1 : ಫೆಸ್ತನು ಅಧಿಕಾರ ವಹಿಸಿಕೊಂಡು ಮೂರು ದಿನಗಳಾದ ನಂತರ ಸೆಜರೇಯದಿಂದ ಜೆರುಸಲೇಮಿಗೆ ಹೋದನು.
2 : ಅಲ್ಲಿ ಮುಖ್ಯ ಯಾಜಕರು ಮತ್ತು ಯೆಹೂದ್ಯರ ಮುಖಂಡರು ಪೌಲನ ವಿರುದ್ಧ ಅವನಿಗೆ ದೂರಿತ್ತರು.
3 : ಅವರು ಫೆಸ್ತನನ್ನು ವಿನಂತಿಸಿ, ಪೌಲನನ್ನು ಜೆರುಸಲೇಮಿಗೆ ಕರೆತರಿಸುವ ಉಪಕಾರವನ್ನು ಮಾಡಬೇಕೆಂದು ಕೇಳಿಕೊಂಡರು. ಏಕೆಂದರೆ, ಮಾರ್ಗದಲ್ಲೇ ಪೌಲನನ್ನು ಕೊಲ್ಲುವ ಸಂಚನ್ನು ಹೂಡಿದ್ದರು.
4 : ಫೆಸ್ತನು ಅವರಿಗೆ, “ಪೌಲನು ಸೆಜರೇಯದಲ್ಲಿ ಕೈದಿಯಾಗಿದ್ದಾನೆ. ನಾನು ಬೇಗನೆ ಅಲ್ಲಿಗೆ ಹಿಂದಿರುಗಲಿದ್ದೇನೆ.
5 : ಅವನಲ್ಲಿ ಏನಾದರೂ ತಪ್ಪಿದ್ದರೆ ನಿಮ್ಮ ಪ್ರಮುಖರು ನನ್ನ ಜೊತೆಯಲ್ಲೇ ಅಲ್ಲಿಗೆ ಬಂದು ಆಪಾದಿಸಲಿ,” ಎಂದು ಹೇಳಿದನು.
6 : ಫೆಸ್ತನು ಅವರೊಂದಿಗೆ ಎಂಟು-ಹತ್ತು ದಿನಗಳನ್ನು ಕಳೆದು, ಸೆಜರೇಯಕ್ಕೆ ಮರಳಿ ಬಂದನು. ಮಾರನೆಯ ದಿನ ಅವನು ನ್ಯಾಯಸ್ಥಾನದಲ್ಲಿ ಕುಳಿತು ಪೌಲನನ್ನು ತನ್ನ ಮುಂದೆ ಕರೆದು ತರಬೇಕೆಂದು ಆಜ್ಞಾಪಿಸಿದನು.
7 : ಪೌಲನು ಅಲ್ಲಿಗೆ ಬಂದಾಗ, ಜೆರುಸಲೇಮಿನಿಂದ ಆಗಮಿಸಿದ್ದ ಯೆಹೂದ್ಯರು ಅವನ ಸುತ್ತಲೂ ನಿಂತು ಅವನ ವಿರುದ್ಧ ಹಲವಾರು ತೀವ್ರ ಆಪಾದನೆಗಳನ್ನು ಹೊರಿಸಿದರು. ಆದರೆ ಅವುಗಳನ್ನು ರುಜುವಾತುಪಡಿಸಲು ಅವರಿಂದಾಗಲಿಲ್ಲ.
8 : ಪೌಲನು ತನ್ನ ಪರವಾಗಿ ತಾನೇ ವಾದಿಸುತ್ತಾ, “ನಾನು ಯೆಹೂದ್ಯರ ಧರ್ಮಶಾಸ್ತ್ರಕ್ಕೆ ವಿರುದ್ಧವಾಗಲಿ, ಮಹಾದೇವಾಲಯಕ್ಕೆ ವಿರುದ್ಧವಾಗಲಿ, ಅಥವಾ ಚಕ್ರವರ್ತಿಗೆ ವಿರುದ್ಧವಾಗಲಿ, ಏನನ್ನೂ ಮಾಡಿಲ್ಲ,” ಎಂದನು.
9 : ಫೆಸ್ತನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಿಕೊಳ್ಳುವ ಸಲುವಾಗಿ ಪೌಲನಿಗೆ, “ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ನನ್ನ ಮುಂದೆ ಇವುಗಳ ವಿಷಯವಾಗಿ ವಿಚಾರಣೆಗೆ ಒಳಗಾಗಲಿ ಇಷ್ಟಪಡುತ್ತೀಯಾ?” ಎಂದು ಕೇಳಿದನು.
10 : ಅದಕ್ಕೆ ಪೌಲನು, “ನಾನು ಚಕ್ರವರ್ತಿಯ ನ್ಯಾಯಸ್ಥಾನದ ಮುಂದೆ ನಿಂತಿದ್ದೇನೆ. ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ತಮಗೆ ಚೆನ್ನಾಗಿ ತಿಳಿದಿರುವಂತೆ ನಾನು ಯೆಹೂದ್ಯರಿಗೆ ಯಾವ ಅನ್ಯಾಯವನ್ನೂ ಮಾಡಿಲ್ಲ.
11 : ಹಾಗೇನಾದರೂ ಮಾಡಿ, ಮರಣದಂಡನೆಗೆ ಅರ್ಹನಾಗಿದ್ದರೆ, ಅದಕ್ಕೆ ಗುರಿಯಾಗಲು ಹಿಂಜರಿಯುವುದಿಲ್ಲ. ಆದರೆ ಅವರು ನನ್ನ ವಿರುದ್ಧ ತಂದಿರುವ ಆಪಾದನೆಗಳು ಜೊಳ್ಳಾಗಿದ್ದ ಪಕ್ಷದಲ್ಲಿ, ಯಾರೂ ನನ್ನನ್ನು ಇವರ ಕೈಗೊಪ್ಪಿಸಲಾಗದು. ನಾನು ಚಕ್ರವರ್ತಿಗೇ ಅಪೀಲು ಮಾಡಿಕೊಳ್ಳುತ್ತೇನೆ,” ಎಂದನು.
12 : ಆಗ ಫೆಸ್ತನು ತನ್ನ ಸಲಹೆಗಾರರೊಡನೆ ಸಮಾಲೋಚಿಸಿ, “ನೀನು ಅಪೀಲು ಮಾಡಿರುವುದು ಚಕ್ರವರ್ತಿಗೆ ಅಲ್ಲವೆ? ಚಕ್ರವರ್ತಿಯ ಬಳಿಗೇ ಹೋಗು,” ಎಂದು ಉತ್ತರಿಸಿದನು.
13 : ಕೆಲವು ದಿನಗಳಾದ ನಂತರ ರಾಜ ಅಗ್ರಿಪ್ಪನು ಬೆರ್ನಿಸಳೊಂದಿಗೆ ಫೆಸ್ತನನ್ನು ಅಭಿನಂದಿಸಲು ಸೆಜರೇಯಕ್ಕೆ ಬಂದನು.
14 : ಅವರು ಹಲವು ದಿನಗಳವರೆಗೆ ಅಲ್ಲೇ ತಂಗಿದ್ದರು. ಫೆಸ್ತನು ಪೌಲನ ವಿಷಯವನ್ನು ಅವನ ಮುಂದೆ ಪ್ರಸ್ತಾಪಿಸುತ್ತಾ, “ಫೆಲಿಕ್ಸನು ಕೈದಿಯಾಗಿ ಬಿಟ್ಟು ಹೋದ ಒಬ್ಬ ವ್ಯಕ್ತಿ ಇಲ್ಲಿದ್ದಾನೆ.
15 : ನಾನು ಜೆರುಸಲೇಮಿಗೆ ಹೋಗಿದ್ದಾಗ ಯೆಹೂದ್ಯರ ಮುಖ್ಯಯಾಜಕರೂ ಪ್ರಮುಖರೂ ಅವನ ವಿರುದ್ಧ ಆಪಾದನೆಗಳನ್ನು ತಂದರು. ಅವನಿಗೆ ದಂಡನೆ ವಿಧಿಸುವಂತೆ ಕೇಳಿಕೊಂಡರು.
16 : ನಾನು ಅವರಿಗೆ, ‘ಆಪಾದಿತನೂ ಆಪಾದಿಸುವವರೂ ಮುಖಾ ಮುಖಿಯಾಗಿ ನಿಲ್ಲಬೇಕು; ತನ್ನ ಮೇಲೆ ಹೊರಿಸಲಾದ ಆಪಾದನೆಗಳ ವಿರುದ್ಧ ವಾದಿಸಲು ಆಪಾದಿತನಿಗೆ ಅವಕಾಶ ಕೊಡಬೇಕು. ಹಾಗೆ ಮಾಡದೆ ಅವರ ಕೈಗೊಪ್ಪಿಸುವುದು ರೋಮನರ ಪದ್ಧತಿಯಲ್ಲ,’ ಎಂದು ಹೇಳಿದೆ.
17 : ಆದುದರಿಂದ ಅವರು ನನ್ನೊಡನೆ ಇಲ್ಲಿಗೆ ಬಂದರು. ನಾನು ತಡಮಾಡದೆ ಮರುದಿನವೇ ನ್ಯಾಯಸ್ಥಾನದಲ್ಲಿ ಕುಳಿತು ಅವನನ್ನು ನನ್ನ ಮುಂದೆ ತರುವಂತೆ ಆಜ್ಞೆ ಮಾಡಿದೆ.
18 : ಆಪಾದಿಸಿದವರು ಅವನ ವಿರುದ್ಧ ಎದ್ದುನಿಂತು ಮಾತನಾಡಿದಾಗ ನಾನು ಭಾವಿಸಿದಂತಹ ಅಪರಾಧವೊಂದನ್ನೂ ಅವನ ಮೇಲೆ ಹೊರಿಸಲಿಲ್ಲ.
19 : ಅವನೊಡನೆ ಅವರಿಗಿದ್ದ ವಾದವಿವಾದ ಅವರ ಧರ್ಮಾಚರಣೆಗಳಿಗೆ ಸಂಬಂಧಪಟ್ಟಿತ್ತು. ಯೇಸು ಎಂಬ ಒಬ್ಬ ವ್ಯಕ್ತಿಯನ್ನು ಕುರಿತೂ ವಿವಾದ ಇತ್ತು. ಯೇಸು ಸತ್ತಿದ್ದರೂ ಜೀವಂತನಾಗಿದ್ದಾನೆಂದು ಪೌಲನು ಸಾಧಿಸುತ್ತಿದ್ದನು.
20 : ಈ ವಿಷಯಗಳ ಬಗ್ಗೆ ಹೇಗೆ ವಿಚಾರಣೆಮಾಡುವುದೆಂದು ನನಗೆ ತೋಚಲಿಲ್ಲ. ಆದುದರಿಂದ, ‘ನೀನು ಜೆರುಸಲೇಮಿಗೆ ಹೋಗಿ, ಅಲ್ಲಿ ಈ ವಿಷಯಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಇಷ್ಟಪಡುತ್ತೀಯಾ?’ ಎಂದು ಪೌಲನನ್ನು ಕೇಳಿದೆ. ಅದಕ್ಕೆ ಅವನು, ‘ಚಕ್ರವರ್ತಿಯೇ ನನ್ನ ವಾದವನ್ನು ತೀರ್ಮಾನಿಸಲಿ. ಅಲ್ಲಿಯವರೆಗೆ ನನಗೆ ರಕ್ಷಣೆ ಬೇಕು,’ ಎಂದು ವಿನಂತಿಸಿದ.
21 : ಅಂತೆಯೇ ಅವನನ್ನು ಚಕ್ರವರ್ತಿಯ ಬಳಿಗೆ ಕಳುಹಿಸಲಾಗುವ ತನಕ ಕಾವಲಿನಲ್ಲಿ ಇಡಬೇಕೆಂದು ಆಜ್ಞೆ ಮಾಡಿದೆ,” ಎಂದನು.
23 : ಮಾರನೆಯ ದಿನ ಅಗ್ರಿಪ್ಪ ಮತ್ತು ಬೆರ್ನಿಸ್ ಮಹಾ ಸಡಗರದಿಂದ ಆಗಮಿಸಿದರು. ಸೇನಾಧಿಪತಿಗಳ ಹಾಗೂ ಪುರಪ್ರಮುಖರ ಸಮೇತ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯ ಪ್ರಕಾರ ಪೌಲನನ್ನು ಹಾಜರುಪಡಿಸಲಾಯಿತು.
24 : ಆಗ ಫೆಸ್ತನು, “ಅಗ್ರಿಪ್ಪ ರಾಜರೇ, ಇಲ್ಲಿ ನೆರೆದಿರುವ ಮಹಾಜನರೇ, ನೀವು ನೋಡುತ್ತಿರುವ ಈ ವ್ಯಕ್ತಿಯ ವಿರುದ್ಧ ಇಲ್ಲಿಯೂ ಜೆರುಸಲೇಮಿನಲ್ಲಿಯೂ ಯೆಹೂದ್ಯರೆಲ್ಲರೂ ನನ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇವನನ್ನು ಜೀವಸಹಿತ ಬಿಡಬಾರದೆಂದು ಕೂಗಾಡುತ್ತಿದ್ದಾರೆ.
25 : ಇವನಿಗೆ ಮರಣದಂಡನೆ ವಿಧಿಸುವಂಥ ಅಪರಾಧವೇನೂ ನನಗೆ ಕಂಡು ಬರಲಿಲ್ಲ. ಅಲ್ಲದೆ ಇವನು ಚಕ್ರವರ್ತಿಗೇ ಅಪೀಲು ಮಾಡಿಕೊಂಡಿದ್ದಾನೆ. ಆದ್ದರಿಂದ ನಾನು ಇವನನ್ನು ಅವರಲ್ಲಿಗೆ ಕಳುಹಿಸಲು ನಿರ್ಧರಿಸಿದ್ದೇನೆ.
26 : ಆದರೆ ಇವನ ಬಗ್ಗೆ ಮಹಾಸನ್ನಿಧಿಗೆ ಬರೆಯಲು ನಿರ್ದಿಷ್ಟವಾದುದೇನೂ ನನಗೆ ತೋಚುವುದಿಲ್ಲ. ಒಂದು ವಿಚಾರಣೆ ನಡೆಸಿದರೆ, ಅವರಿಗೆ ಬರೆಯಲು ಏನಾದರೂ ದೊರಕಬಹುದೆಂದು ತಿಳಿದು ಇವನನ್ನು ನಿಮ್ಮ ಮುಂದೆ, ಮುಖ್ಯವಾಗಿ ಅಗ್ರಿಪ್ಪ ರಾಜರೇ, ತಮ್ಮ ಮುಂದೆ, ಹಾಜರು ಪಡಿಸಿರುತ್ತೇನೆ.
27 : ಏಕೆಂದರೆ, ಒಬ್ಬ ಕೈದಿಯ ವಿರುದ್ಧ ಇರುವ ಆಪಾದನೆಗಳನ್ನು ಸ್ಪಷ್ಟವಾಗಿ ಸೂಚಿಸದೆ ಅವನನ್ನು ಕಳುಹಿಸುವುದು ಸರಿಯಲ್ಲವೆಂದು ನನಗೆ ಅನಿಸುತ್ತದೆ,” ಎಂದನು.