Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಕೊರಿಂಥ


1 : ನಾವೀಗ ಆತ್ಮಸ್ತುತಿಯನ್ನು ಮಾಡಲು ಆರಂಭಿಸಿದಂತೆ ತೋರುತ್ತದೆಯೇ? ಅಥವಾ ನಿಮಗೆ ತೋರಿಸಲು ಯೋಗ್ಯತಾಪತ್ರ ಇತರರಿಗೆ ಬೇಕಾಗಿರುವಂತೆ ನಮಗೂ ಬೇಕಾಗಿದೆಯೇ? ಇಲ್ಲವೆ, ಯೋಗ್ಯತಾಪತ್ರವನ್ನು ನಿಮ್ಮಿಂದ ಪಡೆಯುವ ಅವಶ್ಯಕತೆ ನಮಗೂ ಇದೆಯೇ?
2 : ನೀವೇ ನಮ್ಮ ಯೋಗ್ಯತಾಪತ್ರ, ನಮ್ಮ ಹೃದಯಪಟಲದ ಮೇಲೆ ಬರೆಯಲಾದ ಪತ್ರ. ಅದನ್ನು ಯಾರು ಬೇಕಾದರೂ ಗುರುತಿಸಬಹುದು, ಓದಿ ತಿಳಿದುಕೊಳ್ಳಬಹುದು.
3 : ಕ್ರಿಸ್ತ ಯೇಸುವೇ ನಮ್ಮಿಂದ ಬರೆಸಿದ ಪತ್ರ ನೀವು; ಇದು ಸ್ಪಷ್ಟ. ಬರೆದಿರುವುದು ಶಾಯಿಯಿಂದಲ್ಲ, ಜೀವಂತ ದೇವರ ಪವಿತ್ರಾತ್ಮರಿಂದ. ಕೊರೆದದ್ದೂ ಕಲ್ಲಿನ ಮೇಲೆ ಅಲ್ಲ, ಮಾನವ ಹೃದಯದ ಮೇಲೆ.
4 : ಕ್ರಿಸ್ತಯೇಸುವಿನ ಮುಖಾಂತರ ನಮಗೆ ದೇವರಲ್ಲಿ ಇಂಥ ಭರವಸೆ ಇರುವುದರಿಂದಲೇ ಇದನ್ನು ಹೇಳುತ್ತಿದ್ದೇವೆ.
5 : ನಮ್ಮ ಸ್ವಂತ ಶಕ್ತಿಯಿಂದಲೇ ಏನನ್ನೋ ಸಾಧಿಸಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳುವ ಸಾಮಥ್ರ್ಯ ನಮಗಿಲ್ಲ. ನಮ್ಮ ಸಾಮಥ್ರ್ಯವೆಲ್ಲ ದೇವರಿಂದಲೇ ಬಂದುದು.
6 : ನಮಗೆ ಹೊಸ ಒಡಂಬಡಿಕೆಯ ಸೇವಕರಾಗುವಂಥ ಸಾಮಥ್ರ್ಯವನ್ನು ನೀಡಿದವರು ದೇವರೇ. ಈ ಒಡಂಬಡಿಕೆ ಲಿಖಿತ ಶಾಸನಕ್ಕೆ ಸಂಬಂಧಿಸಿದ್ದಲ್ಲ, ಪವಿತ್ರಾತ್ಮರಿಗೆ ಸಂಬಂಧಿಸಿದ್ದು, ಲಿಖಿತವಾದುದು ಮೃತ್ಯುಕಾರಕವಾದುದು; ಪವಿತ್ರಾತ್ಮ ಸಂಬಂಧವಾದುದು ಸಜ್ಜೀವದಾಯಕವಾದುದು.
7 : ಕಲ್ಲಿನ ಮೇಲೆ ಕೊರೆಯಲಾದ ಶಾಸನ ಪ್ರಕಟವಾದಾಗ ದೇವರ ಮಹಿಮೆ ಕಾಣಿಸಿಕೊಂಡಿತು. ಆಗ ಮೋಶೆಯ ಮುಖವನ್ನು ಆವರಿಸಿದ್ದ ಪ್ರಭೆ ಕುಂದಿಹೋಗುವಂಥದ್ದಾಗಿದ್ದರೂ ಆ ಪ್ರಭೆಯಿಂದಾಗಿ ಆತನ ಮುಖವನ್ನು ದಿಟ್ಟಿಸಿ ನೋಡಲು ಇಸ್ರಯೇಲರಿಗೆ ಆಗಲಿಲ್ಲ.
8 : ಮೃತ್ಯುಕಾರಕವಾದ ಈ ಶಾಸನ ಅಷ್ಟು ಮಹಿಮೆಯಿಂದ ಕೂಡಿತ್ತಾದರೆ ಪವಿತ್ರಾತ್ಮ ಚೈತನ್ಯದಿಂದ ಕೂಡಿದ ಸೇವೆಯು ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?
9 : ದಂಡನೆಗೆ ಗುರಿಮಾಡುವ ಈ ಶಾಸನ ಸೇವೆ ಇಷ್ಟು ಮಹಿಮೆಯಿಂದ ಕೂಡಿದ್ದಾದರೆ, ಸದ್ಧರ್ಮಿಗಳೆಂದು ನಿರ್ಣಯಿಸುವ ಸೇವೆ ಇನ್ನೆಷ್ಟು ಮಹಿಮೆಯಿಂದ ಕೂಡಿರಬೇಕು?
10 : ಈ ಸೇವೆಯ ಅಪರಿಮಿತ ಮಹಿಮೆಯ ಮುಂದೆ ಹಿಂದಿನ ಶಾಸನದ ಮಹಿಮೆ ಇಲ್ಲದಂತಾಗಿದೆ.
11 : ಅಳಿದು ಹೋಗುವಂಥದ್ದೇ, ಅಷ್ಟು ಮಹಿಮೆಯಿಂದ ಕೂಡಿತ್ತಾದರೆ, ಶಾಶ್ವತವಾಗಿ ಉಳಿಯುವಂಥದ್ದು ಮತ್ತೆಷ್ಟು ಮಹಿಮೆಯಿಂದ ಕೂಡಿರಬೇಕು?
12 : ನಮಗೆ ಇಂಥ ಭರವಸೆ ಇರುವುದರಿಂದಲೇ ನಾವು ಇಷ್ಟು ಧೈರ್ಯದಿಂದ ಇದ್ದೇವೆ.
13 : ಕುಂದಿಹೋಗುವಂಥ ಮಹಿಮೆಯು ನಂದಿಹೋಗುವುದನ್ನು ಇಸ್ರಯೇಲರು ಕಾಣದಂತೆ ಮೋಶೆಯು ತನ್ನ ಮುಖಕ್ಕೆ ಮುಸುಕು ಹಾಕಿಕೊಳ್ಳುತ್ತಿದ್ದನು. ನಾವು ಆತನಂತೆ ಅಲ್ಲ.
14 : ಆ ಜನರ ಬುದ್ಧಿಗೆ ಮಂಕು ಕವಿದಿತ್ತು. ಇಂದಿನವರೆಗೂ ಹಳೆಯ ಒಡಂಬಡಿಕೆಯನ್ನು ಓದುವಾಗಲೆಲ್ಲಾ ಅದೇ ಮಂಕಿನ ಮುಸುಕು ಕವಿದಿದೆ. ಅದನ್ನು ಕ್ರಿಸ್ತಯೇಸುವಿನ ಮುಖಾಂತರವೇ ತೆಗೆಯಲು ಸಾಧ್ಯ.
15 : ಹೌದು, ಮೋಶೆ ಬರೆದುದನ್ನು ಓದುವಾಗಲೆಲ್ಲಾ ಅವರ ಮನಸ್ಸು ಇಂದಿಗೂ ಅದೇ ಮುಸುಕಿನಿಂದ ಮುಚ್ಚಿದೆ.
16 : ‘ಪ್ರಭುವಿಗೆ ಅಭಿಮುಖರಾದಾಗ ಮಾತ್ರ ಆ ಮುಸುಕನ್ನು ತೆಗೆಯಲಾಗುತ್ತದೆ.’
17 : ಈ ವಾಕ್ಯದಲ್ಲಿ ‘ಪ್ರಭು’ ಎಂದರೆ ದೇವರ ಆತ್ಮವೇ. ಪ್ರಭುವಿನ ಆತ್ಮ ಎಲ್ಲಿದೆಯೋ ಅಲ್ಲಿ ವಿಮೋಚನೆಯೂ ಇದೆ.
18 : ಮುಸುಕು ತೆರೆದ ಮುಖವುಳ್ಳ ನಾವೆಲ್ಲರೂ ಪ್ರಭುವಿನ ಮಹಿಮೆಯನ್ನು ಪ್ರತಿಬಿಂಬಿಸುವ ಕನ್ನಡಿಯಂತೆ ಇದ್ದೇವೆ. ಆ ಪ್ರಭುವಿನಿಂದ ಹೊರಹೊಮ್ಮುವ ಮಹಿಮೆ ನಮ್ಮನ್ನು ಅಧಿಕಾಧಿಕವಾಗಿ ಮಾರ್ಪಡಿಸಿ ಅವರನ್ನೇ ಹೋಲುವಂತೆ ಮಾಡುತ್ತದೆ. ಇದೆಲ್ಲಾ ದೇವರಾತ್ಮವಾಗಿರುವ ಪ್ರಭುವಿನ ಕಾರ್ಯವೇ ಸರಿ.

· © 2017 kannadacatholicbible.org Privacy Policy