Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ವಿಗ್ರಹಗಳಿಗೆ ನೈವೇದ್ಯ ಮಾಡಿದ ಆಹಾರ ಪದಾರ್ಥಗಳ ವಿಷಯವಾಗಿ ನಾನು ಹೇಳುವುದೇನೆಂದರೆ: “ನಮಗೆಲ್ಲರಿಗೂ ಜ್ಞಾನೋದಯವಾಗಿದೆ” ಎಂದು ಹೇಳಿಕೊಳ್ಳುತ್ತೀರಿ. ಜ್ಞಾನವು ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುತ್ತದೆ. ಪ್ರೀತಿಯಾದರೋ ಭಕ್ತಿಯನ್ನು ವೃದ್ಧಿಗೊಳಿಸುತ್ತದೆ.
2 : ಯಾರಾದರೂ ತಾನು ಬಲ್ಲವನೆಂದು ಕೊಚ್ಚಿಕೊಳ್ಳುವುದಾದರೆ ತಾನು ತಿಳಿಯಬೇಕಾದುದನ್ನು ಅವನು ಸರಿಯಾಗಿ ತಿಳಿದಿರುವುದಿಲ್ಲ.
3 : ಆದರೆ ದೇವರನ್ನು ಪ್ರೀತಿಸುವವನನ್ನು ದೇವರು ಗುರುತಿಸುತ್ತಾರೆ.
4 : ವಿಗ್ರಹಗಳಿಗೆ ನೈವೇದ್ಯ ಮಾಡಿದ ಪದಾರ್ಥಗಳನ್ನು ತಿನ್ನುವ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: ವಿಗ್ರಹಗಳಿಗೆ ನಿಜವಾದ ಅಸ್ತಿತ್ವವಿಲ್ಲ. ದೇವರು ಒಬ್ಬರೇ ಹೊರತು ಬೇರೆ ದೇವರಿಲ್ಲ. ಇದು ನಮಗೆ ತಿಳಿದ ವಿಷಯ.
5 : “ದೇವರುಗಳು” ಎನಿಸಿಕೊಳ್ಳುವವರು ಇಹಪರಗಳಲ್ಲಿ ಇರಬಹುದು; ಅಂಥ ಹಲವಾರು “ದೇವರು”ಗಳನ್ನೂ “ಪ್ರಭು”ಗಳನ್ನೂ ಪೂಜಿಸುವುದುಂಟು.
6 : ಆದರೆ ನಮಗೆ ಒಬ್ಬರೇ ದೇವರು. ಅವರು ನಮ್ಮ ಪರಮ ಪಿತ; ಎಲ್ಲ ಸೃಷ್ಟಿಗೂ ಮೂಲಕರ್ತ, ನಾವಿರುವುದು ಅವರಿಗಾಗಿಯೇ. ನಮಗೆ ಒಬ್ಬರೇ ಪ್ರಭು; ಅವರೇ ಯೇಸುಕ್ರಿಸ್ತ. ಅವರ ಮುಖಾಂತರವೇ ಸಮಸ್ತವೂ ಉಂಟಾಯಿತು. ಅವರ ಮುಖಾಂತರವೇ ನಾವು ಜೀವಿಸುತ್ತೇವೆ.
7 : ಅದರೆ ಎಲ್ಲರಿಗೂ ಇದರ ಅರಿವಿಲ್ಲ. ಕೆಲವರು ಸಾಂಪ್ರದಾಯಕವಾಗಿ ಬಂದ ವಿಗ್ರಹಾರಾಧನೆಯಲ್ಲಿ ಭಾಗವಹಿಸಿ, ವಿಗ್ರಹಕ್ಕೆ ಅರ್ಪಿತವಾದ ನೈವೇದ್ಯ ಪದಾರ್ಥವನ್ನು ತಿನ್ನುತ್ತಾರೆ. ಆದರೆ ಅವರ ಮನಸ್ಸಾಕ್ಷಿ ದುರ್ಬಲವಾಗಿರುವುದರಿಂದ ತಾವು ಕಲುಷಿತರಾದೆವೆಂದು ಭಾವಿಸಿಕೊಳ್ಳುತ್ತಾರೆ.
8 : ನಾವು ತಿನ್ನುವ ಆಹಾರ ನಮ್ಮನ್ನು ದೇವರ ಸನ್ನಿಧಿಗೆ ಸೇರಿಸಲಾರದು. ಅದನ್ನು ತಿನ್ನದಿರುವುದರಿಂದ ನಮಗೆ ನಷ್ಟವಿಲ್ಲ, ತಿಂದರೆ ಲಾಭವಿಲ್ಲ.
9 : ಆದರೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸುವಾಗ ದುರ್ಬಲ ಮನಸ್ಸುಳ್ಳ ಸೋದರನ ವಿಶ್ವಾಸಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿರಿ.
10 : ನೈಜ ಅರಿವುಳ್ಳವನೆಂದು ಹೇಳಿಕೊಳ್ಳುವ ನೀನು ವಿಗ್ರಹದ ಗುಡಿಯಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲ ಮನಸ್ಸಾಕ್ಷಿಯುಳ್ಳ ಸೋದರನು ಕಂಡರೆ, ಅವನು ಸಹ ನೈವೇದ್ಯ ಮಾಡಿದ ಪದಾರ್ಥವನ್ನು ತಿನ್ನಲು ಧೈರ್ಯಗೊಳ್ಳಲಾರನೇ?
11 : ಈ ನಿನ್ನ ಅರಿವಿನಿಂದ ದುರ್ಬಲ ಸೋದರನು ನಾಶಕ್ಕೆ ಗುರಿಯಾಗುತ್ತಾನೆ. ಯೇಸುಕ್ರಿಸ್ತರು ಅವನಿಗಾಗಿಯೂ ಪ್ರಾಣತ್ಯಾಗ ಮಾಡಲಿಲ್ಲವೇ?
12 : ಹೀಗೆ ನೀವು ನಿಮ್ಮ ಸಹೋದರರ ದುರ್ಬಲ ಮನಸ್ಸಾಕ್ಷಿಯನ್ನು ನೋಯಿಸಿ, ಅವರ ವಿರುದ್ಧ ಪಾಪಕಟ್ಟಿಕೊಳ್ಳುವುದರಿಂದ ಯೇಸುಕ್ರಿಸ್ತರ ವಿರುದ್ಧವೇ ಪಾಪ ಮಾಡುತ್ತೀರಿ.
13 : ನಾನು ತಿನ್ನುವ ಆಹಾರ ನನ್ನ ಸಹೋದರನ ವಿಶ್ವಾಸಕ್ಕೆ ಅಡ್ಡಿಯಾಗುವುದಾದರೆ ಎಂದಿಗೂ ನಾನದನ್ನು ತಿನ್ನಲಾರೆ, ಅವನ ವಿಶ್ವಾಸಕ್ಕೆ ಅಡ್ಡಿಯನ್ನು ತರಲಾರೆ.

· © 2017 kannadacatholicbible.org Privacy Policy