1 :
ಸಹೋದರರೇ, ದೇವರ ಸತ್ಯಾರ್ಥವನ್ನು ಸಾರಲು ನಿಮ್ಮಲ್ಲಿಗೆ ನಾನು ಬಂದಾಗ ವಾಕ್ಚಾತುರ್ಯವನ್ನಾಗಲಿ, ಜ್ಞಾನಾಡಂಬರವನ್ನಾಗಲಿ ಪ್ರದರ್ಶಿಸುತ್ತಾ ಬರಲಿಲ್ಲ.
2 : ನಾನು ನಿಮ್ಮೊಡನೆ ಇದ್ದಾಗ, ಯೇಸುಕ್ರಿಸ್ತರನ್ನು, ಅದೂ ಶಿಲುಬೆಗೇರಿಸಲಾದ ಯೇಸುವನ್ನು ಹೊರತು ಬೇರೆ ಯಾವುದನ್ನೂ ಅರಿಯಲು ಆಶಿಸಲಿಲ್ಲ.
3 : ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ.
4 : ನನ್ನ ಬೋಧನೆ ಹಾಗೂ ಮಾತುಕತೆ ಕೇವಲ ಬುದ್ಧಿವಂತಿಕೆಯಿಂದಾಗಲಿ ಮಾತಿನ ಚಮತ್ಕಾರದಿಂದಾಗಲಿ ಕೂಡಿರಲಿಲ್ಲ; ಅದಕ್ಕೆ ಬದಲಾಗಿ ದೇವರ ಆತ್ಮವನ್ನು, ಅವರ ಶಕ್ತಿಯನ್ನು ಸಮರ್ಥಿಸುತ್ತಿದ್ದವು.
5 : ಅಂತೆಯೇ ನಿಮ್ಮ ವಿಶ್ವಾಸವು ಮನುಷ್ಯ ಜ್ಞಾನವನ್ನು ಆಧರಿಸದೆ, ದೇವರ ಶಕ್ತಿಯನ್ನು ಆಧರಿಸಬೇಕೆಂಬುದೇ ನನ್ನ ಉದ್ದೇಶವಾಗಿತ್ತು.
6 :
ನಾನು ಪರಿಣಿತರೊಂದಿಗೆ ಜ್ಞಾನವನ್ನೇ ಕುರಿತು ಮಾತನಾಡುತ್ತೇನೆ. ಆದರೆ ಇದು ಇಹಲೋಕದ ಜ್ಞಾನವಲ್ಲ, ಅಳಿದು ಹೋಗುವಂಥ ಅಧಿಪತಿಗಳ ಜ್ಞಾನವೂ ಅಲ್ಲ.
7 : ನಾನು ಸಾರುವ ಜ್ಞಾನ ದೇವರ ನಿಗೂಢ ಜ್ಞಾನ. ಮಾನವರಿಗೆ ಮುಚ್ಚಿಟ್ಟ ಜ್ಞಾನ. ನಮ್ಮನ್ನು ಮಹಿಮೆಗೊಳಿಸುವುದಕ್ಕಾಗಿ ಲೋಕದ ಉತ್ಪತ್ತಿಗೆ ಮೊದಲೇ ದೇವರು ನಿಯೋಜಿಸಿದ ಜ್ಞಾನ.
8 : ಲೋಕಾಧಿಪತಿಗಳಾರಿಗೂ ಇದರ ಅರಿವಿರಲಿಲ್ಲ. ಹಾಗೆ ಅರಿತಿದ್ದರೆ ಆ ಮಹಿಮಾನ್ವಿತ ಪ್ರಭುವನ್ನು ಅವರು ಶಿಲುಬೆಗೇರಿಸುತ್ತಿರಲಿಲ್ಲ.
9 : ಪವಿತ್ರಗ್ರಂಥದಲ್ಲಿ ಹೇಳಿರುವಂತೆ:
“ಕಣ್ಣಾವುದೂ ಕಂಡಿಲ್ಲ,
ಕಿವಿಯಾವುದೂ ಕೇಳಿಲ್ಲ.
ಮನುಜಕಲ್ಪನೆಗೂ ಎಟುಕಲಿಲ್ಲ.
ಅಂಥ ಅತಿಶಯಗಳನ್ನು ಸಜ್ಜುಗೊಳಿಸಿರುವನು,
ತನ್ನನೊಲಿದವರಿಗೆ ಪರಮದೇವನು.”
10 : ನಮಗಾದರೋ ದೇವರು ಪವಿತ್ರಾತ್ಮ ಅವರ ಮುಖಾಂತರ ಇವುಗಳನ್ನು ಪ್ರಕಟಿಸಿದ್ದಾರೆ. ಸಕಲವನ್ನು ಹಾಗೂ ದೇವರ ಅಂತರಾಳವನ್ನು ಅವಲೋಕಿಸುವವರು ಈ ಪವಿತ್ರಾತ್ಮರೇ.
11 : ಮಾನವನ ಆಲೋಚನೆಗಳನ್ನು ಅವನ ಅಂತರಾತ್ಮವಲ್ಲದೆ ಮತ್ತಾರು ಬಲ್ಲರು? ಅಂತೆಯೇ, ದೇವರ ಆಲೋಚನೆಗಳನ್ನು ಪವಿತ್ರಾತ್ಮರಲ್ಲದೆ, ಬೇರೆ ಯಾರೂ ಅರಿಯಲಾರರು.
12 : ನಾವಾದರೋ ಪ್ರಾಪಂಚಿಕ ಆತ್ಮವನ್ನು ಹೊಂದಿದವರಲ್ಲ. ದೇವರು ನಮಗೆ ದಯಪಾಲಿಸಿರುವ ವರಪ್ರಸಾದಗಳನ್ನು ಅರಿತುಕೊಳ್ಳುವಂತೆ ಮಾಡುವ ಪಾರಮಾರ್ಥಿಕ ಆತ್ಮವನ್ನು ಪಡೆದಿದ್ದೇವೆ.
13 : ನಾವು ಇವುಗಳನ್ನು ಮಾನವ ಜ್ಞಾನ ಪ್ರೇರೇಪಿಸಿದ ಮಾತುಗಳಿಂದ ಹೇಳುವುದಿಲ್ಲ. ದೇವರ ಆತ್ಮದಿಂದ ಪ್ರೇರಿತವಾದ ಮಾತುಗಳಿಂದ ಹೇಳುತ್ತೇವೆ. ಹೀಗೆ ಆಧ್ಯಾತ್ಮಿಕ ಸತ್ಯಗಳನ್ನು, ಆಧ್ಯಾತ್ಮಿಕ ವ್ಯಕ್ತಿಗಳಿಗೆ ವಿವರಿಸುತ್ತೇವೆ.
14 : ಭೌತಿಕ ಮನುಷ್ಯನು ದೇವರ ಆತ್ಮದ ವರಗಳನ್ನು ನಿರಾಕರಿಸುತ್ತಾನೆ. ಅವು ಅವನಿಗೆ ಹುಚ್ಚುತನವಾಗಿ ತೋರುತ್ತವೆ. ಅವುಗಳನ್ನು ಗ್ರಹಿಸಲು ಅವನಿಂದಾಗದು. ಏಕೆಂದರೆ, ಆಧ್ಯಾತ್ಮಿಕ ವಿವೇಚನೆಯಿಂದ ಮಾತ್ರ ಅವುಗಳನ್ನು ಅರಿಯಲು ಸಾಧ್ಯ.
15 : ದೇವರ ಆತ್ಮವನ್ನು ಹೊಂದಿದವನು ಎಲ್ಲವನ್ನೂ ವಿಚಾರಣೆಮಾಡಿ ತಿಳಿದುಕೊಳ್ಳುತ್ತಾನೆ. ಅವನನ್ನು ಯಾರೂ ವಿಚಾರಣೆಗೆ ಗುರಿಮಾಡಲಾಗದು.
16 : “ಪ್ರಭುವಿನ ಮನಸ್ಸನ್ನರಿತವರಾರು?
ಪ್ರಭುವಿಗೆ ಉಪದೇಶಿಸುವವರಾರು?”
ಎಂದು ಲಿಖಿತವಾಗಿದೆ. ನಾವಾದರೋ, ಕ್ರಿಸ್ತಯೇಸುವಿನ ಮನೋಭಾವನೆಯುಳ್ಳವರು.