1 :
ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರೂ ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬಂದರು.
2 : ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೊಂದುವರು ಎಂದು ಈ ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು.
3 : ಇದನ್ನು ಕೇಳಿ ಸಿಟ್ಟುಗೊಂಡಿದ್ದ ಅವರು ಪೇತ್ರ, ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು ವಿೂರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು.
4 : ಆದರೆ ಪ್ರೇಷಿತರ ಬೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಾದರು. ಭಕ್ತವಿಶ್ವಾಸಿಗಳ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು.
5 : ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು.
6 : ಪ್ರಧಾನ ಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನ ಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು.
8 : ಪೇತ್ರನು ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು: “ಜನರ ಅಧಿಕಾರಿಗಳೇ, ಪ್ರಮುಖರೇ,
9 : ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ.
10 : ನಿಮಗೂ ಇಸ್ರಯೇಲಿನ ಎಲ್ಲಾ ಜನರಿಗೂ ಈ ವಿಷಯ ತಿಳಿದಿರಲಿ: ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಈ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ.
11 : ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಅವರನ್ನು ಪುನರುತ್ಥಾನಗೊಳಿಸಿದ್ದಾರೆ.
‘ಮನೆಕಟ್ಟುವವರಾದ ನೀವು
ಬೇಡವೆಂದು ಮೂಲೆಗೆಸೆದ ಕಲ್ಲೇ
ಪ್ರಮುಖ ಮೂಲೆಗಲ್ಲಾಯಿತು’
ಎಂದು ಬರೆದಿರುವುದು ಇವರನ್ನು ಕುರಿತೇ.
12 : ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ.”
13 : ಅವಿದ್ಯಾವಂತರು ಹಾಗೂ ಜನ ಸಾಮಾನ್ಯರು ಆಗಿದ್ದರೂ, ಇವರು ಇಷ್ಟು ಧೈರ್ಯಶಾಲಿಗಳಾಗಿರುವುದನ್ನು ಕಂಡು ಸಭೆಯ ಸದಸ್ಯರು ಚಕಿತರಾದರು; ಯೇಸುವಿನ ಸಂಗಡಿಗರೆಂದು ಇವರ ಗುರುತುಹಚ್ಚಿದರು.
14 : ಗುಣಹೊಂದಿದ್ದ ಆ ಮನುಷ್ಯನು ಪೇತ್ರ ಮತ್ತು ಯೊವಾನ್ನರ ಜೊತೆ ನಿಂತಿರುವುದನ್ನು ಕಂಡು ನಿರುತ್ತರರಾದರು.
15 : ಸಭಾಕೂಟದಿಂದ ಪ್ರೇಷಿತರನ್ನು ಹೊರಗೆ ಕಳುಹಿಸಿ ತಮ್ಮೊಳಗೇ ಚರ್ಚಿಸಲಾರಂಭಿಸಿದರು:
16 : ಇವರನ್ನು ಏನು ಮಾಡೋಣ? ಇವರು ಮಾಡಿರುವ ಅಪರೂಪ ಅದ್ಭುತ ಜೆರುಸಲೇಮಿನ ಸರ್ವರಿಗೂ ತಿಳಿದು ಹೋಗಿದೆ. ಅದನ್ನು ಅಲ್ಲಗಳೆಯುವಂತಿಲ್ಲ.
17 : ಆದರೂ, ಈ ಸಮಾಚಾರ ಜನರಲ್ಲಿ ಮತ್ತಷ್ಟು ಹರಡದಂತೆ ಇನ್ನು ಮೇಲೆ ಯಾರ ಬಳಿಯಲ್ಲೂ ಯೇಸುವಿನ ಹೆಸರೆತ್ತದಂತೆ ಇವರಿಗೆ ಎಚ್ಚರಿಕೆ ಕೊಡೋಣ,” ಎಂದುಕೊಂಡರು.
18 : ಅನಂತರ ಪ್ರೇಷಿತರನ್ನು ಒಳಕ್ಕೆ ಕರೆದು, “ಇನ್ನು ಮುಂದೆ ಯೇಸುವಿನ ಹೆಸರೆತ್ತಿ ಮಾತನಾಡಬಾರದು, ಬೋಧಿಸಕೂಡದು,” ಎಂದು ಕಟ್ಟಪ್ಪಣೆ ಮಾಡಿದರು.
19 : ಆಗ ಪೇತ್ರ ಮತ್ತು ಯೊವಾನ್ನರು, “ನಾವು ದೇವರಿಗೆ ವಿಧೇಯರಾಗಬೇಕೋ? ನಿಮಗೆ ವಿಧೇಯರಾಗಬೇಕೋ? ದೇವರ ದೃಷ್ಟಿಯಲ್ಲಿ ಯಾವುದು ಸರಿ? ನೀವೇ ನಿರ್ಣಯಿಸಿರಿ. 20ನಾವಂತೂ ಕಣ್ಣಾರೆ ಕಂಡು, ಕಿವಿಯಾರೆ ಕೇಳಿದ ವಿಷಯವನ್ನು ಕುರಿತು ಮೌನದಿಂದಿರಲಾಗದು,” ಎಂದು ಬದಲು ನುಡಿದರು.
21 : ನಡೆದ ಅದ್ಭುತಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. ಇದನ್ನು ಅರಿತ ಆ ಸಭಾಸದಸ್ಯರಿಗೆ ಪ್ರೇಷಿತರನ್ನು ಶಿಕ್ಷಿಸುವ ಮಾರ್ಗ ತೋಚದೆ ಹೋಯಿತು. ಆದುದರಿಂದ ಅವರನ್ನು ಇನ್ನೂ ಅಧಿಕವಾಗಿ ಎಚ್ಚರಿಸಿ ಕಳುಹಿಸಿಬಿಟ್ಟರು.
22 : ಈ ಅದ್ಭುತದಿಂದ ಗುಣಹೊಂದಿದ ಆ ವ್ಯಕ್ತಿಗೆ ನಲವತ್ತು ವರ್ಷ ವಿೂರಿತ್ತು.
23 : ಧೈರ್ಯಸ್ಥೈರ್ಯಕ್ಕಾಗಿ ಭಕ್ತರ ಪ್ರಾರ್ಥನೆ
ಪೇತ್ರ ಮತ್ತು ಯೊವಾನ್ನ ಬಂಧನದಿಂದ ಬಿಡುಗಡೆಹೊಂದಿದ ಮೇಲೆ ವಿಶ್ವಾಸಿಗಳಿಗೆ ಭೇಟಿಯಿತ್ತರು. ಮುಖ್ಯ ಯಾಜಕರು ಹಾಗೂ ಪ್ರಜಾ ಪ್ರಮುಖರು ತಮಗೆ ಹೇಳಿದ್ದನ್ನು ಅವರಿಗೆ ವರದಿಮಾಡಿದರು.
24 : ಈ ಸಮಾಚಾರವನ್ನು ಕೇಳಿದ ಕೂಡಲೇ ಭಕ್ತಾದಿಗಳು ಏಕಕಂಠದಿಂದ ದೇವರನ್ನು ಪ್ರಾರ್ಥಿಸುತ್ತಾ ಹೀಗೆಂದರು:
“ಪ್ರಭುವೇ, ಇಹಪರಗಳನ್ನೂ ಸಮುದ್ರ
ಸಾಗರಗಳನ್ನೂ
ಅವುಗಳಲ್ಲಿರುವ ಸಮಸ್ತವನ್ನೂ
ಸೃಷ್ಟಿಸಿದವರು ನೀವೇ.
25 : ಸರ್ವೇಶ್ವರನಿಗೂ ಆತ
ಅಭಿಷೇಕಿಸಿದವನಿಗೂ ವಿರುದ್ಧ
‘ಅನ್ಯಧರ್ಮಿಯರೇಕೆ ರೋಷಭರಿತರಾದರು?
ಜನರೇಕೆ ವ್ಯರ್ಥ ಒಳಸಂಚು ಹೂಡಿದರು?
26 : ಲೋಕಾಧಿಪತಿಗಳೇಕೆ ಸನ್ನದ್ಧರಾದರು?
ಜನನಾಯಕರೇಕೆ ಸಮಾಲೋಚಿಸಿದರು?’
ಎಂದು ನಮ್ಮ ಪಿತಾಮಹ ಹಾಗೂ ನಿಮ್ಮ ದಾಸನಾದ ದಾವೀದನ ಬಾಯಿಂದ ನುಡಿಸಿದಿರಿ.
27 : “ಅಂತೆಯೇ, ನಿಮ್ಮ ಪರಮಪೂಜ್ಯ ದಾಸ ಯೇಸುವಿನ ವಿರುದ್ಧ ಹೆರೋದನು ಮತ್ತು ಪೊಂತ್ಸಿಯುಸ್ ಪಿಲಾತನು ಅನ್ಯಧರ್ಮದವರೊಡನೆ ಹಾಗೂ ಇಸ್ರಯೇಲಿನ ಜನರೊಡನೆ ಸೇರಿ ಈ ಪಟ್ಟಣದಲ್ಲೇ ಸಮಾಲೋಚನೆ ಮಾಡಿದರು.
28 : ನೀವು ಸಂಯೋಜಿಸಿದ್ದು ಹಾಗೂ ಸಂಕಲ್ಪಿಸಿದ್ದು ಈಡೇರುವಂತೆ ಅವರು ಹೀಗೆ ವರ್ತಿಸಿದರು.
29 : ಪ್ರಭುವೇ, ಇಗೋ, ಇವರು ನಮ್ಮನ್ನು ಬೆದರಿಸುತ್ತಿದ್ದಾರೆ; ನಿಮ್ಮ ಸಂದೇಶವನ್ನು ಧೈರ್ಯವಾಗಿ ಸಾರಲು ಶರಣರಾದ ನಮಗೆ ನೆರವು ನೀಡಿರಿ.
30 : ಸ್ವಸ್ಥಪಡಿಸುವ ನಿಮ್ಮ ಅಮೃತ ಹಸ್ತವನ್ನು ಚಾಚಿರಿ; ನಿಮ್ಮ ಪರಮ ಪೂಜ್ಯ ದಾಸ ಯೇಸುವಿನ ನಾಮದಲ್ಲಿ ಅದ್ಭುತಗಳೂ ಸೂಚಕಕಾರ್ಯಗಳೂ ಜರುಗುವಂತಾಗಲಿ.”
31 : ಹೀಗೆ ಪ್ರಾರ್ಥನೆ ಮಾಡಿದಾಗ ಅವರು ನೆರೆದಿದ್ದ ಸ್ಥಳ ಕಂಪಿಸಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು; ದೇವರ ಶುಭಸಂದೇಶವನ್ನು ಧೈರ್ಯವಾಗಿ ಸಾರತೊಡಗಿದರು.
32 : ಭಕ್ತರ ಅನ್ಯೋನ್ಯ ಜೀವನ
ಭಕ್ತವಿಶ್ವಾಸಿಗಳು ಒಗ್ಗಟ್ಟಿನಿಂದಲೂ ಒಮ್ಮನಸ್ಸಿನಿಂದಲೂ ಬಾಳುತ್ತಿದ್ದರು. ಯಾರೂ ತಮ್ಮ ಸೊತ್ತನ್ನು ತನ್ನದೇ ಎಂದು ಭಾವಿಸದೆ ಹುದುವಾಗಿ ಹಂಚಿಕೊಳ್ಳುತ್ತಿದ್ದರು.
33 : ಪ್ರೇಷಿತರು ಪ್ರಭು ಯೇಸುವಿನ ಪುನರುತ್ಥಾನಕ್ಕೆ ಬಹು ಸಾಮಥ್ರ್ಯದಿಂದ ಸಾಕ್ಷಿಕೊಡುತ್ತಿದ್ದರು. ಜನರು ಅವರೆಲ್ಲರನ್ನು ಗೌರವದಿಂದ ಕಾಣುತ್ತಿದ್ದರು.
34 : ಅವರಲ್ಲಿ ಕೊರೆತೆಯಿದ್ದವರು ಒಬ್ಬರೂ ಇರಲಿಲ್ಲ.
35 : ಕಾರಣ - ಹೊಲಗದ್ದೆ, ಮನೆಮಾರು ಇದ್ದವರೆಲ್ಲರೂ ಅವುಗಳನ್ನು ವಿಕ್ರಯಿಸಿ, ಬಂದ ಹಣವನ್ನು ತಂದು ಪ್ರೇಷಿತರಿಗೆ ಪಾದಕಾಣಿಕೆಯಾಗಿ ಒಪ್ಪಿಸುತ್ತಿದ್ದರು. ಇವರು ಅದನ್ನು ಪ್ರತಿ ಒಬ್ಬರಿಗೂ ಅವರವರ ಅವಶ್ಯಕತೆಗೆ ತಕ್ಕಂತೆ ಹಂಚುತ್ತಿದ್ದರು.
36 : ಜೋಸೆಫ್ ಎಂಬ ಲೇವಿಯನು ಅವರ ಸಂಗಡ ಇದ್ದನು. ಇವನ ಹುಟ್ಟೂರು ಸೈಪ್ರಸ್. ಇವನಿಗೆ ‘ಬಾರ್ನಬ’ (ಎಂದರೆ ಪ್ರೋತ್ಸಾಹಪುತ್ರ) ಎಂದು ಪ್ರೇಷಿತರು ಹೆಸರಿಟ್ಟಿದ್ದರು.
37 : ಇವನು ತನ್ನ ಜಮೀನನ್ನು ಮಾರಿ ಬಂದ ಹಣವನ್ನು ಪ್ರೇಷಿತರಿಗೆ ಪಾದ ಕಾಣಿಕೆಯಾಗಿ ಒಪ್ಪಿಸಿದನು.