1 : ನಾವು ಸುರಕ್ಷಿತವಾಗಿ ದಡವನ್ನು ಸೇರಿದ ಮೇಲೆ ಅದು ಮಾಲ್ಟ ದ್ವೀಪವೆಂದು ತಿಳಿದು ಬಂದಿತು.
2 : ಅಲ್ಲಿಯ ನಿವಾಸಿಗಳು ನಮಗೆ ವಿಶೇಷ ಸಹಾನುಭೂತಿಯನ್ನು ತೋರಿದರು. ಮಳೆ ಹೊಯ್ದು ಚಳಿಯಾಗುತ್ತಿದ್ದುದರಿಂದ ಅವರು ಬೆಂಕಿಮಾಡಿ ನಮ್ಮೆಲ್ಲರನ್ನು ಬರಮಾಡಿಕೊಂಡರು.
3 : ಪೌಲನು ಒಂದು ಹೊರೆ ಕಟ್ಟಿಗೆಯನ್ನು ಕೂಡಿಸಿ ತಂದು ಬೆಂಕಿಯ ಮೇಲೆ ಹಾಕುತ್ತಿದಾಗ ಬೆಂಕಿಯ ಶಾಖಕ್ಕೆ ವಿಷಸರ್ಪವೊಂದು ಹೊರಬಂದು ಅವನ ಕೈಗೆ ಸುತ್ತಿಕೊಂಡಿತು.
4 : ದ್ವೀಪದ ನಿವಾಸಿಗಳು ಪೌಲನ ಕೈಯಿಂದ ನೇತಾಡುತ್ತಿರುವ ಹಾವನ್ನು ಕಂಡು “ಇವನೊಬ್ಬ ಕೊಲೆಗಡುಕನೇ ಸರಿ; ಇವನು ಸಮುದ್ರದಿಂದ ತಪ್ಪಿಸಿಕೊಂಡು ಬಂದರೂ ವಿಧಿ ಇವನನ್ನು ಉಳಿಸಲಿಲ್ಲ,” ಎಂದು ತಮ್ಮಲ್ಲೇ ಮಾತನಾಡಿಕೊಂಡರು.
5 : ಆದರೆ ಪೌಲನು ಹಾವನ್ನು ಬೆಂಕಿಗೆ ಒದರಿಬಿಟ್ಟನು. ಅವನಿಗೆ ಯಾವ ಅಪಾಯವೂ ಆಗಲಿಲ್ಲ.
6 : ಆ ಜನರು, “ಈಗ ಅವನ ಮೈ ಊದಿಕೊಳ್ಳತ್ತದೆ; ಈಗಲೇ ಅವನು ಫಕ್ಕನೆ ಸತ್ತುಬೀಳುತ್ತಾನೆ,” ಎಂದು ಕಾದಿದ್ದರು. ಎಷ್ಟು ಹೊತ್ತು ಕಾದರೂ ಅವನಿಗೆ ಯಾವ ಹಾನಿಯೂ ಆಗಲಿಲ್ಲ. ಇದನ್ನು ಕಂಡ ಅವರು ತಮ್ಮ ಅಭಿಪ್ರಾಯವನ್ನು ಬದಲಿಸಿದರು. “ಇವನೊಬ್ಬ ದೇವರು,” ಎಂದುಕೊಂಡರು.
7 : ಆ ದ್ವೀಪದ ಮುಖ್ಯಸ್ಥನಾದ ಪೊಪ್ಲಿಯನ ಹೊಲಗದ್ದೆಗಳು ನಾವಿದ್ದ ಸ್ಥಳದ ಪಕ್ಕದಲ್ಲೇ ಇದ್ದವು. ಅವನು ನಮ್ಮನ್ನು ಸ್ವಾಗತಿಸಿ ಮೂರು ದಿನಗಳವರೆಗೆ ಆದರದಿಂದ ಸತ್ಕರಿಸಿದನು.
8 : ಪೊಪ್ಲಿಯನ ತಂದೆ ಜ್ವರದಿಂದಲೂ ರಕ್ತಬೇಧಿಯಿಂದಲೂ ಹಾಸಿಗೆ ಹಿಡಿದಿದ್ದನು. ಪೌಲನು ಅವನ ಬಳಿಗೆ ಹೋಗಿ, ಪ್ರಾರ್ಥನೆ ಮಾಡಿ, ತನ್ನ ಕರಗಳನ್ನು ಅವನ ಮೇಲಿಟ್ಟು, ಅವನನ್ನು ಗುಣಪಡಿಸಿದನು.
9 : ಇದಾದ ನಂತರ ದ್ವೀಪದಲ್ಲಿದ್ದ ಮಿಕ್ಕ ರೋಗಿಗಳೂ ಬಂದು ಪೌಲನಿಂದ ಆರೋಗ್ಯವನ್ನು ಪಡೆದರು.
10 : ಅವರೆಲ್ಲರು ನಮ್ಮನ್ನು ಹಲವಾರು ವಿಧದಲ್ಲಿ ಬಹುಮಾನಿಸಿದರು; ಮಾತ್ರವಲ್ಲ, ನಾವು ಅಲ್ಲಿಂದ ನಾಕಾಯಾನವನ್ನು ಮುಂದುವರಿಸಿದಾಗ, ನಮಗೆ ಅವಶ್ಯವಾದುದೆಲ್ಲವನ್ನು ತಂದು ಹಡಗಿನಲ್ಲಿಟ್ಟರು.
11 : ಈಗಾಗಲೇ ಮೂರು ತಿಂಗಳು ಕಳೆದಿದ್ದವು. ಅಲೆಕ್ಸಾಂಡ್ರಿಯಕ್ಕೆ ಸೇರಿದ ‘ಅಶ್ವಿನಿ’ ಎಂಬ ಹಡಗೊಂದು ಚಳಿಗಾಲದ ನಿಮಿತ್ತ ಅಲ್ಲಿ ಲಂಗರು ಹಾಕಿತ್ತು. ನಾವು ಅದನ್ನು ಹತ್ತಿ ಪ್ರಯಾಣ ಮುಂದುವರಿಸಿದೆವು.
12 : ಸಿರಾಕೂಸ್ ಎಂಬ ಪಟ್ಟಣವನ್ನು ಸೇರಿ ಅಲ್ಲಿ ಮೂರು ದಿನ ತಂಗಿದೆವು.
13 : ಅಲ್ಲಿಂದ ಮುಂದುವರಿದು ರೇಗಿಯ ಪಟ್ಟಣಕ್ಕೆ ಬಂದೆವು. ಮಾರನೆಯ ದಿನ ತೆಂಕಣಗಾಳಿ ಬೀಸತೊಡಗಿತು. ಎರಡೇ ದಿನಗಳಲ್ಲಿ ನಾವು ಪುತೋಲಿ ರೇವನ್ನು ಮುಟ್ಟಿದೆವು.
14 : ಅಲ್ಲಿ ಕೆಲವು ಕ್ರೈಸ್ತ ಭಕ್ತಾದಿಗಳನ್ನು ಕಂಡೆವು. ತಮ್ಮೊಡನೆ ಒಂದು ವಾರ ತಂಗಬೇಕೆಂದು ಅವರು ನಮ್ಮನ್ನು ಕೇಳಿಕೊಂಡರು. ತರುವಾಯ ನಾವು ರೋಮಿಗೆ ಬಂದೆವು.
15 : ಅಲ್ಲಿದ್ದ ಕ್ರೈಸ್ತಭಕ್ತಾದಿಗಳು ನಾವು ಬಂದ ವಿಷಯವನ್ನು ಕೇಳಿ ನಮ್ಮನ್ನು ಎದುರುಗೊಳ್ಳಲು ‘ಅಪ್ಪಿಯಾ’ ಮಾರುಕಟ್ಟೆಗೂ ತ್ರಿಛತ್ರದ ಬಳಿಗೂ ಬಂದರು. ಅವರನ್ನು ಕಂಡದ್ದೇ ಪೌಲನಿಗೆ ಪ್ರೋತ್ಸಾಹ ಉಂಟಾಯಿತು. ಅವನು ದೇವರಿಗೆ ಸ್ತೋತ್ರ ಸಲ್ಲಿಸಿದನು.
16 : ನಾವು ರೋಮ್ ನಗರಕ್ಕೆ ಆಗಮಿಸಿದ ಮೇಲೆ, ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪ್ರತ್ಯೇಕವಾಗಿರಲು ಪೌಲನಿಗೆ ಅಪ್ಪಣೆ ಕೊಡಲಾಯಿತು.
17 : ಮೂರು ದಿನಗಳ ನಂತರ ಪೌಲನು ಸ್ಥಳೀಯ ಯೆಹೂದ್ಯ ಮುಖಂಡರು ತನ್ನ ಬಳಿಗೆ ಬರುವಂತೆ ಹೇಳಿಕಳುಹಿಸಿದನು. ಅವರು ಬಂದಾಗ, “ನನ್ನ ಸೋದರ ಇಸ್ರಯೇಲರೇ, ನಾನು ನಮ್ಮ ಜನರಿಗೆ ವಿರೋಧವಾಗಿಯಾಗಲಿ, ನಮ್ಮ ಪೂರ್ವಜರಿಂದ ಬಂದ ಸಂಪ್ರದಾಯಗಳಿಗೆ ವಿರೋಧವಾಗಿಯಾಗಲಿ, ಏನನ್ನೂ ಮಾಡಿಲ್ಲ; ಆದರೂ ಜೆರುಸಲೇಮಿನಲ್ಲಿ ನನ್ನನ್ನು ಕೈದಿಯನ್ನಾಗಿಸಿ ರೋಮನರ ಕೈಗೆ ಒಪ್ಪಿಸಲಾಯಿತು.
18 : ಇವರು ನನ್ನನ್ನು ವಿಚಾರಣೆಗೆ ಒಳಪಡಿಸಿದರು. ಮರಣ ದಂಡನೆಗೆ ಗುರಿಮಾಡುವಂಥ ಅಪರಾಧ ಏನನ್ನೂ ನನ್ನಲ್ಲಿ ಕಾಣಲಿಲ್ಲ. ಈ ಕಾರಣ ನನ್ನನ್ನು ಬಿಡುಗಡೆ ಮಾಡಬೇಕೆಂದಿದ್ದರು.
19 : ಆದರೆ ಯೆಹೂದ್ಯರು ಇದನ್ನು ಪ್ರತಿಭಟಿಸಿದರು. ಆಗ ನಾನು ಚಕ್ರವರ್ತಿಗೇ ಅಪೀಲುಮಾಡಬೇಕಾಯಿತು. ನನ್ನ ಸ್ವದೇಶಿಯರ ಮೇಲೆ ದೋಷಾರೋಪಣೆ ಮಾಡಬೇಕೆಂದು ನಾನು ಹಾಗೆ ಮಾಡಲಿಲ್ಲ.
20 : ಈ ಕಾರಣದಿಂದಲೇ ನಿಮ್ಮನ್ನು ನೋಡಿ ಮಾತನಾಡಲು ಬಯಸಿದೆ. ಇಸ್ರಯೇಲ್ ಜನತೆ ಯಾರ ನಿರೀಕ್ಷೆಯಲ್ಲಿ ಇದೆಯೋ ಅವರ ನಿಮಿತ್ತವೇ ನಾನು ಹೀಗೆ ಸರಪಣಿಗಳಿಂದ ಬಂಧಿತನಾಗಿದ್ದೇನೆ,” ಎಂದನು.
21 : ಅದಕ್ಕೆ ಅವರು, “ನಿನ್ನ ವಿಷಯವಾಗಿ ಜುದೇಯದಿಂದ ಯಾವ ಪತ್ರವೂ ಬಂದಿಲ್ಲ. ಅಲ್ಲಿಂದ ಬಂದ ಸಹೋದರರು ಯಾರೂ ಏನನ್ನೂ ವರದಿ ಮಾಡಿಲ್ಲ, ಯಾವ ದೋಷಾರೋಪಣೆಯನ್ನೂ ತಂದಿಲ್ಲ.
22 : ಆದರೆ ನೀನು ಅನುಸರಿಸುವ ಪಂಥದ ವಿರುದ್ಧ ಎಲ್ಲೆಲ್ಲೂ ಜನರು ಮಾತನಾಡುತ್ತಿದ್ದಾರೆಂದು ಬಲ್ಲೆವು. ಆದುದರಿಂದ ನಿನ್ನ ಅಭಿಪ್ರಾಯವನ್ನು ನಿನ್ನ ಬಾಯಿಂದಲೇ ಕೇಳಬಯಸುತ್ತೇವೆ,” ಎಂದರು.
23 : ಅದಕ್ಕಾಗಿ ಒಂದು ದಿನವನ್ನು ಗೊತ್ತುಮಾಡಿದರು. ಅಂದು ಅವರೆಲ್ಲರು ಪೌಲನು ವಾಸಮಾಡುತ್ತಿದ್ದ ಬಿಡಾರಕ್ಕೆ ಅಧಿಕ ಸಂಖ್ಯೆಯಲ್ಲಿ ಬಂದರು. ಪೌಲನು ಬೆಳಿಗ್ಗೆಯಿಂದ ಸಂಜೆಯವರೆಗೆ ದೇವರ ಸಾಮ್ರಾಜ್ಯವನ್ನು ಕುರಿತ ಶುಭಸಂದೇಶವನ್ನು ವಿವರಿಸಿದನು; ಮೋಶೆಯ ಧರ್ಮಶಾಸ್ತ್ರದ ಹಾಗೂ ಪ್ರವಾದಿಗಳ ಗ್ರಂಥಗಳ ಆಧಾರದ ಮೇಲೆ ಯೇಸುಸ್ವಾಮಿಯ ವಿಷಯವಾಗಿ ಅವರನ್ನು ಮನವೊಲಿಸಲು ಪ್ರಯತ್ನಿಸಿದನು.
24 : ಅವನು ಹೇಳಿದ್ದು ಕೆಲವರಿಗೆ ಮನದಟ್ಟಾಯಿತು; ಮತ್ತೆ ಕೆಲವರು ನಂಬದೆ ಹೋದರು.
25 : ಹೀಗೆ ಅವರು ತಮ್ಮತಮ್ಮೊಳಗೆ ಭಿನ್ನಾಭಿಪ್ರಾಯವುಳ್ಳವರಾಗಿ ಅಲ್ಲಿಂದ ಹೊರಟು ಹೋಗಲಾರಂಭಿಸಿದರು. ಆಗ ಪೌಲನು ಹೀಗೆಂದನು: “ಪವಿತ್ರಾತ್ಮ ಅವರು ಯೆಶಾಯ ಪ್ರವಾದಿಯ ಮುಖಾಂತರ ನಿಮ್ಮ ಪೂರ್ವಜರಿಗೆ ಎಷ್ಟೊಂದು ವಿಹಿತವಾಗಿ ಹೇಳಿದ್ದಾರೆ:
26 : ‘ನೀನು ಆ ಜನರ ಬಳಿಗೆ ಹೋಗಿ ಅವರಿಗೆ
ಇಂತೆನ್ನು:
ಕೇಳಿ ಕೇಳಿಯೂ ಗ್ರಹಿಸರು,
ನೋಡಿ ನೋಡಿಯೂ ಕಾಣರೀ ಜನರು.
27 : ಇವರ ಹೃದಯ ಕಲ್ಲಾಗಿದೆ,
ಕಿವಿ ಮಂದವಾಗಿದೆ,
ಕಣ್ಣು ಮಬ್ಬಾಗಿದೆ.
ಇಲ್ಲದಿರೆ ಇವರ ಕಣ್ಣು ಕಾಣುತ್ತಾ,
ಕಿವಿ ಕೇಳುತ್ತಾ ಹೃದಯ ಗ್ರಹಿಸುತ್ತಾ,
ನನ್ನತ್ತ ತಿರುಗುತ್ತಿದ್ದರು.
ದೇವರಾದ ನಾನಿವರನ್ನು ಸ್ವಸ್ಥಪಡಿಸುತ್ತಿದ್ದೆ.’
28 : ಎಂದೇ ದೇವರಿಂದ ಬಂದಿರುವ ಜೀವ ಉದ್ಧಾರಕ ಸಂದೇಶವನ್ನು ಯೆಹೂದ್ಯೇತರರಿಗೆ ಕಳುಹಿಸಲಾಗಿದೆ. ಅವರು ಅದಕ್ಕೆ ಕಿವಿಗೊಡುವರು. ಇದು ನಿಮಗೆ ತಿಳಿದಿರಲಿ.”
29 : ಈ ಮಾತುಗಳನ್ನು ಕೇಳಿ ಆದಮೇಲೆ ಯೆಹೂದ್ಯರು ತಮ್ಮತಮ್ಮೊಳಗೆ ತೀವ್ರವಾಗಿ ಚರ್ಚಿಸುತ್ತಾ ಹೊರಟುಹೋದರು.
30 : ಪೌಲನು ತಾನು ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ಎರಡು ವರ್ಷಗಳವರೆಗೆ ವಾಸವಾಗಿದ್ದನು. ತನ್ನನ್ನು ನೋಡಲು ಬಂದವರನ್ನೆಲ್ಲಾ ಆದರದಿಂದ ಬರಮಾಡಿಕೊಳ್ಳುತ್ತಿದ್ದನು.
31 : ಭಯಭೀತಿಯಿಲ್ಲದೆ ಹಾಗೂ ಅಡ್ಡಿಆತಂಕವಿಲ್ಲದೆ ದೇವರ ಸಾಮ್ರಾಜ್ಯವನ್ನು ಕುರಿತು ಪ್ರಬೋಧಿಸುತ್ತಿದ್ದನು; ಸ್ವಾಮಿ ಯೇಸುಕ್ರಿಸ್ತರ ವಿಷಯವಾಗಿ ಉಪದೇಶಿಸುತ್ತಿದ್ದನು.