Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ಅನ್ಯಜನರಿಗೆ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ.
2 : ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೆ?
3 : ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನು ಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ.
4 : ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯೆಯಿರುತ್ತೇನೆ.
5 : ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು.
6 : ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ.
7 : ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದು ಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ.
8 : ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸ ರೊಟ್ಟಿಯನ್ನು ತಿಂದು ಪಾಸ್ಕ ಹಬ್ಬವನ್ನು ಆಚರಿಸೋಣ.
9 : ದುರಾಚಾರಿಗಳ ಸಹವಾಸ ನಿಮಗೆ ಸಲ್ಲದು, ಎಂದು ನಾನು ಬರೆದಿದ್ದೆ.
10 : ಅಂದರೆ, ಈ ಲೋಕದಲ್ಲಿರುವ ದುರಾಚಾರಿಗಳು, ಲೋಭಿಗಳು, ಸುಲಿಗೆಗಾರರು, ವಿಗ್ರಹಾರಾಧಕರು - ಇಂಥವರ ಸಹವಾಸವನ್ನು ಬಿಟ್ಟುಬಿಡಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಹಾಗೆ ಮಾಡಿದರೆ ನೀವು ಈ ಲೋಕವನ್ನೇ ಬಿಟ್ಟು ಹೋಗಬೇಕಾದೀತು.
11 : ಆದರೆ ತಾನು ಕ್ರೈಸ್ತ ಸಹೋದರ ಎನಿಸಿಕೊಂಡು, ದುರಾಚಾರಿಯಾಗಿಯೋ ಲೋಭಿಯಾಗಿಯೋ ವಿಗ್ರಹಾರಾಧಕನಾಗಿಯೋ ಪರನಿಂದಕನಾಗಿಯೋ ಕುಡುಕನಾಗಿಯೋ ಸುಲಿಗೆಗಾರನಾಗಿಯೋ ಯಾರಾದರೂ ಇದ್ದರೆ, ಅಂಥವನ ಸಹವಾಸ ನಿಮಗೆ ಸಲ್ಲದು. ಇದು ನನ್ನ ಪತ್ರದ ಉದ್ದೇಶ.
12 : ಧರ್ಮಸಭೆಗೆ ಸೇರದೆ ಇರುವವರ ಬಗ್ಗೆ ತೀರ್ಪುಮಾಡಬೇಕಾದುದು ನನ್ನ ಕೆಲಸವಲ್ಲ. ಅವರನ್ನು ಕುರಿತು ದೇವರೇ ತೀರ್ಪು ನೀಡುವರು.
13 : ನೀವು ತೀರ್ಪುಮಾಡಬೇಕಾದುದು ಧರ್ಮಸಭೆಗೆ ಸೇರಿದವರನ್ನು ಕುರಿತು. ದುರುಳನನ್ನು ನಿಮ್ಮಿಂದ ದೂರತಳ್ಳಿರಿ.

· © 2017 kannadacatholicbible.org Privacy Policy