Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ಸಹೋದರರೇ, ಪವಿತ್ರಾತ್ಮ ಅವರ ವರದಾನಗಳ ಬಗ್ಗೆ ನೀವು ಸರಿಯಾದ ಅರಿವುಳ್ಳವರಾಗಿರಬೇಕು.
2 : ನೀವು ಅನ್ಯಮತಸ್ಥರಾಗಿದ್ದಾಗ, ನಿಮಗೆ ಮನಸ್ಸು ಬಂದಂತೆಲ್ಲಾ ಮೂಕ ವಿಗ್ರಹಗಳ ಬಳಿ ಹೋಗಿ ಬರುತ್ತಿದ್ದಿರಿ; ಇದನ್ನು ನೀವೇ ಬಲ್ಲಿರಿ.
3 : ಇಷ್ಟು ಮಾತ್ರ ನಿಮಗೆ ಸ್ಪಷ್ಟವಾಗಿ ತಿಳಿದಿರಲಿ; ಪವಿತ್ರಾತ್ಮ ಪ್ರೇರಣೆಯಿಂದ ಮಾತನಾಡುವ ಯಾವಾತನೂ, “ಯೇಸುವಿಗೆ ಧಿಕ್ಕಾರ!” ಎನ್ನಲಾರನು. ಅಂತೆಯೇ, ಪವಿತ್ರಾತ್ಮ ಪ್ರೇರಣೆಯಿಂದಲ್ಲದೆ ಯಾವಾತನೂ, “ಯೇಸುವೇ ಪ್ರಭು,” ಎಂದು ಒಪ್ಪಿಕೊಳ್ಳಲಾರನು.
4 : ವರದಾನಗಳು ವಿಧವಿಧವಾಗಿವೆ; ಅವುಗಳನ್ನು ಕೊಡುವ ಪವಿತ್ರಾತ್ಮ ಒಬ್ಬರೇ.
5 : ಸೇವೆಗಳು ವಿಧವಿಧವಾಗಿವೆ; ಅವುಗಳನ್ನು ಸ್ವೀಕರಿಸುವ ಪ್ರಭುವು ಒಬ್ಬರೇ.
6 : ಶಕ್ತಿಸಾಮಥ್ರ್ಯವು ನಾನಾ ವಿಧ; ಅವುಗಳನ್ನು ಎಲ್ಲರಲ್ಲೂ ಸಾಧಿಸುವ ದೇವರು ಒಬ್ಬರೇ.
7 : ಪ್ರತಿಯೊಬ್ಬನಲ್ಲಿ ಕಂಡು ಬರುವ ಪವಿತ್ರಾತ್ಮರ ವರದಾನಗಳನ್ನು ಸರ್ವರ ಒಳಿತಿಗಾಗಿಯೇ ಕೊಡಲಾಗಿದೆ.
8 : ಪವಿತ್ರಾತ್ಮ ಮುಖಾಂತರ ಒಬ್ಬನಿಗೆ ಜ್ಞಾನೋಕ್ತಿಗಳು, ಇನ್ನೊಬ್ಬನಿಗೆ ಅವರ ಮುಖಾಂತರವೇ ವಿದ್ಯೋಕ್ತಿಗಳು ಲಭಿಸುತ್ತವೆ;
9 : ಅದೇ ಪವಿತ್ರಾತ್ಮರಿಂದ ಒಬ್ಬನಿಗೆ ಅಗಾಧ ವಿಶ್ವಾಸವೂ ಇನ್ನೊಬ್ಬನಿಗೆ ಸ್ವಸ್ಥತೆಯನ್ನೀಯುವ ಶಕ್ತಿಯೂ ದೊರಕುತ್ತದೆ.
10 : ಒಬ್ಬನಿಗೆ ಪವಾಡಗಳನ್ನು ಎಸಗುವ ಪರಾಕ್ರಮವನ್ನು, ಇನ್ನೊಬ್ಬನಿಗೆ ಪ್ರವಾದನೆ ಮಾಡುವ ಪ್ರತಿಭೆಯನ್ನು, ಮತ್ತೊಬ್ಬನಿಗೆ ಸತ್ಯಾಸತ್ಯವನ್ನು ವಿವೇಚಿಸುವ ಜಾಣ್ಮೆಯನ್ನು, ಮಗದೊಬ್ಬನಿಗೆ ವಿವಿಧ ಭಾಷೆಗಳನ್ನಾಡುವ ಸಾಮಥ್ರ್ಯವನ್ನು, ಮತ್ತೂ ಒಬ್ಬನಿಗೆ ಅವುಗಳನ್ನು ಅರ್ಥೈಸುವ ಅರಿವನ್ನು ಆ ಪವಿತ್ರಾತ್ಮರಿಂದಲೇ ಕೊಡಲಾಗುತ್ತದೆ.
11 : ಈ ವರಗಳನ್ನೆಲ್ಲ ಆ ಪವಿತ್ರಾತ್ಮ ಒಬ್ಬರೇ ತಮ್ಮ ಇಷ್ಟಾನುಸಾರ ಪ್ರತಿಯೊಬ್ಬನಿಗೂ ಹಂಚುತ್ತಾರೆ.
12 : ದೇಹ ಒಂದೇ; ಅಂಗಗಳು ಹಲವು. ಆ ಅಂಗಗಳು ಅನೇಕವಿದ್ದರೂ ಅವು ಸೇರಿ ಒಂದೇ ದೇಹವಾಗುತ್ತದೆ. ಅಂತೆಯೇ ಕ್ರಿಸ್ತಯೇಸು.
13 : ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ಪರತಂತ್ರರಾಗಿರಲಿ, ಸ್ವತಂತ್ರರಾಗಿರಲಿ - ನಾವೆಲ್ಲರೂ ಒಂದೇ ದೇಹವಾಗುವಂತೆ ಒಂದೇ ಆತ್ಮದಿಂದ ದೀಕ್ಷಾಸ್ನಾನ ಹೊಂದಿದ್ದೇವೆ. ಒಂದೇ ಆತ್ಮವನ್ನು ನಮ್ಮೆಲ್ಲರಿಗೂ ಪಾನವಾಗಿ ಕೊಡಲಾಗಿದೆ.
14 : ದೇಹವು ಏಕ ಅಂಗದಿಂದ ಅಲ್ಲ, ಅನೇಕ ಅಂಗಗಳಿಂದ ಕೂಡಿದೆ.
15 : ಎಂದಾದರೂ ಕಾಲು, “ನಾನು ಕೈ ಅಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?
16 : ಅಥವಾ ಕಿವಿ, “ನಾನು ಕಣ್ಣಲ್ಲ, ಈ ಕಾರಣ ನಾನು ದೇಹಕ್ಕೆ ಸೇರಿಲ್ಲ,” ಎಂದು ಹೇಳಿದ್ದಾದರೆ ಅದು ದೇಹದ ಅಂಗವಾಗಿರುವುದು ತಪ್ಪೀತೆ?
17 : ದೇಹವಿಡೀ ಕಣ್ಣೇ ಆದರೆ ಅದು ಕೇಳುವ ಬಗೆ ಹೇಗೆ? ಅಥವಾ ಅದು ಇಡೀ ಕಿವಿಯೇ ಆದರೆ, ಮೂಸಲು ಮೂಗು ಎಲ್ಲಿ?
18 : ಸದ್ಯ, ದೇವರು ತಮ್ಮ ಚಿತ್ತಾನುಸಾರ, ಪ್ರತಿಯೊಂದು ಅಂಗವನ್ನು ಸರಿಯಾಗಿ ಜೋಡಿಸಿದ್ದಾರೆ.
19 : ಅವೆಲ್ಲವೂ ಒಂದೇ ಅಂಗವಾಗಿದ್ದರೆ ಆಗ ದೇಹವೆಲ್ಲಿ?
20 : ಹೀಗೆ ಅಂಗಗಳು ಅನೇಕವಾಗಿದ್ದರೂ ದೇಹ ಮಾತ್ರ ಏಕ.
21 : ಹೀಗಿರಲಾಗಿ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕೈಗೆ, ಕಣ್ಣು ಹೇಳಲಾಗದು. ಅಂತೆಯೇ, “ನಿನ್ನ ಅವಶ್ಯಕತೆ ನನಗಿಲ್ಲ,” ಎಂದು ಕಾಲುಗಳಿಗೆ, ತಲೆ ಹೇಳಲಾಗದು.
22 : ಅಷ್ಟು ಮಾತ್ರವಲ್ಲ, ಬಲಹೀನವಾಗಿ ತೋರುವ ಅಂಗಗಳೂ ನಮಗೆ ಬೇಕೇಬೇಕು.
23 : ಅಲ್ಪವೆಂದೆಣಿಸುವ ಅಂಗಗಳನ್ನು ಅಧಿಕವಾಗಿ ಮಾನ್ಯಮಾಡುತ್ತೇವೆ. ಗೋಪ್ಯವಾಗಿಡತಕ್ಕವುಗಳನ್ನು ಶೀಲದಿಂದ ಸಂರಕ್ಷಿಸುತ್ತೇವೆ.
24 : ಬಾಹ್ಯ ಅಂಗಗಳಿಗೆ ಇಂಥ ಸಂರಕ್ಷಣೆ ಅಗತ್ಯವಿರುವುದಿಲ್ಲ. ದೇಹವನ್ನು ನಿರ್ಮಿಸಿದ ದೇವರು ಗೌಣವೆಂದೆಣಿಸಲಾಗುವ ಅಂಗಗಳಿಗೂ ವಿಶೇಷ ಘನತೆಯನ್ನು ಇತ್ತಿದ್ದಾರೆ.
25 : ದೇಹದಲ್ಲಿ ಭಿನ್ನಭೇದವಿಲ್ಲದೆ ಅಂಗಗಳು ಒಂದಕ್ಕೊಂದರ ಹಿತವನ್ನು ಗಮನಿಸುವಂತೆ ಮಾಡಿದ್ದಾರೆ.
26 : ಒಂದು ಅಂಗಕ್ಕೆ ನೋವಾದರೆ, ಎಲ್ಲಾ ಅಂಗಗಳೂ ಅದರೊಂದಿಗೆ ನೋವನ್ನು ಅನುಭವಿಸುತ್ತವೆ. ಒಂದು ಅಂಗಕ್ಕೆ ನಲಿವಾದರೆ, ಮಿಕ್ಕೆಲ್ಲಾ ಅಂಗಗಳು ಅದರೊಡನೆ ಸೇರಿ ನಲಿದಾಡುತ್ತವೆ.
27 : ನೀವೆಲ್ಲರೂ ಕ್ರಿಸ್ತಯೇಸುವಿನ ದೇಹ ಆಗಿದ್ದೀರಿ; ಪ್ರತಿಯೊಬ್ಬನೂ ಈ ದೇಹದ ಅಂಗವಾಗಿದ್ದಾನೆ.
28 : ದೇವರು ತಮ್ಮ ಸಭೆಯಲ್ಲಿ, ಮೊದಲನೆಯದಾಗಿ ಪ್ರೇಷಿತರನ್ನು, ಎರಡನೆಯದಾಗಿ ಪ್ರವಾದಿಗಳನ್ನು, ಮೂರನೆಯದಾಗಿ ಬೋಧಕರನ್ನು ನೇಮಿಸಿದ್ದಾರೆ. ಅನಂತರ ಪವಾಡಗಳನ್ನು ಎಸಗುವವರನ್ನು, ರೋಗಗಳನ್ನು ಗುಣಪಡಿಸುವವರನ್ನು, ಪರೋಪಕಾರಿಗಳನ್ನು, ಪರಿಪಾಲಕರನ್ನು, ಬಹುಭಾಷಾ ಪಂಡಿತರನ್ನು ನೇಮಿಸಿದ್ದಾರೆ.
29 : ಎಲ್ಲರೂ ಪ್ರೇಷಿತರಲ್ಲ, ಎಲ್ಲರೂ ಪ್ರವಾದಿಗಳಲ್ಲ, ಎಲ್ಲರೂ ಬೋಧಕರಲ್ಲ, ಎಲ್ಲರೂ ಪವಾಡಪುರುಷರಲ್ಲ,
30 : ಎಲ್ಲರೂ ರೋಗಗಳನ್ನು ಗುಣಪಡಿಸುವವರಲ್ಲ, ಎಲ್ಲರೂ ಪರೋಪಕಾರಿಗಳಲ್ಲ, ಎಲ್ಲರೂ ಪರಿಪಾಲಕರಲ್ಲ, ಎಲ್ಲರೂ ಬಹುಭಾಷಾಪಂಡಿತರಲ್ಲ, ಅಥವಾ ಎಲ್ಲರೂ ಆ ಭಾಷೆಗಳನ್ನು ವಿವರಿಸಿ ಹೇಳುವವರಲ್ಲ.
31 : ಶ್ರೇಷ್ಠವಾದ ವರಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಅಪೇಕ್ಷಿಸಿರಿ. ನಾನು ನಿಮಗೆ ಇನ್ನೂ ಸರ್ವೋತ್ತಮವಾದ ಮಾರ್ಗವನ್ನು ತೋರಿಸುತ್ತೇನೆ:

· © 2017 kannadacatholicbible.org Privacy Policy