1 :
ನಾವು ಕ್ರಿಸ್ತಯೇಸುವಿನ ದಾಸರೆಂದೂ ದೇವರ ಸತ್ಯಾರ್ಥಗಳ ನಂಬಿಗಸ್ಥ ನಿರ್ವಾಹಕರೆಂದೂ ಜನರು ನಮ್ಮನ್ನು ಪರಿಗಣಿಸಲಿ.
2 : ನಿರ್ವಾಹಕರು ಪ್ರಾಮಾಣಿಕರಾಗಿರಬೇಕಾದುದು ಅತ್ಯವಶ್ಯ.
3 : ನನ್ನ ವಿಷಯದಲ್ಲಿ ಹೇಳುವುದಾದರೆ, ನಿಮ್ಮಿಂದಾಗಲಿ, ಮಾನವ ನಿಯಮಿತ ನ್ಯಾಯಾಲಯದಿಂದಾಗಲಿ, ನನ್ನ ವಿಚಾರಣೆಯಾಗುವುದರ ಬಗ್ಗೆ ನನಗೆ ಕಿಂಚಿತ್ತೂ ಚಿಂತೆಯಿಲ್ಲ. ನನಗೆ ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ.
4 : ನನ್ನಲ್ಲಿ ದೋಷವಿದೆಯೆಂದು ನನ್ನ ಮನಸ್ಸಾಕ್ಷಿಗೆ ತೋರುವುದಿಲ್ಲ. ಆದರೂ ನಾನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ.
5 : ಅದೇ ಮೇರೆಗೆ, ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪುಮಾಡಬೇಡಿ; ಪ್ರಭುವಿನ ಪುನರಾಗಮನದವರೆಗೂ ಕಾದುಕೊಂಡಿರಿ. ಕತ್ತಲಲ್ಲಿ ಗುಪ್ತವಾಗಿರುವುಗಳನ್ನು ಪ್ರಭುವು ಬೆಳಕಿಗೆ ತರುವರು; ಅಂತರಂಗದ ಯೋಜನೆಗಳನ್ನು ಬಹಿರಂಗ ಪಡಿಸುವರು. ಆಗ ಪ್ರತಿಯೊಬ್ಬನಿಗೂ ತಕ್ಕ ಪ್ರಶಂಸೆ ದೇವರಿಂದಲೇ ದೊರಕುವುದು.
6 : ಸಹೋದರರೇ, ನಿಮ್ಮ ಪ್ರಯೋಜನಕ್ಕಾಗಿ ಇದೆಲ್ಲವನ್ನು ನನಗೂ ಅಪೊಲೋಸನಿಗೂ ಅನ್ವಯಿಸಿ ಹೇಳಿದ್ದೇನೆ. ನೀವು ನಮ್ಮ ಆದರ್ಶವನ್ನು ಅನುಸರಿಸಬೇಕು. ಧರ್ಮಶಾಸ್ತ್ರದಲ್ಲಿ ಬರೆದಿರುವುದನ್ನು ವಿೂರಬಾರದು. ನಿಮ್ಮಲ್ಲಿ ಯಾರೂ ಒಬ್ಬನ ಪಕ್ಷವಹಿಸಿ ಜಂಬ ಕೊಚ್ಚಿಕೊಂಡು ಮತ್ತೊಬ್ಬನನ್ನು ಕಡೆಗಣಿಸಬಾರದು.
7 : ಇತರರಿಗಿಂತಲೂ ನಿನ್ನನ್ನು ಶ್ರೇಷ್ಠನನ್ನಾಗಿಸಿದವರು ಯಾರು? ದೇವರಿಂದ ಪಡೆಯದೆ ಇರುವುದು ನಿನ್ನಲ್ಲಿ ಯಾವುದಾದರೂ ಇದೆಯೆ? ಹೀಗೆ ಎಲ್ಲವನ್ನೂ ದೇವರಿಂದ ಪಡೆದ ಮೇಲೆ, ಪಡೆಯದವನಂತೆ ಜಂಬ ಕೊಚ್ಚಿಕೊಳ್ಳುವುದೇಕೆ?
8 : ಈಗಾಗಲೇ ನೀವು ಸಂತೃಪ್ತರಾಗಿಬಿಟ್ಟಿರೋ? ಇಷ್ಟಕ್ಕೇ ಶ್ರೀಮಂತರಾಗಿಬಿಟ್ಟಿರೋ? ನಮ್ಮನ್ನು ಬಿಟ್ಟು ನೀವು ಸಿಂಹಾಸನವೇರಿಬಿಟ್ಟಿರೋ? ನೀವು ನಿಜವಾಗಿಯೂ ರಾಜರಾಗಿದ್ದರೆ ಚೆನ್ನಾಗಿರುತ್ತಿತ್ತು! ಆಗ ನಾವೂ ನಿಮ್ಮ ಜೊತೆ ರಾಜ್ಯ ಆಳಬಹುದಿತ್ತು!
9 : ಬದಲಿಗೆ, ಪ್ರೇಷಿತರಾದ ನಮ್ಮನ್ನು ದೇವರು ಕಟ್ಟಕಡೆಯವರನ್ನಾಗಿಸಿದ್ದಾರೆಂದು ತೋರುತ್ತದೆ. ಎಲ್ಲರ ಮುಂದೆ ಮರಣದಂಡನೆಗೆ ಎಳೆದೊಯ್ಯಲಾಗುವವರಂತೆ ನಾವು ದೂತರಿಗೂ ಮಾನವರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವಾಗಿದ್ದೇವೆ.
10 : ಕ್ರಿಸ್ತಯೇಸುವಿನ ನಿಮಿತ್ತ ನಾವಂತೂ ಹುಚ್ಚರು, ನೀವಾದರೋ ಕ್ರಿಸ್ತಯೇಸುವಿನಲ್ಲಿ ಬುದ್ದಿವಂತರು; ನಾವು ಬಲಹೀನರು, ನೀವು ಬಲಾಢ್ಯರು; ನಾವು ಅವಮಾನಿತರು, ನೀವು ಸನ್ಮಾನಿತರು!
11 : ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರು, ಬಟ್ಟೆಬರೆ ಇಲ್ಲದವರು, ಏಟುಪೆಟ್ಟು ತಿನ್ನುವವರು ಮತ್ತು ಮನೆಮಠವಿಲ್ಲದೆ ಅಲೆಯುವವರು ಆಗಿದ್ದೇವೆ.
12 : ಸ್ವಂತ ದುಡಿಮೆಯಿಂದ ಜೀವಿಸುತ್ತೇವೆ; ನಮ್ಮನ್ನು ಶಪಿಸುವವರನ್ನು ಆಶೀರ್ವದಿಸುತ್ತೇವೆ; ಹಿಂಸೆಗೊಳಗಾದಾಗ ಸಹಿಸಿಕೊಳ್ಳುತ್ತೇವೆ.
13 : ಅಪವಾದ ಹೊರಿಸಿದವರೊಡನೆ ವಿನಯದಿಂದ ವರ್ತಿಸುತ್ತೇವೆ; ಪ್ರಪಂಚದ ಪಾಲಿಗೆ ನಾವೀಗ ಕಸಕ್ಕಿಂತಲೂ ಕಡೆ; ವಿಶ್ವಕ್ಕೇ ಹೊಲಸು!
14 : ನಿಮ್ಮನ್ನು ನಾಚಿಕೆಪಡಿಸುವುದಕ್ಕೆ ಇದನ್ನು ಬರೆಯಲಿಲ್ಲ. ನಮ್ಮ ನೆಚ್ಚಿನ ಮಕ್ಕಳಾದ ನಿಮ್ಮನ್ನು ಎಚ್ಚರಿಸಲೆಂದು ಬರೆದೆನು.
15 : ನಿಮಗೆ ಕ್ರಿಸ್ತಯೇಸುವಿನಲ್ಲಿ ಸಾವಿರಾರು ಮಂದಿ ಶಿಕ್ಷಕರು ಇರಬಹುದು. ಆದರೆ ನಿಮಗೆ ನಾನೊಬ್ಬನೇ ತಂದೆ. ಶುಭಸಂದೇಶದ ಮೂಲಕ ನಾನೇ ನಿಮ್ಮನ್ನು ಕ್ರಿಸ್ತಯೇಸುವಿನಲ್ಲಿ ಪಡೆದ ತಂದೆ.
16 : ಆದ್ದರಿಂದ ನನ್ನನ್ನು ಅನುಸರಿಸಿ ಬಾಳಬೇಕೆಂದು ನಿಮ್ಮನ್ನು ಒತ್ತಾಯಿಸುತ್ತೇನೆ.
17 : ಇದಕ್ಕಾಗಿಯೇ ಪ್ರಭುವಿನಲ್ಲಿ ನನ್ನ ನೆಚ್ಚಿನ ಹಾಗೂ ಪ್ರಾಮಾಣಿಕ ಮಗನಾದ ತಿಮೊಥೇಯನನ್ನು ನಿಮ್ಮ ಬಳಿಗೆ ಕಳಿಸಿದ್ದೇನೆ. ಆತನು ಕ್ರಿಸ್ತಯೇಸುವಿನಲ್ಲಿ ನನ್ನ ಬಾಳುವೆಯನ್ನು ಕುರಿತು ತಿಳಿಸುವನು; ನಾನು ಎಲ್ಲಡೆಯಲ್ಲೂ ಎಲ್ಲಾ ಧರ್ಮಸಭೆಗಳಲ್ಲೂ ಬೋಧಿಸುತ್ತಿರುವುದನ್ನು ನಿಮ್ಮ ನೆನಪಿಗೆ ತರುವನು.
18 : ಇನ್ನು ನಾನು ನಿಮ್ಮ ಬಳಿಗೆ ಬರುವುದಿಲ್ಲ ಎಂದು ಭಾವಿಸಿ ಕೆಲವರು ಅಹಂಕಾರಿಗಳಾಗಿ ಮೆರೆಯುತ್ತಿದ್ದಾರೆಂದು ತಿಳಿದುಬಂದಿದೆ.
19 : ಪ್ರಭುವಿನ ಚಿತ್ತವಾದರೆ ನಾನು ಬೇಗನೆ ಬರುತ್ತೇನೆ. ಬಂದು, ಅಹಂಕಾರಿಗಳು ಕೇವಲ ಮಾತಿನ ಮಲ್ಲರೋ ಅಥವಾ ಶಕ್ತಿವಂತರೋ ಎಂದು ಕಂಡುಹಿಡಿಯುತ್ತೇನೆ.
20 : ದೇವರ ಸಾಮ್ರಾಜ್ಯ ಮರುಳು ಮಾತಲ್ಲ, ಶಕ್ತಿಯ ಸಾಧನ.
21 : ಬೆತ್ತವನ್ನು ಹಿಡಿದು ಬಿಗಿಯಲು ಬರಲೋ? ಅಥವಾ ಪ್ರೀತಿ ಸಹಾನುಭೂತಿಯಿಂದ ತುಂಬಿದವನಾಗಿ ಬರಲೋ? ನಿಮಗೆ ಯಾವುದು ಇಷ್ಟ?