1 : ಕೊರಿಂಥದಲ್ಲಿರುವ ದೇವರ ಸಭೆಗೂ ಅಖಾಯ ಸೀಮೆಯಲ್ಲಿರುವ ಎಲ್ಲಾ ದೇವಜನರಿಗೂ - ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾದ ಪೌಲನು ಸಹೋದರ ತಿಮೊಥೇಯನೊಡನೆ ಸೇರಿ ಬರೆಯುವ ಪತ್ರ.
2 : ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಆಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!
3 : ನಮ್ಮ ಪ್ರಭು ಯೇಸುಕ್ರಿಸ್ತರ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ಅವರು ಕರುಣಾಭರಿತ ತಂದೆ; ಸಕಲ ಸಾಂತ್ವನವನ್ನೀಯುವ ದೇವರು.
4 : ನಮಗೆ ಒದಗುವ ಎಲ್ಲಾ ಸಂಕಷ್ಟಗಳಲ್ಲಿ ಅವರು ನಮ್ಮನ್ನು ಸಂತೈಸುತ್ತಾರೆ. ಹೀಗೆ ದೇವರಿಂದ ದೊರೆತ ಆದರಣೆಯಿಂದ ವಿವಿಧ ಸಂಕಷ್ಟಗಳಲ್ಲಿ ನರಳುತ್ತಿರುವವರನ್ನು ಸಂತೈಸುವುದಕ್ಕೆ ನಾವು ಶಕ್ತರಾಗುತ್ತೇವೆ.
5 : ಕ್ರಿಸ್ತಯೇಸುವಿನ ಯಾತನೆಯು ನಮ್ಮ ಬಾಳಿನಲ್ಲಿ ತುಂಬಿರುವಂತೆ ಅವರ ಮುಖಾಂತರ ಲಭಿಸುವ ಸಾಂತ್ವನವೂ ನಮ್ಮಲ್ಲಿ ತುಂಬಿರುತ್ತದೆ.
6 : ನಾವು ಕಷ್ಟಸಂಕಟಗಳನ್ನು ಸಹಿಸಬೇಕಾಗುವುದು ಸಹ ನಿಮ್ಮ ಉಪಶಮನ ಹಾಗೂ ಸಾಂತ್ವನಕ್ಕಾಗಿಯೇ ನಮ್ಮ ಕಷ್ಟಸಂಕಟಗಳು ನಿವಾರಣೆಯಾದರೆ ಅದೂ ನಿಮ್ಮ ಆದರಣೆಗಾಗಿಯೇ. ನಾವು ಪಡುವ ಯಾತನೆಯನ್ನು ನೀವು ಸಹನೆಯಿಂದ ಅನುಭವಿಸುವಂತೆ ಅದು ಹುರಿದುಂಬಿಸುತ್ತದೆ.
7 : ನಿಮ್ಮಲ್ಲಿ ನಮಗೆ ಅಚಲವಾದ ಭರವಸೆಯಿದೆ. ಏಕೆಂದರೆ, ನಮ್ಮ ಯಾತನೆಗಳಲ್ಲಿ ನೀವು ಪಾಲುಗೊಳ್ಳುವಂತೆ ನಾವು ಪಡೆಯುವ ಸಾಂತ್ವನದಲ್ಲಿಯೂ ನೀವು ಸಹಭಾಗಿಗಳಾಗಿದ್ದೀರಿ, ಎಂಬುದು ನಮಗೆ ಗೊತ್ತಿದೆ.
8 : ಸಹೋದರರೇ, ಏಷ್ಯಾ ಪ್ರಾಂತ್ಯದಲ್ಲಿ ನಮಗೊದಗಿದ ಹಿಂಸೆಬಾಧೆಗಳು ನಿಮಗೆ ತಿಳಿದಿವೆಯಷ್ಟೆ. ಅಲ್ಲಿ ಸಹಿಸಲಸಾಧ್ಯವಾದಷ್ಟು ಸಂಕಟವನ್ನು ಅನುಭವಿಸಬೇಕಾಯಿತು. ನಾವು ಬದುಕುವ ಆಶೆಯನ್ನೇ ಬಿಡಬೇಕಾಯಿತು.
9 : ನಿಜವಾಗಿಯೂ ನಮಗೆ ಮರಣದಂಡನೆ ವಿಧಿಸಲಾಗಿದೆಯೆಂದು ಭಾವಿಸಿದೆವು. ಇದರಿಂದ ನಾವು ನಮ್ಮ ಸ್ವಂತ ಶಕ್ತಿಯನ್ನೇ ನಂಬಿಕೊಳ್ಳದೆ, ಸತ್ತವರನ್ನು ಪುನರುತ್ಥಾನಗೊಳಿಸುವ ದೇವರಲ್ಲಿ ಭರವಸೆಯಿಡುವಂತೆ ಹೀಗಾಯಿತು.
10 : ದೇವರೇ ನಮ್ಮನ್ನು ಈ ಭಯಂಕರ ಮರಣದಿಂದ ಪಾರುಮಾಡಿದರು. ಇನ್ನು ಮುಂದಕ್ಕೂ ಪಾರುಮಾಡುವರು. ಹೌದು, ನೀವು ಸಹ ನಮಗಾಗಿ ಪ್ರಾರ್ಥಿಸುತ್ತಾ ನಮ್ಮೊಡನೆ ಸಹಕರಿಸಿದರೆ, ಇನ್ನು ಮುಂದಕ್ಕೂ ನಮ್ಮನ್ನು ಪಾರುಮಾಡುವರು ಎಂಬ ಭರವಸೆಯಿಂದ ಇದ್ದೇವೆ. .
11 : ಇದರ ಫಲವಾಗಿ ನಮಗೆ ದೊರೆಯುವ ವರದಾನಗಳಿಗಾಗಿ ಅನೇಕರು ನಮ್ಮ ಪರವಾಗಿ ದೇವರಿಗೆ ಕೃತಜ್ಞತಾಸ್ತೋತ್ರವನ್ನು ಸಲ್ಲಿಸುವರು.
12 : ಲೋಕದ ಜನರೊಡನೆ, ವಿಶೇಷವಾಗಿ ನಿಮ್ಮೊಡನೆ ವ್ಯವಹರಿಸುವಾಗ ನಾವು ಕೇವಲ ಮಾನವ ಜ್ಞಾನವನ್ನಾಶ್ರಯಿಸದೆ ದೇವರ ಅನುಗ್ರಹವನ್ನೇ ಆಶ್ರಯಿಸಿ ನಡೆದುಕೊಂಡೆವು. ದೇವದತ್ತವಾದ ನಿಷ್ಕಪಟ ಮನಸ್ಸಿನಿಂದಲೂ ಪರಿಶುದ್ಧತೆಯಿಂದಲೂ ವರ್ತಿಸಿದೆವು. ಇದಕ್ಕೆ ನಮ್ಮ ಮನಸ್ಸೇ ಸಾಕ್ಷಿ. ಇದಕ್ಕಾಗಿ ನಾವು ಹೆಮ್ಮೆಪಡುತ್ತೇವೆ.
13 : ನೀವು ಓದಿ ಗ್ರಹಿಸಿಕೊಳ್ಳಬಲ್ಲ ವಿಷಯಗಳನ್ನು ಮಾತ್ರವೇ ನಾವು ನಿಮಗೆ ಬರೆದಿದ್ದೇವೆ. ನಮ್ಮನ್ನು ನೀವಿನ್ನೂ ಭಾಗಶಃ ಅರಿತುಕೊಂಡಿದ್ದೀರಿ. ಮುಂದಕ್ಕಾದರೂ ನೀವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವಿರೆಂಬ ಭರವಸೆ ನನಗಿದೆ.
14 : ಹಾಗೆಯೇ ‘ಪ್ರಭುವಿನ ದಿನ’ದಂದು ನಾವು ನಿಮ್ಮನ್ನು ಕುರಿತು ಹೆಮ್ಮೆಪಡುವಂತೆ ನೀವು ನಮ್ಮನ್ನು ಕುರಿತು ಹೆಮ್ಮಪಡುವಿರಿ.
15 : ಈ ನಂಬಿಕೆಯಿಂದಲೇ ನಿಮಗೆ ಇಮ್ಮಡಿ ಸಂತೋಷ ಲಭಿಸಬೇಕೆಂದು ನಾನು ನಿಮ್ಮ ಬಳಿಗೆ ಈ ಮುಂಚಿತವಾಗಿಯೇ ಬರಬೇಕೆಂದಿದ್ದೆ.
16 : ನಾನು ಮಕೆದೋನಿಯಕ್ಕೆ ಹೋಗುವ ದಾರಿಯಲ್ಲಿ ಒಮ್ಮೆ ನಿಮ್ಮನ್ನು ಭೇಟಿಮಾಡಬೇಕು ಎಂದಿದ್ದೆ; ಮಕೆದೋನಿಯದಿಂದ ಹಿಂದಿರುಗುವಾಗ ಇನ್ನೊಮ್ಮೆ ಭೇಟಿಯಿತ್ತು ನಿಮ್ಮ ನೆರವಿನಿಂದ ಜುದೇಯ ಪ್ರವಾಸವನ್ನು ಕೈಗೊಳ್ಳಬೇಕೆಂದು ಆಲೋಚಿಸಿದೆ.
17 : ಹೀಗೆ ಆಲೋಚಿಸುತ್ತಿದ್ದಾಗ ನಾನು ಚಂಚಲಚಿತ್ತನಾಗಿದ್ದೆನೋ? ಕೇವಲ ಪ್ರಾಪಂಚಿಕನಂತೆ ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವನಂತಿದ್ದೆನೋ?
18 : ಎಂದಿಗೂ ಇಲ್ಲ. ನಾನು ನಿಮಗೆ ಕೊಟ್ಟ ಮಾತು ದ್ವಂದ್ವಾರ್ಥವುಳ್ಳದ್ದಾಗಿರಲಿಲ್ಲ. ಇದಕ್ಕೆ ದೇವರೇ ಸಾಕ್ಷಿ.
19 : ನಾವು, ಅಂದರೆ ಸಿಲ್ವಾನ, ತಿಮೊಥೆಯ ಮತ್ತು ನಾನು, ಪ್ರಚಾರಮಾಡಿದ ದೇವರ ಪುತ್ರರಾದ ಯೇಸುಕ್ರಿಸ್ತರು, ಈ ಕ್ಷಣ ಹೌದು, ಮರುಕ್ಷಣ ಇಲ್ಲ ಎಂದು ಹೇಳುವವರಲ್ಲ, ಅವರು ದೇವರ ತಥಾಸ್ತು ಆಗಿದ್ದಾರೆ.
20 : ಏಕೆಂದರೆ, ದೇವರು ಮಾಡಿದ ಸಮಸ್ತ ವಾಗ್ದಾನಗಳಿಗೂ ‘ಹೌದು’ ಎಂಬ ಉತ್ತರ ಸಾಕ್ಷಾತ್ ಅವರೇ. ಈ ಕಾರಣದಿಂದಲೇ ನಾವು ದೇವರ ಮಹಿಮೆಯನ್ನು ಸಾರುವಾಗ ಯೇಸುಕ್ರಿಸ್ತರ ಮುಖಾಂತರವೇ ‘ಆಮೆನ್’ ಎನ್ನುತ್ತೇವೆ.
21 : ನಿಮ್ಮನ್ನೂ ನಮ್ಮನ್ನೂ ಕ್ರಿಸ್ತಯೇಸುವಿನಲ್ಲಿ ಒಂದಾಗಿಸಿ ಸ್ಥಿರಪಡಿಸಿದವರು ದೇವರೇ. ನಮ್ಮನ್ನು ಅಭಿಷೇಕಿಸಿದವರೂ ವಿೂಸಲಾಗಿಟ್ಟವರೂ ದೇವರೇ.
22 : ಅವರೇ ನಮ್ಮ ಮೇಲೆ ತಮ್ಮ ಮುದ್ರೆಯನ್ನೊತ್ತಿ ನಮ್ಮ ಅಂತರಂಗದಲ್ಲಿ ಪವಿತ್ರಾತ್ಮ ಅವರನ್ನು ಖಾತರಿಯಾಗಿ ಇರಿಸಿದ್ದಾರೆ.
22 : ಅವರೇ ನಮ್ಮ ಮೇಲೆ ತಮ್ಮ ಮುದ್ರೆಯನ್ನೊತ್ತಿ ನಮ್ಮ ಅಂತರಂಗದಲ್ಲಿ ಪವಿತ್ರಾತ್ಮ ಅವರನ್ನು ಖಾತರಿಯಾಗಿ ಇರಿಸಿದ್ದಾರೆ.
23 : ನಿಮಗೆ ತೊಂದರೆ ಆಗಬಾರದೆಂದೇ ನಾನು ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ.
24 : ನಿಮ್ಮ ವಿಶ್ವಾಸದ ಬಗ್ಗೆ ನಾವು ದಬ್ಬಾಳಿಕೆ ನಡೆಸುತ್ತಿದ್ದೇವೆಂದು ತಿಳಿಯಬೇಡಿ; ವಿಶ್ವಾಸದಲ್ಲಿ ನೀವು ದೃಢರಾಗಿಯೇ ಇದ್ದೀರಿ. ನಿಮ್ಮ ಸಂತೋಷಕ್ಕಾಗಿ ನಾವು ನಿಮ್ಮೊಡನೆ ಸಹಕರಿಸುತ್ತೇವೆ.