1 :
ಪ್ರಿಯ ಸಹೋದರರೇ, ನಾನು ನಿಮಗೆ ಬೋಧಿಸಿದ ಶುಭಸಂದೇಶವನ್ನು ನೆನಪಿಗೆ ತಂದುಕೊಳ್ಳಿರಿ. ನೀವು ಅದನ್ನು ಸ್ವೀಕರಿಸಿದ್ದೀರಿ. ಅದರಲ್ಲಿ ನೆಲೆಯಾಗಿ ನಿಂತಿದ್ದೀರಿ.
2 : ನಾನು ನಿಮಗೆ ಶುಭಸಂದೇಶವೆಂದು ತಿಳಿಸಿದ ಸಂಗತಿಯನ್ನು ದೃಢವಾಗಿ ವಿಶ್ವಾಸಿಸಿದರೆ ನೀವು ಜೀವೋದ್ಧಾರವನ್ನು ಪಡೆಯುವಿರಿ. ಇಲ್ಲವಾದರೆ ನಿಮ್ಮ ವಿಶ್ವಾಸ ನಿರರ್ಥಕವಾದೀತು.
3 : ನಾನು ಪಡೆದುಕೊಂಡದ್ದನ್ನು ಮುಖ್ಯವಾದುದು ಎಂದೆಣಿಸಿ ನಿಮಗೆ ಒಪ್ಪಿಸಿದ್ದೇನೆ. ಅದು ಯಾವುದೆಂದರೆ, ಪವಿತ್ರಗ್ರಂಥದಲ್ಲಿ ಹೇಳಿರುವ ಪ್ರಕಾರ ಕ್ರಿಸ್ತಯೇಸು ನಮ್ಮ ಪಾಪಗಳ ಪರಿಹಾರಕ್ಕಾಗಿ ಪ್ರಾಣತ್ಯಾಗ ಮಾಡಿದರು.
4 : ಅವರನ್ನು ಭೂಸ್ಥಾಪನೆ ಮಾಡಲಾಯಿತು. ಅದೇ ಗ್ರಂಥದ ಪ್ರಕಾರ ಮೂರನೆಯ ದಿನ ಅವರು ಪುನರುತ್ಥಾನ ಹೊಂದಿದರು.
5 : ಅನಂತರ ಕೇಫನಿಗೂ ಹನ್ನೆರಡು ಮಂದಿಗೂ ಕಾಣಿಸಿಕೊಂಡರು.
6 : ತರುವಾಯ ಒಂದೇ ಸಮಯದಲ್ಲಿ ಐನೂರಕ್ಕೂ ಹೆಚ್ಚಿನ ಮಂದಿ ಸಹೋದರರಿಗೆ ಪ್ರತ್ಯಕ್ಷರಾದರು. ಅವರಲ್ಲಿ ಕೆಲವರು ಸತ್ತುಹೋಗಿದ್ದರೂ ಬಹು ಮಂದಿ ಇಂದಿಗೂ ಬದುಕಿದ್ದಾರೆ.
7 : ಅದಾದ ಮೇಲೆ ಯಕೋಬನಿಗೂ ಅನಂತರ ಪ್ರೇಷಿತರೆಲ್ಲರಿಗೂ ಕಾಣಿಸಿಕೊಂಡರು.
8 : ಕಟ್ಟಕಡೆಗೆ ದಿನ ತುಂಬುವ ಮೊದಲೇ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡರು.
9 : ನಾನಾದರೋ ಪ್ರೇಷಿತರಲ್ಲಿ ಕನಿಷ್ಠನು, ಪ್ರೇಷಿತನೆಂಬ ಹೆಸರಿಗೂ ಅಪಾತ್ರನು. ಏಕೆಂದರೆ, ನಾನು ದೇವರ ಸಭೆಯನ್ನು ಹಿಂಸಿಸಿದೆನು.
10 : ನಾನು ಈಗ ಈ ಸ್ಥಿತಿಯಲ್ಲಿ ಇರುವುದು ದೇವರ ಅನುಗ್ರಹದಿಂದಲೇ. ಅವರ ಅನುಗ್ರಹ ನನ್ನಲ್ಲಿ ವ್ಯರ್ಥವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚು ಶ್ರಮಪಟ್ಟು ಸೇವೆಮಾಡಿದ್ದೇನೆ. ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿರುವ ದೇವರ ಅನುಗ್ರಹವೇ.
11 : ನಾನಾದರೇನು, ಅವರಾದರೇನು? ನಾವು ಸಾರುವ ಸಂದೇಶ ಒಂದೇ. ಅದನ್ನು ನೀವು ನಂಬಿದ್ದೀರಿ.
12 :
ಕ್ರಿಸ್ತಯೇಸು ಮರಣದಿಂದ ಪುನರುತ್ಥಾನ ಹೊಂದಿದರು ಎಂದು ನಾವು ಸಾರುತ್ತಿರುವಲ್ಲಿ, ಸತ್ತವರು ಪುನರುತ್ಥಾನರಾಗುವುದಿಲ್ಲ ಎಂದು ನಿಮ್ಮಲ್ಲಿ ಕೆಲವರು ವಾದಿಸುವುದು ಹೇಗೆ?
13 : ಸತ್ತವರಿಗೆ ಪುನರುತ್ಥಾನ ಇಲ್ಲವೆಂಬುದು ನಿಜವಾದರೆ ಕ್ರಿಸ್ತಯೇಸು ಪುನರುತ್ಥಾನ ಹೊಂದಲಿಲ್ಲ ಎಂದ ಹಾಗಾಯಿತು
14 : ಕ್ರಿಸ್ತಯೇಸು ಪುನರುತ್ಥಾನರಾಗಲಿಲ್ಲ ಎಂದರೆ ನಮ್ಮ ಬೋಧನೆ ಬರಿದು; ನಿಮ್ಮ ವಿಶ್ವಾಸವೂ ಬರಿದು.
15 : ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂಬುದು ನಿಜವಾದರೆ ದೇವರು ಕ್ರಿಸ್ತಯೇಸುವನ್ನು ಪುನರುತ್ಥಾನಗೊಳಿಸಿಲ್ಲ ಎಂದಂತಾಯಿತು. ದೇವರು ಕ್ರಿಸ್ತಯೇಸುವನ್ನು ಸಾವಿನಿಂದ ಪುನರುತ್ಥಾನಗೊಳಿಸಿದ್ದಾರೆ ಎಂದು ಸಾಕ್ಷಿ ಹೇಳಿದ ನಾವು ಆಗ ದೇವರ ಬಗ್ಗೆಯೇ ಸುಳ್ಳುಸಾಕ್ಷಿ ಹೇಳಿದಂತಾಯಿತು.
16 : ಸತ್ತವರು ಪುನರುತ್ಥಾನ ಹೊಂದುವುದಿಲ್ಲ ಎಂದರೆ ಕ್ರಿಸ್ತಯೇಸುವು ಪುನರುತ್ಥಾನ ಹೊಂದಲಿಲ್ಲ ಎಂದಂತಾಯಿತು.
17 : ಕ್ರಿಸ್ತಯೇಸುವೇ ಪುನರುತ್ಥಾನ ಹೊಂದಿಲ್ಲ ಎಂದಮೇಲೆ ನಿಮ್ಮ ವಿಶ್ವಾಸವೇ ನಿರರ್ಥಕ; ಮತ್ತು ನೀವಿನ್ನೂ ನಿಮ್ಮ ಪಾಪಗಳಲ್ಲಿಯೇ ಮುಳುಗಿದ್ದೀರಿ;
18 : ಅಷ್ಟೇ ಅಲ್ಲದೆ, ಕ್ರಿಸ್ತಯೇಸುವಿನಲ್ಲಿ ಮೃತರಾದವರೆಲ್ಲರೂ ವಿನಾಶವಾದರು.
19 : ಕ್ರಿಸ್ತಯೇಸುವಿನಲ್ಲಿ ನಮಗಿರುವ ನಂಬಿಕೆ ಕೇವಲ ಬದುಕಿಗೆ ಸೀಮಿತವಾಗಿದ್ದರೆ ಜಗತ್ತಿನಲ್ಲಿ ನಮಗಿಂತ ನಿರ್ಭಾಗ್ಯರು ಬೇರೆ ಯಾರೂ ಇಲ್ಲ.
20 : ಕ್ರಿಸ್ತಯೇಸು ಪುನರುತ್ಥಾನಹೊಂದಿದ್ದೇನೋ ಸತ್ಯಸ್ಯ ಸತ್ಯ. ಅವರ ಪುನರುತ್ಥಾನವು, ಸತ್ತವರು ಪುನರುತ್ಥಾನ ಹೊಂದುತ್ತಾರೆ ಎನ್ನುವುದಕ್ಕೆ ಪ್ರಮಾಣ.
21 : ಒಬ್ಬ ಮನುಷ್ಯನಿಂದ ಸಾವು ಸಂಭವಿಸಿದಂತೆಯೇ ಒಬ್ಬ ಮನುಷ್ಯನಿಂದಲೇ ಸತ್ತವರಿಗೆ ಪುನರುತ್ಥಾನವು ಪರಿಣಮಿಸಿತು.
22 : ಆದಾಮನ ಸಂಬಂಧದಿಂದ ಎಲ್ಲರೂ ಸಾವಿಗೀಡಾದಂತೆ ಕ್ರಿಸ್ತಯೇಸುವಿನ ಸಂಬಂಧದಿಂದ ಎಲ್ಲರೂ ಜೀವಂತರಾಗಿ ಏಳುತ್ತಾರೆ.
23 : ಈ ಭಾಗ್ಯವನ್ನು ಒಬ್ಬೊಬ್ಬನೂ ಕ್ರಮಬದ್ಧ ರೀತಿಯಲ್ಲಿ ಪಡೆಯುತ್ತಾನೆ. ಪ್ರಪ್ರಥಮ ಫಲವಾಗಿ ಕ್ರಿಸ್ತಯೇಸುವೇ ಜೀವಂತರಾದರು. ಅನಂತರ, ಕ್ರಿಸ್ತಯೇಸುವಿಗೆ ಸೇರಿದವರು ಯೇಸು ಪುನರಾಗಮಿಸುವಾಗ ಜೀವಂತರಾಗುತ್ತಾರೆ.
24 : ಅಂತ್ಯ ಬರುವುದು ಅನಂತರವೇ. ಆಗ ಯೇಸು ಎಲ್ಲಾ ಆಧಿಪತ್ಯವನ್ನೂ ಅಧಿಕಾರವನ್ನೂ ಶಕ್ತಿಯನ್ನೂ ನಿರ್ಮೂಲಮಾಡಿ ತಂದೆಯಾದ ದೇವರಿಗೆ ಸಾಮ್ರಾಜ್ಯವನ್ನು ಒಪ್ಪಿಸಿಕೊಡುವರು.
25 : ಶತ್ರುಗಳೆಲ್ಲರನ್ನು ತಮ್ಮ ಪಾದಪೀಠವಾಗಿಸಿಕೊಳ್ಳುವ ತನಕ ಅವರು ರಾಜ್ಯವಾಳಬೇಕಾಗಿದೆ.
26 : ಕಟ್ಟಕಡೆಗೆ ನಿರ್ಮೂಲವಾಗುವ ಶತ್ರುವೆಂದರೆ ಮೃತ್ಯುವೇ.
27 : “ದೇವರು ಎಲ್ಲವನ್ನು ಅಧೀನಪಡಿಸಿ ಆತನ ಪಾದಪೀಠವನ್ನಾಗಿಸಿದ್ದಾರೆ,” ಎಂದು ಲಿಖಿತವಾಗಿದೆ. “ಎಲ್ಲವನ್ನೂ ಅಧೀನಪಡಿಸಲಾಗಿದೆ,” ಎಂದು ಹೇಳುವಾಗ, ಹಾಗೆ ಅಧೀನಪಡಿಸಿದ ದೇವರು ಅದರಲ್ಲಿ ಸೇರಲಿಲ್ಲ ಎಂಬುದು ಸುಸ್ಪಷ್ಟವಾಗಿದೆ.
28 : ಎಲ್ಲವೂ ಕ್ರಿಸ್ತಯೇಸುವಿಗೆ ಅಧೀನವಾದಾಗ ಪುತ್ರನಾದ ಅವರೇ, ಎಲ್ಲವನ್ನು ತನಗೆ ಅಧೀನಪಡಿಸಿದ ದೇವರಿಗೆ ಅಧೀನರಾಗುತ್ತಾರೆ. ಆಗ ದೇವರು ಸರ್ವರಿಗೆ ಸರ್ವಸ್ವವೂ ಆಗುತ್ತಾರೆ.
29 : ಸತ್ತವರಿಗೆ ಪುನರುತ್ಥಾನವಿಲ್ಲದಿದ್ದರೆ, ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರಲ್ಲ ಅದರ ಉದ್ದೇಶವೇನು? ಸತ್ತವರಿಗೆ ಪುನರುತ್ಥಾನವೇ ಇಲ್ಲವಾದರೆ ಅವರಿಗೋಸ್ಕರ ದೀಕ್ಷಾಸ್ನಾನ ಪಡೆಯುವುದರ ಪ್ರಯೋಜನ ಏನು?
30 : ನಾವು ಕೂಡ ಏಕೆ ಪ್ರತಿಕ್ಷಣದಲ್ಲಿಯೂ ಆಪತ್ತು ವಿಪತ್ತುಗಳನ್ನು ಎದುರಿಸುತ್ತಿದ್ದೇವೆ?
31 : ಹೌದು ಸಹೋದರರೇ, ಪ್ರತಿದಿನವೂ ನಾನು ಸಾವಿನ ದವಡೆಯಲ್ಲಿದ್ದೇನೆ. ನಮ್ಮ ಪ್ರಭು ಯೇಸುಕ್ರಿಸ್ತರಲ್ಲಿ ನಿಮ್ಮ ಬಗ್ಗೆ ನನಗಿರುವ ಹೆಮ್ಮೆಯಿಂದ ಇದನ್ನು ಪ್ರಮಾಣವಾಗಿ ಹೇಳುತ್ತಿದ್ದೇನೆ.
32 : ಲೋಕ ಪ್ರಶಂಸೆಗಾಗಿ ನಾನು ಈ ಎಫೆಸದ ‘ಕಾಡುಮೃಗ’ಗಳೊಡನೆ ಹೋರಾಡಿದೆನಾದರೆ, ಅದರಿಂದ ಬರುವ ಲಾಭವಾದರೂ ಏನು? ಸತ್ತವರಿಗೆ ಪುನರುತ್ಥಾನವಿಲ್ಲವಾದರೆ, “ಬನ್ನಿರಿ; ತಿನ್ನೋಣ, ಕುಡಿಯೋಣ, ಕಾದಿದೆಯಲ್ಲ ನಾಳೆ ಮರಣ,” ಎಂಬ ನಾಣ್ನುಡಿಯಂತೆ ನಡೆಯಬಹುದಲ್ಲಾ.
33 : ಮೋಸ ಹೋಗದಿರಿ. ಏಕೆಂದರೆ, “ದುರ್ಜನರ ಸಂಗ, ಸದಾಚಾರದ ಭಂಗ.”
34 : ಜಾಗೃತರಾಗಿರಿ, ದುರ್ಮಾರ್ಗವನ್ನು ಬಿಟ್ಟುಬಿಡಿ, ಸನ್ಮತಿಯುಳ್ಳವರಾಗಿರಿ. ದೇವರನ್ನು ಅರಿಯದ ಮೂಢರು ನಿಮ್ಮಲ್ಲಿ ಕೆಲವರು ಇದ್ದಾರೆ. ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ.
35 :
ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಅವರ ದೇಹಾಕೃತಿ ಹೇಗಿರುತ್ತದೆ? ಎಂದು ಯಾರಾದರೂ ಕೇಳಿಯಾರು.
36 : ಮತಿಹೀನನೇ, ನೀನು ಬಿತ್ತಿದ ಬೀಜ ಸಾಯದಿದ್ದರೆ ಅದು ಜೀವ ತಾಳುವುದುಂಟೆ? ಇಲ್ಲ.
37 : ನೀನು ಬಿತ್ತುವುದು ಗೋದಿಯನ್ನು ಅಥವಾ ಇನ್ನಾವುದೋ ಕಾಳನ್ನು; ಮುಂದಕ್ಕೆ ಬೆಳೆಯಲಿರುವ ಇಡೀ ಗಿಡವನ್ನಲ್ಲ.
38 : ದೇವರು ತಮ್ಮ ಚಿತ್ತಾನುಸಾರ ಅದಕ್ಕೆ ದೇಹಾಕೃತಿಯನ್ನು ಕೊಡುತ್ತಾರೆ. ಒಂದೊಂದು ಬೀಜಕ್ಕೂ ಅದರದರ ದೇಹಾಕೃತಿಯನ್ನು ಕೊಡುತ್ತಾರೆ.
38 : ದೇವರು ತಮ್ಮ ಚಿತ್ತಾನುಸಾರ ಅದಕ್ಕೆ ದೇಹಾಕೃತಿಯನ್ನು ಕೊಡುತ್ತಾರೆ. ಒಂದೊಂದು ಬೀಜಕ್ಕೂ ಅದರದರ ದೇಹಾಕೃತಿಯನ್ನು ಕೊಡುತ್ತಾರೆ.
39 : ಎಲ್ಲಾ ಶರೀರಗಳು ಒಂದೇ ವಿಧವಾಗಿಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ವಿೂನುಗಳ ಶರೀರ ಬೇರೆ.
40 : ಸ್ವರ್ಗೀಯ ಶರೀರಗಳೂ ಇವೆ. ಪೃಥ್ವಿಯ ಶರೀರಗಳೂ ಇವೆ. ಆದರೆ ಒಂದರ ಸ್ವರೂಪ ಮತ್ತೊಂದರಂತೆ ಇಲ್ಲ.
41 : ಸೂರ್ಯನ ಪ್ರಕಾಶ ಒಂದಾದರೆ, ಚಂದ್ರನ ಪ್ರಕಾಶವೇ ಇನ್ನೊಂದು; ನಕ್ಷತ್ರದ ಪ್ರಕಾಶವೇ ಬೇರೊಂದು. ನಕ್ಷತ್ರ ನಕ್ಷತ್ರಗಳ ಪ್ರಕಾಶವು ಸಹ ವೈವಿಧ್ಯವಾದುದು.
42 : ಸತ್ತವರ ಪುನರುತ್ಥಾನವೂ ಹಾಗೆಯೇ. ಬಿತ್ತುವಂಥದ್ದು ಅಳಿದುಹೋಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದುದು. ಬಿತ್ತಿದ್ದು ಬಲಹೀನವಾದುದು; ಪುನರುತ್ಥಾನ ಹೊಂದುವಂಥದ್ದು, ಬಲಿಷ್ಠವಾದುದು.
43 : ಬಿತ್ತದ್ದು ಕುರೂಪಿಯಾದುದು; ಪುನರುತ್ಥಾನ ಹೊಂದುವುದು ಕೋಮಲವಾದುದು.
44 : ಬಿತ್ತಿದ್ದು ಭೌತಿಕ ದೇಹ; ಪುನರುತ್ಥಾನ ಹೊಂದುವಂಥದ್ದು ಆಧ್ಯಾತ್ಮಿಕ ದೇಹ. ಭೌತಿಕ ದೇಹ ಇರುವುದು ಸತ್ಯವಾದರೆ ಆಧ್ಯಾತ್ಮಿಕ ದೇಹ ಇರುವುದೂ ಸತ್ಯ.
45 : ಪವಿತ್ರ ಗ್ರಂಥದಲ್ಲಿ ಲಿಖಿತವಾಗಿರುವಂತೆ ಮೊದಲ ಮಾನವನಾದ ಆದಾಮನು ಜೀವ ಪಡೆದ ವ್ಯಕ್ತಿ; ಕಡೆಯ ಆದಾಮನಾದರೋ ಜೀವ ಕೊಡುವ ಆತ್ಮ.
46 : ಮೊದಲು ಆದುದು ಆಧ್ಯಾತ್ಮಿಕವಾದುದಲ್ಲ, ಪ್ರಾಕೃತವಾದುದು. ಅನಂತರ ಆದುದು ಆಧ್ಯಾತ್ಮಿಕವಾದುದು.
47 : ಮೊದಲನೆಯ ಮಾನವನು ಮಣ್ಣಿನಿಂದಾದವನು; ಮಣ್ಣಿಗೆ ಸಂಬಂಧಪಟ್ಟವನು. ಎರಡನೆಯ ಮಾನವನಾದರೋ ಸ್ವರ್ಗದಿಂದ ಬಂದವನು.
48 : ಮಣ್ಣಿಗೆ ಸಂಬಂಧಪಟ್ಟವರು ಮಣ್ಣಿನಿಂದ ಆದವನಂತೆಯೇ ಇರುತ್ತಾರೆ. ಸ್ವರ್ಗಕ್ಕೆ ಸಂಬಂಧಪಟ್ಟವರು ಸ್ವರ್ಗದಿಂದ ಬಂದವನಂತೆಯೇ ಇರುತ್ತಾರೆ.
49 : ಮಣ್ಣಿನಿಂದ ಆದವನ ರೂಪವನ್ನು ನಾವು ಧರಿಸಿರುವಂತೆಯೇ ಸ್ವರ್ಗದಿಂದ ಬಂದಾತನ ರೂಪವನ್ನು ಧರಿಸುತ್ತೇವೆ.
50 : ಸಹೋದರರೇ, ನಾನು ನಿಮಗೆ ಹೇಳುವುದೇನೆಂದರೆ: ರಕ್ತಮಾಂಸವು ದೇವರ ಸಾಮ್ರಾಜ್ಯಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ. ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.
51 : ಇಗೋ, ಕೇಳಿ! ಇದುವರೆಗೂ ನಿಗೂಢವಾಗಿದ್ದ ರಹಸ್ಯವನ್ನು ನಾನು ನಿಮಗೆ ತಿಳಿಸುತ್ತೇನೆ. ನಾವೆಲ್ಲರೂ ಸಾಯುವುದಿಲ್ಲ. ಅಂತಿಮ ಕಹಳೆಯು ಮೊಳಗಿದಾಗ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರಲ್ಲಿ ನಾವೆಲ್ಲರೂ ಮಾರ್ಪಡುವೆವು.
52 : ಹೌದು, ಕಹಳೆ ಮೊಳಗುವುದು. ಸತ್ತವರು ಪುನರುತ್ಥಾನಹೊಂದಿ ಅಮರರಾಗುವರು ಮತ್ತು ನಾವು ಮಾರ್ಪಡುವೆವು.
53 : ಕೆಂದರೆ, ಅಳಿದು ಹೋಗುವ ಶರೀರ ಅಮರತ್ವವನ್ನು ಧರಿಸಲೇಬೇಕು. ಮತ್ರ್ಯವಾದ ಶರೀರ ಅಮರತ್ವವನ್ನು ಧರಿಸಲೇ ಬೇಕು.
54 : ಅಳಿದುಹೋಗುವಂಥದ್ದು ಅಮರತ್ವವನ್ನೂ ಮತ್ರ್ಯವಾದುದು ಅಮತ್ರ್ಯವನ್ನೂ ಧರಿಸಿಕೊಂಡಾಗ ಪವಿತ್ರಗ್ರಂಥದ ಈ ವಾಕ್ಯ ನೆರವೇರುವುದು:
55 : ಸಾವಿಗೆ ಸೋಲಾಯಿತು
ಜಯವು ಸಂಪೂರ್ಣವಾಯಿತು.
ಎಲೈ ಸಾವೇ, ನಿನ್ನ ಜಯವೆಲ್ಲಿ?
ಎಲೈ ಸಾವೇ, ನಿನ್ನ ವಿಷಕೊಂಡಿಯೆಲ್ಲಿ?
56 : ಪಾಪವೇ ಸಾವಿನ ವಿಷಕೊಂಡಿ. ಪಾಪಕ್ಕೆ ಶಕ್ತ್ಯಾಧಾರ ಶಾಸ್ತ್ರವಿಧಿಗಳೇ.
57 : ಆದರೆ ನಮ್ಮ ಪ್ರಭುವಾದ ಯೇಸುಕ್ರಿಸ್ತರ ಮುಖಾಂತರ ನಮಗೆ ಜಯವನ್ನು ದೊರಕಿಸಿಕೊಟ್ಟಿರುವ ದೇವರಿಗೆ ಸ್ತ್ರೋತ್ರ ಸಲ್ಲಲಿ!
58 : ನನ್ನ ಪ್ರಿಯ ಸಹೋದರರೇ, ಸ್ಥಿರ ಚಿತ್ತರಾಗಿರಿ, ನಿಶ್ಚಲರಾಗಿರಿ. ಪ್ರಭುವಿನ ಸೇವೆಯಲ್ಲಿ ನೀವು ಪಡುವ ಪ್ರಯಾಸ ಎಂದಿಗೂ ನಿಷ್ಫಲವಾಗದು. ಆದ್ದರಿಂದ ಅವರ ಸೇವೆಯಲ್ಲಿ ನಿರಂತರ ಶ್ರದ್ಧೆಯುಳ್ಳವರಾಗಿರಿ.