Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ನೀವು ಬರೆದು ಕೇಳಿರುವ ವಿಷಯಗಳ ಬಗ್ಗೆ ನಾನು ಹೇಳುವುದೇನೆಂದರೆ: ಒಬ್ಬ ವ್ಯಕ್ತಿ ಸ್ತ್ರೀಯೊಡನೆ ಲೈಂಗಿಕ ಸಂಪರ್ಕವನ್ನು ಇಟ್ಟುಕೊಳ್ಳದಿರುವುದು ಒಳ್ಳೆಯದು.
2 : ಲೈಂಗಿಕ ಪ್ರಲೋಭನೆಗಳು ಪ್ರಬಲವಾಗಿರುವುದರಿಂದ ಪ್ರತಿಯೊಬ್ಬನಿಗೂ ಸ್ವಂತ ಸತಿ ಇರಲಿ, ಪ್ರತಿಯೊಬ್ಬಳಿಗೂ ಸ್ವಂತ ಪತಿ ಇರಲಿ.
3 : ಪತಿಯಾದವನು ತನ್ನ ಸತಿಗೆ ಸಲ್ಲತಕ್ಕ ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲಿ. ಅಂತೆಯೇ, ಸತಿಯಾದವಳು ತನ್ನ ಪತಿಗೆ ಸಲ್ಲತಕ್ಕ ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲಿ.
4 : ಸತಿಗೆ ತನ್ನ ದೇಹದ ಮೇಲೆ ಅಧಿಕಾರವಿಲ್ಲ. ಆದರೆ ಪತಿಗೆ ಆ ಅಧಿಕಾರವಿದೆ. ಪತಿಗೆ ತನ್ನ ದೇಹದ ಮೇಲೆ ಅಧಿಕಾರವಿಲ್ಲ. ಆದರೆ ಸತಿಗೆ ಆ ಅಧಿಕಾರವಿದೆ.
5 : ಆದುದರಿಂದ ಸತಿಪತಿಯರು ಒಬ್ಬರಿಗೊಬ್ಬರು ದಾಂಪತ್ಯ ಕರ್ತವ್ಯಗಳನ್ನು ನೆರವೇರಿಸಲು ನಿರಾಕರಿಸಬಾರದು. ಧ್ಯಾನ, ಪ್ರಾರ್ಥನೆಗಳಲ್ಲಿ ನಿರತರಾಗಿರಲು, ಸ್ವಲ್ಪಕಾಲ ಒಬ್ಬರನ್ನೊಬ್ಬರು ಅಗಲಿರಬಹುದು. ಆದರೆ ಅದಕ್ಕೆ ಪರಸ್ಪರ ಸಮ್ಮತಿ ಇರಬೇಕು. ಅನಂತರ ಒಂದುಗೂಡಬೇಕು. ಇಲ್ಲದೆ ಹೋದರೆ, ನಿಮ್ಮಲ್ಲಿ ಸಂಯಮ ಇಲ್ಲದಿರುವುದನ್ನು ಕಂಡು ಸೈತಾನನು ಪಾಪಕ್ಕೆ ಪ್ರಚೋದಿಸಬಹುದು.
6 : ಇದು ನನ್ನ ಆಜ್ಞೆಯಲ್ಲ, ಅನುಮತಿಯಷ್ಟೆ.
7 : ಎಲ್ಲರೂ ನಾನಿರುವಂತೆ ಇರಬೇಕೆಂಬುದು ನನ್ನ ಅಭಿಲಾಷೆ. ಆದರೆ ದೇವರು ಪ್ರತಿಯೊಬ್ಬನಿಗೂ ವಿಶಿಷ್ಟ ವರವನ್ನು ದಯಪಾಲಿಸಿದ್ದಾರೆ. ಒಬ್ಬನಿಗೆ ಒಂದು ವರವಾದರೆ, ಮತ್ತೊಬ್ಬನಿಗೆ ಇನ್ನೊಂದು ವರವುಂಟು.
8 : ಅವಿವಾಹಿತರಿಗೂ ವಿಧವೆಯರಿಗೂ ನನ್ನ ಬುದ್ಧಿಮಾತು ಯಾವುದೆಂದರೆ: ನಾನಿರುವಂತೆಯೇ ಇರುವುದು ಅವರಿಗೆ ಒಳ್ಳೆಯದು.
9 : ಅವರಿಗೆ ಸಂಯಮ ಇಲ್ಲದಿದ್ದರೆ ಮದುವೆ ಮಾಡಿಕೊಳ್ಳಲಿ. ಕಾಮತಾಪದಿಂದ ಬೆಂದು ಹೋಗುವುದಕ್ಕಿಂತಲೂ ಮದುವೆ ಮಾಡಿಕೊಳ್ಳುವುದೇ ಲೇಸು.
10 : ವಿವಾಹಿತರಿಗೆ ನನ್ನದೊಂದು ಆಜ್ಞೆ: ನಿಜಕ್ಕೂ ಇದು ನನ್ನದಲ್ಲ, ಪ್ರಭುವಿನ ಆಜ್ಞೆ. ಸತಿಯು ತನ್ನ ಪತಿಯನ್ನು ಬಿಟ್ಟಗಲದಿರಲಿ.
11 : ಒಂದು ವೇಳೆ ಅಗಲಿದರೆ ಮತ್ತೆ ಮದುವೆಯಾಗದಿರಲಿ. ಇಲ್ಲವೆ, ತನ್ನ ಪತಿಯೊಂದಿಗೆ ಸಂಧಾನ ಮಾಡಿಕೊಳ್ಳಲಿ. ಅಂತೆಯೇ ಪತಿಯಾದವನು ತನ್ನ ಸತಿಯನ್ನು ಬಿಟ್ಟುಬಿಡದಿರಲಿ.
12 : ಮಿಕ್ಕವರಿಗೆ ನಾನು ಹೇಳುವುದೇನೆಂದರೆ: ಇದು ನನ್ನ ಮಾತು, ಪ್ರಭುವಿನದಲ್ಲ: ಒಬ್ಬ ಸಹೋದರನಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಸತಿ ಇದ್ದರೆ, ಆಕೆ ಅವನೊಡನೆ ದಾಂಪತ್ಯ ಜೀವನ ನಡೆಸಲು ಒಪ್ಪಿದರೆ, ಆಕೆಯನ್ನು ಬಿಟ್ಟುಬಿಡಬಾರದು.
13 : ಹಾಗೆಯೇ ಒಬ್ಬ ಕ್ರೈಸ್ತ ಸಹೋದರಿಗೆ ಕ್ರೈಸ್ತ ವಿಶ್ವಾಸಿಯಲ್ಲದ ಪತಿ ಇದ್ದು, ಅವನು ಆಕೆಯೊಂದಿಗೆ ದಾಂಪತ್ಯಜೀವನ ನಡೆಸಲು ಒಪ್ಪಿದರೆ, ಆಕೆ ಅವನನ್ನು ಬಿಟ್ಟುಬಿಡಬಾರದು.
14 : ಏಕೆಂದರೆ, ಕ್ರೈಸ್ತವಿಶ್ವಾಸಿಯಾದ ಸತಿಯ ಮುಖಾಂತರ ಪತಿ ದೇವಜನರೊಂದಿಗೆ ಸಂಬಂಧ ಪಡೆಯುತ್ತಾನೆ. ಅಂತೆಯೇ ಕ್ರೈಸ್ತ ವಿಶ್ವಾಸಿಯಾದ ಪತಿಯ ಮುಖಾಂತರ ಸತಿ ದೇವಜನರೊಂದಿಗೆ ಸಂಬಂಧ ಪಡೆಯುತ್ತಾಳೆ. ಇಲ್ಲದಿದ್ದರೆ ನಿಮ್ಮ ಮಕ್ಕಳು ಅಪವಿತ್ರರಾಗುತ್ತಿದ್ದರು. ಈಗಲಾದರೋ ಅವರು ದೇವಜನರೊಂದಿಗೆ ಸಂಬಂಧ ಉಳ್ಳವರಾಗಿದ್ದಾರೆ.
15 : ಒಂದು ವೇಳೆ, ವಿಶ್ವಾಸವಿಲ್ಲದ ಸತಿಯಾಗಲಿ, ಪತಿಯಾಗಲಿ ಬೇರ್ಪಟ್ಟು ಹೋಗಬೇಕೆಂದಿದ್ದರೆ ಹೋಗಲಿ. ಇಂಥ ಸಂದರ್ಭಗಳಲ್ಲಿ ಕ್ರೈಸ್ತ ಸಹೋದರನು, ಇಲ್ಲವೆ ಸಹೋದರಿಯು ವಿವಾಹ ಬಂಧನದಿಂದ ವಿಮುಕ್ತರಾಗುತ್ತಾರೆ. ಏಕೆಂದರೆ, ದೇವರು ನಿಮ್ಮನ್ನು ಶಾಂತಿ ಸಮಾಧಾನದಿಂದ ಬಾಳಲು ಕರೆದಿದ್ದಾರೆ.
16 : ಅದೂ ಅಲ್ಲದೆ ಸ್ತ್ರೀಯೇ, ಕ್ರೈಸ್ತ ವಿಶ್ವಾಸಿಯಲ್ಲದ ನಿನ್ನ ಪತಿಯನ್ನು ಉದ್ಧಾರ ಮಾಡುವೆಯೆಂದು ಹೇಗೆ ಹೇಳಬಲ್ಲೆ? ಪುರುಷನೇ, ಕ್ರೈಸ್ತವಿಶ್ವಾಸಿಯಲ್ಲದ ನಿನ್ನ ಸತಿಯನ್ನು ಉದ್ಧಾರ ಮಾಡುವೆಯೆಂದು ಹೇಗೆ ಹೇಳಬಲ್ಲೆ?
17 : ದೇವರ ಕರೆಗೆ ಮತ್ತು ಪ್ರಭು ನೀಡಿರುವ ವರದಾನಗಳಿಗೆ ಅನುಗುಣವಾಗಿ ಪ್ರತಿಯೊಬ್ಬನೂ ಬಾಳುವೆ ನಡೆಸಲಿ. ಎಲ್ಲ ಸಭೆಗಳಿಗೂ ನಾನಿದನ್ನೇ ವಿಧಿಸಿದ್ದೇನೆ.
18 : ಸುನ್ನತಿ ಮಾಡಿಸಿಕೊಂಡವನು ದೇವರ ಕರೆಹೊಂದಿದ್ದರೆ ಅವನು ಸುನ್ನತಿ ಮಾಡಿಸಿಕೊಂಡದ್ದಕ್ಕಾಗಿ ಚಿಂತಿಸಬೇಕಾಗಿಲ್ಲ. ಸುನ್ನತಿ ಮಾಡಿಸಿಕೊಳ್ಳದವನು ದೇವರ ಕರೆ ಹೊಂದಿದ್ದರೆ ಅವನು ಸುನ್ನತಿ ಮಾಡಿಸಿಕೊಳ್ಳುವ ಅವಶ್ಯಕತೆಯಿಲ್ಲ.
19 : ಸುನ್ನತಿ ಮಾಡಿಸಿಕೊಳ್ಳುವುದೋ ಅಥವಾ ಮಾಡಿಸಿಕೊಳ್ಳದಿರುವುದೋ ಮುಖ್ಯವಲ್ಲ, ದೇವರ ಆಜ್ಞೆಗಳಿಗೆ ವಿಧೇಯನಾಗಿರುವುದೇ ಮುಖ್ಯ.
20 : ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿದ್ದನೋ ಅದೇ ಸ್ಥಿತಿಯಲ್ಲಿ ಮುಂದುವರಿಯಲಿ.
21 : ದೇವರು ಕರೆದಾಗ ನೀನು ದಾಸ್ಯದಲ್ಲಿದ್ದೆಯೋ? ಚಿಂತೆಯಿಲ್ಲ. ಆದರೆ ಸ್ವತಂತ್ರನಾಗುವ ಅವಕಾಶ ದೊರೆತರೆ ಅದನ್ನು ಬಿಡಬೇಡ.
22 : ಪ್ರಭುವಿನಿಂದ ಕರೆಹೊಂದಿದವನು ದಾಸನಾಗಿದ್ದರೂ ಪ್ರಭುವಿನಲ್ಲಿ ಅವನು ಸ್ವತಂತ್ರನೆ. ಅದೇ ಮೇರೆಗೆ ಸ್ವತಂತ್ರನಾದವನು ಕ್ರಿಸ್ತಯೇಸುವಿನಿಂದ ಕರೆಹೊಂದಿದ್ದರೆ ಅವನು ಕ್ರಿಸ್ತಯೇಸುವಿನ ದಾಸನೇ ಆಗುತ್ತಾನೆ.
23 : ನಿಮ್ಮನ್ನು ಕ್ರಯಕ್ಕೆ ಕೊಳ್ಳಲಾಗಿದೆ. ಆದ್ದರಿಂದ ಮಾನವರಿಗೆ ದಾಸರಾಗಬೇಡಿ. 24ಪ್ರಿಯ ಸಹೋದರರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಮುನ್ನಡೆಯಲಿ.
24 : ಪ್ರಿಯ ಸಹೋದರರೇ, ದೇವರು ಕರೆದಾಗ ಒಬ್ಬನು ಯಾವ ಸ್ಥಿತಿಯಲ್ಲಿ ಇದ್ದನೋ ಅದೇ ಸ್ಥಿತಿಯಲ್ಲಿ ದೇವರೊಂದಿಗೆ ಮುನ್ನಡೆಯಲಿ.
25 : ಅವಿವಾಹಿತರ ಬಗ್ಗೆ ಪ್ರಭುವಿನಿಂದ ಬಂದ ಕಟ್ಟಳೆ ಯಾವುದೂ ನನ್ನಲ್ಲಿಲ್ಲ. ಪ್ರಭುವಿನ ಕೃಪೆಯಿಂದ ನಂಬಿಕೆಗೆ ಅರ್ಹನಾದ ವ್ಯಕ್ತಿಯಂತೆ ನನ್ನ ಅಭಿಪ್ರಾಯಗಳನ್ನು ನಿಮ್ಮ ಮುಂದೆ ಇಡುತ್ತೇನೆ.
26 : ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಒಬ್ಬನು ತಾನು ಇದ್ದ ಸ್ಥಿತಿಯಲ್ಲೇ ಇರುವುದು ಉತ್ತಮವೆಂದು ಭಾವಿಸುತ್ತೇನೆ.
27 : ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ.
27 : ನಿನಗೆ ವಿವಾಹವಾಗಿದೆಯೋ? ವಿವಾಹ ವಿಚ್ಛೇದನಕ್ಕೆ ಯತ್ನಿಸಬೇಡ. ನೀನು ಅವಿವಾಹಿತನೋ? ವಿವಾಹವಾಗಲು ಅವಸರಪಡಬೇಡ.
28 : ಹಾಗೇನಾದರೂ ನೀನು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಅಂತೆಯೇ, ಅವಿವಾಹಿತ ಸ್ತ್ರೀಯೊಬ್ಬಳು ವಿವಾಹ ಮಾಡಿಕೊಂಡರೆ ಅದು ಪಾಪವಲ್ಲ. ಆದರೆ ದಂಪತಿಗಳಿಗೆ ತಾಪತ್ರಯಗಳು ಅನೇಕ. ಇವುಗಳು ನಿಮ್ಮನ್ನು ಬಾಧಿಸದಿರಲೆಂಬುದೇ ನನ್ನ ಹಾರೈಕೆ.
29 : ಪ್ರಿಯ ಸಹೋದರರೇ, ನನ್ನ ಅಭಿಪ್ರಾಯ ಇದು: ಉಳಿದಿರುವ ಕಾಲವು ಕೊಂಚ ಮಾತ್ರ. ಆದ್ದರಿಂದ ಮದುವೆಯಾದವರು ಮದುವೆಯಾಗದವರೋ ಎಂಬಂತೆ ನಡೆದುಕೊಳ್ಳಲಿ.
30 : ದುಃಖಿತರು ದುಃಖವಿಲ್ಲದವರಂತೆ, ಸಂತೋಷಭರಿತರು ಸಂತೋಷರಹಿತರಂತೆ ಹಾಗು ಕೊಂಡುಕೊಳ್ಳುವವರು ಕೊಂಡದ್ದು ತಮ್ಮದಲ್ಲವೋ ಎಂಬಂತೆ ನಡೆದುಕೊಳ್ಳಲಿ.
31 : ಲೋಕದ ವ್ಯವಹಾರದಲ್ಲಿ ಇರುವವರು ಅದರಲ್ಲಿಯೇ ತಲ್ಲೀನರಾಗದಿರಲಿ. ಏಕೆಂದರೆ, ಲೋಕದ ರೂಪರೇಷೆಗಳು ಗತಿಸಿ ಹೋಗುತ್ತವೆ.
32 : ನೀವು ಚಿಂತೆಯಿಲ್ಲದೆ ಇರಬೇಕೆಂಬುದೇ ನನ್ನ ಇಷ್ಟ. ಮದುವೆಯಾಗದವನು ಪ್ರಭುವಿನ ಸೇವೆಯಲ್ಲಿ ತತ್ಪರನಾಗಿರುತ್ತಾನೆ; ಪ್ರಭುವನ್ನು ಮೆಚ್ಚಿಸಲು ಶ್ರಮಿಸುತ್ತಾನೆ.
33 : ಮದುವೆ ಆದವನು ಲೋಕವ್ಯವಹಾರಗಳಲ್ಲಿ ಮಗ್ನನಾಗುತ್ತಾನೆ. ತನ್ನ ಸತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾನೆ.
34 : ಅಂಥವನು ಉಭಯ ಸಂಕಟಕ್ಕೆ ಸಿಕ್ಕಿಕೊಳ್ಳುತ್ತಾನೆ. ಮದುವೆಯಾಗದ ಮಹಿಳೆ ಅಥವಾ ಕನ್ನಿಕೆ ಪ್ರಭುವಿನ ಸೇವೆಯಲ್ಲಿ ನಿರತಳಾಗಿರುತ್ತಾಳೆ. ದೇಹಾತ್ಮಗಳೆರಡನ್ನೂ ಪ್ರಭುವಿಗೆ ವಿೂಸಲಾಗಿಡುತ್ತಾಳೆ. ಆದರೆ ವಿವಾಹಿತ ಸ್ತ್ರೀ ಲೋಕ ವ್ಯವಹಾರಗಳಲ್ಲಿ ಮಗ್ನಳಾಗಿರುತ್ತಾಳೆ. ತನ್ನ ಪತಿಯನ್ನು ಮೆಚ್ಚಿಸಲು ಪ್ರಯತ್ನಿಸುತ್ತಾಳೆ.
35 : ನಿಮ್ಮನ್ನು ಬಂಧಿಸಲು ಅಲ್ಲ, ಬೆಂಬಲಿಸಲು ಇದನ್ನು ಹೇಳುತ್ತಿದ್ದೇನೆ. ನೀವು ಸಜ್ಜನರಾಗಿ ನಡೆದುಕೊಂಡು, ಭಿನ್ನಭಾವವಿಲ್ಲದೆ ಪ್ರಭುವಿನ ಪಾದಸೇವೆ ಮಾಡಬೇಕೆಂಬುದೇ ನನ್ನ ಆಶೆ.
36 : ಒಬ್ಬನು ತನಗೆ ನಿಶ್ಚಿತವಾದ ಕನ್ಯೆಯೊಡನೆ ಅನುಚಿತ ರೀತಿಯಲ್ಲಿ ವರ್ತಿಸುತ್ತಿರಬಹುದು; ಅವನಿಗೆ ಸಂಯಮ ತಪ್ಪುವಂತಿದ್ದರೆ, ತಾನು ಆಶಿಸುವಂತೆ ಅವನು ಮದುವೆಮಾಡಿಕೊಳ್ಳಲಿ. ಅದು ಪಾಪವಲ್ಲ.
37 : ಆದರೆ ಅವನು ಯಾರ ಒತ್ತಾಯಕ್ಕೂ ಮಣಿಯದೆ ದೃಢಚಿತ್ತನಾಗಿದ್ದು, ತನಗೆ ನಿಶ್ಚಿತಳಾದ ಕನ್ಯೆಯೊಡನೆ ಮದುವೆಯಾಗುವುದು ಬೇಡವೆಂದು ತೀರ್ಮಾನಿಸಿಕೊಂಡರೆ ಮತ್ತು ತನ್ನ ಸಂಯಮವನ್ನು ಹತೋಟಿಯಲ್ಲಿಟ್ಟುಕೊಂಡಿದ್ದರೆ ಅವನು ಅಂತೆಯೇ ಮಾಡಲಿ. ಹೀಗೆ, ಮದುವೆ ಆಗದೆ ಇರುವುದು ಒಳ್ಳೆಯದು.
38 : ಈ ರೀತಿ ನಿಶ್ಚಯವಾದ ಕನ್ಯೆಯನ್ನು ಮದುವೆ ಮಾಡಿಕೊಳ್ಳುವುದು ಒಳ್ಳೆಯದೇ, ಮದುವೆ ಮಾಡಿಕೊಳ್ಳದಿರುವುದು ಇನ್ನಷ್ಟು ಒಳ್ಳೆಯದೇ.
39 : ಪತಿ ಬದುಕಿರುವವರೆಗೂ ಸತಿ ಅವನಿಗೆ ಬಂಧಿತಳು. ಅವನು ಸತ್ತರೆ ತಾನು ಇಷ್ಟಪಟ್ಟವನನ್ನು ಮತ್ತೆ ಮದುವೆ ಆಗಲು ಸ್ವತಂತ್ರಳು. ಆದರೆ ಅವನು ಕ್ರೈಸ್ತ ವಿಶ್ವಾಸಿಯಾಗಿರಬೇಕು
40 : ಆಕೆ ವಿವಾಹವಾಗದೆ ಹಾಗೇ ಉಳಿದರೆ ಹೆಚ್ಚು ಭಾಗ್ಯವಂತಳು. ಇದು ನನ್ನ ಅಭಿಪ್ರಾಯ. ಆದರೂ ದೇವರ ಆತ್ಮದ ಪ್ರೇರಣೆಯಿಂದ ಇದನ್ನು ಹೇಳುತ್ತಿದ್ದೇನೆ, ಎಂಬುದೇ ನನ್ನ ನಂಬಿಕೆ.

· © 2017 kannadacatholicbible.org Privacy Policy