Holy Bible ಕನ್ನಡ ಕಥೋಲಿಕ ಬೈಬಲ್

Contact : 9980968777   
Download Android App   
Email : info@kannadacatholicbible.org  

ಪ್ರೇ.ಕಾ


1 : ನಾವು ಇಟಲಿಗೆ ನೌಕಾಯಾನ ಮಾಡಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಬೇರೆ ಕೆಲವು ಕೈದಿಗಳನ್ನೂ ‘ಔಗುಸ್ತದಳ’ ಎಂಬ ರೋಮಿನ ದಳಕ್ಕೆ ಸೇರಿದ ಜೂಲಿಯಸ್ ಎಂಬ ಶತಾಧಿಪತಿಯ ವಶಕ್ಕೆ ಒಪ್ಪಿಸಲಾಯಿತು.
2 : ಆಗ ಅದ್ರಮಿತಿಯದಿಂದ ಬಂದು ಏಷ್ಯಾ ಪ್ರಾಂತ್ಯದ ಬಂದರುಗಳಿಗೆ ಹೋಗಲು ಸಿದ್ಧವಾಗಿದ್ದ ಹಡಗನ್ನು ಹತ್ತಿ ನಾವು ಪ್ರಯಾಣ ಬೆಳೆಸಿದೆವು. ಥೆಸಲೋನಿಕದಿಂದ ಬಂದ ಮಕೆದೋನಿಯದ ಅರಿಸ್ತಾರ್ಕ ನಮ್ಮ ಸಂಗಡ ಇದ್ದನು.
3 : ಮಾರನೆಯ ದಿನ ನಾವು ಸಿದೋನಿಗೆ ಆಗಮಿಸಿದೆವು. ಪೌಲನು ತನ್ನ ಗೆಳೆಯರನ್ನು ಸಂದರ್ಶಿಸುವುದಕ್ಕೂ ಅವರಿಂದ ತನಗೆ ಅಗತ್ಯವಿದ್ದುದನ್ನು ಪಡೆಯುವುದಕ್ಕೂ ಜೂಲಿಯಸನು ಆದರದಿಂದ ಅನುಮತಿಯನ್ನು ಕೊಟ್ಟನು
4 : ನಾವು ಅಲ್ಲಿಂದ ಹೊರಟೆವು. ಎದುರುಗಾಳಿ ಬೀಸುತ್ತಿತ್ತು. ಆದುದರಿಂದ ಸೈಪ್ರಸ್ ದ್ವೀಪದ ಮರೆಗೆ ಸಾಗಿದೆವು.
5 : ಸಿಲಿಸಿಯಕ್ಕೂ ಪಾಂಫೀಲಿಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಸಿಯ ಪ್ರಾಂತ್ಯದಲ್ಲಿರುವ ‘ಮುರ’ ಎಂಬ ಊರಿಗೆ ಬಂದೆವು.
6 : ಅಲ್ಲಿ, ಅಲೆಕ್ಸಾಂಡ್ರಿಯದಿಂದ ಬಂದು ಇಟಲಿಗೆ ಹೋಗುತ್ತಿದ್ದ ಹಡಗನ್ನು ಕಂಡು ಶತಾಧಿಪತಿ ನಮ್ಮನ್ನು ಅದಕ್ಕೆ ಹತ್ತಿಸಿದನು.
7 : ನಾವು ಅನೇಕ ದಿನಗಳವರೆಗೆ ನಿಧಾನವಾಗಿ ಪ್ರಯಾಣಮಾಡಿದೆವು. ಅತಿ ಕಷ್ಟದಿಂದ ‘ಸ್ನೀಡ’ ಎಂಬ ಊರಿಗೆ ಎದುರಾಗಿ ಬಂದೆವು. ಆ ದಿಸೆಯಲ್ಲಿ ಪ್ರಯಾಣ ಮಾಡಲು ಎದುರುಗಾಳಿ ನಮ್ಮನ್ನು ಬಿಡಲಿಲ್ಲ. ಆದ್ದರಿಂದ ನಾವು ಸಾಲ್ಮೋನೆ ಭೂಶಿರವನ್ನು ದಾಟಿ, ಕ್ರೇಟ್ ದ್ವೀಪದ ಮರೆಯನ್ನು ಸೇರಿದೆವು.
8 : ಆ ದ್ವೀಪದ ಕರಾವಳಿಯಲ್ಲೇ ಪ್ರಯಾಸದಿಂದ ಸಾಗುತ್ತಾ, ಲಸಾಯ ಊರಿನ ಸವಿೂಪದಲ್ಲಿರುವ ‘ಸುಗಮ ರೇವು’ ಎಂಬ ಸ್ಥಳವನ್ನು ಸೇರಿದೆವು.
9 : ಇಷ್ಟರಲ್ಲಿ ಬಹಳ ದಿನಗಳು ಕಳೆದಿದ್ದವು. ಉಪವಾಸದ ಮಹಾದಿನವೂ ಕಳೆದಿತ್ತು. ಈ ಕಾಲದಲ್ಲಿ ಸಮುದ್ರದಲ್ಲಿ ಮುಂದುವರಿಸುವುದು ಅಪಾಯಕರವಾಗಿತ್ತು.
10 : ಆದುದರಿಂದ ಪೌಲನು, “ಮಿತ್ರರೇ, ಇಲ್ಲಿಂದ ಮುಂದಕ್ಕೆ ಪ್ರಯಾಣ ಅಪಾಯಕರವಾಗಿರುವಂತೆ ತೋರುತ್ತದೆ. ಹಡಗು ಮತ್ತು ಅದರಲ್ಲಿರುವ ಸರಕು ಸಾಮಗ್ರಿಗಳಿಗೆ ಮಾತ್ರವಲ್ಲ, ನಮ್ಮ ಪ್ರಾಣಕ್ಕೂ ಕಷ್ಟನಷ್ಟ ಸಂಭವಿಸಲಿದೆ,” ಎಂದು ಎಚ್ಚರಿಸಿದನು.
11 : ಆದರೆ ಶತಾಧಿಪತಿ ಪೌಲನನ್ನು ನಂಬದೆ, ನೌಕೆಯ ನಾಯಕನ ಹಾಗೂ ಅದರ ಯಜಮಾನನ ಮಾತುಗಳಿಗೆ ಕಿವಿಗೊಟ್ಟನು.
12 : ಅಲ್ಲದೆ ಚಳಿಗಾಲವನ್ನು ಕಳೆಯಲು ಆ ಬಂದರು ಹಿತಕರವಾಗಿರಲಿಲ್ಲ. ಆದ್ದರಿಂದ ಅಲ್ಲಿಂದ ಹೊರಟು, ಸಾಧ್ಯವಾದರೆ, ಫೆನಿಕ್ಸ್ ಎಂಬ ಊರನ್ನು ಸೇರಿ, ಅಲ್ಲೇ ಚಳಿಗಾಲವನ್ನು ಕಳೆಯಬಹುದೆಂದು ಹೆಚ್ಚು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದರು. ಫೆನಿಕ್ಸ್, ಕ್ರೇಟ್ ದ್ವೀಪದ ಒಂದು ಬಂದರು. ಇದು ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ.
13 : ದಕ್ಷಿಣದಿಂದ ತೆಳುಗಾಳಿ ಬೀಸಲಾರಂಭಿಸಿತು. ಪ್ರಯಾಣಿಕರು ತಮ್ಮ ಉದ್ದೇಶ ಕೈಗೂಡಿತೆಂದು ಭಾವಿಸಿದರು. ಅವರು ಹಡಗಿನ ಲಂಗರುಗಳನ್ನು ಎತ್ತಿ, ಕ್ರೇಟ್ ದ್ವೀಪವನ್ನು ಅನುಸರಿಸುತ್ತಾ, ತೀರದ ಮಗ್ಗುಲಲ್ಲೇ ಪ್ರಯಾಣ ಹೊರಟರು.
14 : ಆದರೆ ಸ್ವಲ್ಪದರಲ್ಲೇ ‘ಈಶಾನ್ಯ ಮಾರುತ’ ಎಂಬ ಪ್ರಚಂಡಗಾಳಿ ದ್ವೀಪದಿಂದ ಬೀಸತೊಡಗಿತು.
15 : ಅದರ ಹೊಡೆತಕ್ಕೆ ಹಡಗು ಸಿಕ್ಕಿಕೊಂಡಿತು. ಅದಕ್ಕೆ ಎದುರಾಗಿ ಚಲಿಸಲು ಅಸಾಧ್ಯವಾಗಿ ಗಾಳಿ ಬೀಸಿದ ಕಡೆಯೇ ಹಡಗನ್ನು ತೇಲಬಿಟ್ಟೆವು.
16 : ಕ್ಲೌಡ ಎಂಬ ಪುಟ್ಟ ದ್ವೀಪದ ಮರೆಯಲ್ಲಿ ಹಾದುಹೋಗುವಾಗ ಹಡಗಿನಲ್ಲಿ ಇದ್ದ ಚಿಕ್ಕ ದೋಣಿಯನ್ನು ಸುಭದ್ರ ಪಡಿಸಿಕೊಳ್ಳಲು ಸಾಧ್ಯವಾಯಿತು.
17 : ಹಡಗಿನವರು ಅದನ್ನು ಮೇಲಕ್ಕೆ ಎಳೆದು ಹಗ್ಗಗಳಿಂದ ಹಡಗಿನ ಅಡಿಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಅನಂತರ ‘ಸುರ್ತಿಸ್’ ಎಂಬ ಉಸುಬಿನಲ್ಲಿ ಹಡಗು ಎಲ್ಲಿ ಸಿಕ್ಕಿಕೊಳ್ಳುವುದೋ ಎಂಬ ಭಯ ಆವರಿಸಿತು. ಆದುದರಿಂದ ಅವರು ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಯೇ ಹಡಗು ತೇಲಲೆಂದು ಬಿಟ್ಟರು.
18 : ಚಂಡಮಾರುತ ನಮ್ಮನ್ನು ಒಂದೇ ಸಮನೆ ಹೊಯ್ದಾಡಿಸುತ್ತಿದ್ದುದರಿಂದ ಮಾರನೆಯ ದಿನ ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆಯಲು ಆರಂಭಿಸಿದರು.
19 : ಮೂರನೆಯ ದಿನ ಅವರು ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.
20 : ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ ನಕ್ಷತ್ರಗಳನ್ನಾಗಲಿ ನೋಡಲಾಗಲಿಲ್ಲ. ಗಾಳಿ ತೀವ್ರವಾಗಿತ್ತು. ಕಟ್ಟಕಡೆಗೆ ನಾವು ಬದುಕುವ ಆಶೆಯನ್ನೇ ತೊರೆಯಬೇಕಾಯಿತು.
21 : ಬಹಳ ದಿನಗಳವರೆಗೆ ಅವರು ಊಟವಿಲ್ಲದೆ ಇದ್ದರು. ಆಗ ಪೌಲನು ಎದ್ದು ನಿಂತು, “ಗೆಳೆಯರೇ, ನೀವು ನನ್ನ ಮಾತನ್ನು ಕೇಳಬೇಕಿತ್ತು. ಕ್ರೇಟ್ ದ್ವೀಪದಿಂದ ಮುಂದಕ್ಕೆ ಪ್ರಯಾಣ ಮಾಡಬಾರದಿತ್ತು. ಆಗ ಇಷ್ಟೆಲ್ಲಾ ಕಷ್ಟನಷ್ಟವನ್ನು ತಡೆಯಬಹುದಿತ್ತು.
22 : ಈಗಲಾದರೂ ಧೈರ್ಯದಿಂದಿರಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಹಡಗು ನಾಶವಾಗುವುದೇ ಹೊರತು, ನಿಮ್ಮಲ್ಲಿ ಯಾರಿಗೂ ಪ್ರಾಣಹಾನಿ ಆಗಲಾರದು.
23 : ನಾನು ಯಾವ ದೇವರ ಭಕ್ತನಾಗಿದ್ದೇನೋ, ಯಾವ ದೇವರನ್ನು ಆರಾಧಿಸುತ್ತೇನೋ ಆ ದೇವರ ದೂತನು ನಿನ್ನೆ ರಾತ್ರಿ ದರ್ಶನವಿತ್ತನು:
24 : ‘ಪೌಲನೇ, ಭಯಪಡಬೇಡ. ನೀನು ಚಕ್ರವರ್ತಿಯ ಸಮ್ಮುಖದಲ್ಲಿ ನಿಲ್ಲಲೇ ಬೇಕಾಗಿದೆ; ಇಗೋ, ನಿನ್ನ ಸಂಗಡ ಪ್ರಯಾಣ ಮಾಡುವ ಎಲ್ಲರ ಪ್ರಾಣಗಳನ್ನು ದೇವರು ನಿನ್ನ ನಿಮಿತ್ತ ಉಳಿಸಿದ್ದಾರೆ,’ ಎಂದು ಅಭಯವಿತ್ತನು.
25 : ಆದುದರಿಂದ ಗೆಳೆಯರೇ, ಧೈರ್ಯದಿಂದಿರಿ. ನನಗೆ ದೇವರಲ್ಲಿ ವಿಶ್ವಾಸವಿದೆ; ನನಗೆ ತಿಳಿಸಿದಂತೆಯೇ ಎಲ್ಲವೂ ನಡೆದೇ ತೀರುವುದು. 26ನಾವೆಲ್ಲರೂ ಒಂದು ದ್ವೀಪವನ್ನು ತಲುಪಲಿದ್ದೇವೆ,” ಎಂದನು.
27 : ಅದು ಹದಿನಾಲ್ಕನೆಯ ರಾತ್ರಿ. ಬಿರುಗಾಳಿ ನಮ್ಮನ್ನು ಆದ್ರಿಯ ಸಮುದ್ರದಲ್ಲಿ ಅತ್ತಿತ್ತ ಹೊಯ್ದಾಡಿಸುತ್ತಿತ್ತು. ಮಧ್ಯರಾತ್ರಿಯ ವೇಳೆಯಲ್ಲಿ ನಾವೊಂದು ಭೂಮಿಯನ್ನು ಸವಿೂಪಿಸುತ್ತಿರುವ ಹಾಗೆ ನಾವಿಕರಿಗೆ ಕಂಡುಬಂದಿತು.
28 : ನೀರಿನ ಆಳವನ್ನು ಪರೀಕ್ಷಿಸಿದಾಗ ಅದು ನಾಲ್ವತ್ತು ವಿೂಟರು ಇರುವುದಾಗಿ ತಿಳಿಯಿತು. ಇನ್ನೂ ಸ್ವಲ್ಪ ಮುಂದಕ್ಕೆ ಸಾಗಿ ಮತ್ತೆ ಆಳ ನೋಡಿದಾಗ ಮೂವತ್ತು ವಿೂಟರು ಎಂದು ತಿಳಿಯಿತು.
29 : ನಮ್ಮ ಹಡಗು ಕಲ್ಲು ಬಂಡೆಗಳನ್ನು ತಾಕಬಹುದೆಂಬ ದಿಗಿಲು ಉಂಟಾಯಿತು. ಆದುದರಿಂದ ಅವರು ಹಡಗಿನ ಹಿಂಭಾಗದ ನಾಲ್ಕು ಲಂಗರುಗಳನ್ನು ಕೆಳಗಿಳಿಸಿ ಬೆಳಗಾಗಲೆಂದು ಹಾರೈಸಿಕೊಂಡಿದ್ದರು.
30 : ಅನಂತರ ನಾವಿಕರು ಹಡಗಿನ ಮುಂಭಾಗದಲ್ಲಿ ಕೆಲವು ಲಂಗರುಗಳನ್ನು ಹಾಕುವಂತೆ ನಟಿಸಿ, ದೋಣಿಯನ್ನು ನೀರಿಗಿಳಿಸಿ, ಹಡಗನ್ನು ಬಿಟ್ಟು ಪಲಾಯನ ಮಾಡಬೇಕೆಂದಿದ್ದರು.
31 : ಆಗ ಪೌಲನು ಶತಾಧಿಪತಿಯನ್ನು ಮತ್ತು ಸೈನಿಕರನ್ನು ಉದ್ದೇಶಿಸಿ, “ಈ ನಾವಿಕರು ಹಡಗಿನಲ್ಲೇ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯದು,” ಎಂದು ಎಚ್ಚರಿಸಿದನು.
32 : ಕೂಡಲೇ ಸೈನಿಕರು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಸಮುದ್ರದ ಪಾಲಾಗುವಂತೆ ಮಾಡಿದರು.
33 : ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರನ್ನು ಕುರಿತು ಇಂತೆಂದನು: “ನೀವೆಲ್ಲರು ಚಿಂತೆಯಿಂದ ಹದಿನಾಲ್ಕು ದಿನಗಳವರೆಗೆ ಏನನ್ನೂ ತಿನ್ನದೆ ಇದ್ದೀರಿ; ನಿಮ್ಮ ಪ್ರಾಣ ಉಳಿಸಿಕೊಳ್ಳಲು ಸ್ವಲ್ಪ ಆಹಾರವನ್ನಾದರೂ ತೆಗೆದುಕೊಳ್ಳಿ;
34 : ನಿಮ್ಮ ತಲೆಗೂದಲೊಂದೂ ಕೊಂಕಾಗದು” ಎಂದು ಹೇಳಿ ಊಟಮಾಡುವಂತೆ ಪ್ರೋತ್ಸಾಹಿಸಿದನು.
35 : ಹೀಗೆ ಹೇಳಿದ ಮೇಲೆ ಪೌಲನು ರೊಟ್ಟಿಯನ್ನು ತೆಗೆದುಕೊಂಡು, ಎಲ್ಲರ ಮುಂದೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ, ಅದನ್ನು ಮುರಿದು ತಿನ್ನಲಾರಂಭಿಸಿದನು.
36 : ಆಗ ಅವರೆಲ್ಲರೂ ಧೈರ್ಯತಂದುಕೊಂಡು ಆಹಾರವನ್ನು ಸೇವಿಸಿದರು.
37 : ಹಡಗಿನಲ್ಲಿ ನಾವು ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೆವು.
38 : ಪ್ರತಿಯೊಬ್ಬನೂ ಸಾಕಷ್ಟು ತಿಂದ ಮೇಲೆ ಗೋದಿಯನ್ನು ಸಮುದ್ರಕ್ಕೆ ಎಸೆದು ಹಡಗನ್ನು ಹಗುರಗೊಳಿಸಿದರು.
39 : ಬೆಳಗಾದ ಮೇಲೆ, ದಡವಿರುವ ಕೊಲ್ಲಿಯೊಂದು ನಾವಿಕರಿಗೆ ಕಾಣಿಸಿತು. ಅದು ಯಾವ ತೀರವೆಂದು ಗುರುತು ಹಚ್ಚಲು ಅವರಿಂದಾಗಲಿಲ್ಲ. ಆದರೂ ಹಡಗನ್ನು ಸಾಧ್ಯವಾದರೆ ಆ ದಡಕ್ಕೆ ಮುಟ್ಟಿಸಬೇಕೆಂದು ಯೋಚಿಸಿದರು.
40 : ಎಂದೇ ಹಗ್ಗಗಳನ್ನು ಕತ್ತರಿಸಿ ಲಂಗರುಗಳನ್ನು ಸಮುದ್ರದಲ್ಲೇ ಮುಳುಗಲೆಂದು ಬಿಟ್ಟರು. ಚುಕ್ಕಾಣಿಗಳಿಗೆ ಕಟ್ಟಲಾದ ಹಗ್ಗಗಳನ್ನು ಬಿಚ್ಚಿದರು. ಅನಂತರ ಹಾಯಿಯನ್ನು ಗಾಳಿಗೆ ಎತ್ತಿ ಕಟ್ಟಿ ಹಡಗನ್ನು ದಡದತ್ತ ಚಲಿಸಬಿಟ್ಟರು.
41 : ಆದರೆ ಮಧ್ಯದಲ್ಲಿ ಹಡಗು ಮರಳು ದಿಬ್ಬಕ್ಕೆ ಢಿಕ್ಕಿಹೊಡೆದು ನೆಲ ಹತ್ತಿತ್ತು. ಹಡಗಿನ ಮುಂಭಾಗ ದಿಣ್ಣೆಗೆ ಸಿಲುಕಿ ಅಲ್ಲಾಡದೆ ನಿಂತಿತು; ಹಿಂಭಾಗ ಹುಚ್ಚು ಅಲೆಗಳ ಹೊಡೆತಕ್ಕೆ ಸಿಕ್ಕಿ ತುಂಡು ತುಂಡಾಯಿತು.
42 : ಕೈದಿಗಳಲ್ಲಿ ಯಾರೂ ಈಜಿ ತಲೆತಪ್ಪಿಸಿಕೊಳ್ಳದಂತೆ ಅವರನ್ನು ಕೊಲ್ಲಬೇಕೆಂದು ಸೈನಿಕರು ಆಲೋಚನೆ ಮಾಡಿದರು.
43 : ಆದರೆ ಪೌಲನನ್ನು ಕಾಪಾಡಬೇಕೆಂದಿದ್ದ ಶತಾಧಿಪತಿ ಹಾಗೆ ಮಾಡುವುದನ್ನು ತಡೆದನು. ಪ್ರತಿಯಾಗಿ ಈಜು ಬಲ್ಲವರು ಮೊದಲು ಹಡಗಿನಿಂದ ಧುಮುಕಿ ಈಜಿಕೊಂಡು ಹೋಗಬೇಕು ಎಂತಲೂ
44 : ಮಿಕ್ಕವರು ಹಲಗೆಗಳ ಅಥವಾ ಹಡಗಿನ ತುಂಡುಗಳ ಸಹಾಯದಿಂದ ದಡ ಸೇರಬೇಕೆಂತಲೂ ಆಜ್ಞೆಮಾಡಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ದಡವನ್ನು ಸೇರಿದರು.

· © 2017 kannadacatholicbible.org Privacy Policy