Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

2ಕೊರಿಂಥ


1 : ನಾನು ನಿಮ್ಮ ಬಳಿಗೆ ಬರುತ್ತಿರುವುದು ಇದು ಮೂರನೆಯ ಬಾರಿ. “ಯಾವ ದೂರಿದ್ದರೂ ಅದಕ್ಕೆ ಇಬ್ಬರು ಮೂವರು ಸಾಕ್ಷಿಗಳ ಆಧಾರವಿರಬೇಕು,” ಎಂದು ಲಿಖಿತವಾಗಿದೆ.
2 : ನಾನು ಎರಡನೆಯ ಸಾರಿ ನಿಮ್ಮ ಬಳಿಗೆ ಬಂದಿದ್ದಾಗ, ಪಾಪಮಾಡಿದ್ದವರನ್ನೂ ಇತರರನ್ನೂ ಎಚ್ಚರಿಸಿದ್ದೆನು. ಈಗ ದೂರವಿದ್ದರೂ ಮತ್ತೆ ಎಚ್ಚರಿಸುತ್ತಿದ್ದೇನೆ. ಪುನಃ ನಾನು ಬರುವಾಗ ಅವರಾರನ್ನೂ ಶಿಕ್ಷಿಸದೆ ಬಿಡುವುದಿಲ್ಲ.
3 : ಕ್ರಿಸ್ತಯೇಸುವೇ ನನ್ನ ಮುಖಾಂತರ ಮಾತನಾಡುತ್ತಾರೆ ಎಂಬುದಕ್ಕೆ ಆಧಾರಬೇಕೆನ್ನುತ್ತೀರಲ್ಲವೇ? ಯೇಸುಕ್ರಿಸ್ತರು ನಿಮ್ಮ ವಿಷಯದಲ್ಲಿ ದುರ್ಬಲರಾಗಿ ವರ್ತಿಸಲಿಲ್ಲ. ಪ್ರಬಲರಾಗಿ ನಿಮ್ಮಲ್ಲಿಯೇ ಇದ್ದಾರೆ ಎಂಬುದೇ ಇದಕ್ಕೆ ಆಧಾರ.
4 : ಬಲಹೀನಾವಸ್ಥೆಯಲ್ಲಿ ಅವರನ್ನು ಶಿಲುಬೆಗೇರಿಸಲಾಯಿತು ಎಂಬುದೇನೋ ನಿಜ. ಆದರೆ, ದೇವರ ಶಕ್ತಿಯಿಂದ ಅವರು ಜೀವಂತರಾಗಿದ್ದಾರೆ. ಕ್ರಿಸ್ತಯೇಸುವಿನಲ್ಲಿ ನಾವೂ ಬಲಹೀನರೇ. ಆದರೆ ನಿಮ್ಮ ವಿಷಯದಲ್ಲಿ ವರ್ತಿಸುವಾಗ ದೇವರ ಶಕ್ತಿಯಿಂದ ಯೇಸುಸ್ವಾಮಿಯೊಂದಿಗೆ ಜೀವಂತರಾಗಿದ್ದೇವೆ.
5 : ನಿಮ್ಮ ಜೀವನ ವಿಶ್ವಾಸದಲ್ಲಿ ಬೇರೂರಿದೆಯೇ ಎಂಬುದನ್ನು ನೀವೇ ಪರೀಕ್ಷಿಸಿನೋಡಿ. ನಿಮ್ಮ ಅಂತರಂಗವನ್ನು ಪರಿಶೋಧಿಸಿ ನೋಡಿ. ಕ್ರಿಸ್ತಯೇಸು ನಿಮ್ಮಲ್ಲಿ ಇದ್ದಾರೆ ಎಂಬುದನ್ನು ಅರಿತಿದ್ದೀರಿ ಅಲ್ಲವೇ? ಅವರು ನಿಮ್ಮಲ್ಲಿ ಇಲ್ಲವಾದರೆ ನೀವು ಅಯೋಗ್ಯರೇ ಸರಿ.
6 : ನಾವಂತೂ ಅಯೋಗ್ಯರಲ್ಲ ಎಂಬ ಅರಿವು ನಿಮಗಾಗಿದೆ ಎಂದು ನಂಬುತ್ತೇನೆ.
7 : ನೀವು ಯಾವ ಕೇಡನ್ನೂ ಮಾಡಬಾರದೆಂದು ದೇವರಲ್ಲಿ ನಾವು ಪ್ರಾರ್ಥಿಸುತ್ತೇವೆ. ಇದರಲ್ಲಿ ನಾವು ಮಾತ್ರ ಯೋಗ್ಯರೆಂದು ತೋರಿಸಿಕೊಳ್ಳುವ ಉದ್ದೇಶ ನಮಗಿಲ್ಲ. ನಾವು ಅಯೋಗ್ಯರೆನಿಸಿಕೊಂಡಿದ್ದರೂ ನೀವು ಒಳಿತನ್ನೇ ಮಾಡಬೇಕೆಂಬುದು ನಮ್ಮ ಉದ್ದೇಶ.
8 : ಸತ್ಯದ ಪರವಾಗಿ ಅಲ್ಲದೆ ಅದಕ್ಕೆ ವಿರುದ್ಧವಾಗಿ ನಾವೇನನ್ನೂ ಮಾಡಲಾರೆವು.
9 : ನೀವು ನಿಜವಾಗಿ ಬಲಾಢ್ಯರಾಗಿದ್ದರೆ ನಾವು ಬಲಹೀನರಾಗಿದ್ದರೂ ನಮಗೆ ಸಂತೋಷವೇ. ನೀವು ಕ್ರೈಸ್ತ ವಿಶ್ವಾಸದಲ್ಲಿ ಪರಿಪೂರ್ಣರಾಗಬೇಕೆಂಬುದೇ ನಮ್ಮ ಪ್ರಾರ್ಥನೆಯ ಉದ್ದೇಶ.
10 : ಆದ್ದರಿಂದಲೇ ನಿಮ್ಮ ಬಳಿಗೆ ಬರುವುದಕ್ಕೆ ಮುಂಚೆಯೇ ಇದನ್ನೆಲ್ಲ ಬರೆಯುತ್ತಿದ್ದೇನೆ. ನಿಮ್ಮನ್ನು ಕೆಡವಿ ಹಾಳು ಮಾಡುವುದಕ್ಕಲ್ಲ, ಕಟ್ಟಿ ಎಬ್ಬಿಸುವುದಕ್ಕಾಗಿಯೇ ಪ್ರಭು ನನಗೆ ಅಧಿಕಾರವನ್ನು ಕೊಟ್ಟಿರುವುದು. ಎಂದೇ, ನಿಮ್ಮ ಮಧ್ಯೆ ಬಂದಾಗ ಅಧಿಕಾರ ಪ್ರಯೋಗಿಸಿ ಕಠಿಣವಾಗಿ ವರ್ತಿಸಲು ಅವಕಾಶವಿರಬಾರದೆಂಬುದೇ ನನ್ನ ಅಪೇಕ್ಷೆ.
11 : ಕೊನೆಯದಾಗಿ ಪ್ರಿಯ ಸಹೋದರರೇ, ಸಂತೋಷದಿಂದಿರಿ. ಪರಿಪೂರ್ಣರಾಗಲು ಪ್ರಯತ್ನಿಸಿರಿ. ನನ್ನ ಬುದ್ಧಿಮಾತುಗಳಿಗೆ ಕಿವಿಗೊಡಿ; ಒಮ್ಮನಸ್ಸಿನಿಂದ ಬಾಳಿರಿ; ಸಮಾಧಾನದಿಂದ ಜೀವಿಸಿರಿ; ಆಗ ಪ್ರೀತಿ ಮತ್ತು ಶಾಂತಿಸ್ವರೂಪರಾದ ದೇವರು ನಿಮ್ಮೊಡನೆ ಇರುತ್ತಾರೆ.
12 : ಪವಿತ್ರವಾದ ಮುದ್ದಿಟ್ಟು ಒಬ್ಬರನ್ನು ಒಬ್ಬರು ವಂದಿಸಿರಿ. ದೇವಜನರೆಲ್ಲರೂ ನಿಮಗೆ ಶುಭಾಶಯಗಳನ್ನು ಕೋರಿದ್ದಾರೆ.
13 : ನಮ್ಮ ಪ್ರಭು ಯೇಸುಕ್ರಿಸ್ತರ ವರ ಪ್ರಸಾದವೂ ದೇವರ ಪ್ರೀತಿಯೂ ಪವಿತ್ರಾತ್ಮರ ಅನ್ಯೋನ್ಯತೆಯೂ ನಿಮ್ಮೆಲ್ಲರೊಡನೆ ಇರಲಿ!

· © 2017 kannadacatholicbible.org Privacy Policy