1 :
“ಪೌಲನು ನಮ್ಮ ಹತ್ತಿರವಿರುವಾಗ ಮೆದುವಾಗಿಯೂ ದೂರವಿರುವಾಗ ಕಠಿಣನಾಗಿಯೂ ವರ್ತಿಸುತ್ತಾನೆ,” ಎಂದು ನಿಮ್ಮಲ್ಲಿ ಕೆಲವರು ಮಾತನಾಡಿಕೊಳ್ಳುವುದು ನನಗೆ ತಿಳಿದುಬಂದಿದೆ. ವಿನಯಶೀಲರೂ ದೀನದಯಾಳುವೂ ಆದ ಕ್ರಿಸ್ತಯೇಸುವಿನ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ:
2 : ನಾನು ನಿಮ್ಮ ಬಳಿಗೆ ಬಂದಾಗ, ಕಠಿಣನಾಗಿ ವರ್ತಿಸಲು ಅವಕಾಶ ಕೊಡಬೇಡಿ. ನಾವು ಪ್ರಾಪಂಚಿಕ ರೀತಿನೀತಿಗಳಿಗೆ ಅನುಗುಣವಾಗಿ ನಡೆಯುತ್ತಿದ್ದೇವೆಂದು ದೂಷಿಸುವವರ ವಿರುದ್ಧ ಖಂಡಿತವಾಗಿಯೂ ಕಠಿಣನಾಗಿಯೇ ವರ್ತಿಸಬೇಕೆಂದಿದ್ದೇನೆ.
3 : ನಾವು ಪ್ರಪಂಚದಲ್ಲಿ ಬಾಳುತ್ತಿದ್ದರೂ ನಮ್ಮ ಹೋರಾಟ ಪ್ರಾಪಂಚಿಕ ಉದ್ದೇಶದಿಂದ ಕೂಡಿದ್ದಲ್ಲ.
4 : ನಾವು ಬಳಸುವ ಆಯುಧಗಳು ಮಾನವ ನಿರ್ಮಿತವಾದುವಲ್ಲ, ದೇವರ ಶಕ್ತಿಯಿಂದ ಕೂಡಿದುವು; ಕೋಟೆಕೊತ್ತಲಗಳನ್ನು ಕೆಡುವಬಲ್ಲವು. ಅವುಗಳಿಂದ ನಾವು ಎಲ್ಲಾ ಕುತರ್ಕಗಳನ್ನು ನಿರ್ಮೂಲ ಮಾಡಬಲ್ಲೆವು.
5 : ದೈವಜ್ಞಾನಕ್ಕೆ ವಿರುದ್ಧ ತಲೆ ಎತ್ತುವ ದುರ್ಗಗಳನ್ನು ಧ್ವಂಸಮಾಡಬಲ್ಲೆವು. ಮಾನವನ ಪ್ರತಿಯೊಂದು ಆಲೋಚನೆಗಳನ್ನೂ ಬಂಧಿಸಬಲ್ಲೆವು.
6 : ನೀವು ಸಂಪೂರ್ಣರಾಗಿ ವಿಧೇಯರಾದ ಮೇಲೆ ಪ್ರತಿಯೊಂದು ಅವಿಧೇಯ ಕೃತ್ಯವನ್ನು ಶಿಕ್ಷಿಸಲು ನಾವು ಹಿಂಜರಿಯೆವು.
7 : ನೀವು ಹೊರಗಿನ ತೋರಿಕೆಗಳನ್ನು ಗಮನಿಸುವಂತವರು. ಯಾರಾದರೂ ತಾನು ಕ್ರಿಸ್ತಯೇಸುವಿಗೆ ಸೇರಿದವನು ಎಂದು ದೃಢವಾಗಿ ನಂಬುವುದಾದರೆ, ಅವನು ಮತ್ತೆ ತನ್ನನ್ನೇ ಪರೀಕ್ಷಿಸಿ ನೋಡಲಿ. ಏಕೆಂದರೆ, ಅವನಂತೆಯೇ ನಾವೂ ಕ್ರಿಸ್ತಯೇಸುವಿಗೆ ಸೇರಿದವರು.
8 : ಪ್ರಭು ನಮಗೆ ಅಧಿಕಾರವನ್ನು ಕೊಟ್ಟಿರುವುದು ನಿಮ್ಮನ್ನು ಕೆಡವಿ ಹಾಳುಮಾಡುವುದಕ್ಕಲ್ಲ, ಕಟ್ಟಿ ಎಬ್ಬಿಸುವುದಕ್ಕಾಗಿ. ಈ ಅಧಿಕಾರವನ್ನು ಕುರಿತು ಒಂದುವೇಳೆ, ನಾವು ಕೊಂಚ ಹೆಚ್ಚಾಗಿ ಹೊಗಳಿಕೊಂಡಿದ್ದರೂ ಅದಕ್ಕಾಗಿ ಸಂಕೋಚಪಡುವುದಿಲ್ಲ.
9 : ನಾನು ನನ್ನ ಪತ್ರಗಳ ಮೂಲಕ ನಿಮ್ಮನ್ನು ಬೆದರಿಸುತ್ತಿದ್ದೇನೆ ಎಂದು ಯಾರೂ ಭಾವಿಸಬಾರದು.
10 : “ಪೌಲನ ಪತ್ರಗಳು ಪ್ರಬಲವಾದುವು, ತೀಕ್ಷ್ಣವಾದುವು; ಆದರೆ ಆತನು ಸ್ವತಃ ನಮ್ಮಲ್ಲಿಗೆ ಬಂದಾಗ ಆತನು ದುರ್ಬಲನು ಹಾಗೂ ಆತನ ಮಾತು ಸಹ ಕೆಲಸಕ್ಕೆ ಬಾರದವು,” ಎಂದು ಕೆಲವರು ಹೇಳುತ್ತಿದ್ದಾರಂತೆ.
11 : ದೂರದಲ್ಲಿದ್ದಾಗ ಪತ್ರದ ಮೂಲಕ ನಾವು ಹೇಗೆ ಕಾಣಿಸಿಕೊಳ್ಳುತ್ತೇವೋ ಹಾಗೆಯೇ ಹತ್ತಿರ ಬಂದಾಗಲೂ ನಡೆದುಕೊಳ್ಳುತ್ತೇವೆ ಎಂಬುದನ್ನು ಆ ವ್ಯಕ್ತಿಗಳು ತಿಳಿದುಕೊಳ್ಳಲಿ.
12 : ಕೆಲವರು ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಅವರಂತೆ ಕೊಚ್ಚಿಕೊಳ್ಳುವುದಕ್ಕೂ ಅವರೊಡನೆ ಹೋಲಿಸಿಕೊಳ್ಳುವುದಕ್ಕೂ ನಾವು ಯತ್ನಿಸುವುದಿಲ್ಲ. ಅವರಿಗೆ ತಾವು ಹಾಕಿಕೊಂಡದ್ದೇ ಅಳತೆಗೋಲು. ತಮಗೆ ತಾವೇ ತಾಳೆ ಹಾಕಿಕೊಳ್ಳುವಂಥ ಅವಿವೇಕಿಗಳು.
13 : ನಾವಾದರೋ ಹಾಗೆ ಮಿತಿವಿೂರಿ ಹೊಗಳಿಕೊಳ್ಳುವುದಿಲ್ಲ. ನಮಗೆ ದೇವರು ತಾವೇ ನಿಯಮಿಸಿದ ಕಾರ್ಯಕ್ಷೇತ್ರದ ಸರಹದ್ದನ್ನು ನಾವು ವಿೂರುವುದಿಲ್ಲ. ಈ ಸರಹದ್ದಿಗೆ ನೀವೂ ಒಳಪಟ್ಟಿದ್ದೀರಿ.
14 : ಇತರರಿಗಿಂತಲೂ ಮೊದಲೇ ನಿಮಗೆ ಯೇಸುಕ್ರಿಸ್ತರ ಶುಭಸಂದೇಶವನ್ನು ತಂದವರು ನಾವು. ಹೀಗಿರುವಲ್ಲಿ ನಿಮ್ಮ ವಿಷಯದಲ್ಲಿ ನಾವು ಈಗ ಹೊಗಳಿಕೊಳ್ಳುವಾಗ ನಮ್ಮ ಸರಹದ್ದನ್ನು ಉಲ್ಲಂಘಿಸುತ್ತಿಲ್ಲ.
15 : ಇತರರ ಪ್ರಯಾಸದ ಫಲಗಳನ್ನು ನಮ್ಮದೆಂದುಕೊಂಡು ಎಲ್ಲೆವಿೂರಿ ನಾವು ಹೊಗಳಿಕೊಳ್ಳುತ್ತಿಲ್ಲ. ಆದರೆ ನಿಮ್ಮ ವಿಶ್ವಾಸ ವೃದ್ಧಿಯಾದಂತೆಲ್ಲಾ ನಮ್ಮ ಕಾರ್ಯಕ್ಷೇತ್ರ ಇನ್ನೂ ವಿಸ್ತಾರವಾಗಬೇಕು
16 : ಮತ್ತೊಬ್ಬರ ಕ್ಷೇತ್ರದ ಸೇವಾಫಲಗಳನ್ನು ನಮ್ಮದೆಂದು ಹೊಗಳಿಕೊಳ್ಳದೆ, ನಿಮ್ಮ ಗಡಿಯಾಚೆಯ ನಾಡುಗಳಲ್ಲೂ ಶುಭಸಂದೇಶವನ್ನು ಸಾರಬೇಕೆಂಬುದೇ ನಮ್ಮ ಆಶಯ.
17 : “ಹೆಚ್ಚಳಪಡುವವನು ಪ್ರಭುವಿನಲ್ಲೇ ಹೆಚ್ಚಳಪಡಲಿ,” ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.
18 : ಅಂತೆಯೇ, ತನ್ನನ್ನು ತಾನೇ ಹೊಗಳಿಕೊಳ್ಳುವವನು ಅಲ್ಲ, ಪ್ರಭು ಯಾರನ್ನು ಹೊಗಳುತ್ತಾರೋ, ಅವನೇ ಧನ್ಯನು.