1 : ಪ್ರಧಾನಯಾಜಕನು, “ಇವರು ನಿನ್ನ ವಿರುದ್ಧ ಹೇಳುತ್ತಿರುವುದು ಸತ್ಯವೋ?” ಎಂದು ಸ್ತೇಫನನನ್ನು ಕೇಳಿದನು.
2 : ಪ್ರತ್ಯುತ್ತರವಾಗಿ ಅವನು ಹೀಗೆಂದನು:
“ಭ್ರಾತೃಗಳೇ, ಪಿತೃಗಳೇ, ಕಿವಿಗೊಡಿ. ನಮ್ಮ ಪಿತಾಮಹ ಅಬ್ರಹಾಮನು ಹಾರಾನಿನಲ್ಲಿ ವಾಸಮಾಡುವ ಮೊದಲು ಮೆಸಪಟೋಮಿಯದಲ್ಲಿ ಇದ್ದನು. ಆಗ ಮಹಿಮಾ ಸ್ವರೂಪರಾದ ದೇವರು ಅವನಿಗೆ ದರ್ಶನವಿತ್ತರು.
3 : ‘ನೀನು ನಿನ್ನ ಬಂಧುಬಳಗವನ್ನೂ ತಾಯ್ನಾಡನ್ನೂ ಬಿಟ್ಟು ನಾನು ತೋರಿಸುವ ನಾಡಿಗೆ ಹೋಗು,’ ಎಂದರು.
4 : ಅಂತೆಯೇ ಅವನು ಕಸ್ದೀಯರ ನಾಡನ್ನು ಬಿಟ್ಟು ಹಾರಾನಿನಲ್ಲಿ ವಾಸಮಾಡಿದನು; ಅವನ ತಂದೆಯ ಮರಣಾನಂತರ ದೇವರು ಅವನನ್ನು ನೀವು ವಾಸಮಾಡುತ್ತಿರುವ ಈ ನಾಡಿಗೆ ಕರೆತಂದರು.
5 : ಆಗ ಇಲ್ಲಿ ಕಾಲಿಡುವಷ್ಟು ನೆಲವನ್ನು ಕೂಡ ದೇವರು ಅವನಿಗೆ ಸ್ವಾಸ್ಥ್ಯವಾಗಿ ಕೊಡಲಿಲ್ಲ. ಸ್ವಂತ ಸೊತ್ತಾಗಿ ಅವನಿಗೂ ಅವನ ಬಳಿಕ ಅವನ ಸಂತತಿಗೂ ಕೊಡುವುದಾಗಿ ವಾಗ್ದಾನಮಾಡಿದರಷ್ಟೆ. ಆಗ ಅಬ್ರಹಾಮನಿಗೆ ಮಕ್ಕಳೇ ಇರಲಿಲ್ಲ.
6 : ಇದಲ್ಲದೆ ದೇವರು ಅಬ್ರಹಾಮನಿಗೆ, ‘ನಿನ್ನ ಸಂತತಿಯವರು ಅನ್ಯದೇಶದಲ್ಲಿ ಗುಲಾಮರಾಗುವರು; ನಾನೂರು ವರ್ಷಗಳವರೆಗೆ ದಬ್ಬಾಳಿಕೆಗೆ ಒಳಗಾಗುವರು.
7 : ಅವರಿಂದ ಗುಲಾಮಗಿರಿಯನ್ನು ಪಡೆಯುವ ಜನಾಂಗಕ್ಕೆ ನಾನು ದಂಡನೆ ವಿಧಿಸುವೆನು. ಅನಂತರ ಅವರು ಅಲ್ಲಿಂದ ಹೊರಬಂದು ನನ್ನನ್ನು ಈ ಸ್ಥಳದಲ್ಲೇ ಆರಾಧಿಸುವರು,’ ಎಂದರು.
8 : ಆಮೇಲೆ ದೇವರು ಅಬ್ರಹಾಮನೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು; ಆ ಒಡಂಬಡಿಕೆಯ ಚಿಹ್ನೆಯನ್ನಾಗಿ ಸುನ್ನತಿಯನ್ನು ವಿಧಿಸಿದರು. ಅದರಂತೆ ಅಬ್ರಹಾಮನು ತನ್ನ ಮಗ ಇಸಾಕನಿಗೆ ಹುಟ್ಟಿದ ಎಂಟನೆಯ ದಿನ ಸುನ್ನತಿಯನ್ನು ಮಾಡಿದನು. ಇಸಾಕನು ತನ್ನ ಮಗ ಯಕೋಬನಿಗೂ, ಯಕೋಬನು ತನ್ನ ಹನ್ನೆರಡು ಮಕ್ಕಳಾದ ನಮ್ಮ ಪಿತಾಮಹರಿಗೂ ಹಾಗೆಯೇ ಮಾಡಿದನು.
9 : “ಈ ಪಿತಾಮಹರು ಜೋಸೆಫನ ಮೇಲೆ ಮತ್ಸರ ತಾಳಿ ಅವನನ್ನು ಈಜಿಪ್ಟಿನವರಿಗೆ ಗುಲಾಮನನ್ನಾಗಿ ಮಾರಿದರು. ಆದರೆ ದೇವರು ಅವನೊಂದಿಗೆ ಇದ್ದು,
10 : ಎಲ್ಲಾ ಆಪತ್ತು ವಿಪತ್ತುಗಳಿಂದ ಅವನನ್ನು ಪಾರುಮಾಡಿದರು. ಅವನು ಈಜಿಪ್ಟಿನ ಅರಸ ಫರೋಹನ ಆಸ್ಥಾನಕ್ಕೆ ಬಂದಾಗ ದೇವರು ಅವನಿಗೆ ಜ್ಞಾನಸಂಪನ್ನತೆಯನ್ನಿತ್ತು ಅರಸನ ಮೆಚ್ಚುಗೆಗೆ ಪಾತ್ರನಾಗುವಂತೆ ಅನುಗ್ರಹಿಸಿದರು. ಫರೋಹನು ಅವನನ್ನು ರಾಜ್ಯಪಾಲನನ್ನಾಗಿಯೂ ಅರಮನೆಯ ಮೇಲ್ವಿಚಾರಕನನ್ನಾಗಿಯೂ ನೇಮಿಸಿದನು.
11 : ಈಜಿಪ್ಟ್ ಹಾಗೂ ಕಾನಾನ್ ದೇಶಗಳಲ್ಲಿ ಕ್ಷಾಮ ತಲೆದೋರಿದಾಗ ಜನರು ಕಷ್ಟಸಂಕಟಗಳಿಗೆ ಒಳಗಾದರು. ನಮ್ಮ ಪೂರ್ವಜರು ಆಹಾರವಿಲ್ಲದೆ ಅವಸ್ಥೆಪಟ್ಟರು.
12 : ಈಜಿಪ್ಟ್ ದೇಶದಲ್ಲಿ ಧಾನ್ಯ ಇರುವುದೆಂದು ಅರಿತು ಯಕೋಬನು, ಮೊದಲ ಬಾರಿಗೆ ತನ್ನ ಪುತ್ರರನ್ನು ಅಲ್ಲಿಗೆ ಕಳುಹಿಸಿದನು.
13 : ಎರಡನೆಯ ಬಾರಿ ಅವರು ಬಂದಾಗ ಜೋಸೆಫನು ತನ್ನ ಗುರುತನ್ನು ಸಹೋದರರಿಗೆ ತಿಳಿಸಿದನು. ಆಗ ಫರೋಹನಿಗೆ ಜೋಸೆಫನ ವಂಶದ ಪರಿಚಯವಾಯಿತು.
14 : ಅನಂತರ ತನ್ನ ತಂದೆ ಯಕೋಬನೂ ಅವನ ಬಂಧುಬಳಗದವರೂ ಈಜಿಪ್ಟಿಗೆ ಬರುವಂತೆ ಜೋಸೆಫನು ಹೇಳಿಕಳುಹಿಸಿದನು.
15 : ಇವರ ಒಟ್ಟು ಸಂಖ್ಯೆ ಎಪ್ಪತ್ತೈದು. ಯಕೋಬನು ಈಜಿಪ್ಟಿಗೆ ಹೋದನು. ಅವನೂ ನಮ್ಮ ಪಿತಾಮಹರೂ ಅಲ್ಲೇ ನಿಧನರಾದರು.
16 : ಅವರ ಅವಶೇಷಗಳನ್ನು ಮರಳಿ ಶೇಕೆಮಿಗೆ ಕೊಂಡೊಯ್ಯಲಾಯಿತು. ಅಲ್ಲಿ ಹಾಮೋರ್ ಎಂಬವನ ಮಕ್ಕಳಿಂದ ಅಬ್ರಹಾಮನು ಕ್ರಯಕ್ಕೆ ಕೊಂಡುಕೊಂಡಿದ್ದ ಸಮಾಧಿಯಲ್ಲಿ ಹೂಳಿದರು.
17 : “ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವ ಕಾಲವು ಸವಿೂಪಿಸಿತು. ಈಗಾಗಲೇ ಈಜಿಪ್ಟ್ ದೇಶದಲ್ಲಿ ನಮ್ಮ ಜನರ ಸಂಖ್ಯೆ ಅಧಿಕವಾಗಿ ಬೆಳೆದಿತ್ತು.
18 : ಕಡೆಗೆ ಜೋಸೆಫನನ್ನೇ ಅರಿಯದ ಬೇರೊಬ್ಬ ಅರಸ ರಾಜ್ಯವಾಳಲಾರಂಭಿಸಿದನು.
19 : ಅವನು ನಮ್ಮ ಜನರೊಡನೆ ಕುಯುಕ್ತಿಯಿಂದ ನಡೆದುಕೊಂಡನು. ಅವರ ಹಸುಳೆಗಳನ್ನು ನಿರ್ನಾಮ ಮಾಡಲು ಅವುಗಳನ್ನು ಹೊರಗೆ ಹಾಕಬೇಕೆಂದು ಬಲಾತ್ಕಾರಮಾಡಿದನು.
20 : ಸುರಸುಂದರನಾದ ಮೋಶೆ ಜನಿಸಿದ್ದು ಈ ಸಂದರ್ಭದಲ್ಲೇ. ಅವನು ಮೂರು ತಿಂಗಳವರೆಗೆ ಮನೆಯಲ್ಲೇ ಬೆಳೆದನು.
21 : ಅನಂತರ ಅವನನ್ನು ಮನೆಯಿಂದ ದೂರವಿಟ್ಟಿದ್ದಾಗ, ಫರೋಹನ ಮಗಳು ಅವನನ್ನು ತನ್ನ ಪಾಲನೆಗೆ ತೆಗೆದುಕೊಂಡು ಸ್ವಂತ ಮಗನಂತೆ ಸಾಕಿದಳು.
22 : ಅವನು ಈಜಿಪ್ಟರ ಸಕಲ ವಿದ್ಯೆಗಳಲ್ಲಿ ಪಾರಂಗತನಾಗಿ, ನಡೆಯಲ್ಲೂ ನುಡಿಯಲ್ಲೂ ಸಮರ್ಥನಾದನು.
23 : “ಮೋಶೆಗೆ ನಲವತ್ತು ವರ್ಷ ವಯಸ್ಸು ಆಗಿದ್ದಾಗ ಅವನು ತನ್ನ ಸೋದರ ಇಸ್ರಯೇಲರನ್ನು ಸಂದರ್ಶಿಸಲು ಇಷ್ಟಪಟ್ಟು ಹೊರಟನು.
23 : “ಮೋಶೆಗೆ ನಲವತ್ತು ವರ್ಷ ವಯಸ್ಸು ಆಗಿದ್ದಾಗ ಅವನು ತನ್ನ ಸೋದರ ಇಸ್ರಯೇಲರನ್ನು ಸಂದರ್ಶಿಸಲು ಇಷ್ಟಪಟ್ಟು ಹೊರಟನು.
24 : ಆಗ ಅವರಲ್ಲಿ ಒಬ್ಬನು ಈಜಿಪ್ಟಿನವನಿಂದ ಅನ್ಯಾಯವಾಗಿ ಹಿಂಸೆಪಡುತ್ತಿರುವುದನ್ನು ಕಂಡನು. ಅವನ ಸಹಾಯಕ್ಕೆ ಹೋಗಿ ಈಜಿಪ್ಟಿನವನನ್ನು ಕೊಂದು ಸೇಡುತೀರಿಸಿದನು.
25 : ಸ್ವಜನರ ಬಿಡುಗಡೆಗೆ ದೇವರು ತನ್ನನ್ನು ನೇಮಿಸಿರುವರು; ತನ್ನ ಸ್ವಂತ ಜನರು ಇದನ್ನು ಅರ್ಥಮಾಡಿಕೊಳ್ಳುವರು ಎಂದು ಮೋಶೆ ಭಾವಿಸಿದ್ದನು. ಆದರೆ, ಅವರು ಅರ್ಥಮಾಡಿಕೊಳ್ಳಲಿಲ್ಲ.
26 : ಮಾರನೆಯ ದಿನ ಇಬ್ಬರು ಇಸ್ರಯೇಲರೇ ಜಗಳವಾಡುತ್ತಿರುವುದನ್ನು ಕಂಡನು. ಮೋಶೆ ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದನು. ಅವರಿಗೆ, ‘ಗೆಳೆಯರೇ, ನೀವು ಸಹೋದರರಲ್ಲವೆ? ಹೀಗೇಕೆ ಕಿತ್ತಾಡುತ್ತಿದ್ದೀರಿ?’ ಎಂದು ಸಮಾಧಾನಪಡಿಸಲು ಯತ್ನಿಸಿದನು.
27 : ಆಗ ಆಕ್ರಮಣ ಮಾಡುತ್ತಿದ್ದವನು ಮೋಶೆಯನ್ನು ಹಿಂದಕ್ಕೆ ತಳ್ಳಿ, ‘ನಮ್ಮ ನ್ಯಾಯತೀರಿಸಲು ನಿನಗೆ ಅಧಿಕಾರವನ್ನು ಕೊಟ್ಟವರು ಯಾರು?
28 : ನಿನ್ನೆ ಈ ಈಜಿಪ್ಟಿನವನನ್ನು ಕೊಂದು ಹಾಕಿದಂತೆ ನನ್ನನ್ನೂ ಕೊಲ್ಲಬೇಕೆಂದಿರುವೆಯಾ?’ ಎಂದು ಪ್ರಶ್ನಿಸಿದನು.
29 : ಇದನ್ನು ಕೇಳಿದ್ದೇ ಮೋಶೆ ಅಲ್ಲಿಂದ ಪಲಾಯನ ಮಾಡಿ ಮಿದ್ಯಾನರ ನಾಡಿನಲ್ಲಿ ಆಶ್ರಯ ಪಡೆದನು. ಅಲ್ಲಿರುವಾಗ ಅವನಿಗೆ ಇಬ್ಬರು ಗಂಡು ಮಕ್ಕಳು ಹುಟ್ಟಿದರು.
30 : “ನಾಲ್ವತ್ತು ವರ್ಷಗಳಾದ ಮೇಲೆ ಒಂದು ದಿನ ಸೀನಾಯಿ ಬೆಟ್ಟದ ಮರಳುಗಾಡಿನಲ್ಲಿ ಉರಿಯುತ್ತಿದ್ದ ಪೊದೆಯೊಂದನ್ನು ಮೋಶೆ ಕಂಡನು. ಅದರಲ್ಲಿ ಒಬ್ಬ ದೇವದೂತನು ಕಾಣಿಸಿಕೊಂಡನು.
31 : ಇದನ್ನು ಕಂಡ ಮೋಶೆ ವಿಸ್ಮಿತನಾದನು. ಅದನ್ನು ಚೆನ್ನಾಗಿ ನೋಡಲೆಂದು ಹತ್ತಿರಕ್ಕೆ ಬಂದಾಗ,
32 : ‘ನಾನು ನಿನ್ನ ಪಿತೃಗಳ ದೇವರು; ಅಬ್ರಹಾಮ, ಇಸಾಕ ಮತ್ತು ಯಕೋಬನ ದೇವರು ಆಗಿದ್ದೇನೆ’ ಎಂದು ಸರ್ವೇಶ್ವರನ ವಾಣಿ ಉಂಟಾಯಿತು. ಆಗ ಮೋಶೆ ಗಡಗಡನೆ ನಡುಗಿದನು. ಕಣ್ಣೆತ್ತಿ ನೋಡಲು ಹಿಂಜರಿದನು.
33 : ಸರ್ವೇಶ್ವರ ಅವನಿಗೆ, ‘ನಿನ್ನ ಪಾದರಕ್ಷೆಗಳನ್ನು ದೂರವಿಡು. ಏಕೆಂದರೆ ನೀನು ನಿಂತಿರುವ ಸ್ಥಳ ಪವಿತ್ರವಾದುದು.
34 : ಈಜಿಪ್ಟಿನಲ್ಲಿರುವ ನನ್ನ ಜನರ ದುರವಸ್ಥೆ ನನಗೆ ತಿಳಿದೇ ಇದೆ. ಅವರ ಗೋಳನ್ನು ಕೇಳಿ ಅವರನ್ನು ಬಿಡುಗಡೆಮಾಡಲು ಬಂದಿರುವೆನು. ಬಾ, ನಾನು ನಿನ್ನನ್ನು ಈಜಿಪ್ಟಿಗೆ ಕಳುಹಿಸುವೆನು,’ ಎಂದರು.
35 : “ನಮ್ಮ ನ್ಯಾಯತೀರಿಸುವ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು? ಎಂದು ಇಸ್ರಯೇಲರಿಂದ ತಿರಸ್ಕøತನಾದವನೇ ಆ ಮೋಶೆ. ಉರಿಯುವ ಪೊದೆಯಲ್ಲಿ ಕಾಣಿಸಿಕೊಂಡ ತಮ್ಮ ದೂತನ ಮೂಲಕ ದೇವರು ಅಧಿಪತಿಯನ್ನಾಗಿಯೂ ವಿಮೋಚಕನನ್ನಾಗಿಯೂ ನೇಮಿಸಿದ್ದು ಇವನನ್ನೇ.
36 : ಈಜಿಪ್ಟಿನಲ್ಲೂ ಕೆಂಪು ಸಮುದ್ರದಲ್ಲೂ ನಲವತ್ತು ವರ್ಷಕಾಲ ಮರಳು ಬೆಂಗಾಡಿನಲ್ಲೂ ಅದ್ಭುತಗಳನ್ನು ಹಾಗೂ ಸೂಚಕಕಾರ್ಯಗಳನ್ನು ಮಾಡಿ ಇಸ್ರಯೇಲರನ್ನು ಬಿಡುಗಡೆ ಮಾಡಿದವನು ಇವನೇ.
37 : ‘ದೇವರು ನನ್ನನ್ನು ಕಳುಹಿಸಿದಂತೆ, ನಿಮ್ಮ ಜನಾಂಗದಿಂದಲೇ ಒಬ್ಬ ಪ್ರವಾದಿಯನ್ನು ಕಳುಹಿಸುವರು’ ಎಂದು ಇಸ್ರಯೇಲರಿಗೆ ತಿಳಿಸಿದವನು ಈ ಮೋಶೆಯೇ.
38 : ಇಸ್ರಯೇಲರು ಮರಳು ಗಾಡಿನಲ್ಲಿ ಸಭೆಸೇರಿದ್ದಾಗ, ಅವರ ಮಧ್ಯೆ ಇದ್ದು, ಸೀನಾಯಿ ಬೆಟ್ಟದಲ್ಲಿ ಮಾತನಾಡಿದ ದೇವದೂತನೊಡನೆಯೂ ನಮ್ಮ ಪಿತೃಗಳೊಡನೆಯೂ ಸಂಭಾಷಿಸಿದವನು ಇವನೇ. ನಮಗೀಯಲು ಜೀವೋಕ್ತಿಗಳನ್ನು ದೇವರಿಂದ ಪಡೆದವನು ಇವನೇ.
38 : ಇಸ್ರಯೇಲರು ಮರಳು ಗಾಡಿನಲ್ಲಿ ಸಭೆಸೇರಿದ್ದಾಗ, ಅವರ ಮಧ್ಯೆ ಇದ್ದು, ಸೀನಾಯಿ ಬೆಟ್ಟದಲ್ಲಿ ಮಾತನಾಡಿದ ದೇವದೂತನೊಡನೆಯೂ ನಮ್ಮ ಪಿತೃಗಳೊಡನೆಯೂ ಸಂಭಾಷಿಸಿದವನು ಇವನೇ. ನಮಗೀಯಲು ಜೀವೋಕ್ತಿಗಳನ್ನು ದೇವರಿಂದ ಪಡೆದವನು ಇವನೇ.
39 : “ಆದರೆ ನಮ್ಮ ಪಿತೃಗಳು ಅವನಿಗೆ ವಿಧೇಯರಾಗಲು ನಿರಾಕರಿಸಿದರು. ಅವನನ್ನು ತಿರಸ್ಕರಿಸಿ ಈಜಿಪ್ಟ್ ದೇಶಕ್ಕೆ ಹಿಂದಿರುಗಲು ಮನಸ್ಸು ಮಾಡಿದರು.
40 : ಅವರು ಆರೋನನಿಗೆ, ‘ನಮ್ಮನ್ನು ಈಜಿಪ್ಟಿನಿಂದ ಹೊರಗೆ ಕರೆದುಕೊಂಡು ಬಂದ ಆ ಮೋಶೆಗೆ ಏನಾಯಿತೋ ತಿಳಿಯದು. ನಮಗೆ ಮುಂದಾಳಾಗಿ ಹೋಗಲು ಕೆಲವು ದೇವರುಗಳ ವಿಗ್ರಹಗಳನ್ನು ಮಾಡಿಕೊಡು,’ ಎಂದರು.
41 : ಮಾತ್ರವಲ್ಲ, ಹೋರಿಕರುವಿನ ಆಕಾರದ ವಿಗ್ರಹವೊಂದನ್ನು ಮಾಡಿ ಅದಕ್ಕೆ ಬಲಿಯನ್ನು ಕೊಟ್ಟು, ತಮ್ಮ ಕೈಕೃತಿಗಳಿಗಾಗಿ ಮೆರೆದಾಡಿದರು.
42 : ಆಗ ದೇವರು ಅವರಿಗೆ ವಿಮುಖರಾದರು. ಆಕಾಶದ ಗ್ರಹಗಳನ್ನೇ ಅವರು ಪೂಜಿಸಲೆಂದು ಬಿಟ್ಟುಬಿಟ್ಟರು. ಇದನ್ನು ಕುರಿತೇ ಪ್ರವಾದಿಗಳ ಗ್ರಂಥದಲ್ಲಿ: ‘ಓ ಇಸ್ರಯೇಲರೇ, ನೀವು ಮರಳುಗಾಡಿನಲ್ಲಿ ನಾಲ್ವತ್ತು ವರ್ಷಗಳ ಕಾಲ ದಹನಬಲಿಗಳನ್ನು ಅರ್ಪಿಸಿದ್ದು ನನಗಲ್ಲ.
43 : ವಿಗ್ರಹಗಳನ್ನು ಮಾಡಿ ಪೂಜಿಸಿದಿರಿ; ಮೋಲೆಕ ದೇವನ ಗುಡಾರವನ್ನೂ ನಕ್ಷತ್ರಾಧಿಪತಿಯಾದ ರೇಫಾ ದೇವತೆಯ ಪ್ರತಿಮೆಯನ್ನೂ ಹೊತ್ತುಕೊಂಡು ಹೋದಿರಿ. ಆದುದರಿಂದ ನಾನು ನಿಮ್ಮನ್ನು ಬಾಬಿಲೋನಿನ ಆಚೆ ಗಡಿಪಾರು ಮಾಡುತ್ತೇನೆ,’ ಎಂದು ಬರೆದಿದೆ.
44 : “ದೇವಪ್ರಸನ್ನತೆಯ ಗುಡಾರವು ನಮ್ಮ ಪೂರ್ವಜರ ಬಳಿ ಮರಳುಗಾಡಿನಲ್ಲಿತ್ತು. ಮೋಶೆಯೊಡನೆ ಮಾತನಾಡಿದ ದೇವರು ಅವನಿಗಿತ್ತ ಆಜ್ಞೆಯಂತೆ ಹಾಗೂ ತೋರಿಸಿದ ಆಕಾರದಂತೆ ಅದನ್ನು ನಿರ್ಮಿಸಲಾಗಿತ್ತು.
45 : ಅನಂತರ ಬಂದ ನಮ್ಮ ಪಿತೃಗಳು ಅದನ್ನು ಸ್ವಾಸ್ಥ್ಯವಾಗಿ ಪಡೆದರು. ದೇವರು ಅನ್ಯಜನಾಂಗಗಳನ್ನು ಓಡಿಸಿ ಸ್ವಾಧೀನಮಾಡಿಕೊಟ್ಟ ನಾಡಿಗೆ, ಅವರು ಯೆಹೋಶುವನ ಮುಖಂಡತ್ವದಲ್ಲಿ ಹೋದಾಗ, ಈ ಗುಡಾರವನ್ನೂ ತೆಗೆದುಕೊಂಡು ಹೋದರು. ದಾವೀದನ ಕಾಲದವರೆಗೂ ಅದು ಅಲ್ಲೇ ಇತ್ತು.
46 : ದೈವಾನುಗ್ರಹಕ್ಕೆ ಪಾತ್ರನಾದ ದಾವೀದನು ಯಕೋಬನ ದೇವರಿಗೆ ಆಲಯವೊಂದನ್ನು ಕಟ್ಟಲು ಅಪ್ಪಣೆಯಾಗಬೇಕೆಂದು ಬೇಡಿಕೊಂಡನು.
47 : ಸಾಕ್ಷಾತ್ ಆ ಆಲಯವನ್ನು ಕಟ್ಟಿಸಿದವನು ಸೊಲೊಮೋನನು.
48 : ಆದರೆ ಪರಾತ್ಪರ ದೇವರು ಮಾನವ ನಿರ್ಮಿತ ಆಲಯಗಳಲ್ಲಿ ಮನೆಮಾಡುವುದಿಲ್ಲ.
49 : ‘ಸ್ವರ್ಗವೇ ನನ್ನ ಸಿಂಹಾಸನ, ಭೂಮಿಯೇ ನನ್ನ ಪಾದಪೀಠ. ಇಂತಿರಲು, ನನ್ನಂಥವನಿಗೆ ಎಂಥ ಆಲಯವನ್ನು ಕಟ್ಟಿಕೊಡುವಿರಿ? ನನ್ನ ವಿಶ್ರಾಂತಿಗೆ ತಕ್ಕ ಸ್ಥಳವಾದರೂ ಯಾವುದು?
50 : ಇವೆಲ್ಲವನ್ನೂ ನಿರ್ಮಿಸಿದವನು ನಾನೇ ಅಲ್ಲವೇ?’ ಎಂದು ಪ್ರಶ್ನಿಸುತ್ತಾರೆ ಸರ್ವೇಶ್ವರ, ಪ್ರವಾದಿಯ ಪ್ರವಚನವೊಂದರಲ್ಲಿ.”
51 : ಸ್ತೇಫನನು ಮುಂದುವರೆದು, “ಎಷ್ಟು ಹಟಮಾರಿಗಳು ನೀವು; ಎಂಥಾ ಕಠಿಣ ಹೃದಯಿಗಳು ನೀವು; ದೇವರ ಸಂದೇಶಕ್ಕೆ ಎಷ್ಟು ಕಿವುಡರು ನೀವು! ನಿಮ್ಮ ಪೂರ್ವಜರಂತೆ ನೀವು ಸಹ ಪವಿತ್ರಾತ್ಮ ಅವರನ್ನು ಯಾವಾಗಲೂ ಪ್ರತಿಭಟಿಸುತ್ತೀರಿ.
52 : ನಿಮ್ಮ ಪೂರ್ವಜರು ಹಿಂಸೆಗೆ ಗುರಿಪಡಿಸದ ಪ್ರವಾದಿ ಯಾರಾದರೂ ಇದ್ದಾರೆಯೆ? ಸತ್ಯಸ್ವರೂಪನು ಬರಲಿದ್ದಾನೆಂದು ಮುಂತಿಳಿಸಿದವರನ್ನು ಅವರು ಕೊಂದುಹಾಕಿದರು. ನೀವಾದರೋ, ಆ ಸತ್ಯಸ್ವರೂಪನನ್ನು ಹಿಡಿದುಕೊಟ್ಟು ಕೊಲೆಮಾಡಿಸಿದಿರಿ.
53 : ದೇವದೂತರ ಮೂಲಕ ಧರ್ಮಶಾಸ್ತ್ರವನ್ನು ಪಡೆದ ನೀವೇ ಅದಕ್ಕೆ ಅವಿಧೇಯರಾಗಿ ನಡೆದಿರಿ,” ಎಂದನು.
54 : ಸ್ತೇಫನನ ಮಾತುಗಳನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಅವನ ಮೇಲೆ ಕೋಪೋದ್ರಿಕ್ತರಾದರು. ಕಟಕಟನೆ ಹಲ್ಲುಕಡಿದರು.
55 : ಆದರೆ ಸ್ತೇಫನನು ಪವಿತ್ರಾತ್ಮಭರಿತನಾಗಿ ಸ್ವರ್ಗದತ್ತ ಕಣ್ಣೆತ್ತಿನೋಡಿ ದೇವರ ಮಹಿಮೆಯನ್ನೂ ಅವರ ಬಲಪಾಶ್ರ್ವದಲ್ಲಿ ನಿಂತಿರುವ ಯೇಸುವನ್ನೂ ಕಂಡು,
56 : “ಇಗೋ, ಆಕಾಶವು ತೆರೆದಿದೆ, ನರಪುತ್ರನು ದೇವರ ಬಲಪಾಶ್ರ್ವದಲ್ಲಿ ನಿಂತಿರುವುದನ್ನು ನಾನು ನೋಡುತ್ತಿದ್ದೇನೆ,” ಎಂದನು.
57 : ಇದನ್ನು ಕೇಳಿದ ನ್ಯಾಯಸಭೆಯ ಸದಸ್ಯರು ಆರ್ಭಟಿಸಿದರು; ಕಿವಿಗಳನ್ನು ಮುಚ್ಚಿಕೊಂಡರು; ಭರದಿಂದ ಅವನತ್ತ ಧಾವಿಸಿದರು. 58ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
58 : ಪಟ್ಟಣದಿಂದ ಹೊರಕ್ಕೆ ದಬ್ಬಿ ಅವನ ಮೇಲೆ ಕಲ್ಲು ತೂರಿದರು. ಸಾಕ್ಷಿಕೊಟ್ಟವರು ತಮ್ಮ ಬಟ್ಟೆಬರೆಗಳನ್ನು ತರುಣ ಸೌಲನ ವಶದಲ್ಲಿ ಇಟ್ಟಿದ್ದರು.
59 : ಅವರು ತನ್ನ ಮೇಲೆ ಕಲ್ಲು ಬೀರುತ್ತಿದ್ದಾಗ ಸ್ತೇಫನನು, “ಪ್ರಭು ಯೇಸುವೇ, ನನ್ನಾತ್ಮವನ್ನು ಸ್ವೀಕರಿಸಿ,” ಎಂದು ಪ್ರಾರ್ಥಿಸಿದನು.
60 : ಅನಂತರ ಮೊಣಕಾಲೂರಿ, “ಪ್ರಭೂ, ಈ ಪಾಪವನ್ನು ಇವರ ಮೇಲೆ ಹೊರಿಸಬೇಡಿ,” ಎಂದು ಧ್ವನಿಯೆತ್ತಿ ಹೇಳುತ್ತಾ ಪ್ರಾಣಬಿಟ್ಟನು. ಸೌಲನು ಸ್ತೇಫನನ ಕೊಲೆಗೆ ಸಮ್ಮತಿಸಿದ್ದನು.