1 :
ಪ್ರೀತಿಯನ್ನು ಅರಸಿರಿ. ಪವಿತ್ರಾತ್ಮರ ವರಗಳನ್ನು ಬಯಸಿರಿ. ದೇವರ ಸಂದೇಶವನ್ನು ಸಾರಲು ಹಂಬಲಿಸಿರಿ.
2 : ಪರವಶಾ ಭಾಷೆಯನ್ನು ಆಡುವವನು ಮಾನವನೊಡನಲ್ಲ, ದೇವರೊಡನೆ ಮಾತನಾಡುತ್ತಾನೆ. ಪವಿತ್ರಾತ್ಮರ ಪ್ರೇರಣೆಯಿಂದ ನಿಗೂಢ ವಿಷಯಗಳ ಬಗ್ಗೆ ಮಾತನಾಡುವುದರಿಂದ ಯಾರೂ ಆತನ ಮಾತನ್ನು ಅರ್ಥಮಾಡಿಕೊಳ್ಳಲಾರರು.
3 : ಅವನ ಮಾತು ಭಕ್ತಿಯನ್ನು ವೃದ್ಧಿಸುತ್ತದೆ. ಉತ್ಸಾಹವನ್ನುಂಟು ಮಾಡುತ್ತದೆ, ಉಪಶಮನವನ್ನು ತರುತ್ತದೆ.
4 : ಪರವಶಾಭಾಷೆಗಳನ್ನು ಆಡುವವನು ತನ್ನನ್ನೇ ಅಭಿವೃದ್ಧಿಗೊಳಿಸಿಕೊಳ್ಳುತ್ತಾನೆ. ಆದರೆ ದೇವರ ವಾಕ್ಯವನ್ನು ಸಾರುವವನು ಇಡೀ ಧರ್ಮಸಭೆಯನ್ನೇ ಅಭಿವೃದ್ಧಿಗೊಳಿಸುತ್ತಾನೆ.
5 : ನೀವೆಲ್ಲರೂ ಪರವಶಾಭಾಷೆಗಳನ್ನು ಆಡಬಹುದಾದರೂ ದೇವರ ವಾಕ್ಯವನ್ನು ಸಾರುವವರಾಗಬೇಕೆಂಬುದೇ ನನ್ನ ಅಭಿಲಾಷೆ. ಪರವಶಾ ಭಾಷೆಗಳನ್ನು ಆಡುವಾತನು ಧರ್ಮಸಭೆಯ ಅಭಿವೃದ್ಧಿಗಾಗಿ ತನ್ನ ಮಾತಿನ ಅರ್ಥವನ್ನು ಹೇಳಲಾರನಾದರೆ, ಅವನಿಗಿಂತಲೂ ದೇವರ ವಾಕ್ಯವನ್ನು ಸಾರುವವನೇ ಶ್ರೇಷ್ಠನು.
6 : ಸಹೋದರರೇ, ನಾನು ನಿಮ್ಮ ಬಳಿಗೆ ಬಂದು ದೇವರ ಶ್ರುತಿಯನ್ನು, ನೈಜ ಜ್ಞಾನವನ್ನು, ದೇವರ ವಾಕ್ಯವನ್ನು, ದಿವ್ಯ ಬೋಧೆಯನ್ನು ನೀಡದೆ ಪರವಶಾಭಾಷೆಗಳಲ್ಲಿಯೇ ಮಾತನಾಡಿದರೆ ನಿಮಗೆ ಸಿಗುವ ಲಾಭವಾದರೂ ಏನು?
7 : ಕೊಳಲು, ವೀಣೆ ಮೊದಲಾದ ನಿರ್ಜೀವ ವಾದ್ಯಗಳು ನಾದವನ್ನು ಹೊಮ್ಮಿಸುತ್ತವೆ; ಅವುಗಳ ಸ್ವರಗಳಲ್ಲಿ ಯಾವ ವ್ಯತ್ಯಾಸವೂ ಕಂಡು ಬರದಿದ್ದರೆ, ನುಡಿಸಿದ್ದು, ಬಾಜಿಸಿದ್ದು ಇಂತಹುದೇ ರಾಗವೆಂದು ತಿಳಿಯುವುದು ಹೇಗೆ?
8 : ರಣಕಹಳೆಯು ನಿರ್ದಿಷ್ಟವಾದ ಧ್ವನಿಯನ್ನು ಮೊಳಗಿಸದಿದ್ದರೆ ಯಾರು ತಾನೇ ಯುದ್ಧ ಸನ್ನದ್ಧರಾಗಿರುತ್ತಾರೆ?
9 : ಅಂತೆಯೇ, ನೀವು ಸಹ ಪರವಶಾಭಾಷೆಯನ್ನು ಆಡುವಾಗ, ಇತರರಿಗೆ ಅದು ಅರ್ಥವಾಗದಿದ್ದರೆ, ಅವರು ನಿಮ್ಮ ಮಾತನ್ನು ತಿಳಿದುಕೊಳ್ಳುವುದಾದರೂ ಹೇಗೆ? ನಿಮ್ಮ ಮಾತು ಗಾಳಿ ಪಾಲಾಗುತ್ತದಷ್ಟೆ.
10 : ಜಗತ್ತಿನಲ್ಲಿ ಎಷ್ಟೋ ಭಾಷೆಗಳಿವೆ. ಅವುಗಳಲ್ಲಿ ಒಂದಾದರೂ ಅರ್ಥರಹಿತವಾದುದಲ್ಲ.
11 : ಭಾಷೆಯ ಅರ್ಥವು ನನಗಾಗದಿದ್ದರೆ ಮಾತನಾಡುವವನಿಗೆ ನಾನು ಪರಕೀಯನಂತಾಗುತ್ತೇನೆ; ನನಗೆ ಅವನು ಪರಕೀಯನಂತಾಗುತ್ತಾನೆ.
12 : ಆದ್ದರಿಂದ ಪವಿತ್ರಾತ್ಮ ವರಗಳ ಮೇಲೆ ಆಸಕ್ತಿಯುಳ್ಳ ನೀವು, ಧರ್ಮಸಭೆಯನ್ನು ಅಭಿವೃದ್ಧಿಗೊಳಿಸಬಲ್ಲ ವರಗಳ ಮೇಲೆ ಆಸಕ್ತರಾಗಿರಿ.
13 : ಪರವಶಾಭಾಷೆಗಳಲ್ಲಿ ಮಾತನಾಡುವವನು ತಾನಾಡುವ ಮಾತಿನ ಅರ್ಥವನ್ನು ಹೇಳುವ ಸಾಮಥ್ರ್ಯಕ್ಕಾಗಿ ದೇವರನ್ನು ಪ್ರಾರ್ಥಿಸಲಿ.
14 : ಏಕೆಂದರೆ, ನಾನು ಪರವಶಾಭಾಷೆಯಲ್ಲಿ ಪ್ರಾರ್ಥಿಸಿದರೆ ನನ್ನ ಆತ್ಮವೇನೋ ಪ್ರಾರ್ಥಿಸಿದಂತೆ ಆಗುತ್ತದೆ; ಆದರೆ ಮನಸ್ಸು ಮಾತ್ರ ಅದನ್ನು ಗ್ರಹಿಸುವುದಿಲ್ಲ
15 : ಹಾಗಾದರೆ ಈಗ ನಾನೇನು ಮಾಡಬೇಕು? ಆತ್ಮದಿಂದಲೂ ಹಾಡಬೇಕು, ಮನಸ್ಸಿನಿಂದಲೂ ಹಾಡಬೇಕು.
16 : ಸಭೆಯಲ್ಲಿ ನೀನು ಆತ್ಮದಿಂದ ಮಾತ್ರ ದೇವರ ಸ್ತುತಿಮಾಡಿದರೆ ನಿನ್ನ ಹಾಗೆ ಪರವಶನಲ್ಲದವನು ನಿನ್ನ ಕೃತಜ್ಞತಾ ಸ್ತುತಿಗೆ ‘ಆಮೆನ್’ ಎಂದು ಹೇಗೆ ತಾನೇ ಹೇಳಬಲ್ಲನು? ನೀನು ಹೇಳುವುದೇ ಅವನಿಗೆ ತಿಳಿಯುವುದಿಲ್ಲವಲ್ಲಾ!
17 : ನೀನು ಮಾಡುವ ಕೃತಜ್ಞತಾಸ್ತುತಿ ಎಷ್ಟು ಚೆನ್ನಾಗಿದ್ದರೂ ಅವನ ಮಟ್ಟಿಗೆ ಅದು ನಿಷ್ಪ್ರಯೋಜಕವೇ.
18 : ನಾನಾದರೋ ದೇವರ ದಯೆಯಿಂದ ನಿಮಗಿಂತಲೂ ಮಿಗಿಲಾಗಿ ಪರವಶಾಭಾಷೆಗಳನ್ನು ಆಡಬಲ್ಲೆ.
19 : ಆದರೂ ಸಭೆಯಲ್ಲಿ ಪರವಶನಾಗಿ ಹತ್ತು ಸಾವಿರ ನುಡಿಗಳನ್ನಾಡುವ ಬದಲು ಮನಸ್ಸಾರೆ ಐದೇ ಮಾತುಗಳನ್ನಾಡಿ ಉಪದೇಶಿಸುವುದು ಉತ್ತಮವೆಂದು ನನಗೆ ತೋರುತ್ತದೆ.
20 : ಸಹೋದರರೇ, ಬುದ್ಧಿಯ ವಿಷಯದಲ್ಲಿ ಬಾಲಕರಾಗಿರಬೇಡಿ. ದುಷ್ಟ ವಿಷಯಗಳಲ್ಲಿ ಶಿಶುಗಳಂತೆ ಮುಗ್ಧರಾಗಿರಿ; ಬುದ್ಧಿಯ ವಿಷಯದಲ್ಲಿ ಪ್ರಾಯಸ್ಥರಂತೆ ಪ್ರೌಢರಾಗಿರಿ.
21 : ಪವಿತ್ರ ಗ್ರಂಥದಲ್ಲಿ ಇಂತಿದೆ:
“ಅನ್ಯ ಭಾಷೆಯವರ ಮುಖಾಂತರ
ಅನ್ಯ ದೇಶೀಯರ ಬಾಯ ಮುಖಾಂತರ
ನಾನೆನ್ನ ಜನರೊಡನೆ ಮಾತಾಡಿದಾಗಲೂ
ಎನ್ನ ಮಾತಿಗೆ ಕಿವಿಗೊಡರವರು, ಎಂದರು
ಪ್ರಭು.”
22 : ಪರವಶಾಭಾಷೆಗಳನ್ನು ಆಡುವುದರ ಸಾಕ್ಷ್ಯ ವಿಶ್ವಾಸಿಗಳಿಗಲ್ಲ, ಅವಿಶ್ವಾಸಿಗಳಿಗೆ. ದೇವರ ವಾಕ್ಯವನ್ನು ಪ್ರಬೋಧಿಸುವುದರ ಸಾಕ್ಷ್ಯವು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ.
23 : ಒಂದು ಕಡೆ ಎಲ್ಲರೂ ಸಭೆ ಸೇರಿದಾಗ ಪ್ರತಿಯೊಬ್ಬನೂ ಪರವಶಾಭಾಷೆಗಳನ್ನು ಆಡಲು ಆರಂಭಿಸಿದರೆ ಅಲ್ಲಿಗೆ ಬರುವ ಅಪರಿಚಿತರು, ಅವಿಶ್ವಾಸಿಗಳು ನಿಮ್ಮನ್ನು ಹುಚ್ಚರೆಂದು ಕರೆಯಲಾರರೇ?
24 : ಬದಲಾಗಿ, ಬರುವ ಅಪರಿಚಿತರ ಹಾಗೂ ಅವಿಶ್ವಾಸಿಗಳ ಮುಂದೆ ಎಲ್ಲರೂ ದೇವರ ವಾಕ್ಯವನ್ನು ಪ್ರಬೋಧಿಸಿದರೆ ಅವರಲ್ಲಿ ಒಬ್ಬನಾದರೂ ತಾನು ಕೇಳಿದ ಮಾತಿನಿಂದ ತನ್ನ ಪಾಪವನ್ನು ಒಪ್ಪಿಕೊಳ್ಳುತ್ತಾನೆ; ಅವನು ಎಲ್ಲರ ಮಾತಿನಿಂದ ತನ್ನನ್ನು ತಾನೇ ಪರೀಕ್ಷಿಸಿಕೊಳ್ಳುತ್ತಾನೆ.
25 : ಅವನ ಅಂತರಾಳದ ವಿಚಾರಗಳು ಬಯಲಾಗುತ್ತವೆ. ಅವನು ಅಡ್ಡಬಿದ್ದು ದೇವರನ್ನು ಆರಾಧಿಸುತ್ತಾನೆ. “ದೇವರು ನಿಜವಾಗಿಯೂ ನಿಮ್ಮ ಮಧ್ಯೆ ಇದ್ದಾರೆ,” ಎಂದು ಪ್ರಚುರಪಡಿಸುತ್ತಾನೆ.
26 : ಹಾಗಾದರೆ ಪ್ರಿಯ ಸಹೋದರರೇ, ನಾವು ನಡೆದುಕೊಳ್ಳಬೇಕಾದ ಬಗೆ ಹೇಗೆ? ನೀವು ಸಭೆ ಸೇರಿದಾಗ ನಿಮ್ಮಲ್ಲಿ ಒಬ್ಬನು ಹಾಡುತ್ತಾನೆ; ಇನ್ನೊಬ್ಬನು ಉಪದೇಶ ಮಾಡುತ್ತಾನೆ; ಮತ್ತೊಬ್ಬನು ದೇವರು ತನಗೆ ಶ್ರುತಪಡಿಸಿದ್ದನ್ನು ತಿಳಿಸುತ್ತಾನೆ; ಇನ್ನೂ ಒಬ್ಬನು ಪರವಶಾಭಾಷೆಯನ್ನಾಡುತ್ತಾನೆ. ಮಗದೊಬ್ಬನು ಅದಕ್ಕೆ ಅರ್ಥ ಹೇಳುತ್ತಾನೆ ಎಂದಿಟ್ಟುಕೊಳ್ಳೋಣ. ನೀವು ಏನು ಮಾಡಿದರೂ ಧರ್ಮಸಭೆಯ ಅಭಿವೃದ್ಧಿಗಾಗಿಯೇ ಮಾಡಬೇಕು.
27 : ಪರವಶಾಭಾಷೆಯನ್ನು ಆಡುವುದಾದರೆ ಇಬ್ಬರು, ಹೆಚ್ಚೆಂದರೆ ಮೂವರು ಮಾತನಾಡಲಿ. ಆದರೆ ಒಬ್ಬರ ನಂತರ ಇನ್ನೊಬ್ಬರು ಮಾತನಾಡಲಿ. ಬೇರೊಬ್ಬರು ವಿವರಿಸಲಿ.
28 : ವಿವರಿಸಬಲ್ಲವರು ಯಾರೂ ಇಲ್ಲವಾದರೆ, ಪರವಶಾಭಾಷೆಯನ್ನು ಆಡುವವನು ಸಭೆಯಲ್ಲಿ ಮೌನದಿಂದಿರಲಿ. ತನ್ನೊಳಗೆ ದೇವರೊಡನೆ ಮಾತನಾಡಿಕೊಳ್ಳಲಿ.
29 : ದೇವರ ವಾಕ್ಯವನ್ನು ಬೋಧಿಸುವವರು ಇಬ್ಬರು ಇಲ್ಲವೆ ಮೂವರು ಮಾತ್ರ ಮಾತನಾಡಲಿ. ಉಳಿದವರು ಅವರ ಮಾತನ್ನು ವಿವೇಚಿಸಲಿ.
30 : ಸಭೆಯಲ್ಲಿ ಕುಳಿತವರಲ್ಲಿ ಒಬ್ಬನಿಗೆ ದೇವರ ಶ್ರುತಿಲಭಿಸಿತೆಂದರೆ ಮೊದಲು ಮಾತನಾಡುತ್ತಿದ್ದವನು ಮೌನ ತಳೆಯಲಿ.
31 : ನೀವು, ಒಬ್ಬರಾದ ಮೇಲೆ ಒಬ್ಬರು ದೇವರ ವಾಕ್ಯವನ್ನು ಬೋಧಿಸಬಹುದು. ಆಗ ಎಲ್ಲರೂ ಕಲಿತುಕೊಂಡು ಪ್ರೋತ್ಸಾಹ ಪಡೆಯಲು ಸಾಧ್ಯವಾಗುತ್ತದೆ.
32 : ದೇವರ ವಾಕ್ಯವನ್ನು ಬೋಧಿಸುವವರು ತಮ್ಮ ವಾಕ್ಚಾತುರ್ಯವನ್ನು ಸ್ವಾಧೀನದಲ್ಲಿಟ್ಟುಕೊಳ್ಳಬೇಕು.
33 : ದೇವರು ಗಲಿಬಿಲಿಯನ್ನು ಬಯಸುವವರಲ್ಲ; ಅವರು ಶಾಂತಿ ಮತ್ತು ಸುವ್ಯವಸ್ಥೆಯ ದೇವರು.
34 : ಎಲ್ಲ ಕ್ರೈಸ್ತಸಭೆಗಳಲ್ಲಿ ರೂಢಿಯಲ್ಲಿರುವಂತೆ ಮಹಿಳೆಯರು ಮೌನವಾಗಿರಲಿ; ಮಾತನಾಡಲು ಅವರಿಗೆ ಅನುಮತಿಯಿಲ್ಲ. ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ಅವರು ಅಧೀನರಾಗಿರಬೇಕು.
35 : ಅವರು ಏನನ್ನಾದರೂ ತಿಳಿಯಬಯಸಿದರೆ, ಮನೆಯಲ್ಲಿ ತಮ್ಮ ತಮ್ಮ ಗಂಡಂದಿರನ್ನು ಕೇಳಿ ತಿಳಿದುಕೊಳ್ಳಲಿ. ಮಹಿಳೆಯರು ಸಭಾಕೂಟದಲ್ಲಿ ಮಾತನಾಡುವುದು ಲಕ್ಷಣವಲ್ಲ.
36 : ದೇವರ ವಾಕ್ಯ ನಿಮ್ಮಿಂದ ಹೊರಟಿತೋ? ಅಥವಾ ನಿಮಗೆ ಮಾತ್ರ ತಲುಪಿತೋ?
37 : ನಿಮ್ಮಲ್ಲಿ ಯಾರಾದರೊಬ್ಬನು ತಾನು ದೇವರ ವಾಕ್ಯವನ್ನು ಬೋಧಿಸುವವನು ಅಥವಾ ಪವಿತ್ರಾತ್ಮ ಪ್ರೇರಣೆಯನ್ನು ಹೊಂದಿದವನು ಎಂದು ಭಾವಿಸುವುದಾದರೆ, ನಾನು ನಿಮಗೆ ಬರೆದಿರುವುದೆಲ್ಲ ಪ್ರಭುವಿನ ಆಜ್ಞೆಯೆಂದು ಚೆನ್ನಾಗಿ ತಿಳಿದುಕೊಳ್ಳಲಿ.
38 : ಯಾರಾದರು ಇದನ್ನು ಒಪ್ಪಿಕೊಳ್ಳದಿದ್ದರೆ, ನೀವು ಅವರನ್ನು ಒಪ್ಪಿಕೊಳ್ಳಬೇಕಾಗಿಲ್ಲ.
39 : ಸಹೋದರರೇ, ದೇವರ ವಾಕ್ಯವನ್ನು ಸಾರುವುದರಲ್ಲಿ ಆಸಕ್ತರಾಗಿರಿ. ಪರವಶಾಭಾಷೆಗಳನ್ನು ಆಡುವವರನ್ನು ತಡೆಯಬೇಡಿ.
40 : ಆದರೆ ಎಲ್ಲವನ್ನು ಒಪ್ಪವಾಗಿ, ಓರಣವಾಗಿ ಮಾಡಿರಿ.