Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಕೊರಿಂಥ


1 : ಇನ್ನೊಮ್ಮೆ ನಿಮ್ಮ ಬಳಿಗೆ ಬಂದು, ನಿಮ್ಮನ್ನು ದುಃಖಕ್ಕೀಡುಮಾಡಬಾರದೆಂದು ನಾನು ನಿರ್ಧರಿಸಿಕೊಂಡೆ.
2 : ನಾನೇ ನಿಮ್ಮನ್ನು ದುಃಖಪಡಿಸಿದೆನಾದರೆ, ನನ್ನನ್ನು ಸಂತೋಷಪಡಿಸುವವರು ಯಾರು? ನನ್ನಿಂದ ದುಃಖಕ್ಕೆ ಒಳಗಾದ ನೀವೇ ಅಲ್ಲವೇ?
3 : ಇದಕ್ಕಾಗಿಯೇ ನಾನು ಆ ಪತ್ರವನ್ನು ಬರೆದದ್ದು; ನನ್ನನ್ನು ಸಂತೋಷಪಡಿಸಬೇಕಾದವರೇ ನನ್ನನ್ನು ದುಃಖಕ್ಕೆ ಈಡುಮಾಡಬಾರದೆಂದು ನಾನು ಬರಲಿಲ್ಲ. ನನ್ನ ಸಂತೋಷವೇ ನಿಮ್ಮ ಸಂತೋಷವೆಂದು ನೀವು ಭಾವಿಸುತ್ತೀರೆಂದು ಬಲ್ಲೆ.
4 : ಮನೋವ್ಯಥೆಯಿಂದಲೂ ಹೃದಯ ವೇದನೆಯಿಂದಲೂ ಕಣ್ಣೀರಿಡುತ್ತಾ ನಾನು ನಿಮಗೆ ಪತ್ರ ಬರೆದೆ. ನಿಮ್ಮನ್ನು ದುಃಖಕ್ಕೀಡು ಮಾಡಬೇಕೆಂದಲ್ಲ, ನಿಮ್ಮನ್ನು ಎಷ್ಟರ ಮಟ್ಟಿಗೆ ಪ್ರೀತಿಸುತ್ತಿರುವೆನೆಂದು ನೀವು ತಿಳಿದುಕೊಳ್ಳಬೇಕೆಂದು ಬರೆದೆ.
5 : ಒಬ್ಬನು ದುಃಖವನ್ನುಂಟು ಮಾಡಿದ್ದಾನಾದರೆ, ಅವನು ಹಾಗೆ ಮಾಡಿದ್ದು ನನಗೊಬ್ಬನಿಗೇ ಅಲ್ಲ, ಒಂದು ವಿಧದಲ್ಲಿ ನಿಮಗೆಲ್ಲರಿಗೂ ಸಹ ದುಃಖವನ್ನುಂಟುಮಾಡಿದ್ದಾನೆ. ಅವನ ಮೇಲೆ ಹೆಚ್ಚು ಕಠಿಣನಾಗಿರಲು ನನಗೆ ಇಷ್ಟವಿಲ್ಲ.
6 : ನಿಮ್ಮಲ್ಲಿ ಬಹುಮಂದಿ ಅವನಿಗೆ ವಿಧಿಸಿರುವ ಶಿಕ್ಷೆಯೇ ಸಾಕಾಗಿದೆ.
7 : ಈಗ ನೀವು ಅವನನ್ನು ಕ್ಷಮಿಸಿ ಸಂತೈಸಿರಿ. ಇಲ್ಲವಾದರೆ ಅವನು ಅತೀವ ದುಃಖದಲ್ಲಿಯೇ ಮುಳುಗಿ ಹೋದಾನು.
8 : ನಿಮ್ಮ ಪ್ರೀತಿ ಅವನಿಗೆ ಮನದಟ್ಟಾಗುವಂತೆ ನಡೆದುಕೊಳ್ಳಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.
9 : ನೀವು ಎಲ್ಲ ವಿಷಯಗಳಲ್ಲೂ ನನಗೆ ವಿಧೇಯರಾಗಿದ್ದೀರೋ ಇಲ್ಲವೋ ಎಂದು ಪರೀಕ್ಷಿಸಲು ನಾನು ಬರೆದದ್ದು.
10 : ನೀವು ಯಾರನ್ನು ಕ್ಷಮಿಸುತ್ತೀರೋ ಅವನನ್ನು ನಾನೂ ಕ್ಷಮಿಸುತ್ತೇನೆ. ನಾನು ಯಾವುದನ್ನಾದರೂ ಕ್ಷಮಿಸಿದ್ದರೆ ಅಥವಾ ಕ್ಷಮಿಸಬೇಕಾಗಿದ್ದರೆ ಅದನ್ನು ಕ್ರಿಸ್ತಯೇಸುವಿನ ಸಮ್ಮುಖದಲ್ಲಿ ನಿಮಗೋಸ್ಕರ ಕ್ಷಮಿಸುತ್ತೇನೆ.
11 : ಸೈತಾನನ ಕುತಂತ್ರಗಳನ್ನು ನಾವು ಅರಿಯದವರಲ್ಲ; ಅವನ ಕೈ ಮೇಲಾಗದಂತೆ ನಾವು ನೋಡಿಕೊಳ್ಳಬೇಕು
12 : ಯೇಸುಕ್ರಿಸ್ತರ ಶುಭಸಂದೇಶವನ್ನು ಸಾರುವುದಕ್ಕೆ ನಾನು ತ್ರೋವಕ್ಕೆ ಬಂದಾಗ, ಪ್ರಭುವಿನ ಕೃಪೆಯಿಂದ ನನಗೆ ಸದವಕಾಶದ ಬಾಗಿಲು ತೆರೆದಿತ್ತು.
13 : ಆದರೆ ನನ್ನ ಸಹೋದರ ತೀತನನ್ನು ಅಲ್ಲಿ ಕಾಣದೆ ಹೋದುದರಿಂದ ನನ್ನ ಮನಸ್ಸಿಗೆ ನೆಮ್ಮದಿ ಇಲ್ಲವಾಯಿತು. ಕೂಡಲೇ ಅಲ್ಲಿಯ ಜನರಿಂದ ಬೀಳ್ಕೊಂಡು ಮಕೆದೋನಿಯಕ್ಕೆ ಹೊರಟೆ.
14 : ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿ ನಮ್ಮನ್ನು ಸದಾ ವಿಜಯೋತ್ಸವದತ್ತ ನಡೆಸುವ ಹಾಗು ಕ್ರಿಸ್ತಜ್ಞಾನವೆಂಬ ಪರಿಮಳವನ್ನು ಎಲ್ಲೆಡೆಯಲ್ಲೂ ನಮ್ಮ ಮೂಲಕ ಪಸರಿಸುವ ದೇವರಿಗೆ ವಂದನೆಗಳು.
15 : ಹೌದು, ಉದ್ಧಾರದ ಮಾರ್ಗದಲ್ಲಿರುವವರಿಗೂ ವಿನಾಶಮಾರ್ಗದಲ್ಲಿರುವವರಿಗೂ ಕ್ರಿಸ್ತಯೇಸುವೇ ದೇವರಿಗರ್ಪಿಸಿದ ಪರಿಮಳದಂತೆ ನಾವು ಇದ್ದೇವೆ.
16 : ವಿನಾಶ ಮಾರ್ಗದಲ್ಲಿರುವವರಿಗೆ ಇದು ಮೃತ್ಯುಕಾರಕ ಗಂಧ; ಉದ್ಧಾರ ಮಾರ್ಗದಲ್ಲಿರುವವರಿಗೆ ಸಜ್ಜೀವದಾಯಕ ಸುಗಂಧ. ಇಂಥ ಕಾರ್ಯಕ್ಕೆ ಸಮರ್ಥರು ಯಾರು?
17 : ಎಷ್ಟೋ ಮಂದಿ ದೇವರ ವಾಕ್ಯವನ್ನು ಕಲಬೆರಕೆ ಮಾಡಿ ವ್ಯಾಪಾರಮಾಡುತ್ತಾರೆ. ನಾವು ಹಾಗಲ್ಲ; ದೇವರಿಂದಲೇ ನಿಯೋಜಿತರಾಗಿ, ದೇವರ ಸಮಕ್ಷಮದಲ್ಲಿ, ಕ್ರಿಸ್ತಯೇಸುವಿನ ಅನ್ಯೋನ್ಯತೆಯಲ್ಲಿ ನಾವು ಯಥಾರ್ಥವಾದುದನ್ನೇ ಉಪದೇಶಿಸುವವರು.

· © 2017 kannadacatholicbible.org Privacy Policy