Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

1ಕೊರಿಂಥ


1 : ಪ್ರಿಯ ಸಹೋದರರೇ, ನಮ್ಮ ಪೂರ್ವಜರಿಗೆ ಸಂಭವಿಸಿದವುಗಳತ್ತ ನಿಮ್ಮ ಗಮನವನ್ನು ಸೆಳೆಯಬೇಕೆಂದಿದ್ದೇನೆ. ಅವರೆಲ್ಲರೂ ಮೋಡದ ನೆರಳಿನಲ್ಲಿಯೇ ನಡೆದರು. ಎಲ್ಲರೂ ಸಮುದ್ರವನ್ನು ಸುರಕ್ಷಿತವಾಗಿ ದಾಟಿದರು.
2 : ಹೀಗೆ ಅವರು ಮೋಡದಲ್ಲಿಯೂ ಸಮುದ್ರದಲ್ಲಿಯೂ ಸ್ನಾನದೀಕ್ಷೆಯನ್ನು ಪಡೆದು ಮೋಶೆಗೆ ಶಿಷ್ಯರಾದರು.
3 : ಎಲ್ಲರೂ ಒಂದೇ ದೈವಿಕ ಪಾನೀಯವನ್ನು ಕುಡಿದರು;
4 : ಅದೂ ತಮ್ಮೊಡನೆ ಬರುತ್ತಿದ್ದ ದೈವಿಕ ಬಂಡೆಯಿಂದ ಕುಡಿದರು. ಕ್ರಿಸ್ತಯೇಸುವೇ ಈ ಬಂಡೆ.
5 : ಆದರೂ ಅವರಲ್ಲಿ ಬಹುಮಂದಿ ದೇವರ ಮೆಚ್ಚುಗೆಗೆ ಪಾತ್ರರಾಗಲಿಲ್ಲ. ಆದ್ದರಿಂದಲೇ ಮರುಭೂಮಿಯಲ್ಲೇ ಮಡಿದು ಮಣ್ಣುಪಾಲಾದರು.
6 : ಈ ಘಟನೆಗಳು ನಮಗೆ ಎಚ್ಚರಿಕೆ ನೀಡುವ ನಿದರ್ಶನಗಳಾಗಿವೆ. ಅವರಂತೆ ನಾವು ಕೆಟ್ಟದಾದವುಗಳನ್ನು ಆಶಿಸಬಾರದು.
7 : ಅವರಲ್ಲಿ ಕೆಲವರು ವಿಗ್ರಹಾರಾಧಕರಾದಂತೆ ನಾವು ಆಗಬಾರದು. ಇವರನ್ನು ಕುರಿತೇ: “ತಿನ್ನಲೆಂದು ಕುಡಿಯಲೆಂದು ಕುಳಿತರು ಕುಣಿಯಲೆಂದು ಕಾಮವೆದ್ದು ನಿಂತರು ಈ ಜನರು” ಎಂದು ಬರೆದಿದೆ.
8 : ಅವರಲ್ಲಿ ಕೆಲವರು ಹಾದರಮಾಡಿದ್ದರಿಂದ ಒಂದೇ ದಿನದಲ್ಲಿ ಇಪ್ಪತ್ತಮೂರು ಸಾವಿರ ಮಂದಿ ಸತ್ತರು. ನಾವು ಹಾದರದಿಂದ ದೂರವಿರಬೇಕು.
9 : ಅವರ ಪೈಕಿ ಕೆಲವರು ಪ್ರಭುವನ್ನು ಶೋಧಿಸಿದರು. ಪರಿಣಾಮವಾಗಿ ಸರ್ಪಗಳಿಂದ ನಾಶವಾದರು. ಅವರಂತೆ ಪ್ರಭುವನ್ನು ಶೋಧನೆ ಮಾಡುವುದು ನಮಗೆ ಬೇಡ.
10 : ಮತ್ತೆ ಕೆಲವರು ಗೊಣಗುಟ್ಟಿದರು. ಸಂಹಾರಕ ದೂತನಿಂದ ಸಂಹರಿಸಲ್ಪಟ್ಟರು. ನೀವೂ ಅವರಂತೆ ಗೊಣಗುಟ್ಟುವವರಾಗಬೇಡಿ.
11 : ಇದೆಲ್ಲ ಅವರಿಗೆ ಸಂಭವಿಸಿದುದು ಇತರರಿಗೆ ನಿದರ್ಶನವಾಗಿರಲೆಂದು. ಇವುಗಳನ್ನು ಬರೆದಿಟ್ಟಿರುವುದು, ಯುಗಾಂತ್ಯಕ್ಕೆ ಬಂದಿರುವ ನಮಗೆ ಮುನ್ನೆಚ್ಚರಿಕೆಯಾಗಿರಲೆಂದು.
12 : ಆದಕಾರಣ ಸ್ಥಿರವಾಗಿ ನಿಂತಿರುವೆನೆಂದು ಕೊಚ್ಚಿಕೊಳ್ಳುವವನೇ, ಕುಸಿದುಬೀಳದಂತೆ ಎಚ್ಚರಿಕೆಯಿಂದಿರು.
13 : ಮಾನವರಿಂದ ಜಯಿಸಲಾಗದ ಶೋಧನೆಗಳೇನೂ ನಿಮಗೆ ಬಂದಿಲ್ಲ. ದೇವರು ಕೊಟ್ಟಮಾತಿಗೆ ತಪ್ಪಲಾರರು. ಗೆಲ್ಲಲಾಗದ ಶೋಧನೆಗಳಿಗೆ ನಿಮ್ಮನ್ನೆಂದೂ ಗುರಿಪಡಿಸಲಾರರು. ಶೋಧನೆಗಳು ಬಂದಾಗ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನೂ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಅವರೇ ಒದಗಿಸುತ್ತಾರೆ.
14 : ಆದ್ದರಿಂದ ಪ್ರಿಯರೇ, ವಿಗ್ರಹಾರಾಧನೆಯನ್ನು ತೊರೆದು ಬಿಡಿ.
15 : ನೀವು ಅರಿತವರೆಂದು ತಿಳಿದೇ ಇದನ್ನು ಹೇಳುತ್ತಿದ್ದೇನೆ. ನನ್ನ ಮಾತುಗಳನ್ನು ನೀವೇ ಪರಿಶೀಲಿಸಿ ನೋಡಿ.
16 : ನಾವು ದೇವರಿಗೆ ಕೃತಜ್ಞತಾ ಸ್ತೋತ್ರವನ್ನು ಸಲ್ಲಿಸಿ ಪಾನಪಾತ್ರೆಯಿಂದ ಕುಡಿಯುವಾಗ ಕ್ರಿಸ್ತಯೇಸುವಿನ ರಕ್ತದಲ್ಲಿ ಪಾಲುಗೊಳ್ಳುತ್ತೇವಲ್ಲವೇ? ರೊಟ್ಟಿಯನ್ನು ಮುರಿದು ತಿನ್ನುವಾಗ ಕ್ರಿಸ್ತಯೇಸುವಿನ ಶರೀರದಲ್ಲಿ ಪಾಲುಗೊಳ್ಳುತ್ತೇವಲ್ಲವೇ?
17 : ರೊಟ್ಟಿ ಒಂದೇ; ಆದ್ದರಿಂದ ನಾವು ಅನೇಕರಿದ್ದರೂ ಒಂದೇ ಶರೀರವಾಗುತ್ತೇವೆ. ಏಕೆಂದರೆ ನಾವೆಲ್ಲರೂ ಆ ಒಂದೇ ರೊಟ್ಟಿಯಲ್ಲಿ ಭಾಗಿಗಳಾಗುತ್ತೇವೆ.
18 : ಇಸ್ರಯೇಲರ ಪದ್ಧತಿಯನ್ನು ಗಮನಿಸಿರಿ: ಬಲಿಯಾಗಿ ಅರ್ಪಿತವಾದುದನ್ನು ಭುಜಿಸುವವರು ಬಲಿಪೀಠದ ಸೇವೆಯಲ್ಲಿ ಭಾಗಿಯಾಗಿರುತ್ತಾರಷ್ಟೆ.
19 : ಹೀಗೆ ನಾನು ಹೇಳುವಾಗ ವಿಗ್ರಹಕ್ಕೆ ನೈವೇದ್ಯ ಮಾಡಿದ ಪದಾರ್ಥವು ವಾಸ್ತವವಾದುದು ಅಥವಾ ವಿಗ್ರಹವೇ ವಾಸ್ತವವಾದುದು ಎಂದು ಅರ್ಥವೇ?
20 : ಯಾವುದೂ ಅಲ್ಲ. ನಾನು ಹೇಳುವುದೇನೆಂದರೆ: ಅನ್ಯಜನರು ಬಲಿಯನ್ನು ದೆವ್ವಗಳಿಗೆ ಅರ್ಪಿಸುತ್ತಾರೆ ಹೊರತು ದೇವರಿಗಲ್ಲ. ಹೀಗೆ ನೀವು ದೆವ್ವಗಳೊಂದಿಗೆ ಭಾಗಿಯಾಗುವುದನ್ನು ನಾನೆಂದಿಗೂ ಇಷ್ಟಪಡುವುದಿಲ್ಲ.
21 : ನೀವು ಪ್ರಭುವಿನ ಪಾತ್ರೆಯಿಂದ ಹಾಗೂ ದೆವ್ವಗಳ ಪಾತ್ರೆಯಿಂದ ಕುಡಿಯಲಾಗದು. ಪ್ರಭುವಿನ ಪಂಕ್ತಿಯಲ್ಲೂ ಅಂತೆಯೇ ದೆವ್ವಗಳ ಪಂಕ್ತಿಯಲ್ಲೂ ಊಟಮಾಡಲಾಗದು.
22 : ನಾವು ಪ್ರಭುವನ್ನು ಅಸೂಯೆಗೆಬ್ಬಿಸಬಹುದೇ? ಅವರಿಗಿಂತ ನಾವು ಬಲಾಢ್ಯರೇ?
23 : “ಏನನ್ನು ಮಾಡಲೂ ಸ್ವಾತಂತ್ರ್ಯವಿದೆ,” ಎಂದು ಹೇಳುವುದುಂಟು. ಆದರೆ ಎಲ್ಲವೂ ಪ್ರಯೋಜನಕರವಲ್ಲ. ಏನನ್ನು ಮಾಡಲೂ ಸ್ವಾತಂತ್ರ್ಯವಿದೆ, ಆದರೆ ಎಲ್ಲವೂ ಅಭಿವೃದ್ಧಿಕರವಲ್ಲ.
24 : ಪ್ರತಿಯೊಬ್ಬನೂ ತನ್ನ ಹಿತವನ್ನು ಮಾತ್ರ ಬಯಸದೆ ಪರರ ಹಿತವನ್ನೂ ಬಯಸಬೇಕು.
25 : ಮನಸ್ಸಾಕ್ಷಿಯನ್ನು ಕೆದಕುವ ಪ್ರಶ್ನೆಗಳಿಗೆ ಎಡೆಕೊಡದೆ ಮಾಂಸದ ಮಾರುಕಟ್ಟೆಯಲ್ಲಿ ಮಾರುವುದೆಲ್ಲವನ್ನೂ ನೀವು ತಂದು ತಿನ್ನಬಹುದು.
26 : ಏಕೆಂದರೆ, “ಭೂಮಂಡಲವೂ ಅದರಲ್ಲಿರುವುದೆಲ್ಲವೂ ಪ್ರಭುವಿನದೆ.”
27 : ಕ್ರೈಸ್ತವಿಶ್ವಾಸಿ ಅಲ್ಲದವನು, ನಿಮ್ಮನ್ನು ಊಟಕ್ಕೆ ಕರೆದಾಗ, ನಿಮಗಿಷ್ಟವಿದ್ದರೆ ಹೋಗಿರಿ; ಮನಸ್ಸಾಕ್ಷಿಯನ್ನು ಕೆದಕುವ ಪ್ರಶ್ನೆಗಳಿಗೆ ಎಡೆಕೊಡದೆ ಅವನು ಬಡಿಸಿದ್ದನ್ನು ಊಟಮಾಡಿರಿ.
28 : ಆಗ ಯಾರಾದರೂ, “ಇದು ವಿಗ್ರಹಗಳಿಗೆ ಬಲಿಕೊಟ್ಟದ್ದು,” ಎಂದು ಹೇಳಿದರೆ, ಹಾಗೆ ತಿಳಿಸಿದವನ ಸಲುವಾಗಿ ಹಾಗೂ ಮನಸ್ಸಾಕ್ಷಿಯ ಸಲುವಾಗಿ ಅದನ್ನು ಊಟಮಾಡಬೇಡಿ.
29 : ಅಂದರೆ, ನಿನ್ನ ಸ್ವಂತ ಮನಸ್ಸಾಕ್ಷಿಯ ಸಲುವಾಗಿ ಅಲ್ಲ, ನಿನಗೆ ತಿಳಿಸಿದವನ ಮನಸ್ಸಾಕ್ಷಿಯ ಸಲುವಾಗಿ ಊಟಮಾಡಬೇಡ. ನಿಮ್ಮಲ್ಲಿ ಒಬ್ಬನು, “ನನ್ನ ಸ್ವಾತಂತ್ರ್ಯಕ್ಕೆ ಇನ್ನೊಬ್ಬನ ಮನಸ್ಸಾಕ್ಷಿ ಏಕೆ ಅಡ್ಡಿಯಾಗಬೇಕು?” ಎಂದು ಕೇಳಬಹುದು.
30 : ಹಾಗೂ “ನಾನು ದೇವರಿಗೆ ಕೃತಜ್ಞತಾಸ್ತ್ರೋತ್ರ ಮಾಡಿ ಊಟಮಾಡಿದೆನಾದರೆ ಹಾಗೆ ಸ್ತೋತ್ರ ಸಲ್ಲಿಕೆಯೊಂದಿಗೆ ಮಾಡಿದ ಊಟಕ್ಕಾಗಿ ನನ್ನ ಮೇಲೆ ದೂಷಣೆ ಏಕೆ?” ಎಂದು ಕೇಳಬಹುದು.
31 : ಅದಕ್ಕೆ ನನ್ನ ಉತ್ತರ ಇದು: ನೀವು ಉಂಡರೂ ಕುಡಿದರೂ ಏನು ಮಾಡಿದರೂ ಎಲ್ಲವನ್ನೂ ದೇವರ ಮಹಿಮೆಗಾಗಿ ಮಾಡಿ.
32 : ಯೆಹೂದ್ಯರಿಗಾಗಲಿ, ಗ್ರೀಕರಿಗಾಗಲಿ, ದೇವರ ಧರ್ಮಸಭೆಗಾಗಲಿ ಬಾಧಕರಾಗಿರಬೇಡಿ.
33 : ನಾನಂತೂ ನನ್ನ ಸ್ವಂತ ಹಿತವನ್ನು ಲೆಕ್ಕಿಸದೆ ಸರ್ವರ ಉದ್ಧಾರಕ್ಕಾಗಿ ಅವರ ಹಿತವನ್ನು ಅಪೇಕ್ಷಿಸಿ, ಎಲ್ಲರನ್ನೂ ಎಲ್ಲದರಲ್ಲೂ ಮೆಚ್ಚಿಸಲು ಪ್ರಯತ್ನಿಸುತ್ತೇನೆ.

· © 2017 kannadacatholicbible.org Privacy Policy