಗಾಗಿಯೇ ದೇವರು ನಮ್ಮನ್ನು ಸಿದ್ಧಗೊಳಿಸಿದ್ದಾರೆ. ಇದಕ್ಕೆಲ್ಲಾ ಖಾತರಿಯಾಗಿ ಪವಿತ್ರಾತ್ಮರನ್ನೇ ನಮಗೆ ದಯಪಾಲಿಸಿದ್ದಾರೆ.
6 : ಈ ಕಾರಣದಿಂದಲೇ ನಾವು ಸದಾ ಸ್ಥಿರಚಿತ್ತರಾಗಿದ್ದೇವೆ. ಈ ದೇಹವನ್ನೇ ನೆಚ್ಚಿ ಇದರಲ್ಲೇ ನೆಲೆಯಾಗಿರುವವರೆಗೂ ನಾವು ಪ್ರಭುವಿನಿಂದ ದೂರವಿರುವ ಪ್ರವಾಸಿಗಳಂತೆ ಇದ್ದೇವೆ.
7 : ನಾವು ನೋಡಿ ನಡೆಯುವವರಲ್ಲ, ನಂಬಿ ನಡೆಯುವವರು.
8 : ಆದ್ದರಿಂದ ಈ ದೇಹವನ್ನು ತ್ಯಜಿಸಿ, ಪ್ರಭುವನ್ನೇ ನೆಚ್ಚಿ ನೆಲಸುವುದು ಲೇಸೆಂದು ಧೈರ್ಯದಿಂದ ಹೇಳುತ್ತೇವೆ.
9 : ಈ ಕಾರಣ, ಇಲ್ಲಾದರೂ ಸರಿ, ಅಲ್ಲಾದರೂ ಸರಿ, ಪ್ರಭು ಮೆಚ್ಚುವಂತೆ ಬಾಳುವುದೊಂದೇ ನಮ್ಮ ಗುರಿ.
10 : ನಾವು ಎಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತ ಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನೂ ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇಬೇಕು.
11 :
ಪ್ರಭುವಿನ ಭಯಭಕ್ತಿ ನಮಗಿರುವುದರಿಂದ ನಾವು ಮಾನವರ ಮನವೊಲಿಸಲು ಪ್ರಯತ್ನಿಸುತ್ತೇವೆ. ನಾವು ಎಂಥವರೆಂದು ದೇವರು ಚೆನ್ನಾಗಿ ಬಲ್ಲರು. ಅದು ನಿಮ್ಮ ಮನಸ್ಸಾಕ್ಷಿಗೂ ಅರಿವಾಗಿದೆಯೆಂದು ನಂಬುತ್ತೇವೆ.
12 : ಮತ್ತೊಮ್ಮೆ ನಮ್ಮನ್ನು ನಾವೇ ಹೊಗಳಿಕೊಳ್ಳುತ್ತೇವೆಂದು ನೀವು ಭಾವಿಸಬಾರದು. ನಮ್ಮನ್ನು ಕುರಿತು ನೀವೇ ಹೆಚ್ಚಳ ಪಡುವಂತೆ ಒಂದು ಅವಕಾಶವನ್ನು ಒದಗಿಸುತ್ತಿದ್ದೇವೆ, ಅಷ್ಟೆ. ಹೀಗೆ, ಮನುಷ್ಯನ ಅಂತರಂಗವನ್ನು ಅರಿಯದೆ ಅವನ ಹೊರತೋರಿಕೆಗಳನ್ನೇ ನೆಚ್ಚಿನಲಿಯುವವರಿಗೆ ಸೂಕ್ತ ಪ್ರತ್ಯುತ್ತರವನ್ನು ಕೊಡಲು ನೀವು ಶಕ್ತರಾಗುತ್ತೀರಿ.
13 : ನಮಗೆ ಬುದ್ಧಿಭ್ರಮಣೆಯಾಗಿದೆಯೆಂದು ಭಾವಿಸುತ್ತೀರೋ? ಹಾಗಿದ್ದರೆ ಅದು ದೇವರ ಮಹಿಮೆಗಾಗಿ. ನಾವು ಸ್ವಸ್ಥಬುದ್ಧಿಯುಳ್ಳವರೆಂದು ನೆನೆಸುತ್ತೀರೋ? ಹಾಗಿದ್ದರೆ ಅದು ನಿಮ್ಮ ಹಿತಕ್ಕಾಗಿ.
14 : ಯೇಸುಕ್ರಿಸ್ತರ ಪ್ರೀತಿಯ ಪಾಲನೆಗೆ ನಾವು ಒಳಗಾಗಿದ್ದೇವೆ. ಎಲ್ಲಾ ಮಾನವರಿಗೋಸ್ಕರ ಒಬ್ಬನು ಮರಣಹೊಂದಿದನು. ಆದ್ದರಿಂದ ನಾವೆಲ್ಲರೂ ಆ ಮರಣದಲ್ಲಿ ಪಾಲುಗಾರರು.
15 : ಸರ್ವರಿಗೂ ಯೇಸು ಪ್ರಾಣತ್ಯಾಗಮಾಡಿದರು. ಪರಿಣಾಮವಾಗಿ, ಇನ್ನು ಮುಂದೆ ಜೀವಿಸುವವರು ತಮಗಾಗಿ ಜೀವಿಸದೆ, ಸತ್ತು ಪುನರುತ್ಥಾನರಾದ ಯೇಸುವಿಗಾಗಿ ಜೀವಿಸಬೇಕು.
16 : ಇನ್ನು ಮುಂದೆ ನಾವು ಯಾರನ್ನೂ ಕೇವಲ ಮಾನವ ದೃಷ್ಟಿಯಿಂದ ಪರಿಗಣಿಸುವುದಿಲ್ಲ. ಒಂದು ಕಾಲದಲ್ಲಿ, ಕ್ರಿಸ್ತಯೇಸುವನ್ನು ನಾವು ಹಾಗೆ ಪರಿಗಣಿಸಿದ್ದುಂಟು. ಆದರೆ ಇನ್ನು ಮುಂದೆ ಹಾಗೆ ಮಾಡುವುದಿಲ್ಲ.
17 : ಯಾರಾದರೂ ಯೇಸುಕ್ರಿಸ್ತರೊಡನೆ ಒಂದಾದರೆ ಅವನು ನೂತನ ಸೃಷ್ಟಿಯಾಗುತ್ತಾನೆ. ಹಳೆಯದೆಲ್ಲಾ ಅಳಿದು ಹೋಗುತ್ತದೆ. ಹೊಸದಿದೋ, ಜನ್ಮ ತಳೆದಿದೆ.
18 : ಇದೆಲ್ಲಾ ಆಗುವುದು ದೇವರಿಂದ. ದೇವರು ಕ್ರಿಸ್ತಯೇಸುವಿನ ಮುಖಾಂತರ ನಮ್ಮನ್ನು ತಮ್ಮೊಡನೆ ಸಂಧಾನ ಪಡಿಸಿಕೊಂಡಿದ್ದಾರೆ. ಇದಲ್ಲದೆ, ಇತರರನ್ನು ಸಂಧಾನಕ್ಕೆ ತರುವ ಕಾರ್ಯವನ್ನು ನಮಗೆ ವಹಿಸಿದ್ದಾರೆ.
19 : ಹೌದು, ದೇವರು ಮಾನವರ ಅಪರಾಧಗಳನ್ನು ಲೆಕ್ಕಿಸದೆ, ಕ್ರಿಸ್ತ ಯೇಸುವಿನಲ್ಲಿ ಇಡೀ ಜಗತ್ತನ್ನೇ ತಮ್ಮೊಡನೆ ಸಂಧಾನಗೊಳಿಸುತ್ತಿದ್ದಾರೆ. ಈ ಸಂಧಾನದ ಸಂದೇಶವನ್ನು ಸಾರುವ ಸೌಭಾಗ್ಯವನ್ನು ಅವರೇ ನಮಗೆ ಕೊಟ್ಟಿದ್ದಾರೆ.
20 : ಆದ್ದರಿಂದಲೇ ನಾವು ಕ್ರಿಸ್ತಯೇಸುವಿನ ರಾಯಭಾರಿಗಳು. ದೇವರೇ ನಮ್ಮ ಮುಖಾಂತರ ಕರೆನೀಡುತ್ತಿದ್ದಾರೆ. ಅವರೊಡನೆ ಸಂಧಾನಮಾಡಿಕೊಳ್ಳಿರೆಂದು ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾವು ನಿಮ್ಮನ್ನು ವಿನಂತಿಸುತ್ತೇವೆ.
21 : ಪಾಪವನ್ನೇ ಅರಿಯದ ಕ್ರಿಸ್ತಯೇಸುವನ್ನು ದೇವರು ನಮಗೋಸ್ಕರ ಪಾಪಸ್ವರೂಪಿಯನ್ನಾಗಿಸಿದರು. ಕ್ರಿಸ್ತಯೇಸುವಿನಲ್ಲಿ ನಾವು ದೇವರೊಡನೆ ಸತ್ಸಂಬಂಧವನ್ನು ಪಡೆಯಲೆಂದೇ ಹೀಗೆ ಮಾಡಿದರು.