Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ಅನನೀಯ ಮತ್ತು ಸಫೈರ ಎಂಬ ದಂಪತಿಗಳಿದ್ದರು. ಇವರು ತಮ್ಮ ಆಸ್ತಿಯೊಂದನ್ನು ಮಾರಿದರು.
2 : ಬಂದ ಹಣದಲ್ಲಿ ಒಂದು ಭಾಗವನ್ನು ಅನನೀಯನು, ತನ್ನ ಪತ್ನಿಯ ಸಮ್ಮತಿಪಡೆದು, ಬಚ್ಚಿಟ್ಟುಕೊಂಡನು. ಉಳಿದುದನ್ನು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸಿದನು.
3 : ಆಗ ಪೇತ್ರನು, “ಅನನೀಯಾ, ನಿನ್ನ ಆಸ್ತಿಯ ವಿಕ್ರಯದಿಂದ ಬಂದ ಹಣದ ಒಂದು ಭಾಗವನ್ನು ಬಚ್ಚಿಟ್ಟುಕೊಂಡು, ನೀನು ಪವಿತ್ರಾತ್ಮ ಅವರಿಗೆ ಏಕೆ ವಂಚನೆಮಾಡಿದೆ? ನಿನ್ನ ಹೃದಯದಲ್ಲಿ ಪಿಶಾಚಿಗೇಕೆ ಎಡೆಮಾಡಿಕೊಟ್ಟೆ?
4 : ಮಾರುವುದಕ್ಕೆ ಮೊದಲು ಆಸ್ತಿ ನಿನಗೇ ಸೇರಿತ್ತು; ಮಾರಿದ ನಂತರವೂ ಅದರ ಹಣ ನಿನ್ನದೇ ಆಗಿತ್ತು. ಹೀಗಿರುವಲ್ಲಿ ಇಂಥಾ ದುಷ್ಟ ಯೋಚನೆಮಾಡಲು ನೀನೇಕೆ ಮನಸ್ಸು ಮಾಡಿದೆ? ನೀನು ಸುಳ್ಳಾಡಿರುವುದು ಮನುಷ್ಯರಿಗಲ್ಲ, ದೇವರಿಗೆ,” ಎಂದನು.
5 : ಈ ಮಾತುಗಳನ್ನು ಕೇಳಿದಾಕ್ಷಣವೇ ಅನನೀಯನು ಸತ್ತುಬಿದ್ದನು.
6 : ಆಗ ಕೆಲವು ಯುವಕರು ಬಂದು ಅವನ ಶವವನ್ನು ಬಟ್ಟೆಯಲ್ಲಿ ಸುತ್ತಿ ಹೊತ್ತುಕೊಂಡು ಹೋಗಿ ಸಮಾಧಿ ಮಾಡಿದರು.
7 : ಸುಮಾರು ಮೂರು ಗಂಟೆಗಳ ನಂತರ ಅವನ ಪತ್ನಿ ಅಲ್ಲಿಗೆ ಬಂದಳು. ಅಲ್ಲಿ ಸಂಭವಿಸಿದ್ದೇನೂ ಆಕೆಗೆ ತಿಳಿದಿರಲಿಲ್ಲ.
8 : ಪೇತ್ರನು ಆಕೆಯನ್ನು ನೋಡಿ, “ನೀನು ಮತ್ತು ನಿನ್ನ ಪತಿ ಆಸ್ತಿ ಮಾರಿ ಪಡೆದ ಹಣದ ಮೊತ್ತ ಇಷ್ಟೇ ಏನು?” ಎಂದು ಕೇಳಿದನು. ಆಕೆ, “ಹೌದು, ಇಷ್ಟೇ” ಎಂದು ಉತ್ತರಕೊಟ್ಟಳು.
9 : ಪೇತ್ರನು, “ನೀನೂ ನಿನ್ನ ಪತಿಯೂ ಸರ್ವೇಶ್ವರನ ಆತ್ಮವನ್ನು ಪರೀಕ್ಷಿಸಲು ಹವಣಿಸಿದಿರೋ? ಇಗೋ, ನಿನ್ನ ಪತಿಯನ್ನು ಸಮಾಧಿಮಾಡಿಬಂದವರ ಕಾಲಿನ ಸಪ್ಪಳ. ಅವರು ಬಾಗಿಲ ಬಳಿಯಲ್ಲೇ ಇದ್ದಾರೆ. ಅವರು ನಿನ್ನನ್ನೂ ಹೊತ್ತುಕೊಂಡು ಹೋಗುವರು,” ಎಂದನು.
10 : ಆ ಕ್ಷಣವೇ ಆಕೆಯೂ ಸತ್ತು ಅವನ ಕಾಲಬಳಿ ಬಿದ್ದಳು. ಒಳಗೆ ಬಂದ ಯುವಕರು ಆಕೆಯೂ ಸತ್ತುಬಿದ್ದಿರುವುದನ್ನು ಕಂಡು ಆಕೆಯನ್ನು ಹೊತ್ತುಕೊಂಡು ಹೋಗಿ ಪತಿಯ ಪಕ್ಕದಲ್ಲೇ ಸಮಾಧಿ ಮಾಡಿದರು.
11 : ಇಡೀ ಧರ್ಮಸಭೆಯೂ ಇದನ್ನು ಕೇಳಿದ ಎಲ್ಲರೂ ಭಯಭ್ರಾಂತರಾದರು.
12 : ಜನರೆಲ್ಲರ ಕಣ್ಮುಂದೆ ಅನೇಕ ಅದ್ಭುತ ಕಾರ್ಯಗಳೂ ಸೂಚಕಕಾರ್ಯಗಳೂ ಪ್ರೇಷಿತರ ಮುಖಾಂತರ ನಡೆಯುತ್ತಿದ್ದವು. ಭಕ್ತವಿಶ್ವಾಸಿಗಳೆಲ್ಲರೂ ಸೊಲೊಮೋನನ ಮಂಟಪದಲ್ಲಿ ಸಭೆ ಸೇರುತ್ತಿದ್ದರು.
13 : ಹೊರಗಿನವರು ಅವರನ್ನು ಬಹಳವಾಗಿ ಹೊಗಳುತ್ತಿದ್ದರೂ ಅವರ ಸಂಗಡ ಸೇರಲು ಯಾರಿಗೂ ಧೈರ್ಯವಿರಲಿಲ್ಲ.
14 : ಆದರೂ ಪ್ರಭುವನ್ನು ವಿಶ್ವಾಸಿಸುತ್ತಿದ್ದ ಸ್ತ್ರೀಪುರುಷರ ಸಂಖ್ಯೆ ಅಧಿಕವಾಗುತ್ತಾ ಬಂದಿತು.
15 : ಪೇತ್ರನು ಹಾದುಹೋಗುವಾಗ ಆತನ ನೆರಳಾದರೂ ಕೆಲವರ ಮೇಲೆ ಬೀಳಲೆಂದು ಜನರು ರೋಗಿಗಳನ್ನು ಹಾಸಿಗೆ ಅಥವಾ ಡೋಲಿಗಳ ಸಮೇತ ಹೊತ್ತುತಂದು ಹಾದಿಗಳಲ್ಲಿ ಮಲಗಿಸುತ್ತಿದ್ದರು.
16 : ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದಲೂ ರೋಗಿಗಳನ್ನು ಮತ್ತು ಪಿಶಾಚಿಪೀಡಿತರನ್ನು ಜನರು ತರುತ್ತಿದ್ದರು; ಎಲ್ಲರೂ ಸ್ವಸ್ಥರಾಗುತ್ತಿದ್ದರು.
17 : ಇಂತಿರಲು ಪ್ರಧಾನ ಯಾಜಕನೂ ಅವನ ಸಂಗಡವಿದ್ದ ಸ್ಥಳೀಯ ಸದ್ದುಕಾಯರೂ ಪ್ರೇಷಿತರ ಬಗ್ಗೆ ತೀವ್ರ ಅಸೂಯೆಪಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದರು.
18 : ಪ್ರೇಷಿತರನ್ನು ಬಂಧಿಸಿ ಊರ ಸೆರೆಯಲ್ಲಿಟ್ಟರು.
19 : ಆ ರಾತ್ರಿಯೇ ಪ್ರಭುವಿನ ದೂತನೊಬ್ಬನು ಸೆರೆಮನೆಯ ದ್ವಾರಗಳನ್ನು ತೆರೆದು ಪ್ರೇಷಿತರನ್ನು ಹೊರಕ್ಕೆ ತಂದನು.
20 : “ಹೋಗಿರಿ, ಮಹಾದೇವಾಲಯದಲ್ಲಿ ನಿಂತು ಈ ನವಜೀವದ ಬಗ್ಗೆ ಜನರಿಗೆ ಬೋಧಿಸಿರಿ,” ಎಂದನು.
21 : ಅದರಂತೆ ಪ್ರೇಷಿತರು ಮುಂಜಾವದಲ್ಲೇ ದೇವಾಲಯವನ್ನು ಪ್ರವೇಶಿಸಿ ಬೋಧಿಸಲಾರಂಭಿಸಿದರು. ಇತ್ತ ಪ್ರಧಾನ ಯಾಜಕನೂ ಅವನ ಸಂಗಡಿಗರೂ ಜೊತೆಗೂಡಿ ಯೆಹೂದ್ಯ ಪ್ರಮುಖರನ್ನೊಳಗೊಂಡ ಶ್ರೇಷ್ಠ ನ್ಯಾಯಸಭೆಯನ್ನು ಕರೆದರು. ಅನಂತರ ಪ್ರೇಷಿತರನ್ನು ಆ ಸಭೆಯ ಮುಂದೆ ಕರೆತರುವಂತೆ ಸೆರೆಮನೆಯ ಅಧಿಕಾರಿಗಳಿಗೆ ಆಜ್ಞೆಯಿತ್ತರು.
22 : ಈ ಅಧಿಕಾರಿಗಳು ಸೆರೆಮನೆಗೆ ಬಂದಾಗ ಅಲ್ಲಿ ಪ್ರೇಷಿತರನ್ನು ಕಾಣಲಿಲ್ಲ. ಹಿಂದಿರುಗಿ ಹೋಗಿ ನ್ಯಾಯಸಭೆಗೆ ಈ ವಿಷಯವನ್ನು ವರದಿಮಾಡಿದರು;
23 : “ನಾವು ಸೆರೆಮನೆಗೆ ಹೋದಾಗ ಅದಕ್ಕೆ ಹಾಕಿದ್ದ ಬೀಗಮುದ್ರೆಯೇನೋ ಭದ್ರವಾಗಿತ್ತು. ಪಹರೆಯವರು ದ್ವಾರದಲ್ಲಿ ಕಾವಲಿದ್ದರು. ಆದರೆ ದ್ವಾರವನ್ನು ತೆರೆದು ನೋಡಿದಾಗ ಒಳಗೆ ಯಾರನ್ನೂ ನಾವು ಕಾಣಲಿಲ್ಲ,” ಎಂದು ತಿಳಿಸಿದರು.
24 : ದೇವಾಲಯದ ದಳಪತಿ ಮತ್ತು ಮುಖ್ಯ ಯಾಜಕರು ಇದನ್ನು ಕೇಳಿ ಇದರಿಂದೇನಾಗುವುದೋ ಎಂದು ಕಳವಳಗೊಂಡರು.
25 : ಅಷ್ಟರಲ್ಲಿ ಒಬ್ಬನು ಅಲ್ಲಿಗೆ ಬಂದು, “ಇಗೋ, ನೀವು ಸೆರೆಮನೆಯಲ್ಲಿ ಇಟ್ಟವರು ದೇವಾಲಯದಲ್ಲಿ ನಿಂತು ಜನರಿಗೆ ಬೋಧಿಸುತ್ತಿದ್ದಾರೆ.” ಎಂದನು.
26 : ಆಗ ಆ ದಳಪತಿ ಅಧಿಕಾರಿಗಳೊಡನೆ ಹೋಗಿ ಪ್ರೇಷಿತರನ್ನು ಕರೆದುಕೊಂಡು ಬಂದನು. ಜನರು ತಮ್ಮ ಮೇಲೆ ಕಲ್ಲುತೂರಬಹುದೆಂಬ ಭಯದಿಂದ ಪ್ರೇಷಿತರ ಮೇಲೆ ಅವರು ಯಾವ ಬಲಪ್ರಯೋಗವನ್ನೂ ಮಾಡಲಿಲ್ಲ.
27 : ಪ್ರೇಷಿತರನ್ನು ಕರೆತಂದು ನ್ಯಾಯಸಭೆಯ ಮುಂದೆ ನಿಲ್ಲಿಸಲಾಯಿತು. ಪ್ರಧಾನ ಯಾಜಕನು ಅವರನ್ನು ಉದ್ದೇಶಿಸಿ,
28 : “ಆ ವ್ಯಕ್ತಿಯ ಹೆಸರಿನಲ್ಲಿ ಉಪದೇಶ ಮಾಡಕೂಡದು ಎಂದು ನಿಮಗೆ ಕಟ್ಟಪ್ಪಣೆ ಮಾಡಿದೆವು. ಆದರೂ ನೀವು ಮಾಡಿರುವುದೇನು? ನಿಮ್ಮ ಬೋಧನೆ ಜೆರುಸಲೇಮ್ ಆದ್ಯಂತ ಹಬ್ಬಿಹರಡಿದೆ. ಅಷ್ಟು ಮಾತ್ರವಲ್ಲ, ಆ ವ್ಯಕ್ತಿಯ ಕೊಲೆಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕೆಂದಿರುವಿರಿ,” ಎಂದು ಆಪಾದಿಸಿದನು.
29 : ಅದಕ್ಕೆ ಪ್ರತ್ಯುತ್ತರವಾಗಿ ಪೇತ್ರ ಮತ್ತು ಉಳಿದ ಪ್ರೇಷಿತರು, “ನಾವು ವಿಧೇಯರಾಗಬೇಕಾದದ್ದು ದೇವರಿಗೆ, ಮಾನವರಿಗಲ್ಲ.
30 : ನೀವು ಶಿಲುಬೆಗೇರಿಸಿ ಕೊಂದು ಹಾಕಿದ ಯೇಸುಸ್ವಾಮಿಯನ್ನು ನಮ್ಮ ಪಿತೃಗಳ ದೇವರು ಜೀವಕ್ಕೆ ಎಬ್ಬಿಸಿದ್ದಾರೆ.
31 : ದೇವರು ಅವರನ್ನು ತಮ್ಮ ಬಲಪಾಶ್ರ್ವಕ್ಕೆ ಏರಿಸಿ ಮುಂದಾಳನ್ನಾಗಿಯೂ ಲೋಕೋದ್ಧಾರಕನನ್ನಾಗಿಯೂ ನೇಮಿಸಿದ್ದಾರೆ. ಇಸ್ರಯೇಲಿನ ಜನರು ಪಶ್ಚಾತ್ತಾಪಪಟ್ಟು ದೇವರಿಗೆ ಅಭಿಮುಖರಾಗಿ ಪಾಪಕ್ಷಮೆಯನ್ನು ಪಡೆಯಲು ಇವರ ಮುಖಾಂತರ ಅವಕಾಶವನ್ನು ಕಲ್ಪಿಸಿ ಕೊಟ್ಟಿದ್ದಾರೆ.
32 : ಈ ಘಟನೆಗಳಿಗೆ ನಾವು ಸಾಕ್ಷಿಗಳು; ನಾವು ಮಾತ್ರವಲ್ಲ, ದೈವೇಚ್ಛೆಯಂತೆ ನಡೆಯುವವರಿಗೆ ದೇವರು ದಯಪಾಲಿಸುವ ಪವಿತ್ರಾತ್ಮ ಅವರು ಕೂಡ ಸಾಕ್ಷಿಯಾಗಿದ್ದಾರೆ,” ಎಂದನು.
33 : ಇದನ್ನು ಕೇಳಿದ ಸಭಾಸದಸ್ಯರು ಕ್ರೋಧಭರಿತರಾಗಿ ಪ್ರೇಷಿತರನ್ನು ಕೊಲ್ಲಬೇಕೆಂದಿದ್ದರು.
34 : ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದು ನಿಂತು ಪ್ರೇಷಿತರನ್ನು ಸ್ವಲ್ಪ ಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ
35 : ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಬಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ.
36 : ಸ್ವಲ್ಪ ಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು.
37 : ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದುರಿಹೋದರು.
38 : ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು.
39 : ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು.
40 : ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು.
41 : ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು.
42 : ಯೇಸುವೇ ಲೋಕೋದ್ದಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.

· © 2017 kannadacatholicbible.org Privacy Policy