Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ, ಅನ್ಯಜನರ ಮುಂದೆ ಹೋಗುವಷ್ಟು ಸೊಕ್ಕು ನಿಮಗೆಲ್ಲಿಂದ ಬಂದಿತು?
2 : ದೇವಜನರು ಈ ಲೋಕಕ್ಕೆ ನ್ಯಾಯತೀರ್ಪು ಮಾಡುತ್ತಾರೆಂದು ನಿಮಗೆ ತಿಳಿಯದೋ? ಲೋಕವೇ ನಿಮ್ಮಿಂದ ತೀರ್ಪು ಪಡೆಯಬೇಕಾಗಿರುವಲ್ಲಿ ಸಣ್ಣಪುಟ್ಟ ವಿಷಯಗಳನ್ನು ತೀರ್ಮಾನಿಸಿಕೊಳ್ಳಲು ನೀವು ಅಸಮರ್ಥರೋ?
3 : ದೇವದೂತರಿಗೂ ನಾವು ನ್ಯಾಯತೀರ್ಪು ಮಾಡುವೆವೆಂದು ನಿಮಗೆ ತಿಳಿಯದೋ? ಹೀಗಿರುವಲ್ಲಿ, ಈ ಜೀವನದ ಸಮಸ್ಯೆಗಳನ್ನು ಕುರಿತು ನ್ಯಾಯತೀರ್ಪು ಮಾಡುವುದು ಎಷ್ಟೋ ಸುಲಭವಲ್ಲವೇ?
4 : ಇಂಥ ವಿಷಯಗಳು ತಲೆದೋರಿದಾಗ ಧರ್ಮಸಭೆಯಿಂದ ಮಾನ್ಯತೆ ಪಡೆಯದವರನ್ನು ಏಕೆ ನ್ಯಾಯತೀರ್ಪುಗಾರನನ್ನಾಗಿ ಮಾಡುತ್ತೀರಿ?
5 : ಇದು ನಿಮಗೆ ನಾಚಿಕೆಗೇಡು! ಸಹೋದರರ ವ್ಯಾಜ್ಯವನ್ನು ತೀರ್ಮಾನಿಸಬಲ್ಲ ಜಾಣನು ನಿಮ್ಮಲ್ಲಿ ಒಬ್ಬನೂ ಇಲ್ಲವೇ?
6 : ಸಹೋದರನು ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದು, ಅದೂ ಅವಿಶ್ವಾಸಿಗಳ ಮುಂದೆ ಹೋಗುವುದು ಸರಿಯೇ?
7 : ನಿಮ್ಮ ನಿಮ್ಮಲ್ಲಿರುವ ವ್ಯಾಜ್ಯಗಳೇ ನಿಮ್ಮ ಸೋಲಿನ ಸೂಚನೆಗಳು. ಅದಕ್ಕಿಂತ ಅನ್ಯಾಯವನ್ನು ಸಹಿಸಿಕೊಳ್ಳುವುದು ಒಳ್ಳೆಯದಲ್ಲವೇ? ಸುಲಿಗೆಗೆ ತುತ್ತಾದರೂ ಸಾವಧಾನದಿಂದ ಇರುವುದು ಒಳಿತಲ್ಲವೇ?
8 : ಅದಕ್ಕೆ ಬದಲು ನೀವೇ ಅನ್ಯಾಯಮಾಡುತ್ತೀರಿ; ನೀವೇ ಸುಲಿಗೆಮಾಡುತ್ತೀರಿ; ಅದೂ ಸಹೋದರರಿಗೆ ಹೀಗೆ ಮಾಡುತ್ತೀರಿ.
9 : ಅಧರ್ಮಿಗಳು ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲವೆಂದು ನೀವು ಬಲ್ಲಿರಿ. ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿ. ದುರಾಚಾರಿಗಳು, ವಿಗ್ರಹಾರಾಧಕರು, ವ್ಯಭಿಚಾರಿಗಳು, ಸಲಿಂಗಕಾಮಿಗಳು,
10 : ಕಳ್ಳರು, ಲೋಭಿಗಳು, ಕುಡುಕರು, ಪರನಿಂದಕರು, ಸುಲಿಗೆಗಾರರು - ಇವರಾರೂ ದೇವರ ಸಾಮ್ರಾಜ್ಯಕ್ಕೆ ಬಾಧ್ಯರಲ್ಲ.
11 : ಹಿಂದೆ ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ಈಗ ಪ್ರಭು ಯೇಸುಕ್ರಿಸ್ತರ ನಾಮದಲ್ಲಿ ಮತ್ತು ದೇವರಾತ್ಮನಲ್ಲಿ ನೀವು ಶುದ್ಧರಾಗಿದ್ದೀರಿ, ಪುನೀತರಾಗಿದ್ದೀರಿ ಹಾಗೂ ದೇವರೊಡನೆ ಸತ್ಸಂಬಂಧ ಹೊಂದಿದ್ದೀರಿ.
12 : “ಏನನ್ನು ಮಾಡಲೂ ನನಗೆ ಸ್ವಾತಂತ್ರ್ಯ ಇದೆ,” ಎಂದು ಹೇಳುವುದುಂಟು. ಆದರೆ ಎಲ್ಲವೂ ನನಗೆ ಪ್ರಯೋಜನಕರವಲ್ಲ. ಏನನ್ನು ಮಾಡಲೂ ನನಗೆ ಸ್ವಾತಂತ್ರ್ಯವಿದೆ. ಆದರೆ ನಾನು ಯಾವುದಕ್ಕೂ ಗುಲಾಮನಲ್ಲ.
13 : “ಊಟ ಹೊಟ್ಟೆಗಾಗಿ, ಹೊಟ್ಟೆ ಊಟಕ್ಕಾಗಿ,” ಎಂದು ಹೇಳುವುದುಂಟು. ದೇವರು ಎರಡನ್ನೂ ನಾಶಗೊಳಿಸುವರು. ಆದರೆ ದೇಹವಿರುವುದು ದುರಾಚಾರಕ್ಕಲ್ಲ; ಪ್ರಭುವಿನ ಸೇವೆಗಾಗಿ. ಪ್ರಭುವೇ ದೇಹದ ಪರಿಪಾಲಕ.
14 : ಪ್ರಭುವನ್ನು ಪುನರುತ್ಥಾನಗೊಳಿಸಿದ ದೇವರು ನಮ್ಮನ್ನೂ ತಮ್ಮ ಪರಾಕ್ರಮದಿಂದ ಎಬ್ಬಿಸುವರು.
15 : ನಿಮ್ಮ ದೇಹಗಳು ಕ್ರಿಸ್ತಯೇಸುವಿನ ಅಂಗಗಳೆಂದು ನಿಮಗೆ ತಿಳಿಯದೇ? ಹಾಗಾದರೆ ನಾನು ಕ್ರಿಸ್ತಯೇಸುವಿನ ಅಂಗಗಳನ್ನು ತೆಗೆದು ವೇಶ್ಯೆಯ ಅಂಗಗಳನ್ನಾಗಿ ಮಾಡಬಹುದೇ? ಎಂದಿಗೂ ಇಲ್ಲ.
16 : “ಇಬ್ಬರೂ ಒಂದೇ ಶರೀರವಾಗುತ್ತಾರೆ” ಎಂದು ಬರೆಯಲಾಗಿದೆ. ವೇಶ್ಯೆಯ ಸಂಸರ್ಗ ಮಾಡುವವನು ಅವಳೊಂದಿಗೆ ಒಂದೇ ದೇಹವಾಗುತ್ತಾನೆ, ಎಂದು ನಿಮಗೆ ತಿಳಿಯದೇ?
17 : ಆದರೆ ಪ್ರಭುವಿನ ಅನ್ಯೋನ್ಯತೆಯಲ್ಲಿ ಇರುವವನು ಅವರೊಂದಿಗೆ ಆಧ್ಯಾತ್ಮಿಕವಾಗಿ ಒಂದಾಗಿರುತ್ತಾನೆ.
18 : ವ್ಯಭಿಚಾರದಿಂದ ದೂರ ಸರಿಯಿರಿ. ಮಾನವನು ಮಾಡುವ ಇತರ ಪಾಪಗಳು ದೇಹಕ್ಕೆ ಬಾಹಿರವಾದುವುಗಳು. ವ್ಯಭಿಚಾರ ಮಾಡುವಾತನು ತನ್ನ ದೇಹಕ್ಕೆ ದ್ರೋಹ ಬಗೆಯುತ್ತಾನೆ.
19 : ದೇವರು ನಿಮಗೆ ಅನುಗ್ರಹಿಸಿರುವ ಪವಿತ್ರಾತ್ಮರಿಗೆ ನಿಮ್ಮ ದೇಹ ಗರ್ಭಗುಡಿಯಾಗಿದೆ; ಆ ಪವಿತ್ರಾತ್ಮ ನಿಮ್ಮಲ್ಲಿ ವಾಸಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿಲ್ಲವೇ? ನೀವು ನಿಮ್ಮ ಸ್ವಂತ ಸೊತ್ತಲ್ಲ.
20 : ಏಕೆಂದರೆ, ನೀವು ಕ್ರಯಕ್ಕೆ ಕೊಳ್ಳಲಾದವರು. ಆದ್ದರಿಂದ ನಿಮ್ಮ ದೇಹದಲ್ಲಿ ಆ ದೇವರ ಮಹಿಮೆ ಬೆಳಗುವಂತೆ ಮಾಡಿರಿ.

· © 2017 kannadacatholicbible.org Privacy Policy