1 : ಕ್ರಿಸ್ತಯೇಸುವಿನಲ್ಲಿ ಪುನೀತರಾಗಿ ದೇವಜನರಾಗಲು ಕರೆಹೊಂದಿರುವ ಕೊರಿಂಥದ ಶ್ರೀಸಭೆಯವರಿಗೂ ಹಾಗೂ ಪ್ರಭು ಯೇಸುಕ್ರಿಸ್ತರನ್ನು ಎಲ್ಲೆಡೆಯೂ ನಾಮಸ್ಮರಣೆ ಮಾಡುವ ಸರ್ವಜನರಿಗೂ -
ದೇವರ ಚಿತ್ತಾನುಸಾರ ಕ್ರಿಸ್ತಯೇಸುವಿನ ಪ್ರೇಷಿತನಾಗಲು ಕರೆಹೊಂದಿದ ಪೌಲನಾದ ನಾನು ಸಹೋದರ ಸೊಸ್ಥೆನನೊಂದಿಗೆ ಸೇರಿ ಬರೆಯುವ ಪತ್ರ.
2 : ಯೇಸುಕ್ರಿಸ್ತರು ನಮಗೂ ಸಮಸ್ತ ದೇವಜನರಿಗೂ ಪ್ರಭುವಾಗಿದ್ದಾರೆ.
3 : ನಮ್ಮ ತಂದೆಯಾದ ದೇವರಿಂದಲೂ ಪ್ರಭುವಾದ ಯೇಸುಕ್ರಿಸ್ತರಿಂದಲೂ ನಿಮಗೆ ಅನುಗ್ರಹ ಮತ್ತು ಶಾಂತಿಸಮಾಧಾನ ಲಭಿಸಲಿ
4 :
ಕ್ರಿಸ್ತಯೇಸುವಿನಲ್ಲಿ ನಿಮಗೆ ಕೊಡಲಾಗಿರುವ ದೇವಾನುಗ್ರಹದ ಸಲುವಾಗಿ ನಾನು ನಿಮಗೋಸ್ಕರ ನನ್ನ ದೇವರಿಗೆ ಸತತವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
5 : ಏಕೆಂದರೆ, ಕ್ರಿಸ್ತಯೇಸುವಿನಲ್ಲಿ ನೀವು ಎಲ್ಲ ದೃಷ್ಟಿಯಿಂದಲೂ ಶ್ರೀಮಂತರು, ಜ್ಞಾನಸಂಪನ್ನರು ಮತ್ತು ವಾಕ್ ಚತುರರು ಆಗಿದ್ದೀರಿ.
6 : ಇದಲ್ಲದೆ, ಕ್ರಿಸ್ತಯೇಸುವನ್ನು ಕುರಿತ ಸಾಕ್ಷ್ಯವು ನಿಮ್ಮಲ್ಲಿ ನೆಲೆಗೊಂಡಿದೆ.
7 : ಇದರಿಂದಾಗಿ ನಮ್ಮ ಪ್ರಭು ಯೇಸುಕ್ರಿಸ್ತರು ಪ್ರತ್ಯಕ್ಷವಾಗುವುದನ್ನೇ ಎದುರು ನೋಡುತ್ತಿರುವ ನಿಮಗೆ ಯಾವ ಕೃಪಾಶೀರ್ವಾದಗಳ ಕೊರತೆಯು ಇಲ್ಲ.
8 : ನಮ್ಮ ಪ್ರಭು ಯೇಸುಕ್ರಿಸ್ತರ ದಿನದಂದು ನೀವು ನಿರ್ದೋಷಿಗಳಾಗಿರುವಂತೆ ಆ ದೇವರೇ, ನಿಮ್ಮನ್ನು ಕಡೆಯವರೆಗೂ ಸ್ಥಿರವಾಗಿ ಕಾಪಾಡುವರು.
9 : ತಮ್ಮ ಪುತ್ರನೂ ನಮ್ಮ ಪ್ರಭುವೂ ಆದ ಯೇಸುಕ್ರಿಸ್ತರ ಅನ್ಯೋನ್ಯತೆಗೆ ನಿಮ್ಮನ್ನು ಕರೆದಿರುವ ದೇವರು ನಿಜಕ್ಕೂ ವಿಶ್ವಾಸ ಪಾತ್ರರು.
10 :
ಸಹೋದರರೇ, ನಮ್ಮ ಪ್ರಭು ಯೇಸುಕ್ರಿಸ್ತರ ಹೆಸರಿನಲ್ಲಿ ನಾನು ಕೇಳಿಕೊಳ್ಳುವುದೇನೆಂದರೆ: ವಾದವಿವಾದವಿಲ್ಲದೆ, ಭಿನ್ನಭೇದಗಳಿಲ್ಲದೆ ಒಂದೇ ಮನಸ್ಸಿನಿಂದಲೂ ಒಂದೇ ಉದ್ದೇಶದಿಂದಲೂ ನೀವು ಐಕ್ಯಮತ್ಯದಿಂದ ಬಾಳಿರಿ.
11 : ಸಹೋದರರೇ, ನೀವು ಜಗಳವಾಡುತ್ತಿದ್ದೀರಿ ಎಂಬುದು ಖ್ಲೋಯೇಯನ ಮನೆಯವರಿಂದ ತಿಳಿದುಬಂದಿದೆ.
12 : ನಿಮ್ಮ ಪೈಕಿ, ತಾನು ಪೌಲನ ಕಡೆಯವನು ಎಂದು ಒಬ್ಬ, ತಾನು ಅಪೊಲೋಸನ ಕಡೆಯವನು ಎಂದು ಇನ್ನೊಬ್ಬ, ತಾನು ಕೇಫನ ಕಡೆಯವನು ಎಂದು ಮತ್ತೊಬ್ಬ, ತಾನು ಕ್ರಿಸ್ತನ ಕಡೆಯವನು ಎಂದು ಮಗದೊಬ್ಬ. ಹೀಗೆ ಒಬ್ಬೊಬ್ಬರು ಒಂದೊಂದು ತೆರನಾಗಿ ಹೇಳಿಕೊಳ್ಳುತ್ತಾರಂತೆ.
13 : ಕ್ರಿಸ್ತಯೇಸು ಭಾಗಭಾಗವಾಗಿ ವಿಂಗಡಿಸಿ ಹೋಗಿದ್ದಾರೆಯೇ? ನಿಮಗೋಸ್ಕರ ಶಿಲುಬೆಯ ಮೇಲೆ ಮಡಿದವನು ಪೌಲನೇ? ನೀವು ದೀಕ್ಷಾಸ್ನಾನ ಪಡೆದದ್ದು ಪೌಲನ ಹೆಸರಿನಲ್ಲೇ?
14 : ಸದ್ಯ ! ಕ್ರಿಸ್ಪನು ಮತ್ತು ಗಾಯನು ಇವರಿಬ್ಬರನ್ನು ಬಿಟ್ಟರೆ ನಿಮ್ಮ ಪೈಕಿ ಯಾರಿಗೂ ನಾನು ದೀಕ್ಷಾಸ್ನಾನವನ್ನು ಕೊಟ್ಟಿಲ್ಲ
15 : ಆದ್ದರಿಂದ ನಿಮ್ಮಲ್ಲಿ ಯಾರೂ ದೀಕ್ಷಾಸ್ನಾನವನ್ನು ನನ್ನ ಹೆಸರಿನಲ್ಲಿ ಪಡೆದಿರಿ ಎಂದು ಹೇಳಿಕೊಳ್ಳುವಂತಿಲ್ಲ.
16 : ಹೌದು, ಸ್ತೇಫನನ ಮನೆಯವರಿಗೂ ದೀಕ್ಷಾಸ್ನಾನವನ್ನು ಕೊಟ್ಟಿದ್ದೇನೆ. ಇವರಲ್ಲದೆ ಇನ್ನಾರಿಗೂ ದೀಕ್ಷಾಸ್ನಾನವನ್ನು ಕೊಟ್ಟ ನೆನಪು ನನಗಿಲ್ಲ.
17 : ಯೇಸುಕ್ರಿಸ್ತರು ನನ್ನನ್ನು ಕಳುಹಿಸಿರುವುದು ದೀಕ್ಷಾಸ್ನಾನವನ್ನು ಕೊಡುವುದಕ್ಕಲ್ಲ, ಶುಭಸಂದೇಶವನ್ನು ಸಾರುವುದಕ್ಕೆ. ಅದೂ ವಾಕ್‍ಚಾತುರ್ಯದಿಂದಲ್ಲ. ಹಾಗೆ ಸಾರಿದ್ದೇ ಆದರೆ, ಕ್ರಿಸ್ತಯೇಸುವಿನ ಶಿಲುಬೆಯೇ ನಿರರ್ಥಕವಾದೀತು.
18 :
ವಿನಾಶಮಾರ್ಗದಲ್ಲಿರುವವರಿಗೆ ಶಿಲುಬೆಯ ಸಂದೇಶ ಹುಚ್ಚು ಸಂಗತಿಯಾಗಿದೆ. ಮುಕ್ತಿಮಾರ್ಗದಲ್ಲಿರುವ ನಮಗಾದರೋ ಅದು ದೈವಶಕ್ತಿಯಾಗಿದೆ.
19 : “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು;
ಜಾಣರ ಜಾಣತನಕ್ಕೆ ಭಂಗತರುವೆನು”
- ಎಂದು ಪವಿತ್ರ ಗ್ರಂಥದಲ್ಲಿ ಇದೆಯಲ್ಲವೇ?
20 : ಹೀಗಿರುವಾಗ ಜ್ಞಾನಿಯೆಲ್ಲಿ? ಶಾಸ್ತ್ರಜ್ಞನೆಲ್ಲಿ? ಜಗತ್ತಿನ ತರ್ಕನಿಪುಣನೆಲ್ಲಿ? ಪ್ರಪಂಚದ ಜ್ಞಾನವನ್ನು ದೇವರು ಹುಚ್ಚುತನವಾಗಿಸಿಲ್ಲವೇ?
21 : ಲೋಕವು ತನ್ನ ಸ್ವಂತ ಜ್ಞಾನದಿಂದ ದೇವರನ್ನು ಅರಿಯಲಾರದೆ ಹೋಯಿತು. ಇದು ದೈವಸಂಕಲ್ಪವೇ ಸರಿ. ಆದ್ದರಿಂದಲೇ ನಾವು ಸಾರುವ ‘ಹುಚ್ಚುತನ’ವೆಂಬ ಸಂದೇಶದ ಮೂಲಕ ವಿಶ್ವಾಸವುಳ್ಳವರನ್ನು ಉದ್ಧರಿಸುವುದು ದೇವರಿಗೆ ಉಚಿತವೆನಿಸಿತು.
22 : ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ. ಗ್ರೀಕರು ಜ್ಞಾನವನ್ನು ಅರಸುತ್ತಾರೆ.
23 : ನಾವಾದರೋ ಶಿಲುಬೆಗೇರಿಸಲಾದ ಕ್ರಿಸ್ತಯೇಸುವನ್ನು ಪ್ರಚುರಪಡಿಸುತ್ತೇವೆ. ಯೆಹೂದ್ಯರಿಗೆ ಇದು ಅಸಹ್ಯವಾಗಿದೆ; ಅನ್ಯಜನರಿಗೆ ಹಾಸ್ಯಾಸ್ಪದವಾಗಿದೆ.
24 : ಆದರೆ ಯೆಹೂದ್ಯರಾಗಿರಲಿ, ಗ್ರೀಕರಾಗಿರಲಿ, ದೇವರಿಂದ ಕರೆಹೊಂದಿದ್ದರೆ ಅಂಥವರಿಗೆ ಯೇಸುಕ್ರಿಸ್ತರು ದೇವರ ಶಕ್ತಿಯಾಗಿದ್ದಾರೆ ಹಾಗೂ ದೇವರ ಜ್ಞಾನವಾಗಿದ್ದಾರೆ.
25 : ‘ದೇವರ ಹುಚ್ಚುತನ’ ಎಂಬುದು ಮಾನವನ ಜ್ಞಾನಕ್ಕಿಂತಲೂ ಶ್ರೇಷ್ಠವಾದುದು. ‘ದೇವರ ದೌರ್ಬಲ್ಯ’ ಎಂಬುದು ಮಾನವ ಶಕ್ತಿಗಿಂತಲೂ ಪ್ರಬಲವಾದುದು.
26 : ಸಹೋದರರೇ, ನಿಮ್ಮನ್ನು ದೇವರು ಕರೆದಾಗ ನೀವು ಹೇಗಿದ್ದಿರಿ ಎಂದು ಜ್ಞಾಪಿಸಿಕೊಳ್ಳಿ. ಲೋಕದ ಎಣಿಕೆಯಲ್ಲಿ ನಿಮ್ಮೊಳಗೆ ಜ್ಞಾನಿಗಳು ಅನೇಕರಿಲ್ಲ, ಪರಾಕ್ರಮಿಗಳು ಅನೇಕರಿಲ್ಲ, ಕುಲೀನರು ಅನೇಕರಿಲ್ಲ.
27 : ಜ್ಞಾನಿಗಳನ್ನು ನಾಚಿಕೆಗೀಡು ಮಾಡಲು ದೇವರು ಲೋಕದ ದೃಷ್ಟಿಯಲ್ಲಿ ಮೂರ್ಖರನ್ನು ಆರಿಸಿಕೊಂಡರು; ಅಂತೆಯೇ ಬಲಿಷ್ಠರನ್ನು ಲಜ್ಜೆಗೀಡುಮಾಡಲು ಲೋಕದ ದೃಷ್ಟಿಯಲ್ಲಿ ಬಲಹೀನರನ್ನು ಆರಿಸಿಕೊಂಡರು.
28 : ಲೋಕದ ದೃಷ್ಟಿಯಲ್ಲಿ ಗಣ್ಯವಾದುದನ್ನು ನಿರ್ನಾಮಗೊಳಿಸಲು ಗಣನೆಗೆ ಬಾರದುದನ್ನು, ಕೀಳಾದುದನ್ನು, ಬೀಳಾದುದನ್ನು ಆರಿಸಿಕೊಂಡರು.
29 : ಯಾವ ಮಾನವನೂ ತಮ್ಮ ಸಮ್ಮುಖದಲ್ಲಿ ಅಹಂಕಾರಪಡದಂತೆ ದೇವರು ಹೀಗೆ ಮಾಡಿದರು.
30 : ಅವರ ಕೃಪೆಯಿಂದಲೇ ನೀವು ಕ್ರಿಸ್ತಯೇಸುವಿನಲ್ಲಿ ಬಾಳುತ್ತಾ ಇದ್ದೀರಿ; ಅವರ ಕೃಪೆಯಿಂದಲೇ ಕ್ರಿಸ್ತಯೇಸು ನಮಗೆ ಜ್ಞಾನಮೂಲವಾಗಿದ್ದಾರೆ. ದೇವರಿಂದ ನಮಗೆ ದೊರಕುವ ಸತ್ಸಂಬಂಧ, ಪಾವನತೆ ಹಾಗೂ ವಿಮೋಚನೆ ಆ ಕ್ರಿಸ್ತಯೇಸುವಿನಿಂದಲೇ.
31 : ಆದ್ದರಿಂದ ಪವಿತ್ರಗ್ರಂಥದಲ್ಲಿ ಹೇಳಿರುವಂತೆ:
‘ಹೆಚ್ಚಳಪಡುವವನು ಪ್ರಭುವಿನಲ್ಲಿ
ಹೆಚ್ಚಳಪಡಲಿ.’