Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ನಾನು ಸ್ವತಂತ್ರನಲ್ಲವೇ? ಪ್ರೇಷಿತನಲ್ಲವೇ? ನಮ್ಮ ಪ್ರಭು ಯೇಸುವನ್ನು ಕಂಡವನಲ್ಲವೇ? ಪ್ರಭುವಿನಲ್ಲಿ ನಾನು ಮಾಡಿದ ಸೇವೆಯ ಪ್ರತಿಫಲ ನೀವಲ್ಲವೇ?
2 : ಇತರರಿಗೆ ನಾನು ಪ್ರೇಷಿತನಲ್ಲದಿದ್ದರೂ ನಿಮಗಂತೂ ನಾನು ಪ್ರೇಷಿತನೇ. ನಾನು ಪ್ರೇಷಿತನು ಎಂಬುದಕ್ಕೆ ಪ್ರಭುವಿಗೆ ಸೇರಿದವರಾದ ನೀವೇ ಜೀವಂತ ಸಾಕ್ಷಿಗಳು.
3 : ನನ್ನನ್ನು ಟೀಕಿಸುವವರಿಗೆ ನನ್ನ ಉತ್ತರ ಇದು:
4 : ನಿಮ್ಮಿಂದ ಅನ್ನಪಾನಗಳನ್ನು ಪಡೆಯಲು ನನಗೆ ಹಕ್ಕಿಲ್ಲವೇ?
5 : ಮಿಕ್ಕ ಪ್ರೇಷಿತರಂತೆ, ಪ್ರಭುವಿನ ಸಹೋದರರಂತೆ, ಕೇಫನಂತೆ ನಾನು ಸಹ ಕ್ರೈಸ್ತವಿಶ್ವಾಸಿಯೊಬ್ಬಳನ್ನು ಮದುವೆಮಾಡಿಕೊಂಡು ಆಕೆಯೊಡನೆ ಪ್ರಯಾಣ ಕೈಗೊಳ್ಳಲು ನನಗೆ ಹಕ್ಕಿಲ್ಲವೇ?
6 : ಜೀವನೋಪಾಯಕ್ಕಾಗಿ ಬಾರ್ನಬ ಮತ್ತು ನಾನು ಮಾತ್ರ ದುಡಿಯಬೇಕೇ?
7 : ಯಾವ ಸೈನಿಕ ಸ್ವಂತ ಖರ್ಚಿನಿಂದ ಸಮರಕ್ಕೆ ನಿಲ್ಲುತ್ತಾನೆ? ಯಾವ ತೋಟಗಾರ ತನ್ನ ಸ್ವಂತ ದ್ರಾಕ್ಷಿಯ ತೋಟದಿಂದ ದ್ರಾಕ್ಷಿಯ ಫಲವನ್ನು ತಿನ್ನದಿರುತ್ತಾನೆ? ಯಾವ ಗೌಳಿಗ ತಾನು ಸಾಕಿದ ಹಸುವಿನ ಹಾಲನ್ನು ಕುಡಿಯದಿರುತ್ತಾನೆ?
8 : ಇವು ಕೇವಲ ಲೋಕರೂಢಿಯ ಮಾತುಗಳಲ್ಲ. ಧರ್ಮಶಾಸ್ತ್ರವೂ ಇದನ್ನು ಅನುಮೋದಿಸುತ್ತದೆ.
9 : ಕಣ ತುಳಿಯುವ ಎತ್ತಿನ ಬಾಯನ್ನು ಕಟ್ಟಬೇಡ,” ಎಂದು ಮೋಶೆಯ ಧರ್ಮಶಾಸ್ತ್ರದಲ್ಲೇ ಲಿಖಿತವಾಗಿದೆ. ಇಲ್ಲಿ ದೇವರಿಗೆ ಎತ್ತಿನ ಮೇಲೆ ಚಿಂತೆಯೇ? ಇಲ್ಲ.
10 : ಇದನ್ನು ನಮ್ಮ ಹಿತಚಿಂತನೆಯಿಂದ ಹೇಳಲಾಗಿದೆ; ಅದೇ ಉದ್ದೇಶದಿಂದ ಬರೆಯಲಾಗಿದೆ. ಹೌದು, ಉಳುವವನೂ ಒಕ್ಕುವವನೂ ಕಾಳುಬೆಳೆಯಲ್ಲಿ ಪಾಲುಪಡೆಯುವ ಉದ್ದೇಶದಿಂದಲೇ ದುಡಿಯುತ್ತಾರೆ.
11 : ನಿಮ್ಮಲ್ಲಿ ಆಧ್ಯಾತ್ಮಿಕ ಬೀಜವನ್ನು ಬಿತ್ತನೆ ಮಾಡಿದ ನಾವು ಪ್ರತಿಫಲವಾಗಿ ದೈನಂದಿನ ಅಗತ್ಯಗಳನ್ನು ಅಪೇಕ್ಷಿಸುವುದು ಅತಿಯಾಯಿತೇ?
12 : ಇತರರಿಗೆ ನಿಮ್ಮ ಮೇಲೆ ಇಂಥ ಹಕ್ಕಿದ್ದರೆ ಅದಕ್ಕಿಂತಲೂ ಹೆಚ್ಚು ಹಕ್ಕು ನಮಗಿರಬೇಕಲ್ಲವೇ? ಆದರೂ ನಾವು ಈ ಹಕ್ಕನ್ನು ಚಲಾಯಿಸಲೇ ಇಲ್ಲ. ಬದಲಿಗೆ, ಕ್ರಿಸ್ತಯೇಸುವಿನ ಶುಭಸಂದೇಶಕ್ಕೆ ಯಾವ ಅಡ್ಡಿಯೂ ಬಾರದಿರಲೆಂದು ಎಲ್ಲವನ್ನೂ ಸಹಿಸಿಕೊಂಡೆವು.
13 : ದೇವಾಲಯದ ಸೇವೆಯಲ್ಲಿರುವವರು ದೇವಾಲಯದ ಆದಾಯದಿಂದ ಜೀವಿಸುತ್ತಾರೆ. ಬಲಿಪೀಠದ ಬಳಿ ಸೇವೆಮಾಡುವವರು ಅರ್ಪಿತವಾದ ಬಲಿಯಿಂದ ಪಾಲನ್ನು ಪಡೆಯುತ್ತಾರೆ. ಇದು ನಿಮಗೆ ತಿಳಿದಿದೆ.
14 : ಅದೇ ಪ್ರಕಾರ ಶುಭಸಂದೇಶ ಪ್ರಚಾರಕರು ಶುಭಸಂದೇಶ ಪ್ರಚಾರದ ಆದಾಯದಿಂದಲೇ ಜೀವನ ನಡೆಸಬೇಕೆಂದು ಪ್ರಭುವೇ ಆಜ್ಞಾಪಿಸಿದ್ದಾರೆ.
15 : ನಾನಂತೂ ಈ ಹಕ್ಕುಗಳಲ್ಲಿ ಒಂದನ್ನೂ ಚಲಾಯಿಸಲಿಲ್ಲ. ಚಲಾಯಿಸಬೇಕೆಂಬ ಉದ್ದೇಶದಿಂದಲೂ ಇದನ್ನು ಬರೆಯುತ್ತಿಲ್ಲ. ಅದಕ್ಕಿಂತಲೂ ಸಾಯುವುದೇ ಲೇಸು. ಈ ನನ್ನ ಹೆಮ್ಮೆಯನ್ನು ಯಾರೂ ಅಪಹರಿಸಲಾರರು.
16 : ಶುಭಸಂದೇಶವನ್ನು ನಾನು ಸಾರುತ್ತಿದ್ದೇನೆಂದು ಕೊಚ್ಚಿಕೊಳ್ಳುವುದಕ್ಕೂ ನನಗೆ ಆಸ್ಪದವಿಲ್ಲ. ಏಕೆಂದರೆ, ಸಾರಲೇಬೇಕೆಂಬ ಕರ್ತವ್ಯಕ್ಕೆ ನಾನು ಬದ್ಧನಾಗಿದ್ದೇನೆ. ಸಾರದಿದ್ದರೆ ನನಗೆ ಧಿಕ್ಕಾರವಿರಲಿ!
17 : ನಾನು ಸ್ವಂತ ಇಷ್ಟದಿಂದ ಈ ಕಾರ್ಯವನ್ನು ಕೈಗೊಂಡಿದ್ದರೆ ತಕ್ಕ ಸಂಭಾವನೆ ಇರುತ್ತಿತ್ತು. ಆದರೆ ಈ ಕರ್ತವ್ಯವನ್ನು ನನಗೆ ವಹಿಸಲಾಗಿದೆ. ಆದ್ದರಿಂದ ಕರ್ತವ್ಯಬದ್ಧನಾಗಿ ಮಾಡುತ್ತಿದ್ದೇನೆ.
18 : ಹಾಗಾದರೆ ನನಗೆ ಸಿಗುವ ಸಂಭಾವನೆಯಾದರೂ ಏನು? ಶುಭಸಂದೇಶವನ್ನು ಸಾರುವಾಗ ಜೀವನೋಪಾಯಕ್ಕಾಗಿ ನನಗಿರುವ ಹಕ್ಕನ್ನು ಬಳಸಿಕೊಳ್ಳದೆ ಉಚಿತವಾಗಿ ಸಾರುವ ಸೌಭಾಗ್ಯವೇ ನನ್ನ ಸಂಭಾವನೆ.
19 : ನಾನು ಸ್ವತಂತ್ರನು, ಯಾರಿಗೂ ದಾಸನಲ್ಲ. ಆದರೂ ಆದಷ್ಟು ಜನರನ್ನು ಗಳಿಸಿಕೊಳ್ಳಲೆಂದು ಎಲ್ಲರಿಗೂ ದಾಸನಾದೆ.
20 : ಯೆಹೂದ್ಯರನ್ನು ಗಳಿಸಿಕೊಳ್ಳಲು ಯೆಹೂದ್ಯರಿಗೆ ಯೆಹೂದ್ಯನಂತಾದೆ. ಧರ್ಮಶಾಸ್ತ್ರಕ್ಕೆ ಅಧೀನರಾದವರನ್ನು ಗಳಿಸಿಕೊಳ್ಳಲು ನಾನು ಆ ಶಾಸ್ತ್ರಕ್ಕೆ ಅಧೀನನಲ್ಲದಿದ್ದರೂ ಅವರಿಗೋಸ್ಕರ ಅಧೀನನಂತಾದೆ.
21 : ಧರ್ಮಶಾಸ್ತ್ರಕ್ಕೆ ಬಾಹಿರರಾದವರನ್ನು ಗಳಿಸಿಕೊಳ್ಳಲು ನಾನು ಧರ್ಮಶಾಸ್ತ್ರಕ್ಕೆ ಬಾಹಿರನಂತೆ ಆದೆ. ಯೇಸುಕ್ರಿಸ್ತರ ನಿಯಮಕ್ಕೆ ನಾನು ವಿಧೇಯನಾದುದರಿಂದ ದೇವರ ನಿಯಮಕ್ಕೆ ನಾನು ಬಾಹಿರನೇನೂ ಅಲ್ಲ.
22 : ವಿಶ್ವಾಸದಲ್ಲಿ ದುರ್ಬಲರನ್ನು ಗಳಿಸಿಕೊಳ್ಳಲು ನಾನೂ ದುರ್ಬಲನಂತಾದೆ. ಹೇಗಾದರೂ ಸರಿ, ಕೆಲವರನ್ನಾದರೂ ಉದ್ಧರಿಸಲು ಎಲ್ಲರಿಗೂ ಎಲ್ಲವೂ ಆದೆ.
23 : ಶುಭಸಂದೇಶದ ಸೌಭಾಗ್ಯದಲ್ಲಿ ಪಾಲುಗೊಳ್ಳಲೆಂದು ಇದೆಲ್ಲವನ್ನು ಶುಭಸಂದೇಶಕ್ಕಾಗಿಯೇ ಮಾಡುತ್ತೇನೆ.
24 : ನಿಮಗೆ ತಿಳಿದಿರುವಂತೆ ಕ್ರೀಡಾಂಗಣದಲ್ಲಿ ಅನೇಕರು ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ; ಆದರೆ ಪ್ರಥಮ ಬಹುಮಾನ ದೊರಕುವುದು ಒಬ್ಬನಿಗೆ ಮಾತ್ರ. ಅಂತೆಯೇ ಬಹುಮಾನವನ್ನು ಪಡೆದುಕೊಳ್ಳಲು ನೀವೂ ಓಡಿ.
25 : ಕ್ರೀಡಾಪಟುಗಳೆಲ್ಲರೂ ತಮ್ಮನ್ನು ಹತೋಟಿಯಲ್ಲಿಟ್ಟುಕೊಳ್ಳುತ್ತಾರೆ. ಅಳಿದುಹೋಗುವ ಪದಕದ ಗಳಿಕೆಗಾಗಿ ಪ್ರಯತ್ನಮಾಡುತ್ತಾರೆ. ನಾವಾದರೋ ಅಮರ ಪದಕದ ಗಳಿಕೆಗಾಗಿ ಶ್ರಮಿಸುತ್ತೇವೆ.
26 : ನಾನಾದರೋ ಗೊತ್ತುಗುರಿಯಲ್ಲದವನಂತೆ ಓಡುವುದಿಲ್ಲ, ಗಾಳಿಯೊಡನೆ ಗುದ್ದಾಡುವವನಂತೆ ಹೋರಾಡುವುದಿಲ್ಲ.
27 : ಇತರರಿಗೆ ಕರೆಕೊಟ್ಟ ಮೇಲೆ ನಾನೇ ಅಯೋಗ್ಯನಾಗದಂತೆ, ನನ್ನ ದೇಹವನ್ನು ದಂಡಿಸಿ, ನನ್ನನ್ನೇ ನಾನು ಹತೋಟಿಯಲ್ಲಿಟ್ಟುಕೊಳ್ಳುತ್ತೇನೆ.

· © 2017 kannadacatholicbible.org Privacy Policy